ಬುಧವಾರ, ಸೆಪ್ಟೆಂಬರ್ 29, 2021
21 °C
ಪ್ರಧಾನಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆ ನಿರ್ಧಾರ

ಕೇಂದ್ರ ನೌಕರರ ತುಟ್ಟಿಭತ್ಯೆ ಶೇ 5ರಷ್ಟು ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೀಪಾವಳಿಗೂ ಮುನ್ನ ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಖುಷಿ ಸುದ್ದಿ ನೀಡಿದೆ. ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರ ತುಟ್ಟಿಭತ್ಯೆಯನ್ನು ಶೇ 5ರಷ್ಟು ಹೆಚ್ಚಿಸಲಾಗಿದೆ. 

ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಈ ನಿರ್ಧಾರ ತೆಗೆದುಕೊಂಡಿದ್ದು, 50 ಲಕ್ಷ ನೌಕರರು ಹಾಗೂ 65 ಲಕ್ಷ ಪಿಂಚಣಿದಾರರಿಗೆ ಇದರಿಂದ ನೆರವಾಗಲಿದೆ. ಶೇ 12ರಿಂದ ಶೇ 17ಕ್ಕೆ ತುಟ್ಟಿಭತ್ಯೆ ಏರಿಸಲಾಗಿದ್ದು, ಜುಲೈ 1ರಿಂದ ಇದು ಅನ್ವಯವಾಗಲಿದೆ. ಇದರಿಂದ ಕೇಂದ್ರದ ಬೊಕ್ಕಸಕ್ಕೆ ₹16 ಸಾವಿರ ಕೋಟಿ ಹೊರೆ ಬೀಳಲಿದೆ. 

ಆಧಾರ್ ಜೋಡಣೆ ಗಡುವು ವಿಸ್ತರಣೆ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡುವ ಅವಧಿಯನ್ನು ಕೇಂದ್ರ ಸರ್ಕಾರ ನ.30ರವರೆಗೆ ವಿಸ್ತರಿಸಿದೆ. ಈ ಯೋಜನೆಯಡಿ ರೈತರಿಗೆ ವಾರ್ಷಿಕ ₹6,000 ನೀಡಲಾಗುತ್ತದೆ. 

ಮೂರು ಕಂತುಗಳಲ್ಲಿ ರೈತರ ಖಾತೆಗೆ ನೇರವಾಗಿ ಹಣ ಸಂದಾಯವಾಗಲಿದೆ. ಆ.1ರ ಬಳಿಕ ಆಧಾರ್‌ ಸಂಖ್ಯೆ ಜೋಡಣೆಯನ್ನು ಕಡ್ಡಾಯಗೊಳಿಸಲಾಗಿದೆ. ಆಧಾರ್ ಜೋಡಣೆಗೆ ಇನ್ನಷ್ಟು ಸಮಯ ನೀಡುವುದರಿಂದ ಹೆಚ್ಚು ರೈತರು ಯೋಜನೆಯ ಸದುಪಯೋಗ ಪಡೆದುಕೊಳ್ಳಲಿದ್ದಾರೆ ಎಂದು ಸರ್ಕಾರ ತಿಳಿಸಿದೆ. ಈಗಾಗಲೇ 7 ಕೋಟಿ ರೈತರು ಫಲಾನುಭವಿಗಳಾಗಿದ್ದಾರೆ.

ಪುನರ್ವಸತಿ ಪ್ಯಾಕೇಜ್ ಘೋಷಣೆ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ (ಪಿಒಕೆ) ಜಮ್ಮು ಕಾಶ್ಮೀರ ಹಾಗೂ ದೇಶದ ಇತರೆ ಕಡೆಗೆ ವಲಸೆ ಬಂದಿದ್ದ 5,300 ಕುಟುಂಬಗಳಿಗೆ ಕೇಂದ್ರ ಸರ್ಕಾರ ಪುನರ್ವಸತಿ ಪ್ಯಾಕೇಜ್ ಪ್ರಕಟಿಸಿದೆ. ಪ್ರತಿ ಕುಟುಂಬಕ್ಕೆ ಒಂದೇ ಕಂತಿನಲ್ಲಿ ₹5.5 ಲಕ್ಷ ನೀಡಲು ಸಂಪುಟ ಬುಧವಾರ ಒಪ್ಪಿಗೆ ನೀಡಿತು. 

1947ರಲ್ಲಿ ನಿರಾಶ್ರಿತರಾಗಿದ್ದ ಕುಟುಂಬಗಳನ್ನು ಈ ಯೋಜನೆಯಡಿ ಸೇರ್ಪಡೆ ಮಾಡಲು ಒಪ್ಪಿಗೆ ನೀಡಲಾಯಿತು. 2016 ನ.30ರಂದು ಘೋಷಿಸಿದ್ದ ಪ್ಯಾಕೇಜ್‌ನಿಂದ ಪಾಕ್ ಆಕ್ರಮಿತ ಜಮ್ಮು ಕಾಶ್ಮೀರ ಹಾಗೂ ಛಂಬ್‌ನ ಕೆಲವು ಕುಟುಂಬಗಳು ಹೊರಗುಳಿದಿದ್ದವು. 

31,619 ಕುಟುಂಬಗಳು ಪಿಒಕೆಯಿಂದ ಜಮ್ಮು ಕಾಶ್ಮೀರಕ್ಕೆ ಬಂದಿದ್ದವು. ಈ ಪೈಕಿ 26,319 ಕುಟುಂಬಗಳು ಜಮ್ಮು ಮತ್ತು
ಕಾಶ್ಮೀರದಲ್ಲಿದ್ದವು. 5,300 ಕುಟುಂಬಗಳು ದೇಶದ ಹಲವೆಡೆ ಚದುರಿ ಹೋಗಿದ್ದವು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು