ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಡಕಟ್ಟು ಸಮುದಾಯದ ಅನಾಥ ಮಕ್ಕಳಿಗೆ ಅಕ್ಷರದ ಬೆಳಕಾದ ಪೊಲೀಸ್‌ ಕಾನ್‌ಸ್ಟೆಬಲ್‌

ಅರ್ಧ ಸಂಬಳ ಶಿಕ್ಷಣಕ್ಕೆ ಮುಡಿಪು
Last Updated 8 ನವೆಂಬರ್ 2018, 10:16 IST
ಅಕ್ಷರ ಗಾತ್ರ

ಕೋಲ್ಕತ್ತ: ಬಡಜನರಿಗೆ ಸಹಾಯ ಮಾಡುತ್ತೇನೆ ಎಂದು ಬಾಲಕನಿದ್ದಾಗತಾತನಿಗೆ ಕೊಟ್ಟ ಮಾತನ್ನು ಪಾಲಿಸುತ್ತಿರುವ ಕಲ್ಕತ್ತ ಪೊಲೀಸ್‌ ಕಾನ್‌ಸ್ಟೆಬಲ್‌ಅರೂಪ್‌ ಮುಖರ್ಜಿ ಅವರ ’ಅಕ್ಷರ ಸೇವೆಯ’ ಕಥೆ ಇದು.

43 ವರ್ಷದ ಅರೂಪ್‌ ಮುಖರ್ಜಿತಮಗೆ ಬರುವ ₹37 ಸಾವಿರ ಸಂಬಳದಲ್ಲಿ 20 ಸಾವಿರ ರೂಪಾಯಿಗಳನ್ನು ತಾವೇ ನಡೆಸುತ್ತಿರುವ ಅನಾಥ ಮಕ್ಕಳ ವಸತಿ ಶಾಲೆಗೆ ವಿನಿಯೋಗ ಮಾಡುತ್ತಿದ್ದಾರೆ. ಟ್ರಾಫಿಕ್‌ ಪೊಲೀಸ್‌ ಆಗಿರುವ ಅರೂಪ್‌ಸಂಚಾರ ದಟ್ಟಣೆಯಲ್ಲಿ ಕೆಲಸ ಮಾಡುವುದರ ಜತೆಗೆ ಕಣ್ಣಿಗೆ ಬಿದ್ದ ಅನಾಥ ಮಕ್ಕಳನ್ನು ರಕ್ಷಿಸಿ ಅವರಿಗೆ ಪುನರ್ವಸತಿ ಕಲ್ಪಿಸಿ ಶಿಕ್ಷಣ ಕೊಡುವ ಕೆಲಸವನ್ನು ಮಾಡುತ್ತಿದ್ದಾರೆ.

2011ರಲ್ಲಿ ಅರೂಪ್‌ ಮುಖರ್ಜಿ ’ಪುಂಚ ನಬಾದಿಶಾ’ ಮಾದರಿ ಶಾಲೆಯನ್ನು ಪ್ರಾರಂಭಿಸಿದರು. ಈ ಶಾಲೆಯಲ್ಲಿಪುರುಲಿಯಾ ಪ್ರಾಂತ್ಯದ ಸಬರ್‌ ಬುಡಕಟ್ಟು ಸಮುದಾಯದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರ ಜತೆಗೆ ಅನಾಥ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. 112ಕ್ಕೂ ಹೆಚ್ಚು ಮಕ್ಕಳು ಅಕ್ಷರ ಕಲಿಯುತ್ತಿದ್ದುಅವರಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆಯನ್ನುಕಲ್ಪಿಸಲಾಗಿದೆ.

ಅರೂಪ್‌ ಮುಖರ್ಜಿ ಕೂಡ ಪುರುಲಿಯಾ ಪ್ರಾಂತ್ಯದವರು. ಬಡ ಕುಟುಂಬದಲ್ಲಿ ಜನಿಸಿದ ಅವರು ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಪೊಲೀಸ್‌ ನೌಕರಿಗೆ ಸೇರಿದ್ದಾರೆ. ’ನಾನು ಚಿಕ್ಕವನಿದ್ದಾಗಿನಿಂದಲೂ ಸಬರ್ ಸಮುದಾಯದವರನ್ನು ಪುರುಲಿಯಾದಲ್ಲಿ ಕೀಳಾಗಿ ಕಾಣಲಾಗುತ್ತಿತ್ತು. ಅವರಿಗೆ ಕಳ್ಳರು ಎಂಬ ಹಣೆಪಟ್ಟಿ ಕಟ್ಟಲಾಗಿತ್ತು. ಈ ಭಾಗದಲ್ಲಿ ಯಾವುದೇ ಅಪರಾಧ ಪ್ರಕರಣಗಳು ಜರುಗಿದರೂ ಅವು ಸಬರ್ ಸಮುದಾಯದವರ ಮೇಲೆಯೇ ಬರುತ್ತಿದ್ದವು, ಅವರಿಗೆ ಯಾರು ಸಹ ಕೆಲಸ ಕೊಡುತ್ತಿರಲಿಲ್ಲ. ಈ ಬಗ್ಗೆ ತಾತನಲ್ಲಿ ವಿಚಾರಿಸಿದಾಗ ಅವರಿಗೆಶಿಕ್ಷಣ ಇಲ್ಲದಿರುವುದೇ ಇದಕ್ಕೆ ಕಾರಣವೆಂದು ನನಗೆ ತಾತಹೇಳಿದ್ದರು.

ಕಷ್ಟುಪಟ್ಟು ಓದಿ 1999ರಲ್ಲಿ ಪೊಲೀಸ್‌ ಕೆಲಸಕ್ಕೆ ಸೇರಿಕೊಂಡೆ. ಮೊದಲ ತಿಂಗಳ ಸಂಬಳದಿಂದಲೂ ಸ್ವಲ್ಪ ಹಣವನ್ನು ಉಳಿತಾಯ ಮಾಡುತ್ತ ಬಂದೆ. ನನ್ನ ಉಳಿತಾಯದ ಹಣ, ಮನೆಯವರು ಮತ್ತು ಸ್ನೇಹಿತರು ತುಂಬು ಮನಸ್ಸಿನಿಂದ ಕೊಟ್ಟ ದೇಣಿಗೆಯನ್ನು ಒಟ್ಟುಗೂಡಿಸಿ ಶಾಲೆ ಸ್ಥಾಪಿಸಿದೆ ಎಂದು ಅರೂಪ್‌ ಮುಖರ್ಜಿ ದಿಟೆಲಿಗ್ರಾಪ್‌ ಇಂಡಿಯಾ ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದಾರೆ.

2.5 ಲಕ್ಷ ರೂಪಾಯಿ ವೆಚ್ಚದಲ್ಲಿ 5 ಕೊಠಡಿಗಳು ಇರುವ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ ಒಂದು ಲಕ್ಷ ರೂಪಾಯಿಗಳನ್ನು ಬ್ಯಾಂಕ್‌ನಿಂದ ಸಾಲ ಪಡೆದಿದ್ದೇನೆ, ನನ್ನ ತಾಯಿ 50 ಸಾವಿರ ರೂಪಾಯಿ ಕೊಟ್ಟಿದ್ದಾರೆ, ತಂದೆಯ ಗೆಳೆಯರೊಬ್ಬರು ಕಟ್ಟಡ ಸಾಮಗ್ರಿಗಳನ್ನು ಉಚಿತವಾಗಿ ನೀಡಿದ್ದರಿಂದ ಶಾಲಾ ಕಟ್ಟಡ ನಿರ್ಮಾಣವಾಗಿದೆ. 15 ಮಕ್ಕಳಿಂದ ಆರಂಭವಾದ ಶಾಲೆಯಲ್ಲಿ ಇಂದು 112ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಇವರೆಲ್ಲ 4 ರಿಂದ 15 ವರ್ಷ ವಯೋಮಾನದವರು.

ಸಬರ್‌ ಸಮುದಾಯದ ಮಕ್ಕಳನ್ನು ಶಾಲೆಗ ಕರೆತರುವುದು ಒಂದು ಸವಾಲಿನ ಕೆಲಸವಾಗಿತ್ತು. ಪ್ರಾರಂಭದಲ್ಲಿ ಅವರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದರು. ಅವರನ್ನು ಒಪ್ಪಿಸಲು ಸಾಕಷ್ಟು ಪ್ರಯತ್ನ ಮಾಡಬೇಕಾಯಿತು. ನೀವು ಮಕ್ಕಳನ್ನು ಶಾಲೆಗೆ ಕಳುಹಿಸದಿದ್ದರೆ ಅವರು ಕೂಡ ನಿಮ್ಮಂತೆ ಆಗುತ್ತಾರೆಂದು ಅವರಿಗೆ ತಿಳಿ ಹೇಳಬೇಕಾಯಿತು ಎಂದು ಅರೂಪ್‌ ಹೇಳುತ್ತಾರೆ.

ಮೂರು ವರ್ಷಗಳ ಹಿಂದೆ ನಡೆದ ಒಂದು ಘಟನೆ ನನ್ನ ಮನವನ್ನು ತೀವ್ರವಾಗಿ ಕಲುಕಿತ್ತು. ಪುರುಲಿಯಾ ಪ್ರಾಂತ್ಯದ ಒಂದು ಹಳ್ಳಿಗೆ ಭೇಟಿನೀಡಿದ್ದೆ. ಆ ಸಮಯದಲ್ಲಿ ಒಂದು ಗುಡಿಸಲಿನಿಂದ ಸೀಮೆ ಎಣ್ಣೆ ವಾಸನೆ ಬರುತ್ತಿತ್ತು. ಅಲ್ಲಿಗೆ ಹೋಗಿ ನೋಡಿದಾಗ ತಾಯಿಯೊಬ್ಬರು ಮೂವರ ಮಕ್ಕಳ ಮೇಲೆ ಸೀಮೆ ಎಣ್ಣೆ ಎರಚಿ ಆತ್ಮಹತ್ಯೆಗೆ ಯತ್ನಸುತ್ತಿದ್ದರು. ಕೂಡಲೇ ಅವರನ್ನು ಹೊರಗೆ ಎಳೆದುಹಾಕಿ ರಕ್ಷಿಸಿದೆ. ಆತ್ಮಹತ್ಯೆಗೆ ಕಾರಣ ಕೇಳಿದಾಗ ಮಕ್ಕಳು ಆಹಾರ ಕೇಳುತ್ತಿವೆ, ಮನೆಯಲ್ಲಿ ಏನು ಇಲ್ಲ, ನಾನು ಏನು ಮಾಡಲಿ ಎಂದು ಆ ತಾಯಿ ನೊಂದು ನುಡಿದಿದ್ದರು. ಕೂಡಲೇ ಆ ಮಕ್ಕಳನ್ನು ಕರೆತಂದು ನಮ್ಮ ಶಾಲೆಗೆ ದಾಖಲಿಸಿದೆ. ಇಂದು ಅವರು ಎರಡು ಮತ್ತು ಮೂರನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮೂರು ವರ್ಷಗಳು ಕಳೆದರೂ ಆ ಮಕ್ಕಳನ್ನು ಭೇಟಿಯಾಗಲು ಆ ತಾಯಿ ಬಂದಿಲ್ಲ ಎಂದು ಅರೂಪ್‌ ಹೇಳುತ್ತಾರೆ.

ಇತ್ತೀಚೆಗೆ ದಿ ಟೆಲಿಗ್ರಾಫ್‌ ಸಂಸ್ಥೆಯು ಅರೂಪ್‌ ಮುಖರ್ಜಿ ಅವರ ಸೇವೆಯನ್ನು ಪರಿಗಣಿಸಿ ‘ಟೆಲಿಗ್ರಾಫ್‌ ಸ್ಕೂಲ್‌ ಅವಾರ್ಡ್‌’ ನೀಡಿ ಗೌರವಿಸಿದೆ.

ಪುರುಲಿಯಾ ಜಿಲ್ಲೆಯಾದ್ಯಂತ ಐದು ಪ್ರದೇಶಗಳಲ್ಲಿ 20 ಸಾವಿರಕ್ಕೂ ಹೆಚ್ಚು ಸಬರ್‌ ಬುಡಕಟ್ಟು ಸಮುದಾಯದವರು ವಾಸವಾಗಿದ್ದಾರೆ. ಸಮುದಾಯದವರ ಬಹುತೇಕ ಅನಾಥ ಮಕ್ಕಳ ಅರೂಪ್‌ ಮುಖರ್ಜಿ ಶಾಲೆಯಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಶಾಲೆ ನಡೆಸಲು ಪ್ರತಿ ತಿಂಗಳು ₹50 ಸಾವಿರ ರೂಪಾಯಿ ವೆಚ್ಚವಾಗುತ್ತಿದೆ. ಇದರಲ್ಲಿನ ಅರ್ಧ ಮೊತ್ತವನ್ನು ನನ್ನ ಸಂಬಳದಿಂದ ನೀಡುತ್ತಿದ್ದೇನೆ, ಉಳಿದ ಹಣವನ್ನು ದಾನಿಗಳು ಕೊಡುತ್ತಿದ್ದಾರೆ. ಬಲವಂತವಾಗಿ ಯಾರಿಂದಲೂ ದೇಣಿಗೆಯನ್ನು ಪಡೆಯುವುದಿಲ್ಲ, ಉದಾರ ಮನಸ್ಸಿನಿಂದ ನೀಡಿದ ದೇಣಿಗೆಯನ್ನು ಮಾತ್ರ ಸ್ವೀಕರಿಸಲಾಗುತ್ತಿದೆ.

ನಾನು ಸಂಬಳದ ಅರ್ಧ ಭಾಗವನ್ನು ಶಾಲೆಗೆ ಖರ್ಚು ಮಾಡುತ್ತಿರುವುದಕ್ಕೆ ನನ್ನ ಕುಟುಂಬದವರು ಹೆಮ್ಮೆ ಪಡುತ್ತಾರೆ. ಅವರು ಕೂಡ ಶಾಲೆ ನಡೆಸಲು ನೆರವಾಗುತ್ತಿದ್ದಾರೆ ಎಂದು ಅರೂಪ್‌ ಮುಖರ್ಜಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT