ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರೀ ಟೀಕೆಗಳಿಂದ ಸಮಸ್ಯೆಗಳಿಗೆ ಪರಿಹಾರ ಅಸಾಧ್ಯ

ವಿಕಾಸ ಪರ್ವ ಸಮಾವೇಶದಲ್ಲಿ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ
Last Updated 6 ಏಪ್ರಿಲ್ 2018, 10:57 IST
ಅಕ್ಷರ ಗಾತ್ರ

ಶಿವಮೊಗ್ಗ/ಶಿಕಾರಿಪುರ:  ಬಿಜೆಪಿ, ಕಾಂಗ್ರೆಸ್ ಪರಸ್ಪರ ಟೀಕೆಗಳಲ್ಲೇ ಮುಳುಗಿವೆ. ಬರೀ ಟೀಕೆ ಮಾಡುವುದರಿಂದ ಸಮಸ್ಯೆಗಳಿಗೆ ಪರಿಹಾರ ಅಸಾಧ್ಯ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಪ್ರತಿಪಾದಿಸಿದರು.ಶಿಕಾರಿಪುರದಲ್ಲಿ ಗುರುವಾರ ನಡೆದ ‘ವಿಕಾಸ ಪರ್ವ’ ಸಮಾವೇಶದಲ್ಲಿ ಅವರು ಮಾತನಾಡಿದರು.

ಯಡಿಯೂರಪ್ಪ ಸುಳ್ಳು ಹೇಳುವು ದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ತಾವು ಅಧಿಕಾರದಲ್ಲಿದ್ದಾಗ ಎರಡು ಬಾರಿ ರೈತರ ಸಾಲ ಮನ್ನಾ ಮಾಡಿರುವುದಾಗಿ ಹೇಳುತ್ತಾರೆ. ವಾಸ್ತವದಲ್ಲಿ ಅವರು ಮುಖ್ಯಮಂತ್ರಿ ಆಗಿದ್ದಾಗ ಒಮ್ಮೆಯೂ ಸಾಲ ಮನ್ನಾ ಮಾಡಿಲ್ಲ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ಆ ನಿರ್ಧಾರ ತೆಗೆದುಕೊಂಡಿದ್ದು ಈ ಕುಮಾರಸ್ವಾಮಿ. ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಸಾಲ ಮನ್ನಾ ಮಾಡಲು ರೈತರು ಕೋರಿದ್ದರು. ಆಗ ‘ನೋಟು ಮುದ್ರಿಸುವ ಯಂತ್ರ ರಾಜ್ಯ ಸರ್ಕಾರದ ಬಳಿ ಇಲ್ಲ’ ಎಂದು ಅವರು ಹಗುರವಾಗಿ ಮಾತನಾಡಿದ್ದರು ಎಂದು ಹೇಳಿದರು.

‘2004–06ರ ಅವಧಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದಾಗ ಇದೇ ಯಡಿಯೂರಪ್ಪ ಕೇವಲ ಸಚಿವ ಸ್ಥಾನಕ್ಕಾಗಿ ಬಿಜೆಪಿ ತೊರೆಯುವ ಇಚ್ಛೆಯನ್ನು ನನ್ನ ಬಳಿ ವ್ಯಕ್ತಪಡಿಸಿದ್ದರು. ಶಿಕಾರಿಪುರದ ಗ್ರಾಮ ದೇವತೆ ಹುಚ್ಚರಾಯ ಸ್ವಾಮಿ ದರ್ಶನ ಪಡೆದು ಬಂದಿದ್ದೇನೆ. ಇದು ಸತ್ಯ. ನಂತರ ಬಿಜೆಪಿ, ಜೆಡಿಎಸ್ ಅಧಿಕಾರಕ್ಕೆ ಬಂತು. ಅವರಿಗೆ ಅಧಿಕಾರ ತಪ್ಪಿಸಿದ್ದು, ಅವರದೇ ಪಕ್ಷದ ಮುಖಂಡರು. ಕೆಜೆಪಿ ಕಟ್ಟಿದಾಗ ಸ್ವತಃ ಯಡಿಯೂರಪ್ಪ ಅವರೇ ಹೇಳಿದ್ದಾರೆ’ ಎಂದರು.

ಉದ್ಯಮಿಗಳ ₹ 2.41 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಕೇಂದ್ರ ಸರ್ಕಾರ, ರೈತರ ಸಾಲ ಮನ್ನಾ ಮಾಡಲು ಸಬೂಬು ಹೇಳುತ್ತಿದೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲ ಬ್ಯಾಂಕ್‌ಗಳಲ್ಲಿರುವ ರೈತರ ₹ 51 ಸಾವಿರ ಕೋಟಿ ಸಾಲ ಸಂಪೂರ್ಣ ಮನ್ನಾ ಮಾಡಲಾಗುವುದು ಎಂದು ಘೋಷಿಸಿದರು.

ರಾಜ್ಯ ಕೊಳ್ಳೆ ಹೊಡೆದರು:  ಜೆಡಿಎಸ್‌ ರಾಜ್ಯ ಯುವ ಘಟಕ ಅಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿ, ‘ಮುಖ್ಯಮಂತ್ರಿಯಾಗಿ ರಾಜ್ಯ ಕೊಳ್ಳೆ ಹೊಡೆದರೆ ಹೊರತು, ತಾಲ್ಲೂಕಿಗೆ ಅನುಕೂಲವಾಗುವ ನೀರಾವರಿ ಯೋಜನೆ ಅನುಷ್ಠಾನ ಮಾಡಲಿಲ್ಲ’ ಎಂದು ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.ಮುಖ್ಯಮಂತ್ರಿ ಗಾದಿಯಲ್ಲಿ ಇದ್ದಾಗ ನೀರಾವರಿ ಯೋಜನೆ ಅನುಷ್ಠಾನ ಮಾಡುವ ಅವಕಾಶವಿದ್ದರೂ ಅನುಷ್ಠಾನ ಮಾಡದೇ ಈಗ ಕೇಂದ್ರ ಸಚಿವರ ಮನೆ ಅಲೆಯುತ್ತಿದ್ದಾರೆ. 40 ವರ್ಷಗಳಿಂದ ಅಧಿಕಾರ ಅನುಭವಿಸಿದರೂ ನೀರಾವರಿ ಅನುಷ್ಠಾನ, ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು.

‘ಶಾಸಕನಾದ ಮೇಲೆ ಸೊರಬ ತಾಲ್ಲೂಕಿನಲ್ಲಿ ಹೆಚ್ಚು ಹಕ್ಕುಪತ್ರ ವಿತರಿಸಿದ್ದೇನೆ. ತಾಲ್ಲೂಕಿನಲ್ಲಿ ದಂಡವಾದ ದಂಡಾವತಿ ಯೋಜನೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ₹ 250 ಕೋಟಿ ನೀಡಿದ್ದರು. ಒಬ್ಬರನ್ನು ಮುಳುಗಿಸಿ ಇನ್ನೊಬ್ಬರಿಗೆ ನೀರು ಕೊಡುವ ಯೋಜನೆಯನ್ನು ನಾವು ವಿರೋಧಿಸಿದ್ದೇವು. ಬಂಗಾರಪ್ಪ ಅವರು ಯೋಜನೆಗೆ ವಿರುದ್ಧವಾಗಿದ್ದರು’ ಎಂದರು.

‘ಬಿಜೆಪಿ ಮುಖಂಡರು ಜಾತಿ ಧರ್ಮದ ಆಧಾರದಲ್ಲಿ ಮತ ಕೇಳುತ್ತಿದ್ದಾರೆ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆ. ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಜಾಗದಲ್ಲಿ ಎಚ್.ಟಿ. ಬಳಿಗಾರ್‌ ಅವರನ್ನು ಕೂರಿಸಿದ್ದೇವೆ. ಬಂಗಾರಪ್ಪ ಋಣವನ್ನು ತಾಲ್ಲೂಕಿನ ಜನತೆ ತೀರಿಸಬೇಕು. ಮಧು ಬಂಗಾರಪ್ಪ ಜತೆ ಬಳಿಗಾರ್ ಅವರನ್ನು ವಿಧಾನಸೌಧಕ್ಕೆ ಕಳುಹಿಸಿಕೊಡಬೇಕು. ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಬೇಕು. ಶಿಕಾರಿಪುರದಲ್ಲಿ ನೀವು ಶಿಕಾರಿ ಮಾಡದಿದ್ದರೆ ನೀವೇ ಶಿಕಾರಿಯಾಗುತ್ತೀರಿ’ ಎಂದು ಎಚ್ಚರಿಸಿದರು.

ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ‍್ಯಾನಾಯ್ಕ, ತೀರ್ಥಹಳ್ಳಿ ಕ್ಷೇತ್ರದ ಅಭ್ಯರ್ಥಿ, ಆರ್‌.ಎಂ. ಮಂಜುನಾಥಗೌಡ,  ಶಿವಮೊಗ್ಗ ಅಭ್ಯರ್ಥಿ ಎಚ್‌.ಎನ್. ನಿರಂಜನ್‌, ಮುಖಂಡರಾದ ಶ್ರೀಕಾಂತ್‌, ನಾಗರಾಜ್‌ ಕಂಕಾರಿ, ಎಚ್‌. ಫಾಲಾಕ್ಷಿ, ಸುನಿಲ್‌, ಯೂಸುಫ್‌, ಜಿ.ಡಿ.ಮಂಜುನಾಥ್‌, ಆಯನೂರು ಶಿವಾನಾಯ್ಕ, ಬಟಾರಿ ಮಲ್ಲೇಶಪ್ಪ, ಬಿಳಿಕಿ ನಾಗರಾಜಗೌಡ್ರು, ಮಕ್ಬೂಲ್‌ ಸಾಬ್‌, ಸುರೇಶ್‌ ಹೂವಿನಮಂಡಿ, ಸಮೀನಾ ಕೌಸರ್‌, ಪ್ರಭಾವತಿ, ಸರೋಜಮ್ಮ, ಯಶೋದಮ್ಮ, ದಯಾನಂದ ರಾಯ್ಕರ್‌, ರಾಘವೇಂದ್ರ, ಅಂಗಡಿ ಸಿದ್ದು, ಶಿವಕುಮಾರ್‌ ಕೋರಿ, ಚಂದ್ರಪ್ಪ ಉಪಸ್ಥಿತರಿದ್ದರು.

ಯಡಿಯೂರಪ್ಪ ರೈತ ವಿರೋಧಿ: ಬಳಿಗಾರ್ ಸಂಸದ ಬಿ.ಎಸ್‌. ಯಡಿಯೂರಪ್ಪ ರೈತ ವಿರೋಧಿ ಹಾಗೂ ಕೂಲಿ ಕಾರ್ಮಿಕರ ವಿರೋಧಿ. ಮುಖ್ಯಮಂತ್ರಿಯಾದರೂ ತಾಲ್ಲೂಕಿಗೆ ಪೂರಕವಾಗಿ ನೀರಾವರಿ ಯೋಜನೆ ಅನುಷ್ಠಾನ ಮಾಡಲಿಲ್ಲ. ಇಲ್ಲಿನ ಜನರು ಬಿಜೆಪಿ ಮುಕ್ತ ಶಿಕಾರಿಪುರ ಮಾಡಲು ಜನತೆ ಮುಂದಾಗಬೇಕು ಎಂದು ಜೆಡಿಎಸ್‌ ಅಭ್ಯರ್ಥಿ ಎಚ್‌.ಟಿ. ಬಳಿಗಾರ್ ಕೋರಿದರು.ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಅಧಿಕ ಭತ್ತ ಬೆಳೆಯುವ ಈ ತಾಲ್ಲೂಕಿನಲ್ಲಿ ರೈಸ್‌ ಪಾರ್ಕ್‌, ಮೆಕ್ಕೆಜೋಳಕ್ಕೆ ಪೂರಕ ಮಾರುಕಟ್ಟೆ ವ್ಯವಸ್ಥೆ ಮಾಡಲಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಲು ಕೌಶಲಾಭಿವೃದ್ಧಿ ಯೋಜನೆ ಜಾರಿಗೆ ತರಲಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT