ಜಾಲತಾಣದಲ್ಲಿ ವೈಯಕ್ತಿಕ ಟೀಕೆ ನಿರ್ಬಂಧ ಅಸಾಧ್ಯ

7
ಬಾಂಬೆ ಹೈಕೋರ್ಟ್‌ಗೆ ಹೇಳಿಕೆ ಸಲ್ಲಿಸಿದ ಕೇಂದ್ರ ಚುನಾವಣಾ ಆಯೋಗ

ಜಾಲತಾಣದಲ್ಲಿ ವೈಯಕ್ತಿಕ ಟೀಕೆ ನಿರ್ಬಂಧ ಅಸಾಧ್ಯ

Published:
Updated:

ಮುಂಬೈ: ಚುನಾವಣೆಗೆ 48 ಗಂಟೆ ಮುಂಚಿತವಾಗಿ ಯಾವುದೇ ರಾಜಕೀಯ ಪಕ್ಷದ ಪರ ಅಥವಾ ವಿರುದ್ಧವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಮತ್ತು ಖಾಸಗಿಯಾಗಿ ನೀಡುವ ರಾಜಕೀಯ ಹೇಳಿಕೆ, ಬರಹಗಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಶುಕ್ರವಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ.

ವಕೀಲ ಸಾಗರ್‌ ಸೂರ್ಯವಂಶಿ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್‌) ಸಂಬಂಧಿಸಿದಂತೆ ಆಯೋಗವು ತನ್ನ ವಕೀಲ ಪ್ರದೀಪ್‌ ರಾಜಗೋಪಾಲ್ ಅವರ ಮೂಲಕ ಈ ಹೇಳಿಕೆ ಸಲ್ಲಿಸಿದೆ.

ಚುನಾವಣೆ ದಿನದ 48 ಗಂಟೆ ಮುಂಚಿತವಾಗಿ ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್‌, ಫೇಸ್‌ಬುಕ್‌ ಮತ್ತು ಟ್ವಿಟರ್‌ನಲ್ಲಿ ಚುನಾವಣೆ ಅಥವಾ ರಾಜಕೀಯಕ್ಕೆ ಸಂಬಂಧಿಸಿದ ಜಾಹೀರಾತು, ರಾಜಕೀಯ ಉದ್ದೇಶಕ್ಕೆ ಹಣ ‍ಪಾವತಿಸಿ ಸಿದ್ಧಪಡಿಸಿದ ಬರಹ ಅಥವಾ ವಿಡಿಯೊಗಳನ್ನು ರಾಜಕಾರಣಿಗಳು, ರಾಜಕೀಯ ಪಕ್ಷಗಳು ಅಥವಾ ಯಾವುದೇ ವ್ಯಕ್ತಿಗಳು ಖಾಸಗಿಯಾಗಿ ಪ್ರಸಾರ ಮಾಡುವುದನ್ನು ಚುನಾವಣಾ ಆಯೋಗ ನಿರ್ಬಂಧಿಸಲು ಆದೇಶಿಸುವಂತೆ ಪಿಐಎಲ್‌ನಲ್ಲಿ ಕೋರಲಾಗಿತ್ತು.

ಮುಖ್ಯ ನ್ಯಾಯಮೂರ್ತಿ ನರೇಶ್‌ ಪಾಟೀಲ್‌ ಮತ್ತು ನ್ಯಾಯಮೂರ್ತಿ ಎನ್‌.ಎಂ.ಜಾಮದಾರ್‌ ಅವರಿದ್ದ ಪೀಠಕ್ಕೆ ಆಯೋಗವು, ಜನಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್‌ 126ರ ಪ್ರಕಾರ, ಈಗಾಗಲೇ ಚುನಾವಣೆ ದಿನಕ್ಕೆ 48 ಗಂಟೆ ಮುಂಚಿತವಾಗಿ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ರಾಜಕೀಯ ಜಾಹೀರಾತು ನೀಡುವುದು ಅಥವಾ ಪ್ರಚಾರ ನಡೆಸುವುದನ್ನು ನಿರ್ಬಂಧಿಸಿರುವ ನಿಯಮ ಜಾರಿಯಲ್ಲಿದೆ ಎಂದು ತಿಳಿಸಿದೆ.

ಮತದಾನಕ್ಕೆ ಹಿಂದಿನ ದಿನ ಎಲೆಕ್ಟ್ರಾನಿಕ್‌ ಮಾಧ್ಯಮದ ಮೂಲಕ ಜಾಹೀರಾತು ಮತ್ತು ಕಾಸಿಗಾಗಿ ರಾಜಕೀಯ ಬರಹ ಪ್ರಕಟಿಸುವುದನ್ನು ಸಹ ಈ ಕಾಯ್ದೆಯಡಿ ನಿಷೇಧಿಸಲಾಗಿದೆ. ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳೂ ಈ ನಿರ್ಬಂಧಗಳಡಿ ಬರುತ್ತವೆ. ಆದಾಗ್ಯೂ ವ್ಯಕ್ತಿಯು ಯಾವುದೇ ರಾಜಕೀಯ ಪಕ್ಷ ಅಥವಾ ಅದರ ನೀತಿಗಳನ್ನು ಬ್ಲಾಗ್‌ ಅಥವಾ ಟ್ವಿಟರ್‌ ಪೋಸ್ಟ್‌ನಲ್ಲಿ ಪ್ರಶಂಸಿಸಿದರೆ ಆಯೋಗವು ಅಂತಹವರನ್ನು ತಡೆಯಲು ಹೇಗೆ ಸಾಧ್ಯ ಎಂದು ರಾಜಗೋಪಾಲ್‌ ಕೇಳಿದರು.

ಅರ್ಜಿದಾರರ ವಕೀಲ ಅಭಿನವ್‌ ಚಂದ್ರಚೂಡ್‌, ಬ್ರಿಟನ್‌ ಮತ್ತು ಅಮೆರಿಕದಲ್ಲಿ ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳು ಎಲ್ಲ ಬಗೆಯ ಜಾಹೀರಾತುಗಳನ್ನೂ ಕಠಿಣ ಪರಿಶೀಲನೆಗೆ ಒಳಪಡಿಸುವ ನೀತಿಗಳನ್ನು ಹೊಂದಿವೆ. ಭಾರತದಲ್ಲೂ ಇಂತಹುದೇ ನೀತಿಯನ್ನು ಜಾರಿಗೆ ತರಬೇಕಾಗಿದೆ ಎಂದು ವಾದಿಸಿದರು.

ಮತದಾನದ ಆಸುಪಾಸಿನಲ್ಲಿ ಕಾಸಿಗಾಗಿ ರಾಜಕೀಯ ಬರಹ, ಹೇಳಿಕೆ, ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿಯಂತ್ರಿಸುವ ವಿಧಾನಗಳ ಬಗ್ಗೆ ಸಲಹೆಗಳನ್ನು ಕೊಡುವಂತೆ ಎರಡೂ ಕಡೆಯುವರಿಗೆ ಪೀಠ ನಿರ್ದೇಶನ ನೀಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !