ಶನಿವಾರ, ಜನವರಿ 18, 2020
20 °C
ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಪಾಕ್ ಹೀನಾಯ ನಡವಳಿಕೆ- ಪ್ರಧಾನಿ ಆರೋಪ

ಸಿಎಎ ಯಾರ ಹಕ್ಕುಗಳನ್ನೂ ಕಿತ್ತುಕೊಳ್ಳದು: ಪ್ರಧಾನಿ ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ‘ಪೌರತ್ವ (ತಿದ್ದುಪಡಿ) ಕಾಯ್ದೆಯ ಜಾರಿ ಮತ್ತು ಅದರ ಪರಿಣಾಮದಿಂದಾಗಿ ಪಾಕಿಸ್ತಾನ 70 ವರ್ಷಗಳಿಂದ ಅಲ್ಪಸಂಖ್ಯಾತರಿಗೆ ನೀಡುತ್ತಿದ್ದ ಧಾರ್ಮಿಕ ಕಿರುಕುಳದ ಬಗ್ಗೆ ಜಗತ್ತಿಗೆ ಉತ್ತರಿಸಬೇಕಾಗಿ ಬಂದಿದೆ’ ಎಂದು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

ರಾಮಕೃಷ್ಣ ಮಿಷನ್‌ನ ಮುಖ್ಯಕಚೇರಿ ಬೇಲೂರು ಮಠದಲ್ಲಿ ಸ್ವಾಮಿ ವಿವೇಕಾನಂದ ಜಯಂತಿಯಂದು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ ನಾವು ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡದಿದ್ದರೆ ಈ ಚರ್ಚೆ ಬರುತ್ತಿರಲಿಲ್ಲ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರನ್ನು ಹೇಗೆ ಹಿಂಸಿಸಲಾಗುತ್ತಿದೆ ಎಂಬ ಬಗ್ಗೆ ಜಗತ್ತಿಗೆ ತಿಳಿಯುತ್ತಿರಲಿಲ್ಲ. ಈ ಬಗ್ಗೆ ಪಾಕಿಸ್ತಾನ ಇಂದು ಜಗತ್ತಿಗೇ ಉತ್ತರಿಸಬೇಕಾಗಿದೆ’ ಎಂದರು.

'ಪೌರತ್ವ (ತಿದ್ದುಪಡಿ) ಕಾಯ್ದೆಯು ಯಾರ ಹಕ್ಕುಗಳನ್ನೂ ಕಸಿದುಕೊಳ್ಳುವುದಿಲ್ಲ ಬದಲಿಗೆ, ಪೌರತ್ವ ನೀಡುವುದಾಗಿದೆ’ ಎಂದು ಪುನರುಚ್ಚರಿಸಿದ ಪ್ರಧಾನಿ, ‘ ತಮ್ಮ ಲಾಭಕ್ಕಾಗಿ ಕೆಲ ರಾಜಕೀಯ ಪಕ್ಷಗಳು ಕಾಯ್ದೆ ಕುರಿತು ಯುವಜನರ ಒಂದು ವರ್ಗಕ್ಕೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿವೆ.ಭಾರತ ಮತ್ತು ಅದರ ಸಂವಿಧಾನದಲ್ಲಿ ನಂಬಿಕೆ ಹೊಂದಿರುವ ವಿಶ್ವದ ಯಾವುದೇ ದೇಶದ, ಯಾವುದೇ ಧರ್ಮದ ವ್ಯಕ್ತಿಯು ಸರಿಯಾದ ಪ್ರಕ್ರಿಯೆಯ ಮೂಲಕ ಭಾರತ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದು ಎಂಬುದನ್ನು ನಾವೆಲ್ಲರೂ ಅರಿತಿರಬೇಕು’ಎಂದರು. 

ಎನ್‌ಆರ್‌ಸಿ: ಇಂದು ವಿರೋಧ ಪಕ್ಷಗಳ ಸಭೆ

ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆ ಕುರಿತು ಚರ್ಚಿಸಲು ಮತ್ತು ಏಕತೆಯನ್ನು ಸೂಚಿಸುವ ಸಲುವಾಗಿ ಸೋಮವಾರ ಮಧ್ಯಾಹ್ನ ವಿರೋಧ ಪಕ್ಷಗಳು ಸಭೆ ನಡೆಸಲಿದೆ. ಆದರೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ. 

ಬಂದರಿಗೆ ಮರು ನಾಮಕರಣ: ಟೀಕೆ 

ಕೋಲ್ಕತ್ತ: 151ನೇ ವರ್ಷಾಚರಣೆ ಸಂಭ್ರಮದಲ್ಲಿರುವ ಕೋಲ್ಕತ್ತ ಬಂದರು ಟ್ರಸ್ಟ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೋದಿ, ಕೋಲ್ಕತ್ತ ಬಂದರಿಗೆ ಡಾ.ಶ್ಯಾಮಪ್ರಸಾದ ಮುಖರ್ಜಿ ಬಂದರು ಎಂದು ಮರು ನಾಮಕರಣ ಮಾಡಿದರು. ಮುಖರ್ಜಿ ಅವರು ಜನಸಂಘದ ಸಂಸ್ಥಾಪಕರಾಗಿದ್ದರು.

ಬಂದರಿಗೆ ಮೋದಿ ಮರು ನಾಮಕರಣ ಮಾಡಿದ್ದನ್ನು ವಿರೋಧಪಕ್ಷಗಳು ಟೀಕಿಸಿದ್ದು, ‘ಮೋದಿ ಗೇಮ್ ಚೇಂಜರ್ ಅನ್ನುವುದಕ್ಕಿಂತ ‘ನೇಮ್ ಚೇಂಜರ್’ ಆಗಿ ಮಾರ್ಪಟ್ಟಿದ್ದಾರೆ ಎಂದು ಸಿಪಿಐ(ಎಂ) ವ್ಯಂಗ್ಯವಾಡಿದೆ. 

 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು