ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌: ಕಚ್ಚಾತೈಲ ಬೆಲೆ ಕುಸಿತದ ನಿರಾಳ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಮುಂದೆ ಶುಕ್ರವಾರದ ಮೊದಲ ಬಜೆಟ್‌ಗೆ ಮುನ್ನ ಹಲವು ಸವಾಲು
Last Updated 3 ಜುಲೈ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಮೊದಲ ಪೂರ್ಣಕಾಲಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶುಕ್ರವಾರ ತಮ್ಮ ಮೊದಲ ಬಜೆಟ್‌ ಮಂಡಿಸುವ ಹೊತ್ತಿಗೆ ಸಮಸ್ಯೆಗಳ ದೊಡ್ಡ ಹೊರೆಯೇ ಅವರ ಮೇಲಿದೆ. ಆದರೆ, ಇತರ ಹಲವು ಹಣಕಾಸು ಸಚಿವರಿಗೆ ಇಲ್ಲದ ಒಂದು ಅನುಕೂಲವೂ ಅವರಿಗೆ ಇದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರುತ್ತಲೇ ಇದ್ದ ತೈಲ ಬೆಲೆ ಹಿಂದಿನ ಹಲವು ಸಚಿವರನ್ನು ಇನ್ನಿಲ್ಲದೆ ಕಾಡಿತ್ತು. ಆದರೆ ಈಗ ಅದು ಬಹಳ ಕೆಳಮಟ್ಟದಲ್ಲಿ ಇದೆ.

ತೈಲ ಬೆಲೆಯ ಅನುಕೂಲವನ್ನು ಬದಿಗಿಟ್ಟರೆ ಉಳಿದ ಎಲ್ಲವೂ ಅವರಿಗೆ ತೊಡಕುಗಳಾಗಿಯೇ ಕಾಡಲಿವೆ. ಕಳೆದ ಐದು ವರ್ಷಗಳಲ್ಲಿನ ಆರ್ಥಿಕ ಬೆಳವಣಿಗೆ ಕುಸಿತಕ್ಕೆ ಅವರು ಉತ್ತರ ಕೊಡಬೇಕಾಗಿದೆ. ನಿರುದ್ಯೋಗ ಪ್ರಮಾಣವು ಕಳೆದ 45 ವರ್ಷಗಳಲ್ಲಿಯೇ ಅತಿ ಹೆಚ್ಚು ಎಂಬ ವರದಿಗಳು, ಹೊಸ ಯೋಜನೆಗಳಲ್ಲಿ ಹೂಡಿಕೆಯು ಕಳೆದ 15 ವರ್ಷಗಳಲ್ಲಿಯೇ ಅತಿ ಕಡಿಮೆ ಇದೆ ಎಂಬುದು ಅವರ ಮುಂದಿರುವ ಮತ್ತೆರಡು ಸವಾಲುಗಳು. ತೆರಿಗೆ ಸಂಗ್ರಹದಲ್ಲಿ ಕುಸಿತ, ವಾಹನ ಮಾರಾಟದಲ್ಲಿ ಎರಡಂಕಿ ಇಳಿಕೆ ಇನ್ನಿತರ ಸಮಸ್ಯೆಗಳು.

ಸದ್ಯದ ಸ್ಥಿತಿಯಲ್ಲಿ ತೈಲ ಬೆಲೆ ಭಾರತಕ್ಕೆ ಹೊರಲಾರದ ಹೊರೆಯಾಗಿಲ್ಲ. ಮುಂದಿನ ಕೆಲವು ತಿಂಗಳಲ್ಲಿ ಅದು ಸಮಸ್ಯೆಯಾಗಿ ಕಾಡುವ ಭೀತಿಯೂ ಇಲ್ಲ. ತೈಲ ಬೆಲೆ ಕಡಿಮೆ ಇದೆ ಎಂದರೆ ಹಣದುಬ್ಬರ, ಸಹಾಯಧನಗಳು, ಚಾಲ್ತಿ ಖಾತೆ ಕೊರತೆ, ವ್ಯಾಪಾರ ಕೊರತೆಗಳ ಮೇಲಿನ ಒತ್ತಡ ಅತಿಯಾಗಿ ಇಲ್ಲ ಎಂದು ಅರ್ಥ. ಹಾಗೆಯೇ ಬಡ್ಡಿ ದರ ಇಳಿಸಬೇಕು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಮೇಲಿನ ಒತ್ತಡವೂ ಕಡಿಮೆ ಇರುತ್ತದೆ.

ತೈಲ ಬೆಲೆ ಕಡಿಮೆ ಇರುವ ಅವಧಿಯಲ್ಲಿ ಹಣಕಾಸು ಸಚಿವರಾಗಿರುವುದು ದೊಡ್ಡ ಅದೃಷ್ಟ. ಹಿಂದಿನ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರೂ ಅಂತಹ ಅದೃಷ್ಟಶಾಲಿಗಳಲ್ಲಿ ಒಬ್ಬರು. ತೈಲ ಬೆಲೆ ಬ್ಯಾರಲ್‌ಗೆ 147 ಡಾಲರ್‌ (ಸುಮಾರು ₹10 ಸಾವಿರ) ಇದ್ದದ್ದುನರೇಂದ್ರ ಮೋದಿ ನೇತೃತ್ವದ ಸರ್ಕಾರ 2014ರಲ್ಲಿ ಅಧಿಕಾರ ವಹಿಸಿಕೊಳ್ಳುವಾಗ 49 ಡಾಲರ್‌ಗೆ (ಸುಮಾರು ₹3,300) ಇಳಿದಿತ್ತು.

ಜಾಗತಿಕ ಆರ್ಥಿಕತೆಯ ಕುಸಿತದ ಭೀತಿ ಮತ್ತು ತೀವ್ರಗೊಳ್ಳುತ್ತಿರುವ ವ್ಯಾಪಾರ ಸಮರದ ಕಾರಣಕ್ಕೆ 2019ರಲ್ಲಿಯೂ ತೈಲ ಬೆಲೆ ಕುಸಿಯುತ್ತಿದೆ. ಪೂರೈಕೆ ಕಡಿತವನ್ನು 2020ರ ಮಾರ್ಚ್‌ವರೆಗೆ ವಿಸ್ತರಿಸಲು ತೈಲ ರಫ್ತು ರಾಷ್ಟ್ರಗಳ ಸಂಘಟನೆ (ಒಪೆಕ್‌) ನಿರ್ಧರಿಸಿವೆ. ತೈಲ ಬೆಲೆ ಏರಿಕೆಯಾಗಲಿ ಎಂಬುದು ಒಪೆಕ್‌ನ ಉದ್ದೇಶ. ಹಾಗಿದ್ದರೂ ತೈಲ ಬೆಲೆ ಏರಿಕೆ ಕಾಣುತ್ತಿಲ್ಲ.ತೈಲ ಉತ್ಪಾದನೆಯನ್ನು ಅಮೆರಿಕ ಹೆಚ್ಚಿಸುವುದರೊಂದಿಗೆ ಈ ಕಾರ್ಯತಂತ್ರ ಯಶಸ್ವಿಯಾಗಲಿಲ್ಲ.

ತೈಲ ಪೂರೈಕೆಯನ್ನು ಕಡಿತಗೊಳಿಸಲು ರಷ್ಯಾ ನೇತೃತ್ವದಲ್ಲಿ ಒಪೆಕ್‌ ಮತ್ತು ಮಿತ್ರ ರಾಷ್ಟ್ರಗಳು 2017ರಲ್ಲಿಯೇ ಆರಂಭಿಸಿವೆ. ರಷ್ಯಾ ಮತ್ತು ಸೌದಿ ಅರೇಬಿಯಾ ಜಗತ್ತಿನ ಅತಿಹೆಚ್ಚು ತೈಲ ಉತ್ಪಾದಕ ರಾಷ್ಟ್ರಗಳು.

ಕೈಗಾರಿಕಾ ಉತ್ಪಾದನೆ ಕುಸಿದಿದೆ ಎಂಬ ಅಂಕಿ ಅಂಶಗಳು ಪ್ರಕಟವಾದ ಬೆನ್ನಿಗೇ ಜುಲೈ 2ರಂದು ತೈಲ ಬೆಲೆ ಶೇ 4ರಷ್ಟು ಕುಸಿದಿದೆ. ತೈಲದ ಬೇಡಿಕೆ ಇನ್ನಷ್ಟು ಕುಸಿಯಬಹುದು ಎಂಬ ಚಿಂತೆ ಹೂಡಿಕೆದಾರರಲ್ಲಿ ಮೂಡಲು ಇದು ಕಾರಣವಾಗಿದೆ. ತಕ್ಷಣದ ಪರಿಣಾಮವಾಗಿ ತೈಲ ಕಂಪನಿಗಳ ಷೇರು ಬಲೆ ಬುಧವಾರ ಏರಿಕೆ ಕಂಡಿದೆ.

ತೈಲ ಬೆಲೆಯು ದೀರ್ಘಾವಧಿಯಲ್ಲಿ ಹೇಗಿರಬಹುದು ಎಂಬುದನ್ನು ಊಹಿಸುವುದು ಕಷ್ಟ. ಹಾಗಿದ್ದರೂ ಸ್ವಲ್ಪ ಕಾಲ ಕಚ್ಚಾ ತೈಲದ ಬೆಲೆ ವಿಪರೀತ ಏರಲಿಕ್ಕಿಲ್ಲ ಎಂಬ ನಿರೀಕ್ಷೆಯಲ್ಲಿ ಅರ್ಥ ವ್ಯವಸ್ಥೆ ಇದೆ.

‘ಮುಂದಿನ ಕೆಲವು ತಿಂಗಳ ಕಾಲ ಕಚ್ಚಾ ತೈಲ ಬೆಲೆಯು ಬ್ಯಾರಲ್‌ಗೆ 63 ಡಾಲರ್‌ನಿಂದ (₹4,335) 68 ಡಾಲರ್‌ನೊಳಗೇ (₹4,680) ಇರಬಹುದು’ ಎಂದು ಕೇರ್‌ ರೇಟಿಂಗ್‌ ಸಂಸ್ಥೆಯು ತನ್ನ ಮುನ್ನೋಟದಲ್ಲಿ ಹೇಳಿದೆ.

ಈ ಆರ್ಥಿಕ ವರ್ಷದಲ್ಲಿ ತೈಲ ಬೆಲೆಯು ಬ್ಯಾರಲ್‌ಗೆ 70–75 ಡಾಲರ್‌ (₹4,800–5,150) ಮೀರದು ಎಂಬ ಲೆಕ್ಕಾಚಾರದಲ್ಲಿ ಕೇಂದ್ರ ಮತ್ತು ಆರ್‌ಬಿಐ ಇವೆ. ಬೆಲೆಯು ಈ ಮಟ್ಟದಲ್ಲಿಯೇ ಇದ್ದರೆ ಸರ್ಕಾರಕ್ಕೆ ಬಹಳಷ್ಟು ಅನುಕೂಲ ಇದೆ. ಹಾಗಾಗಿಯೇ ನಿರ್ಮಲಾ ಅವರು ತಮ್ಮ ಹಿಂದಿನ ಹಣಕಾಸು ಸಚಿವರಿಗಿಂತ ಹೆಚ್ಚು ಅದೃಷ್ಟಶಾಲಿ.

ತೈಲ ಲೆಕ್ಕಾಚಾರ

* ತೈಲ ಬೆಲೆ ಏರುವಂತೆ ನೋಡಿಕೊಳ್ಳುವಲ್ಲಿ ಒಪೆಕ್‌ ಕಾರ್ಯತಂತ್ರ ಯಶಸ್ವಿಯಾಗಿತ್ತು. ಆದರೆ, ಅಮೆರಿಕವು ತೈಲ ಉತ್ಪಾದನೆ ಹೆಚ್ಚಿಸಿದ ಕಾರಣಕ್ಕೆ ಈಗ ಬೆಲೆ ಏರಿಕೆ ಆಗುತ್ತಿಲ್ಲ


* ಅಮೆರಿಕದ ಅಧ್ಯಕ್ಷೀಯ ಚುನಾವಣೆ ಹತ್ತಿರದಲ್ಲಿದೆ. ತೈಲ ಬೆಲೆಯು ಕಡಿಮೆ ಇರುವಂತೆ ನೋಡಿಕೊಳ್ಳುವಲ್ಲಿ ಅಲ್ಲಿನ ಅಧ್ಯಕ್ಷರ ಹಿತಾಸಕ್ತಿ ಅಡಗಿದೆ. ಹಾಗಾಗಿ, ಅಮೆರಿಕ ತೈಲ ಉತ್ಪಾದನೆ ಇನ್ನಷ್ಟು ಹೆಚ್ಚಬಹುದು


* ತೈಲ ಬೆಲೆಯನ್ನು ಅಮೆರಿಕ ನಿಯಂತ್ರಣದಲ್ಲಿ ಇರಿಸಿದಷ್ಟು ದಿನ ಅದರ ಲಾಭ ಭಾರತಕ್ಕೆ ಸಿಗಲಿದೆ

ವಿದೇಶಿ ವಿನಿಮಯದ ಲಾಭ

ಭಾರತದ ತೈಲ ಅಗತ್ಯದ ಶೇ 82ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಡಾಲರ್‌ ಮೂಲಕವೇ ಹಣ ಪಾವತಿಸಬೇಕು. ಕಚ್ಚಾ ತೈಲ ಬೆಲೆ ಹೆಚ್ಚಳವಾದರೆ, ದೇಶದಿಂದ ಹೊರಗೆ ಹೋಗುವ ಡಾಲರ್‌ ಪ್ರಮಾಣ ಹೆಚ್ಚಾಗುತ್ತದೆ. ಅದು ವಿದೇಶಿ ವಿನಿಮಯ ಮೀಸಲಿನ ಮೇಲೆ ನೇರ ಪರಿಣಾಮ ಬೀರುತ್ತದೆ.

ವಿದೇಶಿ ವಿನಿಮಯ ಮೀಸಲು ಕುಸಿದರೆ ಅದು ವ್ಯಾಪಾರ ಮತ್ತು ಚಾಲ್ತಿ ಖಾತೆ ಕೊರತೆಯ ಮೇಲೆಯೂ ಪ್ರತಿಕೂಲವಾಗಿ ವರ್ತಿಸುತ್ತದೆ. ಪರಿಣಾಮವಾಗಿ ಹಣದುಬ್ಬರ ಏರುತ್ತದೆ. ಆಹಾರ, ಇಂಧನ ಮತ್ತು ರಸಗೊಬ್ಬರಗಳ ಮೇಲೆ ಸರ್ಕಾರ ನೀಡಬೇಕಾದ ಸಹಾಯಧನದ ಮೊತ್ತ ಏರುತ್ತದೆ. ಬಡ್ಡಿದರ ಕಡಿತ ಮಾಡಬೇಕು ಎಂಬ ಒತ್ತಡ ಆರ್‌ಬಿಐನ ಮೇಲೆ ನಿರಂತರವಾಗಿ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT