ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋರಕ್ಷಣೆ, ಹಿಂದುತ್ವಕ್ಕೆ ಮೊರೆಹೋದ ಯೋಗಿ

ಉತ್ತರ ಪ್ರದೇಶ ಬಜೆಟ್‌: ಚುನಾವಣೆ ಮೇಲೆ ಕಣ್ಣು
Last Updated 7 ಫೆಬ್ರುವರಿ 2019, 14:19 IST
ಅಕ್ಷರ ಗಾತ್ರ

ಲಖನೌ: ಪ್ರಮುಖ ಧಾರ್ಮಿಕ ಸ್ಥಳಗಳ ಅಭಿವೃದ್ಧಿ ಹಾಗೂ ಗೋವುಗಳ ಸಂಕರಕ್ಷಣೆಗೆ ಉತ್ತರ ಪ್ರದೇಶ ಸರ್ಕಾರದ ಬಜೆಟ್‌ನಲ್ಲಿ ಮೊದಲ ಆದ್ಯತೆ ನೀಡಲಾಗಿದೆ.

₹4.79 ಲಕ್ಷ ಕೋಟಿ ಗಾತ್ರದ ಬಜೆಟ್‌ನಲ್ಲಿ ಅಯೋಧ್ಯೆ, ಮಥುರಾ, ಕಾಶಿ ಮೊದಲಾದ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗಾಗಿ ₹462 ಕೋಟಿ ಮೀಸಲಿಡಲಾಗಿದೆ.

ಗ್ರಾಮೀಣ ಭಾಗದಲ್ಲಿ ಗೋಶಾಲೆಗಳ ನಿರ್ಮಾಣಕ್ಕೆ ₹247 ಕೋಟಿ ಹಾಗೂ ನಗರ ಪ್ರದೇಶಗಳ ಬೀಡಾಡಿ ದನಗಳ ಸಂರಕ್ಷೆಗೆ ₹200 ಕೋಟಿ ಅನುದಾನ ನೀಡಲಾಗಿದೆ. ವಿಶೇಷ ಸೆಸ್‌ನಿಂದ ಸಂಗ್ರಹಿಸುವ ₹165 ಕೋಟಿಯನ್ನು ಜಾನುವಾರುಗಳ ನಿರ್ವಹಣೆಗೆ ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ.

ಹಣಕಾಸು ಸಚಿವ ರಾಜೇಶ್ ಅಗರ್‌ವಾಲ್ ಅವರು ಗುರುವಾರ ಮಂಡಿಸಿದ ಬಜೆಟ್‌ನಲ್ಲಿ, ಗಂಗಾ ತೀರದಿಂದ ವಾರಾಣಸಿವರೆಗಿನ ರಸ್ತೆ ಅಗಲೀಕರಣ ಹಾಗೂ ಸೌಂದರ್ಯೀಕರಣಕ್ಕೆ ₹207 ಕೋಟಿ ನಿಗದಿಪಡಿಸಲಾಗಿದೆ.ಪ್ರಧಾನಿ ನರೇಂದ್ರ ಮೋದಿ ಅವರ ಮತ್ವಾಕಾಂಕ್ಷೆಯಂತೆ ಕಾಶಿ ವಿಶ್ವನಾಥ ಮಂದಿರ ಯೋಜನೆಯನ್ನು ಕಾರ್ಯಗತಗೊಳಿಸಲು ‘ಶ್ರೀ ಕಾಶಿ ವಿಶ್ವನಾಥ ವಿಶೇಷ ಪ್ರದೇಶಾಭಿವೃದ್ಧಿ ಮಂಡಳಿ’ ಕಾರ್ಯರೂಪಕ್ಕೆ ಬರಲಿದೆ.

ವಾರಾಣಸಿಯ ಕಾಶಿ ಹಿಂದೂ ವಿಶ್ವವಿದ್ಯಾಲಯದಲ್ಲಿ ವೈದಿಕ ವಿಜ್ಞಾನ ಕೇಂದ್ರ ನಿರ್ಮಾಣಕ್ಕೆ ₹16 ಕೋಟಿ ತೆಗೆದಿಡಲಾಗಿದೆ.ಅಯೋಧ್ಯೆಯ ಪ್ರವಾಸಿ ಸ್ಥಳಗಳ ಸಮಗ್ರ ಅಭಿವೃದ್ಧಿಗೆ ₹101 ಕೋಟಿ ಮೀಸಲಿರಿಸಲಾಗಿದೆ.

ಮಥುರಾ ಮತ್ತು ವೃಂದಾವನ ನಡುವಿನ ಜಾಗದಲ್ಲಿ ₹8.38 ಕೋಟಿ ವೆಚ್ಚದ ಸಭಾಂಗಣ ನಿರ್ಮಿಸಲು ನಿರ್ಧರಿಸಲಾಗಿದೆ. ಸಾರ್ವಜನಿಕ ರಾಮಲೀಲಾ ಮೈದಾನದ ಸುತ್ತ ಗೋಡೆ ನಿರ್ಮಿಸಲು ಸರ್ಕಾರ ₹5 ಕೋಟಿ ವ್ಯಯಿಸಲಿದೆ.

ಉತ್ತರ ಪ್ರದೇಶದ ಬ್ರಜ ತೀರ್ಥದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ₹125 ಕೋಟಿ ಹಾಗೂ ವೃಂದಾವನ ಶೋಧ ಸಂಸ್ಥಾನ ಅಭಿವೃದ್ಧಿಗೆ ₹1 ಕೋಟಿ ನೀಡಲಾಗಿದೆ.ಗಡ ಮುಕ್ತೇಶ್ವರದ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗೆ ₹27 ಕೋಟಿ ಅನುದಾನ ಘೋಷಿಸಲಾಗಿದೆ.

ಬೌದ್ಧರ ಸ್ಥಳಗಳಾದ ಸಾರನಾಥ, ಶ್ರಾವಸ್ತಿ, ಕುಶಿನಗರ, ಕಪಿಲವಸ್ತು, ಕೌಸಂಬಿಗಳ ಅಭಿವೃದ್ಧಿಗೂ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ.

ದೀನ್‌ದಯಾಳ್ ಉಪಾಧ್ಯಾಯ ಡೇರಿ ಯೋಜನೆ ಅನುಷ್ಠಾನಕ್ಕೆ ₹64 ಕೋಟಿ ಹಾಗೂ ಮಥುರಾದಲ್ಲಿ ಹೊಸ ಡೇರಿ ಸ್ಥಾಪನೆಗೆ ₹56 ಕೋಟಿ ಅನುದಾನ ನೀಡಲಾಗಿದೆ.ಹಾಲು ಒಕ್ಕೂಟಗಳ ಬಲವರ್ಧನೆ, ವಿಸ್ತರಣೆ ಹಾಗೂ ತಂತ್ರಜ್ಞಾನ ಅಳವಡಿಕೆ ಮೊದಲಾದ ಕಾರ್ಯಕ್ರಮಗಳಿಗೆ ₹93 ನೆರವು ನೀಡುವ ಪ್ರಸ್ತಾವ ಇಡಲಾಗಿದೆ.

ಟೀಕೆ: ಬಜೆಟ್ ಎಲ್ಲ ವರ್ಗದ ಜನರನ್ನು ತಲುಪಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರಶಂಸಿಸಿದ್ದಾರೆ. ಆದರೆ ಬಡವರು, ರೈತರು ಹಾಗೂ ನಿರುದ್ಯೋಗಿಗಳಿಗೆ ಬಜೆಟ್‌ನಿಂದ ಯಾವುದೇ ಲಾಭವಾಗಿಲ್ಲ ಎಂದು ವಿರೋಧಪಕ್ಷಗಳ ಟೀಕಿಸಿವೆ.

==

ಉತ್ತರಪ್ರದೇಶ ಬಜೆಟ್‌ ಮುಖ್ಯಾಂಶಗಳು

*ಅಲ್ಪಸಂಖ್ಯಾತ ಸಮುದಾಯ: ವಿದ್ಯಾರ್ಥಿವೇತನ ಕಾರ್ಯಕ್ರಮಕ್ಕೆ ₹942 ಕೋಟಿ

*ಅರಾಬಿ–ಫಾರ್ಸಿ ಮದರಸಾಗಳ ಅಧುನೀಕರಣಕ್ಕೆ ₹459 ಕೋಟಿ

*ರಾಜ್ಯದ ಗ್ರಾಮೀಣ ಭಾಗಗಳ ಸ್ಮಶಾನಗಳ ಅಭಿವೃದ್ಧಿಗೆ ₹100 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT