ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಕೂಲಿಗೆ ಹೋಗ್ತೀವಿ.. ಬೈ... ಬೈ!!!

Last Updated 31 ಮೇ 2018, 19:30 IST
ಅಕ್ಷರ ಗಾತ್ರ

ಸ್ಕೂಲು ಶುರುವಾಗುವ ಮೊದಲೇ ಅಪ್ಪನ ಬೂಟಿನಲ್ಲಿ ಕಾಲು ತೂರಿ, ಅಮ್ಮನ ಕೈಚೀಲ ಹೆಗಲಿಗೇರಿಸಿ, ಸ್ಕೂಲಿಗೆ ಹೋಗುವ ಪುಟ್ಟ ಮಗುವಿಗಿದು ಬದಲಾವಣೆಯ ಪರ್ವ.

ಮಕ್ಕಳ ಅನುಭವ ಹೇಗಿರಬಹುದು?

ನಿದ್ದೆ ಮುಗಿದಾಗ ಕಣ್ತೆರೆದು, ಕೈಕಾಲಾಡಿಸಿ, ಹಾಸಿಗೆಯ ಮೇಲೆಯೇ ಒಂದಷ್ಟು ಹೊರಳಾಡಿ, ಉರುಳಾಡಿ, ಒಂದಕ್ಕೆ ಅವಸರವಾದಾಗ ಎದ್ದು, ಬಾತ್‌ ರೂಮಿಗೆ ಹೋಗುತ್ತಿದ್ದೆವು.

ಡುಮ್ಮ ಹೊಟ್ಟೆಯ ರಾಕ್ಷಸನ ಹೊಟ್ಟೆ ಹಿಸುಕಿದಂತೆ ಪೇಸ್ಟ್‌ ಒತ್ತಿ, ಬ್ರಷ್ಷಿಗೆ ನೋವಾಗದಂತೆ ಪೇಸ್ಟು ತಾಕಿಸಿ, ಕನ್ನಡಿಯ ಮುಂದೆ ನಾನಾಬಗೆಯ ಮುಖ ಮಾಡಿ, ನಲ್ಲಿಯಿಂದ ಸುರಿಯುವ ನೀರಿನಡಿ ಒಂದಷ್ಟು ಆಟವಾಡಿ, ಬ್ರಷ್‌ನ ಬ್ರಸೆಲ್ಸ್‌ಗಳನ್ನೆಲ್ಲ ಹೆಬ್ಬೆರಳಿನಿಂದ ಒಮ್ಮೆ ಕೊಡವಿದರೆ ಮಳೆನೀರಿನ ಹನಿಯಂತೆ ಸಿಡಿಯುವುದು ಆನಂದಿಸುತ್ತಿದ್ದೆವು.


ಶಿಕ್ಷಕಿಯರು ಪುಟಾಣಿಗಳಿಗೆ ಆಟಪಾಠ ಹೇಳಿಕೊಡುತ್ತಿರುವ ದೃಶ್ಯ ಗಿರಿನಗರದ ಶಾಲೆಯೊಂದರಲ್ಲಿ ಕಂಡುಬಂತು

ಹಾಲಿಗೆ ಬೂಸ್ಟು, ಬೋರ್ನ್‌ವಿಟಾ ಸೇರಿಸಿ, ಸ್ಪೂನಿನಂದ ಹುಟ್ಟು ಹಾಕಿದಂತೆ ಕಲೆಸಿ, ಅಮ್ಮ ಕಲಿಸಿದ್ದರೂ ಅದರೊಳಗೊಂದು ಸುಳಿ ಮೂಡುವುದು ನೋಡಲು ಇನ್ನೊಂದಿಷ್ಟು ಕಲಕಿ, ಲೋಟದಿಂದ ಚೆಲ್ಲಿದ ಹಾಲ ಹನಿಯನ್ನು ಬಲಗೈಯಿಂದ ಒರೆಸಿ, ಅಮ್ಮ ನೋಡಿಲ್ಲವೆಂಬುದು ಖಾತ್ರಿ ಪಡೆಸಿಕೊಂಡು, ಅಂಗೈಯನ್ನು ಶರ್ಟಿಗೆ ಎದೆಮೇಲೆ ಒರೆಸಿಕೊಳ್ಳುತ್ತಿದ್ದೆವು.

ಹಾಲು ಕುಡಿದ ಮೇಲೆ ಹುಲಿ ಮೀಸೆ ಬಂತಾ.. ಎಂದು ನೋಡುತ್ತಿದ್ದೆವು. ಈಗ ಆ ಸುಖದ ದಿನಗಳೆಲ್ಲ ಹೋದವು. ಕಣ್ಬಿಡುವ ಮೊದಲೇ ಅಮ್ಮ, ಬಾತ್‌ರೂಮಿಗೆ ಸಾಗಿಸಿರುತ್ತಾರೆ. ಪೇಸ್ಟ್‌ ತಾಕಿದ ಬ್ರಷ್‌ ಕೈಗಿರುತ್ತದೆ. ಸೊರಸೊರನೆ ಹಾಲು ಕುಡಿಯುವಂತಿಲ್ಲ... ಗಂಟಲಿನಿಂದಿಳಿಯುವುದನ್ನೂ ಅನುಭವಿಸುವಂತಿಲ್ಲ. ಗಂಟಲಿನ ಜಾರಬಂಡೆಯಿಂದ ಹಾಲು ಸುಂಯ್‌ ಅಂತ ಹೊಟ್ಟೆಗಿಳಿದೇಬಿಡಬೇಕು. ಆಗಲೇ ಅಮ್ಮನ ಕೈಲಿ ಬಾಚಣಿಕೆ, ಸಾಕ್ಸು, ಶೂಷು ಎಲ್ಲ ಹೊತ್ತು ನಿಂತಿರ್ತಾಳೆ.

ಐದು ನಿಮಿಷಗಳಲ್ಲಿ ಸ್ಕೂಲಿನ ವೇಷ... ಇನ್ನೆಷ್ಟು ವರುಷ..? ಈ ಪ್ರಶ್ನೆ ಕಾಡುವ ಮೊದಲೇ ಮನೆಯಂಗಳ ದಾಟಿರುತ್ತೇವೆ... ಸ್ಕೂಲಿಗೆ ಹೋಗುತ್ತೇವೆ... ಬೈ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT