ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಜಾತ ಶಿಶು ಮರಣ ನಿಯಂತ್ರಣಕ್ಕೆ ಕ್ರಮ ರೂಪಿಸಿ

Last Updated 26 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಅತಿ ಹೆಚ್ಚಿರುವುದನ್ನು ಯುನಿಸೆಫ್ ವರದಿ ಮತ್ತೊಮ್ಮೆ ಎತ್ತಿ ಹೇಳಿದೆ. ಹುಟ್ಟಿದ ಒಂದೇ ತಿಂಗಳಲ್ಲಿ ಸುಮಾರು 6 ಲಕ್ಷ ಶಿಶುಗಳು 2016ರಲ್ಲಿ ಸಾವನ್ನಪ್ಪಿವೆ ಎಂದು ಈ ವರದಿ ತಿಳಿಸಿರುವುದು ನಮ್ಮ ನೀತಿ ನಿರೂಪಕರ ಕಣ್ಣು ತೆರೆಸಬೇಕು. ಶಿಶು ಮರಣ ಪ್ರಮಾಣದಲ್ಲಿ 53 ಕೆಳ ಮಧ್ಯಮ ವರಮಾನ ಹೊಂದಿದ ರಾಷ್ಟ್ರಗಳ ಪೈಕಿ ಭಾರತಕ್ಕೆ 12ನೇ ಸ್ಥಾನ.

ಜನಿಸಿದ 1000  ಶಿಶುಗಳಲ್ಲಿ ಒಂದು ತಿಂಗಳ  ಒಳಗೆ ಒಂದು ಶಿಶು ಮಾತ್ರ ಜಪಾನ್‍ನಲ್ಲಿ ಸಾಯುತ್ತದೆ. ಆದರೆ ಭಾರತದಲ್ಲಿ ಈ ಪ್ರಮಾಣ 25ಕ್ಕಿಂತ ಹೆಚ್ಚು. ಹೆಚ್ಚಿನ ವರಮಾನ ಇರುವ ರಾಷ್ಟ್ರಗಳಿಗಿಂತ ಕಡಿಮೆ ವರಮಾನ ಇರುವ ರಾಷ್ಟ್ರಗಳಲ್ಲಿ ನವಜಾತ ಶಿಶು ಮರಣಪ್ರಮಾಣ ಸರಾಸರಿ 9 ಪಟ್ಟು ಹೆಚ್ಚಿರುತ್ತದೆ. ಆದರೂ ಅನೇಕ ರಾಷ್ಟ್ರಗಳಲ್ಲಿ ಇದು ಬದಲಾಗಿದೆ. ಉದಾಹರಣೆಗೆ ಶ್ರೀಲಂಕಾ ಹಾಗೂ ಉಕ್ರೇನ್. ಇವು ಕೂಡ ನಮ್ಮ ರಾಷ್ಟ್ರದಂತೆಯೇ ಕೆಳ ಮಧ್ಯಮ ವರಮಾನ ಹೊಂದಿದ ರಾಷ್ಟ್ರಗಳಡಿ ವರ್ಗೀಕರಣಗೊಂಡಿವೆ.

ಈ ರಾಷ್ಟ್ರಗಳಲ್ಲಿ 2016ರಲ್ಲಿ 1000 ಜನನಗಳಿಗೆ 5 ಮಕ್ಕಳು ಸಾವನ್ನಪ್ಪಿದ್ದರು. ಹೀಗಾಗಿ ಆದಾಯ ಮುಖ್ಯ ಎಂಬುದು ನಿಜ. ಆದರೆ, ಸಾಮಾಜಿಕ ವಿಚಾರಗಳೂ ಅಷ್ಟೇ ಮುಖ್ಯ. ಹಾಗೆಯೇ ಬಾಂಗ್ಲಾದೇಶ, ನೇಪಾಳ ಹಾಗೂ ಭೂತಾನಕ್ಕಿಂತ ಈ ವಿಚಾರದಲ್ಲಿ ನಾವು ಕೆಳಗಿದ್ದೇವೆ. ಆದರೆ ಪಾಕಿಸ್ತಾನಕ್ಕಿಂತ ನಮ್ಮ ಸ್ಥಿತಿ ಒಳ್ಳೆಯದಿದೆ ಅಷ್ಟೆ.

ಪಾಕಿಸ್ತಾನ, ಅಫ್ಗಾನಿಸ್ತಾನ ಹಾಗೂ ಮಧ್ಯ ಆಫ್ರಿಕಾ ರಾಷ್ಟ್ರಗಳಲ್ಲಿ ಹುಟ್ಟಿದ ಶಿಶುಗಳು ಬದುಕುಳಿಯುವಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಬೇಕು ಎಂದು ಈ ವರದಿ ಹೇಳಿದೆ. ನವಜಾತ ಶಿಶುಗಳ ಮರಣ ತಪ್ಪಿಸಬಹುದಾದಂತಹದ್ದು. ಇದಕ್ಕೆ ಬೇಕಿರುವುದು ರಾಜಕೀಯ ಇಚ್ಛಾಶಕ್ತಿ. ಶಿಶು ಮರಣ ತಡೆಯುವಲ್ಲಿ ತಲಾದಾಯವಷ್ಟೇ ಮುಖ್ಯವಲ್ಲ ಎಂಬುದಕ್ಕೆ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಮಾದರಿಗಳನ್ನು ಗಮನಿಸಬೇಕು. ಗರ್ಭಾವಸ್ಥೆ, ಹೆರಿಗೆ, ಬಾಣಂತಿ ಹಾಗೂ ನವಜಾತ ಶಿಶು ಆರೈಕೆ ಬಗ್ಗೆ ತರಬೇತಿ ಪಡೆದ ಆಶಾ ಕಾರ್ಯಕರ್ತೆಯರು ರಾಷ್ಟ್ರದ ಎಲ್ಲೆಡೆ ಕೆಲಸ ಮಾಡುತ್ತಿದ್ದಾರೆ.

ಮನೆಗಳ ಬದಲು ಆಸ್ಪತ್ರೆಗಳಲ್ಲಿ ಹೆರಿಗೆಯ ಅನುಕೂಲಗಳ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ, ಭಾರತದ ಎಷ್ಟೋ ಕಡೆ ಈಗಲೂ ಗುಣಮಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಲ್ಲ. ಇರುವ ಕೇಂದ್ರಗಳಲ್ಲೂ  ವೈದ್ಯಕೀಯ ಸಿಬ್ಬಂದಿ ಕೊರತೆ ಇದೆ. ಜೊತೆಗೆ, ಅಗತ್ಯ ಔ಼ಷಧ ಹಾಗೂ ವೈದ್ಯಕೀಯ ಸಲಕರಣೆಗಳೂ ಇರುವುದಿಲ್ಲ ಎಂಬುದು ಕಹಿ ವಾಸ್ತವ. ಬಾಣಂತಿ ಹಾಗೂ ಶಿಶು ಮರಣ ತಡೆಗೆ ಆರೋಗ್ಯ ಪಾಲನೆಯ ಗುಣಮಟ್ಟವೂ ಹೆಚ್ಚಾಗಬೇಕು. ಜೊತೆಗೆ ಎಲ್ಲರಿಗೂ ಇದು ಲಭ್ಯವಾಗುವಂತಿರಬೇಕು ಎಂಬುದು ಮೊದಲ ಪಾಠ. 

ಜನನಿ ಸುರಕ್ಷಾ , ಮಡಿಲು ಕಿಟ್... ಹೀಗೆ ತಾಯಿ– ಮಗು ಆರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಯೋಜನೆಗಳಿವೆ. ಹಾಗೆಯೇ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯೂ ಇದೆ. ಈ ಯೋಜನೆ ಅನ್ವಯ ಮಹಿಳೆಗೆ  ₹5000 ನೀಡಲಾಗುತ್ತದೆ. ಆದರೆ ಈ ಪ್ರೋತ್ಸಾಹಧನ ಒಂದೇ ಮಗುವಿಗೆ ಸೀಮಿತ. ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ಈ ರೀತಿ ಭೇದಭಾವ ಸಲ್ಲದು.

ವಾಸ್ತವವಾಗಿ ಹೆಣ್ಣುಮಕ್ಕಳ ಕುರಿತಾಗಿ ಸಮಾಜದಲ್ಲಿರುವ ನಿರ್ಲಕ್ಷ್ಯದ ಧೋರಣೆ ಎಲ್ಲದಕ್ಕಿಂತ ಮೊದಲು ಬದಲಾಗಬೇಕಿರುವುದು ಇಲ್ಲಿ ಮುಖ್ಯ. ಮಹಿಳೆಗೂ ಶಿಕ್ಷಣ, ಉದ್ಯೋಗ ಸಮಾನವಾಗಿ ದೊರೆತಲ್ಲಿ ಸಹಜವಾಗಿಯೇ ಆಕೆ ಪಡೆಯುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತದೆ.

ಹಾಗೆಯೇ ಆರೋಗ್ಯ ಸೂಚ್ಯಂಕ ತಾನಾಗೇ ಸುಧಾರಿಸುತ್ತದೆ. ಹೀಗಾಗಿ, ಶಿಶು ಮರಣ ತಗ್ಗಿಸಲು ವೈದ್ಯಕೀಯ ಕ್ರಮಗಳಷ್ಟೇ ಸಾಲದು. ಮಹಿಳೆ ಕುರಿತಾದ ಸಾಮಾಜಿಕ ಮನೋಭಾವಗಳು ಮೊದಲು ಬದಲಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT