ಛತ್ತೀಸಗಡ: ಚುನಾವಣೆ ಹೊಸ್ತಿಲಲ್ಲೇ ನಕ್ಸಲರ ದಾಳಿ

7

ಛತ್ತೀಸಗಡ: ಚುನಾವಣೆ ಹೊಸ್ತಿಲಲ್ಲೇ ನಕ್ಸಲರ ದಾಳಿ

Published:
Updated:

ರಾಯಪುರ (ಛತ್ತೀಸಗಡ): ಛತ್ತೀಸಗಡ ವಿಧಾನಸಭೆ ಚುನಾವಣೆ ಸಲುವಾಗಿ ಭದ್ರತೆಗೆ ನಿಯೋಜಿಸಿದ್ದ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ತುಕಡಿಯು ಗಸ್ತು ತಿರುಗುವ ವೇಳೆ ನಕ್ಸಲರು ಸುಧಾರಿತ ಬಾಂಬ್ ಅನ್ನು ಸ್ಫೋಟಿಸಿದ್ದಾರೆ. ಘಟನೆಯಲ್ಲಿ ಬಿಎಸ್‌ಎಫ್‌ನ ಸಬ್ ಇನ್ಸಪೆಕ್ಟರ್‌ ಒಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬರು ಗಾಯಗೊಂಡಿದ್ದಾರೆ.

ರಾಜ್ಯದ 90ರಲ್ಲಿ 18 ಕ್ಷೇತ್ರಗಳಿಗೆ ಸೋಮವಾರ ಮತದಾನ ನಡೆಯಲಿದೆ. ಈ ಚುನಾವಣೆಯನ್ನು ನಕ್ಸಲರು ಬಹಿಷ್ಕರಿಸಿದ್ದಾರೆ. ಹೀಗಾಗಿ ಚುನಾವಣೆಗೆ ಭಾರಿ ಸಂಖ್ಯೆಯಲ್ಲಿ ಭದ್ರತೆ ಕಲ್ಪಿಸಲಾಗಿದೆ. ಇದರ ಮಧ್ಯೆಯೇ ನಕ್ಸಲರು ದಾಳಿ ನಡೆಸಿದ್ದಾರೆ. 

ಕಾಂಕೇರ್ ಜಿಲ್ಲೆಯ ದಟ್ಟಾರಣ್ಯ ಪ್ರದೇಶದಲ್ಲಿರುವ ಕಟ್ಟಕಲ್ ಮತ್ತು ಗೋಮೆ ಗ್ರಾಮಗಳ ನಡುವೆ ಈ ದಾಳಿ ನಡೆದಿದೆ. ದಾಳಿ ನಂತರ ನಕ್ಸಲರಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಚುನಾವಣೆ ಅಧಿಸೂಚನೆ ಹೊರಬಿದ್ದ ನಂತರದ 15 ದಿನಗಳಲ್ಲಿ ನಕ್ಸಲರು ಆರು ಬಾರಿ ಸುಧಾರಿತ ಬಾಂಬ್‌ಗಳನ್ನು ಸ್ಫೋಟಿಸಿದ್ದಾರೆ. ಈ ದಾಳಿಗಳಲ್ಲಿ ನಾಗರಿಕರು, ಭದ್ರತಾ ಸಿಬ್ಬಂದಿ ಮತ್ತು ದೂರದರ್ಶನದ ಕ್ಯಾಮೆರಾಮನ್ ಸೇರಿ 13 ಜನರು ಮೃತಪಟ್ಟಿದ್ದಾರೆ.

ನಕ್ಸಲರ ಪ್ರಭಾವ ಹೆಚ್ಚಿರುವ ಪ್ರದೇಶಗಳಲ್ಲಿನ ಮತಗಟ್ಟೆಗಳಲ್ಲಿ ಭಾರಿ ಭದ್ರತೆ ಕಲ್ಪಿಸಲಾಗಿದೆ. ಇದರ ಮಧ್ಯೆಯೇ ನಕ್ಸಲರು ಮತದಾನವನ್ನು ಬಹಿಷ್ಕರಿಸುವಂತೆ ಕರೆ ನೀಡಿ ಮತಗಟ್ಟೆಗಳ ಬಳಿ ಕರಪತ್ರಗಳನ್ನು ಮತ್ತು ಬ್ಯಾನರ್‌ಗಳನ್ನು ಅಂಟಿಸಿದ್ದಾರೆ. ರಸ್ತೆಗಳಿಗೆ ಅಡ್ಡಲಾಗಿ ಮರಗಳನ್ನು ಉರುಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !