ಕಾವೇರಿ ನಿಯಂತ್ರಣ ಸಮಿತಿ ಸಭೆ: ನೀರಿನ ಸಮಗ್ರ ನಿರ್ವಹಣೆಯ ಚರ್ಚೆ

7

ಕಾವೇರಿ ನಿಯಂತ್ರಣ ಸಮಿತಿ ಸಭೆ: ನೀರಿನ ಸಮಗ್ರ ನಿರ್ವಹಣೆಯ ಚರ್ಚೆ

Published:
Updated:

ನವದೆಹಲಿ: ಕಾವೇರಿ ನದಿಯಲ್ಲಿ ಲಭ್ಯವಿರುವ ನೀರಿನ ಸಮಗ್ರ ನಿರ್ವಹಣೆಯ ಕುರಿತು ಗುರುವಾರ ಇಲ್ಲಿ ನಡೆದ ಕಾವೇರಿ ನದಿ ನೀರು ನಿಯಂತ್ರಣ ಸಮಿತಿಯ ಮೂರನೇ ಸಭೆಯಲ್ಲಿ ಚರ್ಚಿಸಲಾಯಿತು.

ಕಳೆದ ಜುಲೈ 31ರವರಗೆ ಕಣಿವೆ ವ್ಯಾಪ್ತಿಯಲ್ಲಿ ಸುರಿದ ಮಳೆಯ ಮಾಹಿತಿ ಪಡೆದು ಸಭೆಯಲ್ಲಿ ಪರಿಶೀಲಿಸಲಾಯಿತು ಎಂದು ಸಮಿತಿಯ ಅಧ್ಯಕ್ಷ, ಕೇಂದ್ರ ಜಲ ಆಯೋಗದ ಮುಖ್ಯ ಎಂಜಿನಿಯರ್‌ ನವೀನಕುಮಾರ್‌ ನಂತರ ಸುದ್ದಿಗಾರರಿಗೆ ತಿಳಿಸಿದರು.

ಕಳೆದ ಜುಲೈ 5 ಮತ್ತು 19ರಂದು ನಡೆದಿದ್ದ ಸಮಿತಿಯ ಸಭೆಯಲ್ಲಿ ಕಾವೇರಿ ಕಣಿವೆ ವ್ಯಾಪ್ತಿಯಲ್ಲಿ ಸುರಿದ ಮಳೆ, ಒಳಹರಿವು ಮತ್ತು ಹೊರಹರಿವಿನ ಮಾಹಿತಿ ಒದಗಿಸುವಂತೆ ಸೂಚಿಸಲಾಗಿತ್ತು. ಆ ಪ್ರಕಾರ ಎಲ್ಲ ಸದಸ್ಯ ರಾಜ್ಯಗಳು ಮಾಹಿತಿ ಸಲ್ಲಿಸಿವೆ. ಕಾವೇರಿ ವ್ಯಾಪ್ತಿಯ ಜಲಾನಯನ ಪ್ರದೇಶದಲ್ಲಿ ವಾರ್ಷಿಕ ಲಭ್ಯವಿರುವ ನೀರಿನ ಸಮಗ್ರ ನಿರ್ವಹಣೆಗೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಕೇಂದ್ರದ ಕೃಷಿ ಸಚಿವಾಲಯ ಪ್ರಾತ್ಯಕ್ಷಿಕೆ ಪ್ರದರ್ಶಿಸಿತು ಎಂದು ಅವರು ತಿಳಿಸಿದರು.

ಕಾವೇರಿ ಕಣಿವೆಯಲ್ಲಿ ಜುಲೈ 31 ರವರೆಗೆ ಮಳೆಯ ಕೊರತೆ ಕಂಡು ಬಾರದ್ದರಿಂದ, ತಮಿಳುನಾಡಿನ ಪಾಲಿನ ನೀರು ಹರಿದುಹೋಗಿದೆ. ಈ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿಲ್ಲ. ಸಮಿತಿಯ ಮುಂದಿನ ಸಭೆ ಸೆಪ್ಟೆಂಬರ್‌ 2ನೇ ವಾರ ನಡೆಯಲಿದೆ ಎಂದರು. ಹವಾಮಾನ ಇಲಾಖೆ, ಕೇಂದ್ರ ಜಲ ಆಯೋಗದ ಸದಸ್ಯರು ಪಾಲ್ಗೊಂಡಿದ್ದರು.
**
ಕೇಂದ್ರದ ಜೊತೆ ಚರ್ಚೆಗೆ ಕ್ಯಾ. ರಾಜಾರಾವ್‌ ಆಗ್ರಹ
ಬೆಂಗಳೂರು:
‘ಕಾವೇರಿ ಐತೀರ್ಪು ಕುರಿತು ಸ್ಪಷ್ಟನೆ ಕೇಳಿ ನದಿ ಪಾತ್ರದ ರಾಜ್ಯಗಳು ಸಲ್ಲಿಸಿರುವ ಅರ್ಜಿಗಳು ವಿಚಾರಣೆಗೆ ಬಾಕಿ ಇರುವಾಗಲೇ ನ್ಯಾಯಮಂಡಳಿಯನ್ನು ವಿಸರ್ಜಿಸಿರುವ ಕೇಂದ್ರದ ಕ್ರಮ ಸರಿಯಲ್ಲ’ ಎಂದು ನೀರಾವರಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ಕ್ಯಾ‍ಪ್ಟನ್‌ ರಾಜಾರಾವ್‌ ಹೇಳಿದ್ದಾರೆ.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಈ ಸಂಬಂಧ ಬರೆದಿರುವ ಪತ್ರದಲ್ಲಿ, ಅಂತರರಾಜ್ಯ ನದಿ ವಿವಾದ ಕಾಯ್ದೆ 5 (3) ಅಡಿಯಲ್ಲಿ ಸ್ಥಾಪಿಸಲಾಗಿದ್ದ ಕಾವೇರಿ ನ್ಯಾಯಮಂಡಳಿ ತನ್ನ ಜವಾಬ್ದಾರಿ ಮುಗಿಸುವ ಮೊದಲೇ ವಿಸರ್ಜಿಸಲಾಗಿದೆ. ಇದೊಂದು ಗಂಭೀರ ವಿಷಯವಾಗಿದ್ದು, ಕೂಡಲೇ ಕೇಂದ್ರ ಸರ್ಕಾರದ ಜೊತೆ ಚರ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಾವೇರಿ ನ್ಯಾಯಮಂಡಳಿ ತನ್ನ ಕೆಲಸವನ್ನು ಪೂರ್ಣಗೊಳಿಸಿದೆ ಎಂದು ಪರಿಭಾವಿಸಿ ಜುಲೈ 16ರಂದು ಕೇಂದ್ರ ಅಧಿಕೃತ ಘೋಷಣೆ ಹೊರಡಿಸಿದೆ. ಇದು ಸಮರ್ಥನೀಯವಲ್ಲ. ನ್ಯಾಯಮಂಡಳಿ 2007ರಲ್ಲಿ ನೀಡಿರುವ ಐತೀರ್ಪು ಬಗ್ಗೆ ನದಿ ಪಾತ್ರದ ರಾಜ್ಯಗಳು ಕೇಳಿರುವ ಸ್ಪಷ್ಟನೆಗೆ ವಿವರಣೆ ನೀಡಿದ ಬಳಿಕವಷ್ಟೆ ವಿಸರ್ಜಿಸಬೇಕು ಎಂದು ರಾಜಾರಾವ್‌ ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸರ್ಕಾರ ತರಾತುರಿಯಲ್ಲಿ ನಿರ್ಧಾರ ಮಾಡಿದ್ದು, ಈ ಸಂಬಂಧದ ಅಧಿಸೂಚನೆಯನ್ನು ವಾಪಸ್‌ ಪಡೆಯುವಂತೆ ರಾಜ್ಯ ಸರ್ಕಾರ ಒತ್ತಡ ಹೇರಬೇಕು ಎಂದೂ ರಾಜಾರಾವ್‌ ಹೇಳಿದ್ದಾರೆ. ನೀರಾವರಿ ಸಚಿವರು, ಕೃಷಿ ಸಚಿವರು ಹಾಗೂ ಮುಖ್ಯ ಕಾರ್ಯದರ್ಶಿಗೂ ಪತ್ರದ ಪ್ರತಿಗಳನ್ನು ರವಾನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !