₹ 1,908 ಕೋಟಿ ಮೌಲ್ಯದ ನಗದು, ವಸ್ತು ವಶ

ಶುಕ್ರವಾರ, ಏಪ್ರಿಲ್ 26, 2019
36 °C
ಮಾದರಿ ನೀತಿ ಸಂಹಿತೆ; ವಿಚಕ್ಷಣಾ ದಳದ ತಪಾಸಣೆ:

₹ 1,908 ಕೋಟಿ ಮೌಲ್ಯದ ನಗದು, ವಸ್ತು ವಶ

Published:
Updated:

ನವದೆಹಲಿ: ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದ ಮುನ್ನಾ ದಿನವಾದ ಬುಧವಾರ ಸಂಜೆಯವರೆಗೆ ಮಾದರಿ ನೀತಿ ಸಂಹಿತೆ ಅಡಿ ನಡೆಸಲಾದ ತಪಾಸಣೆಯ ವೇಳೆ ದೇಶದಾದ್ಯಂತ ನಗದು ಸೇರಿದಂತೆ ಒಟ್ಟು ₹ 1,908.76 ಕೋಟಿ ಮೊತ್ತದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಿಚಕ್ಷಣಾ ದಳದ ಸಿಬ್ಬಂದಿ ವಿವಿಧ ರಾಜ್ಯಗಳಲ್ಲಿ ಸಂಶಯಾಸ್ಪದವಾಗಿ ಸಂಚರಿಸುತ್ತಿದ್ದ ವಾಹನಗಳ ತಪಾಸಣೆ ನಡೆಸಿದಾಗ ಸಮರ್ಪಕ ದಾಖಲೆಗಳಿಲ್ಲದೆ, ಅಕ್ರಮವಾಗಿ ಸಾಗಿಸಲಾಗುತ್ತಿದ್ದ ನಗದು, ಮಾದಕ ವಸ್ತು, ಮದ್ಯ, ಚಿನ್ನ ಮತ್ತು ಬೆಳ್ಳಿ ಆಭರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಪ್ರಕಟಣೆ ಹೇಳಿದೆ.

ದೇಶದಾದ್ಯಂತ ₹ 528.98 ಕೋಟಿ ನಗದು, ₹ 186.19 ಕೋಟಿ ಮೌಲ್ಯದ ಮದ್ಯ, ₹ 725.35 ಕೋಟಿ ಮೌಲ್ಯದ ಮಾದಕ ವಸ್ತು, ₹ 426.80 ಕೋಟಿ ಮೌಲ್ಯದ ಚಿನ್ನ– ಬೆಳ್ಳಿ, ₹ 41.42 ಕೋಟಿ ಮೌಲ್ಯದ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಪೈಕಿ ಗುಜರಾತ್‌ ರಾಜ್ಯವೊಂದರಲ್ಲೇ ₹ 500 ಕೋಟಿ ಮೌಲ್ಯದ ಮಾದಕ ವಸ್ತು ಪತ್ತೆಯಾಗಿದೆ.

ಕರ್ನಾಟಕದಲ್ಲಿ ₹ 26.15 ಕೋಟಿ ನಗದು, ₹ 33.98 ಕೋಟಿ ಮೌಲ್ಯದ 8.14 ಲಕ್ಷ ಲೀಟರ್‌ ಮದ್ಯ ಒಳಗೊಂಡಂತೆ ಒಟ್ಟು ₹ 63.82 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ತಮಿಳುನಾಡಿನಲ್ಲಿ ಅತ್ಯಧಿಕ ₹ 171.34 ಕೋಟಿ ಮೌಲ್ಯದ ನಗದು ಒಳಗೊಂಡಂತೆ ಒಟ್ಟು ₹ 412.02 ಕೋಟಿ ಮೊತ್ತದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಗುಜರಾತ್‌ನಲ್ಲಿ ₹ 3.74 ಕೋಟಿ ನಗದು ದೊರೆತಿದೆ.

ಲೋಕಸಭೆಯ ಜೊತೆಗೆ ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಆಂಧ್ರಪ್ರದೇಶದಲ್ಲಿ ₹ 118.60 ಕೋಟಿ ನಗದು ಒಳಗೊಂಡಂತೆ ₹ 196.03 ಕೋಟಿ ಮೌಲ್ಯದ ವಸ್ತುಗಳು ಜಪ್ತಿಯಾಗಿವೆ.

ಉತ್ತರ ಪ್ರದೇಶದಲ್ಲಿ ₹ 161.93 ಕೋಟಿ, ಪಂಜಾಬ್‌ನಲ್ಲಿ 169.06 ಕೋಟಿ, ಮಹಾರಾಷ್ಟ್ರದಲ್ಲಿ ₹ 97.02 ಕೋಟಿ, ತೆಲಂಗಾಣದಲ್ಲಿ ₹ 52.62 ಕೋಟಿ, ಪ.ಬಂಗಾಳದಲ್ಲಿ ₹ 52.21 ಕೋಟಿ ಮೊತ್ತದ ನಗದು ಮತ್ತು ವಸ್ತು ವಶಪಡಿಸಿಕೊಳ್ಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !