ಶನಿವಾರ, ಡಿಸೆಂಬರ್ 7, 2019
18 °C
ಚುನಾವಣೆಯತ್ತ ಮತದಾರನ ಗಮನ ಸೆಳೆಯುವುದೇ ಕಷ್ಟ

ಪ್ರಚಾರಕ್ಕೆ ಅಡ್ಡಿಯಾದ ‘ಐಪಿಎಲ್‌ ಜ್ವರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಇತ್ತೀಚೆಗೆ ಆರಂಭವಾಗಿರುವ ಐಪಿಎಲ್‌ ಕ್ರಿಕೆಟ್‌ ಟೂರ್ನಿಯು ಪಶ್ಚಿಮ ಬಂಗಾಳದ ರಾಜಕಾರಣಿಗಳ ನಿದ್ದೆ ಕೆಡಿಸುತ್ತಿದೆ. ಸಂಜೆಯಾಗುತ್ತಲೇ ಜನರೆಲ್ಲಾ ಕ್ರಿಕೆಟ್‌ ವೀಕ್ಷಣೆಗಾಗಿ ಟಿ.ವಿ.ಗಳ ಮುಂದೆ ಕುಳಿತುಕೊಳ್ಳುವುದರಿಂದಾಗಿ ಜನರ ಗಮನವನ್ನು ಚುನಾವಣೆಗಳತ್ತ ಸೆಳೆಯಲು ಅವರು ಇನ್ನಿಲ್ಲದ ಕಷ್ಟ ಅನುಭವಿಸಬೇಕಾಗಿ ಬಂದಿದೆ.

ತಮ್ಮ ಈ ಸಂಕಷ್ಟವನ್ನು ‘ಪ್ರಜಾವಾಣಿ’ಯ ಜೊತೆ ಹಂಚಿಕೊಂಡ ಬೋಲ್‌ಪುರ್‌ ಲೋಕಸಭಾ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ರಾಮಚಂದ್ರ ದೊಮೆ, ‘ಮತದಾರರು ಮಾತ್ರವಲ್ಲ ಪಕ್ಷದ ಕಾರ್ಯಕರ್ತರನ್ನೂ ಐಪಿಎಲ್‌ ಜ್ವರ ಬಾಧಿಸುತ್ತಿದೆ. ಇದರಿಂದಾಗಿ ನಾವು ಮನೆಮನೆ ಪ್ರಚಾರದ ಸಮಯ ಮತ್ತು ಯೋಜನೆಗಳನ್ನು ಪುನಃ ಹೊಂದಾಣಿಕೆ ಮಾಡಬೇಕಾಗಿ ಬಂದಿದೆ’ ಎಂದಿದ್ದಾರೆ.

‘ಆದರೆ ಐಪಿಎಲ್‌ನಿಂದ ಒಂದು ಲಾಭವೂ ಇದೆ. ನಾವು ಸಾಮಾನ್ಯವಾಗಿ ಸಂಜೆ ವೇಳೆಯಲ್ಲಿ ಮನೆಮನೆ ಪ್ರಚಾರ ನಡೆಸುತ್ತೇವೆ. ಅದೇ ಸಮಯದಲ್ಲಿ ಐಪಿಎಲ್‌ ಪಂದ್ಯಗಳೂ ನಡೆಯುತ್ತಿರುತ್ತವೆ. ಆದ್ದರಿಂದ ಮತದಾರರಲ್ಲಿ ಹೆಚ್ಚಿನವರು ಸಂಜೆಯ ವೇಳೆಗೆ ಮನೆಯಲ್ಲಿ ಲಭ್ಯವಾಗುತ್ತಾರೆ. ಆದರೆ ಪಂದ್ಯ ನಡೆಯುತ್ತಿದ್ದಾಗ ಮನೆಗೆ ಹೋಗಿ ಅವರ ಜೊತೆ ಮಾತುಕತೆಗೆ ಇಳಿದರೆ ಕೆಲವರಿಗೆ ಇಷ್ಟವಾಗುವುದಿಲ್ಲ’ ಎಂದು ದೊಮೆ ಹೇಳುತ್ತಾರೆ.

ಬಿಜೆಪಿ ಅಭ್ಯರ್ಥಿ ಜಾನ್‌ ಬಾರ್ಲ ಅವರು ಕ್ರಿಕೆಟ್‌ ಹಾಗೂ ರಾಜಕೀಯದ ನಡುವೆ ಸಮತೋಲನ ಕಾಯ್ದುಕೊಳ್ಳಲು ಇನ್ನಿಲ್ಲದ ಶ್ರಮ ವಹಿಸುತ್ತಿದ್ದಾರೆ. ಇವರ ಪ್ರತಿಸ್ಪರ್ಧಿ
ಟಿಎಂಸಿಯ ದಶರಥ್‌ ತಿರ್ಕೆ ಅವರು ಕ್ರಿಕೆಟ್‌ ಕುರಿತ ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ಬಹಳ ಎಚ್ಚರಿಕೆಯಿಂದ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ‘ಕ್ರಿಕೆಟ್‌ ಪ್ರಿಯರಿಗೆ ತೊಂದರೆಯಾಗದಂತೆ ನಮ್ಮ ಪ್ರಚಾರವನ್ನು ನಡೆಸಲು ದಾರಿಯೊಂದನ್ನು ನಾವು ಕಂಡುಕೊಂಡಿದ್ದೇವೆ’ ಎಂದು ತಿರ್ಕೆ ಹೇಳುತ್ತಾರೆ.

ಸ್ವತಃ ಕ್ರಿಕೆಟ್‌ ಪ್ರೇಮಿಯಾಗಿರುವ ಟಿಎಂಸಿ ಅಭ್ಯರ್ಥಿ, ಸಚಿವ ಹಾಗೂ ದಾರ್ಜಲಿಂಗ್‌ನಲ್ಲಿ ಪಕ್ಷದ ಉಸ್ತುವಾರಿ ವಹಿಸಿರುವ ಗೌತಮ್‌ ದೇವ್‌, ರಾಜಕೀಯದಿಂದಾಗಿ ತಾವೇ ಕೆಲವು ಐಪಿಎಲ್‌ ಪಂದ್ಯಗಳ ವೀಕ್ಷಣೆಯಿಂದ ವಂಚಿತವಾಗಬೇಕಾಗಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಟಿಎಂಸಿಯ ಕೆಲವು ನಾಯಕರು ಮಾತ್ರ ಐಪಿಎಲ್‌ ಪಂದ್ಯಗಳನ್ನೇ ತಮ್ಮ ಪ್ರಚಾರದ ಸಾಧನವಾಗಿ ಬಳಸಿಕೊಳ್ಳುತ್ತಿದ್ದಾರೆ. ‘ಐಪಿಎಲ್‌ ಪಂದ್ಯಗಳ ವೀಕ್ಷಣೆಗಾಗಿ ಕ್ಲಬ್‌ಗಳಿಗೆ ಬರುವ ಯುವಕರನ್ನು ನಾವು ಭೇಟಿ ಮಾಡಿ ಅವರೊಡನೆ ರಾಜಕೀಯ ಚರ್ಚೆ ನಡೆಸುತ್ತೇವೆ. ಪಂದ್ಯದ ಜೊತೆಜೊತೆಗೆ ನಮ್ಮ ಪ್ರಚಾರವೂ ನಡೆಯುತ್ತದೆ’ ಎಂದು ಟಿಎಂಸಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

* ಪಂದ್ಯ ಆರಂಭವಾಗುವ ವೇಳೆಗೆ ರಸ್ತೆಗಳಲ್ಲಿ ಜನರ ಓಡಾಟ ಕಡಿಮೆಯಾಗುತ್ತದೆ. ಅವರ ಗಮನವನ್ನು ರಾಜಕೀಯದತ್ತ ಸೆಳೆಯುವುದು ದೊಡ್ಡ ಸವಾಲಾಗಿದೆ

- ಗೌತಮ್‌ ದೇವ್‌, ಟಿಎಂಸಿ ಮುಖಂಡ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು