ಭಾನುವಾರ, ಡಿಸೆಂಬರ್ 15, 2019
26 °C
ಜ.9ಕ್ಕೆ ಮುಂದಿನ ವಿಚಾರಣೆ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ರಥ ಯಾತ್ರೆ; ಅನುಮತಿ ನಿರಾಕರಿಸಿದ ಹೈಕೋರ್ಟ್‌

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಪಶ್ಚಿಮ ಬಂಗಾಳದ ಕೂಚ್‌ ಬಿಹಾರ್‌ನಿಂದ ಆರಂಭವಾಗಬೇಕಿದ್ದ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ’ರಥ ಯಾತ್ರೆ’ಗೆ ಕಲ್ಕತ್ತಾ ಹೈಕೋರ್ಟ್‌ ಗುರುವಾರ ಅನುಮತಿ ನಿರಾಕರಿಸಿದೆ. 

ರಥ ಯಾತ್ರೆ ನಡೆಸಲಿರುವ 24 ಜಿಲ್ಲೆಗಳ ವರದಿ ಪರಿಶೀಲಸಿರುವ ಹೈಕೋರ್ಟ್‌ ಜನವರಿ 9ಕ್ಕೆ ಮುಂದಿನ ವಿಚಾರಣೆ ನಿಗದಿ ಪಡಿಸಿದ್ದು, ಆವರೆಗೂ ರ‍್ಯಾಲಿ ನಡೆಸದಂತೆ ಕೋರ್ಟ್ ಆದೇಶಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ರಥ ಯಾತ್ರೆಗೆ ಶುಕ್ರವಾರ ಚಾಲನೆ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು. 

ಬಿಜೆಪಿ ಉದ್ದೇಶಿಸಿರುವ ರಥ ಯಾತ್ರೆಗೆ ಸರ್ಕಾರದ ಅನುಮೋದನೆ ಇಲ್ಲ ಎಂದು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಹೈಕೋರ್ಟ್‌ ನ್ಯಾಯಪೀಠಕ್ಕೆ ತಿಳಿಸಿತ್ತು. ಸರ್ಕಾರದ ನಿರ್ಧಾರದ ಬಗ್ಗೆ ರಾಜ್ಯದ ಅಡ್ವೊಕೇಟ್‌ ಜನರಲ್‌,  ನ್ಯಾಯಮೂರ್ತಿ ತಪಬ್ರತಾ ಚಕ್ರವರ್ತಿ ಅವರಿಗೆ ತಿಳಿಸಿದ್ದಾರೆ. 

ವಿಚಾರಣೆಗೂ ಮುನ್ನ ಮಾತನಾಡಿದ್ದ ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್‌ ಘೋಷ್‌, ’ಆಡಳಿತವು ರಥ ಯಾತ್ರೆಗೆ ಅನುಮತಿ ನಿರಾಕರಿಸಿದರೆ, ನಮ್ಮ ಕಾರ್ಯಕ್ರಮವನ್ನು ನಾವು ಮುಂದುವರಿಸುತ್ತೇವೆ. ನಿಗದಿಯಂತೆ ಕಾರ್ಯಕ್ರಮ ಸಾಗಲಿದೆ, ಯಾರೂ ಅದನ್ನು ತಡೆಯಲು ಸಾಧ್ಯವಿಲ್ಲ’ ಎಂದು ಪ್ರತಿಕ್ರಿಯಿಸಿದ್ದರು. 

ರಾಜ್ಯದ 294 ಕ್ಷೇತ್ರಗಳಲ್ಲಿ ಸುಮಾರು 40ಕ್ಕೂ ಹೆಚ್ಚು ದಿನಗಳ ಯಾತ್ರೆ ಅಡಚಣೆಯಿಲ್ಲದೆ ಸಾಗಲು ಸರ್ಕಾರಕ್ಕೆ ಸೂಚನೆ ನೀಡುವಂತೆ ನವೆಂಬರ್‌ 30ರಂದು ಬಿಜೆಪಿ ರಾಜ್ಯ ಘಟಕ ಕೋರ್ಟ್‌ಗೆ ಮನವಿ ಸಲ್ಲಿಸಿತ್ತು. 

ಮೂರು ರಥಗಳು, ಎಸಿ ಬಸ್‌ಗಳು ಬಿಜೆಪಿ ಪ್ರಚಾರ ಕಾರ್ಯದಲ್ಲಿ ಸಾಗಲು ಸಜ್ಜಾಗಿದ್ದವು. ಗಂಗಾ ಸಾಗರ ಪ್ರದೇಶದಿಂದ ಡಿಸೆಂಬರ್‌ 9ಕ್ಕೆ ಹಾಗೂ ತಾರಾಪೀಠದಿಂದ ಡಿಸೆಂಬರ್‌ 14ಕ್ಕೆ ರಥ ಯಾತ್ರೆಗೆ ಚಾಲನೆ ನೀಡುವ ಕಾರ್ಯಕ್ರಮ ನಿಗದಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ದುರ್ಗಾಪುರ, ಶ್ರೀರಾಮಪುರ, ಕೃಷ್ಣಾನಗರ ಸೇರಿ ಹಲವು ಕಡೆ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವ ಕಾರ್ಯಕ್ರಮವನ್ನೂ ರಥ ಯಾತ್ರೆ ಒಳಗೊಂಡಿತ್ತು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು