ಬಿಆರ್‌ಟಿಯಲ್ಲಿ ‘ಸೆಂಡಿಲಿ ಕೀರ’ ಪತ್ತೆ

ಮಂಗಳವಾರ, ಮಾರ್ಚ್ 19, 2019
20 °C
ಮುಂಗುಸಿಗೆ ಹತ್ತಿರದ ಪ್ರಭೇದ

ಬಿಆರ್‌ಟಿಯಲ್ಲಿ ‘ಸೆಂಡಿಲಿ ಕೀರ’ ಪತ್ತೆ

Published:
Updated:
Prajavani

ಬೆಂಗಳೂರು: ಚಾಮರಾಜನಗರದ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ‘ಸೆಂಡಿಲಿ ಕೀರ’ (ಬ್ರೌನ್ ಮಂಗೂಸ್, Herpestes fuscus) ಎಂಬ ಸಣ್ಣ ಮಾಂಸಾಹಾರಿ ಪ್ರಾಣಿ ಇರುವುದು ದಾಖಲಾಗಿದೆ. ರಾಜ್ಯದಲ್ಲಿ ವಿರಾಜಪೇಟೆ ತಾಲ್ಲೂಕಿನಿಂದಾಚೆಗೆ ಈ ಪ್ರಾಣಿಯ ಇರುವಿಕೆ ದಾಖಲಾಗಿರುವುದು ಇದೇ ಮೊದಲು.

ನೇಚರ್ ಕನ್ಸರ್ವೇಷನ್ ಫೌಂಡೇಷನ್ ಸಂಸ್ಥೆಯ ವಿಜ್ಞಾನಿ ಸಂಜಯ್ ಗುಬ್ಬಿ ಮತ್ತು ತಂಡದವರು ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಚಿರತೆಗಳ ಬಗ್ಗೆ ಅಧ್ಯಯನಕ್ಕೆ ಕ್ಯಾಮರಾ ಟ್ರಾಪ್ ಸಂಶೋಧನೆ ಕೈಗೊಂಡ ಸಂದರ್ಭದಲ್ಲಿ ಈ ಪ್ರಾಣಿಯ ಇರುವಿಕೆಯನ್ನು ದಾಖಲಿಸಿದ್ದಾರೆ.

ಈ ಪ್ರಭೇದದ ಹತ್ತಿರದ ಸಂಬಂಧಿಯಾದ ಮುಂಗುಸಿಯು ಬೂದು ಬಣ್ಣದ ತುಪ್ಪಳ ಹೊಂದಿದ್ದರೆ, ‘ಸೆಂಡಿಲಿ ಕೀರ’ ಕಂದು ಬಣ್ಣದ ತುಪ್ಪಳದ ಮೇಲೆ ನವುರಾದ ಪಟ್ಟೆ ಹೊಂದಿದೆ ಮತ್ತು ಇದರ ಕಾಲು ಕಪ್ಪು ಬಣ್ಣ‌ದಿಂದ ಕೂಡಿದೆ. ಚೂಪಾದ, ಶಂಕುವಿನಾಕಾರದ ಇದರ ಬಾಲವು ಇತರ ಮುಂಗುಸಿ ಪ್ರಭೇದಗಳಿಗಿಂತ ಹೆಚ್ಚು ರೋಮವನ್ನು ಹೊಂದಿದೆ.

ಪಶ್ಚಿಮ ಘಟ್ಟಗಳ ದಕ್ಷಿಣಭಾಗ ಮತ್ತು ಶ್ರೀಲಂಕಾದಲ್ಲಿ ಮಾತ್ರ ಕಂಡುಬರುವುದರಿಂದ ‘ಸೆಂಡಿಲಿ ಕೀರ’ವು ಸೀಮಿತ ವಿಸ್ತರಣಾ ವ್ಯಾಪ್ತಿ ಹೊಂದಿದೆ. ಭಾರತದಲ್ಲಿ ಕರ್ನಾಟಕವನ್ನು ಬಿಟ್ಟರೆ ಈ ಪ್ರಾಣಿ ತಮಿಳುನಾಡು ಮತ್ತು ಕೇರಳಗಳಲ್ಲಿ ಕಾಣಸಿಗುತ್ತದೆ. ಈ ಪ್ರಾಣಿ ಸಮುದ್ರಮಟ್ಟದಿಂದ 450 ಮೀಟರ್‌ನಿಂದ 2,000 ಮೀಟರ್ ಎತ್ತರದಲ್ಲಿನ ನಿತ್ಯಹರಿದ್ವರ್ಣ ಕಾಡು, ಶೋಲಾ ಕಾಡು ಮತ್ತು ಬೆಟ್ಟಗಳ ಹುಲ್ಲುಗಾವಲುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈ ಪ್ರಾಣಿಯು ಸಮುದ್ರಮಟ್ಟದಿಂದ 1,245 ಮೀಟರ್ ಎತ್ತರದ ಪ್ರದೇಶದಲ್ಲಿ ದಾಖಲಾಗಿದೆ.

ಕೀಟ, ಏಡಿ, ಸಣ್ಣ ಉರಗಗಳು, ಮೂಷಿಕ, ಎರೆಹುಳ, ಪಕ್ಷಿಗಳು ‘ಸೆಂಡಿಲಿ ಕೀರ’ದ ಪ್ರಮುಖ ಆಹಾರಗಳು. ಇದು ಹೆಚ್ಚಾಗಿ ರಾತ್ರಿ ವೇಳೆ ಚಟುವಟಿಕೆಯಿಂದಿರುವ ಮತ್ತು ನಾಚಿಕೆ ಸ್ವಭಾವದ ನಿಗೂಢ ಪ್ರಾಣಿ. ಇದಕ್ಕೆ ಗಂಡಾತರಗಳು ಕಡಿಮೆ. ಆದರೆ, ಆವಾಸಸ್ಥಾನದ ಛಿದ್ರೀಕರಣ ಮತ್ತು ನಾಶ ಇದರ ಮೇಲೆ ದುಷ್ಪರಿಣಾಮ ಬೀರಿದೆ. ಕೀಟನಾಶಕಗಳಿಂದ ಮತ್ತು ಕಳ್ಳಬೇಟೆಯಿಂದ ಸಹ ಅಪಾಯ ಕಡೆಗಣಿಸುವಂತಿಲ್ಲ. ಇತರ ಜಾತಿಯ ಮುಂಗುಸಿಗಳನ್ನು ಬಣ್ಣ ಬಳಿಯಲು ಬಳಸುವ ಬ್ರಷ್‌ ತಯಾರಿಕೆಗೆ ವ್ಯಾಪಕವಾಗಿ ಕಳ್ಳಬೇಟೆಯಾಡಲಾಗುತ್ತದೆ ಎಂದು ಸಂಜಯ್‌ ಗುಬ್ಬಿ ತಿಳಿಸಿದ್ದಾರೆ.

ಹರೀಶ್ ಎನ್.ಎಸ್, ಸಂದೇಶ, ಜ್ಞಾನೇಂದ್ರ, ರವಿದಾಸ್, ಶ್ರವಣ್ ಸುತಾರ್, ಅಮೃತ ಮೆನನ್ ಮತ್ತು ಪೂರ್ಣೇಶ ಎಚ್.ಸಿ. ಸಂಶೋಧನಾ ತಂಡದಲ್ಲಿದ್ದರು.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !