ಯುದ್ಧಭೂಮಿಯಲ್ಲಿ ಮಹಿಳಾ ನಿಯೋಜನೆ ಕಷ್ಟ: ರಾವತ್ ಹೇಳಿಕೆಗೆ ಟ್ವಿಟರ್‌ನಲ್ಲಿ ಆಕ್ರೋಶ

7
ಸೇನಾ ಮುಖ್ಯಸ್ಥರ ಹೇಳಿಕೆಯಿಂದ ಸೇನೆಗೆ, ದೇಶಕ್ಕೆ ಅವಮಾನ ಎಂದು ಟೀಕಿಸಿದ ನೆಟಿಜನ್‌ಗಳು

ಯುದ್ಧಭೂಮಿಯಲ್ಲಿ ಮಹಿಳಾ ನಿಯೋಜನೆ ಕಷ್ಟ: ರಾವತ್ ಹೇಳಿಕೆಗೆ ಟ್ವಿಟರ್‌ನಲ್ಲಿ ಆಕ್ರೋಶ

Published:
Updated:

ನವದೆಹಲಿ: ಯುದ್ಧಭೂಮಿಯಲ್ಲಿ ಕರ್ತವ್ಯ ನಿರ್ವಹಿಸಲು ಮಹಿಳೆಯರ ನೇಮಕಕ್ಕಿರುವ ಅಡ್ಡಿಗಳ ಕುರಿತು ಸೇನಾಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ನೀಡಿರುವ ಹೇಳಿಕೆ ಈಗ ಟ್ವಿಟರ್‌ನಲ್ಲಿ ಆಕ್ರೋಶಕ್ಕೆ ಗುರಿಯಾಗಿದೆ.

ಮಹಿಳಾ ನೇಮಕಕ್ಕೆ ಸಂಬಂಧಿಸಿ ರಾವತ್ ನೀಡಿರುವ ಹೇಳಿಕೆ ಸೇನೆಯನ್ನು ಮುಜುಗರಕ್ಕೀಡುಮಾಡಿದೆ ಎಂದು ಟ್ವಿಟರ್‌ನಲ್ಲಿ ಅನೇಕರು ಸಂದೇಶ ಪ್ರಕಟಿಸಿದ್ದಾರೆ. ರಾವತ್‌ ದೇಶಕ್ಕೇ ಅವಮಾನ ಮಾಡಿದ್ದಾರೆ ಎಂದು ಇನ್ನು ಕೆಲವರು ಟೀಕಿಸಿದ್ದಾರೆ.

ರಾವತ್ ಹೇಳಿದ್ದೇನು?

ನ್ಯೂಸ್18  ಸುದ್ದಿ ಮಾಧ್ಯಮಕ್ಕೆ ಸಂದರ್ಶನ ನೀಡಿರುವ ಬಿಪಿನ್ ರಾವತ್, ‘ಯುದ್ಧಭೂಮಿಯಲ್ಲಿ ಯೋಧರು ಮೃತಪಡುವ ಸಾಧ್ಯತೆಗಳು ಇರುತ್ತವೆ. ಮಕ್ಕಳನ್ನು ಹೊಂದಿರುವ ಮಹಿಳೆಯರು ಸಾಯುವುದೇ ಇಲ್ಲ ಎಂದು ನಾನು ಹೇಳುವುದಿಲ್ಲ. ರಸ್ತೆ ಅಪಘಾತದಲ್ಲಿಯೂ ಅವರು ಮೃತಪಡಬಹುದು. ಆದರೆ ಮಹಿಳೆಯರು ಯುದ್ಧಭೂಮಿಯಲ್ಲಿ ಮೃತಪಟ್ಟು, ಅವರ ಮೃತದೇಹ ಮನೆಗೆ ವಾಪಸಾಗುವುದನ್ನು ನೋಡಲು ನಮ್ಮ ದೇಶ ಸಿದ್ಧವಿಲ್ಲ’ ಎಂದು ಹೇಳಿದ್ದಾರೆ.

‘ಸೇನೆಯಲ್ಲಿ ಎಂಜಿನಿಯರ್‌ಗಳಾಗಿ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ. ಸ್ಫೋಟಕಗಳನ್ನು ಹುಗಿಯುವ ಮತ್ತು ಪತ್ತೆ ಮಾಡಿ ಹೊರತೆಗೆಯುವಂತಹ ಕಾರ್ಯಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ವಾಯುಪಡೆಯಲ್ಲಿ ನಮ್ಮ ಶಸ್ತ್ರಾಸ್ತ್ರ ವ್ಯವಸ್ಥೆಯ ನಿರ್ವಹಣೆಯನ್ನು ಮಹಿಳಾ ಅಧಿಕಾರಿಗಳು ವಹಿಸಿಕೊಂಡಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

‘ಮಹಿಳೆಯರಿಗೆ ಯುದ್ಧರಂಗದಲ್ಲಿ ಕರ್ತವ್ಯ ನಿರ್ವಹಣೆಗೆ ಅವಕಾಶ ನೀಡಲು ಸೇನೆ ಸಿದ್ಧವಿಲ್ಲ ಎಂದಲ್ಲ. ಒಂದು ವೇಳೆ ಮಹಿಳೆಯರಿಗೆ ಕಮಾಂಡರ್ ಹುದ್ದೆ ನೀಡಿದರೆ, ಅವರು ದೀರ್ಘಾವಧಿಗೆ ತಮ್ಮ ಹೊಣೆಗಾರಿಕೆಯಿಂದ ದೂರ ಉಳಿಯಬಹುದೇ? ಕಮಾಂಡರ್ ಜವಾಬ್ದಾರಿ ನಿರ್ವಹಣೆ ಅವಧಿಯಲ್ಲಿ ಹೆರಿಗೆ ರಜೆ ನೀಡಲಾಗುವುದಿಲ್ಲ ಎಂದು ನಿರ್ಬಂಧ ಹೇರಬಹುದೆ? ನಾನು ಹಾಗೆ ಹೇಳಿದರೆ ವಿವಾದ ಸೃಷ್ಟಿಯಾಗುತ್ತದೆ’ ಎಂದು ಹೇಳಿದ್ದಾರೆ.

‘ಸೇನೆಯಲ್ಲಿರುವ ಬಹುತೇಕ ಯೋಧರು ಗ್ರಾಮೀಣ ಪ್ರದೇಶಗಳಿಂದ ಬಂದವರಾಗಿದ್ದು, ಇವರು ಮಹಿಳಾ ಕಮಾಂಡರ್‌ಗಳು ತಮ್ಮನ್ನು ಮುನ್ನಡೆಸುವುದನ್ನು ಬಯಸುವುದಿಲ್ಲ’ ಎಂದೂ ರಾವತ್ ಹೇಳಿದ್ದಾರೆ.

‘ಬಟ್ಟೆ ಬದಲಾಯಿಸುವಾಗ ಇತರರು ತಮ್ಮನ್ನು ಇಣುಕುತ್ತಾರೆ ಎಂದು ಮಹಿಳಾ ಸೇನಾ ಅಧಿಕಾರಿಗಳು ದೂರು ನೀಡುವ ಸಾಧ್ಯತೆಯೂ ಇದೆ. ಆಗ ನಾವು ಅವರಿಗೆ ಪ್ರತ್ಯೇಕ ಪರದೆಯನ್ನು ಒದಗಿಸಬೇಕಾಗುತ್ತದೆ’ ಎಂದೂ ಅವರು ಹೇಳಿದ್ದಾರೆ.

ಟ್ವಿಟರ್‌ನಲ್ಲಿ ಆಕ್ರೋಶ

ಸೇನಾ ಮುಖ್ಯಸ್ಥರ ಹೇಳಿಕೆಗೆ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತವಾಗಿದೆ.

‘ಬಟ್ಟೆ ಬದಲಾಯಿಸುವಾಗ ಯೋಧರು ಇಣುಕುವ ಸಾಧ್ಯತೆ ಇರುವುದರಿಂದ ಮಹಿಳೆಯರಿಗೆ ಯುದ್ಧಭೂಮಿಯಲ್ಲಿ ಅವಕಾಶ ನೀಡಲಾಗದು ಎನ್ನುವ ಮೂಲಕ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಸೇನೆ ಹಾಗೂ ದೇಶವನ್ನು ಮುಜುಗರಕ್ಕೀಡುಮಾಡಿದ್ದಾರೆ’ ಎಂದು ವಿಷ್ಣುಕಾಂತ್ ಶರ್ಮಾ ಎಂಬುವವರು ಟ್ವೀಟ್ ಮಾಡಿದ್ದಾರೆ.

‘ತಮ್ಮಂತಹ ಯೋಧರು ಮಹಿಳೆಯರಿಗೆ ಖಾಸಗಿತನ ನೀಡಲಾಗದ್ದರ ಬಗ್ಗೆ ರಾವತ್ ಬೇಸರ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಮತ್ತು ಬುದ್ಧಿ ಇಲ್ಲದವರು ಕೊನೆಗೆ ಸೇನೆ ಸೇರಿದಾಗ ಹೀಗಾಗಲು ಸಾಧ್ಯ’ ಎಂದು ಲಿಂಡ್ಸೆ ಪೆರೆರಾ ಎಂಬುವವರು ವ್ಯಂಗ್ಯವಾಡಿದ್ದಾರೆ.

‘ರಾವತ್ ಹೇಳಿಕೆ ನಿಜಕ್ಕೂ ಆಘಾತಕರ. ಅವರೀಗ ಸೇನೆ ಮತ್ತು ದೇಶವನ್ನು ಮುಜುಗರಕ್ಕೀಡುಮಾಡಲು ಶುರು ಮಾಡಿದ್ದಾರೆ. ಅವರ ನಿವೃತ್ತಿಗೆ ಇನ್ನೆಷ್ಟು ತಿಂಗಳುಗಳು ಇವೆ?’ ಎಂದು ಜಸ್ಕಿರಾತ್ ಸಿಂಗ್ ನಗರಾ ಟ್ವೀಟ್ ಮಾಡಿದ್ದಾರೆ.

ಇನ್ನೂ ಅನೇಕರು ರಾವತ್ ಹೇಳಿಕೆ ಬಗ್ಗೆ ಟ್ವಿಟರ್‌ನಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !