ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರಿ ಗಾದಿ: ಐವರಲ್ಲಿ ಯಾರಿಗೆ ಅವಕಾಶ?

ಜಿಲ್ಲೆಯಲ್ಲಿ ನಡೆಯುತ್ತಿದೆ ವ್ಯಾಪಕ ಚರ್ಚೆ: ಜೆಡಿಎಸ್‌–ಕಾಂಗ್ರೆಸ್‌ ದೋಸ್ತಿಯಲ್ಲಿ ಯಾರಿಗೆ ಲಾಭ
Last Updated 21 ಮೇ 2018, 5:58 IST
ಅಕ್ಷರ ಗಾತ್ರ

ಬೆಳಗಾವಿ: ಜೆಡಿಎಸ್‌–ಕಾಂಗ್ರೆಸ್ ದೋಸ್ತಿ ಸರ್ಕಾರದಲ್ಲಿ ಜಿಲ್ಲೆಯ ಯಾರಿಗೆ ಸಚಿವ ಸ್ಥಾನ ಸಿಗಬಹುದು ಎನ್ನುವ ಚರ್ಚೆಗಳು ನಡೆಯುತ್ತಿವೆ.

18 ಕ್ಷೇತ್ರಗಳನ್ನು ಹೊಂದಿರುವ ಇಲ್ಲಿ ಜೆಡಿಎಸ್‌ ಒಂದು ಸ್ಥಾನದಲ್ಲೂ ಗೆದ್ದಿಲ್ಲ. ಹೀಗಾಗಿ ಕಾಂಗ್ರೆಸ್‌ಗೆ ಅವಕಾಶವಿದೆ. ಇಲ್ಲಿ ಕಾಂಗ್ರೆಸ್‌ನ 8 ಮಂದಿ ಆಯ್ಕೆಯಾಗಿದ್ದಾರೆ. ಈ ಪೈಕಿ, ಪ್ರಭಾವಿಗಳಾದ ರಮೇಶ ಜಾರಕಿಹೊಳಿ (ಸತತ 5 ಬಾರಿ ಗೆದ್ದಿದ್ದಾರೆ) ಹಾಗೂ ಸತೀಶ ಜಾರಕಿಹೊಳಿ (2 ಬಾರಿ ವಿಧಾನಪರಿಷತ್‌  ಸದಸ್ಯರಾಗಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಸತತ 3ನೇ ಬಾರಿಗೆ ಆಯ್ಕೆಯಾಗಿದ್ದಾರೆ) ಹಿರಿಯರು. ಇಬ್ಬರೂ ಸಚಿವರಾಗಿದ್ದವರು.

ಮಹಾಂತೇಶ ಕೌಜಲಗಿ ಅವರು ವಿಧಾನಸಭೆ ಮತ್ತು ವಿಧಾನಪರಿಷತ್‌ ಸದಸ್ಯರಾಗಿ ತಲಾ ಒಂದು ಬಾರಿ ಕೆಲಸ ಮಾಡಿದ ಅನುಭವ ಉಳ್ಳವರು. ಸೌಮ್ಯ ಸ್ವಭಾವದ ರಾಜಕಾರಣಿ. ಲಿಂಗಾಯತ ಕೋಟಾದಲ್ಲಿ ಅವರಿಗೆ ಅವಕಾಶ ಸಿಗಬಹುದು ಎನ್ನುವ ಚರ್ಚೆ ವ್ಯಾಪಕವಾಗಿದೆ.

2013ರ ಚುನಾವಣೆಯಲ್ಲಿ ಗೆದ್ದ ನಂತರ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಗಣೇಶ ಹುಕ್ಕೇರಿ 2ನೇ ಬಾರಿಗೆ ಗೆದ್ದಿದ್ದಾರೆ. ಲಕ್ಷ್ಮಿ ಹೆಬ್ಬಾಳಕರ ಭಾರಿ ಅಂತರದಿಂದ ಇದೇ ಮೊದಲ ಬಾರಿಗೆ ಗೆದ್ದಿದ್ದಾರೆ. ಡಾ.ಅಂಜಲಿ ನಿಂಬಾಳ್ಕರ್, ಮಹೇಶ ಕುಮಠಳ್ಳಿ ಹಾಗೂ ಶ್ರೀಮಂತ ಪಾಟೀಲ ಕೂಡ ಇದೇ ಮೊದಲಿಗೆ ಆಯ್ಕೆಯಾದವರು.

ಸಹೋದರರಲ್ಲಿ ಯಾರಿಗೆ?

ಹಿರಿಯರಾದ ಜಾರಕಿಹೊಳಿ ಸಹೋದರರಲ್ಲಿ ಒಬ್ಬರಿಗೆ ಸಚಿವ ಸ್ಥಾನ ದೊರೆಯಬಹುದು. ಎಐಸಿಸಿ ಕಾರ್ಯದರ್ಶಿಯೂ ಆಗಿರುವ ಸತೀಶ ಮುಖ್ಯಮಂತ್ರಿಯಾಗಲಿರುವ ಎಚ್‌.ಡಿ. ಕುಮಾರಸ್ವಾಮಿ ಜೊತೆಯೂ ಚೆನ್ನಾಗಿದ್ದಾರೆ; ಕಾಂಗ್ರೆಸ್‌ ವರಿಷ್ಠರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ರಮೇಶಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಪ್ರಭಾವಿ ಡಿ.ಕೆ. ಶಿವಕುಮಾರ್‌ ಜೊತೆಗೆ ಉತ್ತಮ  ಒಡನಾಟವಿದೆ. ಹಿಂದಿನ ಸರ್ಕಾರದಲ್ಲಿ, ಸಚಿವ ಸ್ಥಾನವನ್ನು ತಮ್ಮಿಂದ ಕಿತ್ತು ರಮೇಶಗೆ ನೀಡಿದಾಗ ಸತೀಶ ಪ್ರಬಲ ಪ್ರತಿರೋಧವನ್ನೇನೂ ತೋರಿರಲಿಲ್ಲ. ಈ ಲೆಕ್ಕಾಚಾರದಲ್ಲಿ ನೋಡಿದರೆ ಈಗ ಸತೀಶಗೆ ಹೆಚ್ಚಿನ ಅವಕಾಶಗಳಿವೆ. ಇಬ್ಬರಿಗೆ ಸಿಕ್ಕರೂ ಅಚ್ಚರಿ ಇಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ!

ಪ್ರಭಾವಿ ಲಕ್ಷ್ಮಿ ಹೆಬ್ಬಾಳಕರಗೆ ಮಹಿಳಾ ಕೋಟಾದಲ್ಲಿ ಅವಕಾಶವಿದೆ ಎನ್ನಲಾಗುತ್ತಿದೆ. ರಾಜ್ಯಮಟ್ಟದ ನಾಯಕಿಯಾಗಿ ಗುರುತಿಸಿಕೊಂಡಿರುವ ಅವರು ಹೈಕಮಾಂಡ್‌ ಹಾಗೂ ಡಿ.ಕೆ. ಶಿವಕುಮಾರ್‌, ರಮೇಶ ಜಾರಕಿಹೊಳಿ ಸೇರಿದಂತೆ ಕಾಂಗ್ರೆಸ್‌ ನಾಯಕರೊಂದಿಗೆ ಉತ್ತಮ ಬಾಂಧವ್ಯ  ಹೊಂದಿದ್ದಾರೆ. ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದ ಅವರು, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಪಕ್ಷ ಸಂಘಟನೆಗೆ ದುಡಿದಿದ್ದಾರೆ.

ಅಂಜಲಿ, ಹಿರಿಯ ಐಪಿಎಸ್‌ ಅಧಿಕಾರಿ ಹೇಮಂತ ನಿಂಬಾಳ್ಕರ್‌ ಪತ್ನಿ. ಬಾಲಭವನದ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಹೋದ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಕ್‌ ದೊರೆಯದಿದ್ದಾಗ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಸೋತಿದ್ದರು. ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಪ್ರಾಬಲ್ಯದ ನಡುವೆಯೂ ಖಾನಾಪುರದಲ್ಲಿ ಕಾಂಗ್ರೆಸ್‌ ಗೆಲ್ಲಿಸುವುದಕ್ಕೆ ಶ್ರಮಿಸಿದ್ದಾರೆ.

ಈ ಇಬ್ಬರೂ ನಾಯಕಿಯರು ಮೊದಲ ಗೆಲುವಿನಲ್ಲೇ ಸಚಿವ ಸ್ಥಾನದ ರೇಸ್‌ಗೆ ಬಂದಿರುವುದು ವಿಶೇಷ. ಜಿಲ್ಲೆಯಲ್ಲಿ, ಜಾರಕಿಹೊಳಿ ಸಹೋದರರಲ್ಲಿ ಒಬ್ಬರಿಗೆ ಹಾಗೂ ಇಬ್ಬರು ಶಾಸಕಿಯರಲ್ಲಿ ಒಬ್ಬರಿಗೆ ಸಚಿವ ಗಾದಿ ದೊರೆಯಬಹುದು ಎನ್ನುವ ನಿರೀಕ್ಷೆ ಇದೆ. ಕೆಲವರು ತಮ್ಮದೇ ಹಂತದಲ್ಲಿ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಸಾಮಾಜಿಕ ಮಾಧ್ಯಮದಲ್ಲೂ ಈ ಚರ್ಚೆಗಳು ಜೋರಾಗಿಯೇ ನಡೆಯುತ್ತಿವೆ.

ಈ ನಡುವೆ, ಹಲವು ವರ್ಷಗಳಿಂದಲೂ ಜೆಡಿಎಸ್‌ ಸಂಘಟನೆಗೆ ದುಡಿದಿರುವ ಕೆಲವರು ನಿಗಮ ಅಥವಾ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಲಾಬಿ ಆರಂಭಿಸಿದ್ದಾರೆ.

ಸುವರ್ಣ ವಿಧಾನಸೌಧಕ್ಕೆ ಜೀವ ಕಳೆ?

ವರ್ಷದಲ್ಲಿ 10 ದಿನಗಳ ಕಾಲ ಅಧಿವೇಶನ ನಡೆಸುವುದು ಬಿಟ್ಟರೆ ಉಳಿದ ದಿನಗಳಲ್ಲಿ ‘ಪ್ರದರ್ಶನದ ಬೊಂಬೆ’ಯಂತಾಗಿರುವ ಸುವರ್ಣ ವಿಧಾನಸೌಧಕ್ಕೆ ಈ ಸರ್ಕಾರದಲ್ಲಿ ಜೀವ ಕಳೆ ಬರುವುದೇ ಎನ್ನುವ ನಿರೀಕ್ಷೆಗಳೂ ಈ ಭಾಗದ ಜನರಲ್ಲಿ ಮೂಡಿವೆ.‌

ಸುವರ್ಣ ವಿಧಾನಸೌಧದ ನಿರ್ಮಾಣಕ್ಕೂ ಪ್ರಮುಖ ಕಾರಣವಾಗಿದ್ದ ಎಚ್‌.ಡಿ. ಕುಮಾರಸ್ವಾಮಿ ಈಗ ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತಿದ್ದಾರೆ. ‘ತಿಂಗಳಲ್ಲಿ ವಾರಕ್ಕೊಮ್ಮೆ ಇಲ್ಲಿಯೇ ಆಡಳಿತ ನಡೆಸಲಾಗುವುದು. ಈ ಭಾಗಕ್ಕೆ ಬೇಕಾಗುವ ಕೆಲವು ಕಚೇರಿಗಳನ್ನು ಇಲ್ಲಿಗೇ ಸ್ಥಳಾಂತರಿಸಲಾಗುವುದು’ ಎಂದು ಭರವಸೆ ನೀಡಿದ್ದರು. ಇದನ್ನು ಈಡೇರಿಸುತ್ತಾರೆಯೇ ಎನ್ನುವ ಕುತೂಹಲ ಇಲ್ಲಿನವರದು.

**
ಶಾಸಕಿಯಾಗಬೇಕು ಎಂದು ಹೋರಾಡಿ ಈಗ ಆಗಿದ್ದೇನೆ. ಸಚಿವ ಸ್ಥಾನದ ನಿರೀಕ್ಷೆ ಇಲ್ಲ. ಹೈಕಮಾಂಡ್‌ ಸೂಚಿಸಿದರೆ ಯಾವುದೇ ಜವಾಬ್ದಾರಿ ನಿರ್ವಹಿಸುವುದಕ್ಕೆ ಸಿದ್ಧ 
ಲಕ್ಷ್ಮಿ ಹೆಬ್ಬಾಳಕರ, ಶಾಸಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT