ರಾಷ್ಟ್ರಪತಿಗೆ ನಿವೃತ್ತ ಸೈನಿಕರ ಪತ್ರ: ಇಮೇಲ್ ಸಾಕ್ಷ್ಯವಿದೆ ಎಂದ ಮುಂದಾಳು

ಶುಕ್ರವಾರ, ಏಪ್ರಿಲ್ 26, 2019
24 °C

ರಾಷ್ಟ್ರಪತಿಗೆ ನಿವೃತ್ತ ಸೈನಿಕರ ಪತ್ರ: ಇಮೇಲ್ ಸಾಕ್ಷ್ಯವಿದೆ ಎಂದ ಮುಂದಾಳು

Published:
Updated:

ನವದೆಹಲಿ: ‘ಸಶಸ್ತ್ರಪಡೆಗಳನ್ನು ರಾಜಕೀಯಕ್ಕೆ ಬಳಸದಂತೆ ಎಲ್ಲ ಪಕ್ಷಗಳಿಗೂ ಸೂಚಿಸಬೇಕು’ ಎಂದು ಕೋರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರಬರೆದಿದ್ದ ವಿಚಾರ ನಮಗೆ ಗೊತ್ತಿಲ್ಲ ಎಂದು ಮೂವರು ನಿವೃತ್ತ ಸೇನಾ ಮುಖ್ಯಸ್ಥರು ಹಿಂದೆ ಸರಿದ ವಿಚಾರ ಹೊಸ ತಿರುವು ಪಡೆದುಕೊಂಡಿದೆ.

ಈ ಕುರಿತು ಸ್ಪಷ್ಟನೆ ನೀಡಿರುವ ‘ಸೇನೆಗೆ ರಾಜಕೀಯ ಕಳಂಕ ಬೇಡ’ ಅಭಿಯಾನದ ಮುಂದಾಳತ್ವ ವಹಿಸಿರುವ ನಿವೃತ್ತ ಸೇನಾಧಿಕಾರಿ, ‘ಅವರು ತಮ್ಮ ಸಹಮತ ಸೂಚಿಸಿರುವುದು ಇಮೇಲ್ ಸಂವಾದಗಳಲ್ಲಿ ದಾಖಲಾಗಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಜಕೀಯಕ್ಕೆ ಸಶಸ್ತ್ರಪಡೆಗಳ ಬಳಕೆ ಸಲ್ಲದು: ರಾಷ್ಟ್ರಪತಿಗೆ ನಿವೃತ್ತ ಸೈನಿಕರ ಪತ್ರ

‘ರಾಷ್ಟ್ರಪತಿಗೆ ಬರೆದ ಪತ್ರದಿಂದ ಅವರು ಏಕೆ ಅಂತರ ಕಾಯ್ದುಕೊಳ್ಳುತ್ತಿದ್ದಾರೋ ನನಗೆ ಗೊತ್ತಿಲ್ಲ. ಅವರಿಗೆ ತಮ್ಮದೇ ಆದ ಕಾರಣಗಳು ಇರಬಹುದು. ನಾನು ಅವನ್ನು ಗೌರವಿಸುತ್ತೇನೆ. ಆದರೆ ಪತ್ರದಲ್ಲಿರುವ ವಿಚಾರಗಳು ಮತ್ತು ಅದನ್ನು ರಾಷ್ಟ್ರಪತಿಗೆ ನಾವು ಸಲ್ಲಿಸುತ್ತಿರುವ ಕುರಿತು ಅವರೆಲ್ಲರೂ ಸಹಮತ ವ್ಯಕ್ತಪಡಿಸಿದ್ದರು’ ಎನ್ನುವ ಮೇಜರ್‌ ಜನರಲ್ ಒಂಬತ್‌ಕೆರೆ ಅವರ ಹೇಳಿಕೆಯನ್ನು ‘ಎನ್‌ಡಿಟಿವಿ’ ಜಾಲತಾಣ ವರದಿ ಮಾಡಿದೆ.

ಪತ್ರದಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿರುವವರಲ್ಲಿ ವಾಯುಸೇನೆಯ ನಿವೃತ್ತ ಮುಖ್ಯಸ್ಥ ಏರ್‌ ಚೀಫ್ ಮಾರ್ಷಲ್ ನಿರ್ಮಲ್ ಸೂರಿ ಮತ್ತು ಭೂಸೇನೆಯ ನಿವೃತ್ತ ಮುಖ್ಯಸ್ಥ ಜನರಲ್ ಎಸ್‌.ಎಫ್.ರೋಡ್ರಿಗಸ್ ಸೇರಿದ್ದಾರೆ.

ಇದನ್ನೂ ಓದಿ: ಸೇನೆ ದುರ್ಬಳಕೆಗೆ ನಿವೃತ್ತರ ಆಕ್ಷೇಪ
  
‘ರಾಷ್ಟ್ರಪತಿಗೆ ಕಳುಹಿಸಿರುವ ಪತ್ರದ ಒಕ್ಕಣೆಯನ್ನು ನನಗೆ ಮೊದಲೇ ತೋರಿಸಿರಲಿಲ್ಲ’ ಎಂದು ನಿರ್ಮಲ್ ಸೂರಿ ಅವರು ಗುರುವಾರ ಆಕ್ಷೇಪಿಸಿದ್ದರು. ‘ಇತರೆಲ್ಲ ನಿವೃತ್ತರಿಗೆ ಕಳಿಸಿದ್ದ ಇಮೇಲ್‌ ಸೂರಿ ಅವರಿಗೂ ಹೋಗಿತ್ತು. ಅವರು ಅದರಲ್ಲಿಯೇ ನೋಡಿರುತ್ತಾರೆ ಎಂದುಕೊಂಡಿದ್ದೆ. ಇಂಥ ಹೇಳಿಕೆಗಳಿಂದ ಪತ್ರದ ಮೌಲ್ಯ ಕಡಿಮೆಯಾಗುತ್ತೆ ಎಂದು ನನಗೆ ಅನ್ನಿಸುವುದಿಲ್ಲ’ ಎಂದು ಒಂಬತ್‌ಕೆರೆ ಅಭಿಪ್ರಾಯಪಟ್ಟಿದ್ದಾರೆ.

‘ನಾವು ಕಳುಹಿಸಿರುವ ಇಮೇಲ್ ತಲುಪಿಲ್ಲ ಎಂದು ರಾಷ್ಟ್ರಪತಿ ಏಕೆ ಹೇಳುತ್ತಿದೆಯೋ ಗೊತ್ತಿಲ್ಲ’ ಎಂದೂ ಒಂಬತ್‌ಕೆರೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ‘presidentofindia@rb.nic.in ಸೇರಿದಂತೆ ರಾಷ್ಟ್ರಪತಿ ಭವನದ ಮೂರು ಇಮೇಲ್ ವಿಳಾಸಗಳಿಗೆ ಮೇಜರ್ ಪ್ರಿಯದರ್ಶಿ ಚೌಧುರಿ ಇಮೇಲ್ ಕಳಿಸಿದ್ದರು. ಅದು ಹೇಗೆ ಅವರ ಕೈಸೇರಿಲ್ಲವೋ ನನಗೆ ಗೊತ್ತಾಗುತ್ತಿಲ್ಲ’ ಎಂದು ಒಂಬತ್‌ಕೆರೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ‘ಸೇನಾ ಸಾಧನೆಗಳ ದುರ್ಬಳಕೆಗೆ ಕಡಿವಾಣ ಹಾಕಿ’

ತಮ್ಮ ನಿಲುವು ಸ್ಪಷ್ಟಪಡಿಸಿದ್ದ ವಾಯುಪಡೆಯ ಮಾಜಿ ಮುಖ್ಯಸ್ಥ ನಿರ್ಮಲ್ ಸೂರಿ, ‘ಸಶಸ್ತ್ರಪಡೆಗಳು ರಾಜಕೀಯೇತರವಾಗಿರಬೇಕು ಮತ್ತು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರದ ಮೂಲಕ ಸೇವೆ ಸಲ್ಲಿಸಬೇಕು’ ಎನ್ನುವ ನಿರ್ದಿಷ್ಟ ವಿಚಾರಕ್ಕೆ ಮಾತ್ರ ನನ್ನ ಬೆಂಬಲವಿತ್ತು. ಅದಷ್ಟಕ್ಕೆ ಮಾತ್ರ ನನ್ನ ಸಹಮತ ಸೂಚಿಸಿದ್ದೆ’ ಎಂದು ಹೇಳಿದ್ದರು.

‘ಮೋದಿಜಿ ಕಿ ಸೇನಾ’ ಎಂದರೇನು?

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಾರತೀಯ ಸೇನೆಯನ್ನು ‘ಮೋದಿಜಿ ಕಿ ಸೇನಾ’ ಎಂದು ಕರೆದಿದ್ದಕ್ಕೆ ಪ್ರತಿಕ್ರಿಯಿಸಲು ನಿರಾಸಿದ್ದ ನಿರ್ಮಲ್ ಸೂರಿ, ಈ ವಿಚಾರದ ಬಗ್ಗೆ ಪೂರ್ಣ ಮಾಹಿತಿ ನಮ್ಮ ಬಳಿ ಇಲ್ಲ. ಹೀಗಾಗಿ ಯಾವುದೇ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.

‘ಸೇನಾ ಎಂದರೆ ಏನು? ನಿಮ್ಮ ಬೆಂಬಲಿಸುವ ಜನರು ಎಂದು ಅದನ್ನು ಅರ್ಥಮಾಡಬಹುದು. ಈ ಹಿನ್ನೆಲೆಯಲ್ಲಿ ಯೋಚಿಸಿದಾಗ, ಬಿಜೆಪಿ ಬೆಂಬಲಿಗರು ತಮ್ಮ ನಾಯಕನನ್ನು ಬೆಂಬಲಿಸುವುದು ಸಜಹವಲ್ಲವೇ? ಹೀಗಾಗಿ ಅವರನ್ನು ಮೋದಿಜಿ ಕಿ ಸೇನಾ ಎಂದರೆ ತಪ್ಪಾಗಲಾರದು. 2014ರ ಚುನಾವಣೆಯಲ್ಲಿ ಮೋದಿ ಪರವಾಗಿ ಮತ ಹಾಕಿದವರೆಲ್ಲರೂ ಮೋದಿಜಿ ಕಿ ಸೇನಾ ಆಗುತ್ತಾರೆ. ಪ್ರಧಾನಿಯಾಗಿ ಅವರು ಈ ದೇಶದ ಅತಿಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಹೀಗಾಗಿ ನಾವೆಲ್ಲರೂ ಅವರ ಸೇನಾ ಆಗುತ್ತೇವೆ. ಸಶಸ್ತ್ರಪಡೆಗಳೂ ಇದಕ್ಕೆ ಹೊರತಲ್ಲ’ ಯೋಗಿ ಆದಿತ್ಯನಾಥ್ ಅವರ ಹೇಳಿಕೆಯನ್ನು ವಿಶ್ಲೇಷಿಸಿದ್ದರು.

ಇದನ್ನೂ ಓದಿ: ‘ರಾಷ್ಟ್ರಪತಿಗೆ ಪತ್ರ ಪ್ರಚಾರದ ತಂತ್ರ’ -ಅರುಣ್‌ ಜೇಟ್ಲಿ

ಪತ್ರದಲ್ಲೇನಿತ್ತು?

‘ಭಾರತೀಯ ಸಶಸ್ತ್ರಪಡೆಗಳ ಮಹಾದಂಡನಾಯಕರಾದ ತಮ್ಮ ಅವಗಾಹನೆಗೆ ಕೆಲವು ಮುಖ್ಯ ವಿಷಯಗಳನ್ನು ತರಬೇಕಾಗಿದೆ. ಸೇವಾ ನಿರತ ಮತ್ತು ನಿವೃತ್ತ ಯೋಧರಲ್ಲಿ ಈಚೆಗಿನ ಕೆಲ ಬೆಳವಣಿಗೆಗಳು ಅಸಮಾಧಾನ ತಂದಿವೆ. ಗಡಿದಾಟಿ ಶತ್ರುವಿನ ನೆಲೆ ಧ್ವಂಸ ಮಾಡುವ ಸೇನಾಪಡೆಗಳ ಕಾರ್ಯಾಚರಣೆಯನ್ನು ರಾಜಕೀಯ ಪಕ್ಷಗಳ ನಾಯಕರು ಸ್ವಂತ ಸಾಧನೆ ಎಂದು ಬಿಂಬಿಸಿಕೊಳ್ಳುವುದನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ದೇಶದ ಎಲ್ಲ ಸಶಸ್ತ್ರಪಡೆಗಳ ಮಹಾದಂಡನಾಯಕರೂ ಆಗಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ 156 ನಿವೃತ್ತ ಯೋಧರು ಪತ್ರ ಬರೆದು ತಿಳಿಸಿದ್ದರು.

ಬರಹ ಇಷ್ಟವಾಯಿತೆ?

 • 18

  Happy
 • 2

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !