ಶನಿವಾರ, ಜನವರಿ 18, 2020
26 °C

ಸಿಎಎ–ಎನ್ಆರ್‌ಸಿ ಚರ್ಚೆ: ಕಾಂಗ್ರೆಸ್‌ ನೇತೃತ್ವದ ಸಭೆಗೆ 6 ಪ್ರಮುಖ ಪಕ್ಷಗಳು ಗೈರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸಿಎಎ ವಿಚಾರವಾಗಿ ಕಾಂಗ್ರೆಸ್‌ ನೇತೃತ್ವದಲ್ಲಿ ಕರೆಯಲಾಗಿದ್ದ ವಿರೋಧ ಪಕ್ಷಗಳ ಸಭೆಗೆ 6 ಪ್ರಮುಖ ಪಕ್ಷಗಳು ಗೈರಾಗಿವೆ. 

ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ಸಿಎಎ, ವಿದ್ಯಾರ್ಥಿಗಳ ಮೇಲಿನ ಗುಂಪು ಹಲ್ಲೆ ಮತ್ತು ದೇಶದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ವಿಚಾರವಾಗಿ ಚರ್ಚಿಸಲು ಕಾಂಗ್ರೆಸ್‌ ನೇತೃತ್ವದಲ್ಲಿ ವಿರೋಧ ಪಕ್ಷಗಳ ಸಭೆ ಕರೆಯಲಾಗಿತ್ತು. ನವದೆಹಲಿಯ ಪಾರ್ಲಿಮೆಂಟ್‌ ಹೌಸ್‌ನಲ್ಲಿ ಕರೆಯಲಾಗಿದ್ದ ಸಭೆಗೆ 15 ಪಕ್ಷಗಳು ಹಾಜರಾಗಿದ್ದು, 6 ಪ್ರಮುಖ ಪಕ್ಷಗಳು ಗೈರಾಗಿವೆ. 

ಕಾಂಗ್ರೆಸ್‌ ಜೊತೆ ಮೈತ್ರಿ ಹೊಂದಿರುವ ಶಿವಸೇನೆ, ಡಿಎಂಕೆ ಸೇರಿದಂತೆ ತೃಣಮೂಲ ಕಾಂಗ್ರೆಸ್‌, ಬಿಎಸ್‌ಪಿ, ಸಮಾಜವಾದಿ ಪಕ್ಷ ಮತ್ತು ಆಮ್‌ ಆದ್ಮಿ ಪಕ್ಷಗಳು ಸಭೆಗೆ ಹಾಜರಾಗಿಲ್ಲ ಎಂದು ತಿಳಿದುಬಂದಿದೆ. 

ತಮಿಳುನಾಡಿನ ಸ್ಥಳೀಯ ಕಾಂಗ್ರೆಸ್‌ ನಾಯಕರೊಂದಿಗೆ ಡಿಎಂಕೆ ಅಸಮಾಧಾನ ಹೊಂದಿರುವ ಕಾರಣ ಈ ಸಭೆಗೆ ಗೈರಾಗಿದೆ ಎನ್ನಲಾಗುತ್ತಿದೆ. 

ಕಾಂಗ್ರೆಸ್‌ ನೇತೃತ್ವದ ಸಭೆಗೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಬಿಎಸ್‌ಪಿ ನಾಯಕಿ ಮಾಯಾವತಿ ಹಾಜರಾಗುವುದಿಲ್ಲ ಎಂದು ಈ ಮೊದಲೇ ಹೇಳಿದ್ದರು. ಆ ವಿಚಾರವಾಗಿ ಮಾತನಾಡಿದ್ದ ಮಮತಾ, ‘ಕಾಂಗ್ರೆಸ್‌ ಮತ್ತು ಎಡ ಪಕ್ಷಗಳು ನಡೆಸುತ್ತಿರುವುದು ವಿಧ್ವಂಸವೇ ಹೊರತು ಚಳವಳಿ ಅಲ್ಲ’ ಎಂದಿದ್ದರು. 

ಇನ್ನುಳಿದಂತೆ ಸಮಾಜವಾದಿ, ಎಎಪಿ ಪಕ್ಷಗಳು ಸಭೆಗೆ ಗೈರಾಗಿರುವುದಕ್ಕೆ ಕಾರಣಗಳು ತಿಳಿದುಬಂದಿಲ್ಲ.  

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು