ಶುಕ್ರವಾರ, ನವೆಂಬರ್ 22, 2019
22 °C
ಹೈದರಾಬಾದ್ ಪೊಲೀಸರಿಂದ ತನಿಖೆ ಆರಂಭ

ಹಲ್ಲುಗಳು ವಕ್ರವಾಗಿವೆ ಎಂದು ಪತ್ನಿಗೆ ತಲಾಖ್: ವ್ಯಕ್ತಿ ವಿರುದ್ಧ ಪ್ರಕರಣ ದಾಖಲು

Published:
Updated:

ಹೈದರಾಬಾದ್: ಹಲ್ಲುಗಳು ವಕ್ರವಾಗಿವೆ ಎಂದು ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ವ್ಯಕ್ತಿಯ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಹೈದರಾಬಾದಿನ ಖುಷಿಗುಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ರುಕ್ಸಾನಾ ಬೇಗಂ ಎಂಬ ಮಹಿಳೆ ದೂರು ನೀಡಿ, ತನ್ನ ಪತಿ ಮುಸ್ತಾಫಾ ನನಗೆ ವರದಕ್ಷಿಣೆ ಕಿರುಕುಳ ನೀಡಿರುವುದಲ್ಲದೆ, ನನ್ನ ಹಲ್ಲುಗಳು ವಕ್ರವಾಗಿವೆ ಎಂದು ತ್ರಿವಳಿ ತಲಾಖ್ ನೀಡಿದ್ದಾನೆ. ಈತನ ವಿರುದ್ಧ ವರದಕ್ಷಿಣೆ ಕಿರುಕುಳ, ತ್ರಿವಳಿ ತಲಾಖ್ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ.

ಪೊಲೀಸರು ಆತನ ವಿರುದ್ಧ ತ್ರಿವಳಿ ತಲಾಖ್, ವರದಕ್ಷಿಣೆ ಕಿರುಕುಳ ತಡೆ ಕಾಯ್ದೆ 498 ಎ (ಭಾರತೀಯ ದಂಡಸಂಹಿತೆ ) ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ಸ್‌‌ಪೆಕ್ಟರ್ ಕೆ.ಚಂದ್ರಶೇಖರ್ ಸುದ್ದಿಗಾರರಿಗೆ ವಿವರ ನೀಡಿ, ಬೇಗಂ ಎಂಬ ಮಹಿಳೆ ನಮಗೆ ದೂರು ನೀಡಿದ್ದು, ಆಕೆ 2019ರ ಜೂನ್ ತಿಂಗಳಲ್ಲಿ ಮುಸ್ತಾಫ ಎಂಬಾತನನ್ನು ವಿವಾಹವಾಗಿದ್ದಾಳೆ. ವಿವಾಹ ಸಮಯದಲ್ಲಿ ವರದಕ್ಷಿಣೆಯಾಗಿ ಹಣ ಆಭರಣ ನೀಡಲಾಗಿದೆ. ಆದರೂ ಮತ್ತಷ್ಟು ವರದಕ್ಷಿಣೆ ನೀಡಬೇಕೆಂದು ಕಿರುಕುಳ ನೀಡುತ್ತಿದ್ದ. ಅಲ್ಲದೆ, ಮದುವೆಯಾದಾಗಿನಿಂದ ನಿನ್ನ ಹಲ್ಲುಗಳು ವಕ್ರವಾಗಿವೆ ಎಂದು ಹೇಳುತ್ತಿದ್ದ. ಈಗ ಇದೇ ಕಾರಣಕ್ಕಾಗಿ ಮೂರು ತಲಾಖ್ ಹೇಳಿದ್ದಾನೆ. ಅಲ್ಲದೆ, ಮದುವೆಯ ಸಮಯದಲ್ಲಿ ವರದಕ್ಷಿಣೆಯ ಜೊತೆಗೆ ಹಣ, ಆಭರಣ ನೀಡಿದ್ದು, ಪತಿ ಹಾಗೂ ಆತನ ಮನೆಯವರು ಮತ್ತಷ್ಟು ಹಣ ಆಭರಣಕ್ಕಾಗಿ ಒತ್ತಾಯಿಸುತ್ತಿದ್ದಾರೆ ಎಂದು ದೂರು ನೀಡಲಾಗಿದೆ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಬೇಗಂ, ನಾನು ನೋಡಲು ಸುಂದರವಾಗಿಲ್ಲ ಎಂದು ಮನೆಯಲ್ಲಿಯೇ ಕೂಡಿ ಹಾಕಿದ್ದ. ಸುಮಾರು 10 ರಿಂದ 15 ದಿನಗಳ ಕಾಲ ಕೂಡಿ ಹಾಕಿದ ಕಾರಣ ಅನಾರೋಗ್ಯ ಪೀಡಿತಳಾಗಿದ್ದೆ, ಹಲ್ಲು ವಕ್ರವಾಗಿರುವುದರಿಂದ ಇಷ್ಟವಿಲ್ಲ ಎನ್ನುತ್ತಿದ್ದ. ಅನಾರೋಗ್ಯಕ್ಕೆ ಈಡಾದಾಗ ಸ್ವಲ್ಪ ದಿನಗಳ ನಂತರ ತವರು ಮನೆಗೆ ಕಳುಹಿಸಿದ್ದಾನೆ.

ಇದನ್ನೂ ಓದಿ: ತ್ರಿವಳಿ ತಲಾಖ್; ರಾಜ್ಯದಲ್ಲಿ ಮೊದಲ ಎಫ್‌ಐಆರ್‌

ತವರು ಮನೆಗೆ ಬಂದ ನಂತರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಆಗ ಮುಸ್ತಾಫ ಹಾಗೂ ಆತನ ಸೋದರರು ಬಂದು ರಾಜಿ ಮಾಡಿಕೊಳ್ಳುವುದಾಗಿಯೂ, ಮನೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದರು. ಆದರೆ, ಅಕ್ಟೋಬರ್ 1 ರಂದು ಮತ್ತೆ ಬಂದ ಮುಸ್ತಾಫ, ತಂದೆ ತಾಯಿಗಳಿಗೆ ಬಾಯಿಗೆ ಬಂದಂತೆ ಬೈಯ್ದು, ಮೂರು ಬಾರಿ ತಲಾಖ್ ಹೇಳಿ ಹೊರಟು ಹೋದ. ಕೂಡಲೆ ಮುಸ್ತಾಫನನ್ನು ಫೋನ್ ಮೂಲಕ ಸಂಪರ್ಕಿಸಿದಾಗ ಫೋನ್ ಮೂಲಕವೂ ಮೂರು ಬಾರಿ ತಲಾಖ್ ಹೇಳಿದ. ಅಕ್ಟೋಬರ್ 26 ರಂದು ಮತ್ತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ಪೊಲೀಸರು ಪತಿ ಹಾಗೂ ಆತನ ಕಡೆಯವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ನನಗೆ ನ್ಯಾಯ ಬೇಕು ಎಂದು ಮಹಿಳೆ ತಿಳಿಸಿದ್ದಾಳೆ.

ಪ್ರತಿಕ್ರಿಯಿಸಿ (+)