ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚಕ್ಕಾಗಿ ಬೇಡಿಕೆ ಇಟ್ಟ ಆರೋಪ: ಸಿಬಿಐ ಅಧಿಕಾರಿ ಬಂಧನ

Last Updated 22 ಅಕ್ಟೋಬರ್ 2018, 20:02 IST
ಅಕ್ಷರ ಗಾತ್ರ

ನವದೆಹಲಿ: ಮಾಂಸ ರಫ್ತು ಅಕ್ರಮ ಪ್ರಕರಣದಿಂದ ಕೈಬಿಡಲು ಹೈದರಾಬಾದ್‌ನ ಉದ್ಯಮಿ ಸಾನಾ ಸತೀಶ್‌ ಬಾಬು ಎಂಬುವರಿಂದ ₹5 ಕೋಟಿ ಲಂಚಕ್ಕಾಗಿ ಬೇಡಿಕೆ ಇಟ್ಟ ಆರೋಪದಲ್ಲಿ ತನ್ನದೇ ಅಧಿಕಾರಿ ಡಿಎಸ್‌ಪಿ ದೇವೇಂದರ್‌ ಕುಮಾರ್‌ ಅವರನ್ನು ಸಿಬಿಐ ಸೋಮವಾರ ಬಂಧಿಸಿದೆ.

ಸಿಬಿಐ ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ, ಡಿಎಸ್‌ಪಿ ದೇವೇಂದರ್‌ ಕುಮಾರ್‌ ಸೇರಿದಂತೆ ಇನ್ನೂ ಕೆಲವರ ವಿರುದ್ಧ ನೀಡಿದ್ದ ದೂರಿನ ಮೇರೆಗೆ ಸಿಬಿಐ ಕಳೆದ ವಾರ ಲಂಚ ಪ್ರಕರಣ ದಾಖಲಿಸಿತ್ತು.

ಇದರೊಂದಿಗೆ ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಮತ್ತು ಅಸ್ತಾನಾ ಮಧ್ಯೆ ನಡೆಯುತ್ತಿರುವ ಶೀತಲ ಸಮರ ತಾರಕಕ್ಕೆ ಏರಿದೆ. ಇಬ್ಬರೂ ಪರಸ್ಪರರ ವಿರುದ್ಧ ಕೇಂದ್ರೀಯ ಜಾಗೃತ ಆಯೋಗಕ್ಕೂ (ಸಿವಿಸಿ) ದೂರು ಸಲ್ಲಿಸಿದ್ದರು.

ದೇವೇಂದರ್‌ ಕುಮಾರ್‌ ಬಂಧನದೊಂದಿಗೆ ಅವರ ಆಪ್ತರೆನಿಸಿರುವ ಅಸ್ತಾನಾ ಅವರ ವಜಾಕ್ಕೆ ವೇದಿಕೆ ಸಿದ್ಧವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮಾಂಸ ರಫ್ತು ವರ್ತಕ ಮೊಯಿನ್‌ ಅಖ್ತರ್‌ ಖುರೇಷಿ ವಿರುದ್ಧದ ಪ್ರಕರಣದ ತನಿಖೆಗೆ ಅಸ್ತಾನಾ ನೇತೃತ್ವದಲ್ಲಿ ರಚಿಸಲಾಗಿದ್ದ ವಿಶೇಷ ತನಿಖಾ ತಂಡದಲ್ಲಿ ದೇವೇಂದರ್‌ ಕುಮಾರ್ ತನಿಖಾಧಿಕಾರಿಯಾಗಿದ್ದಾರೆ.

ತನಿಖೆಗೆ ಸಂಬಂಧಿಸಿದಂತೆ ಕೆಲವು ಮಹತ್ವದ ದಾಖಲೆ ತಿರುಚಿದ ಆರೋಪದಲ್ಲಿ ತನಿಖಾಧಿಕಾರಿಯಾಗಿದ್ದ ದೇವೇಂದರ್‌ ಅವರನ್ನು ಬಂಧಿಸಲಾಗಿದೆ ಎಂದು ಸಿಬಿಐ ಹೇಳಿದೆ.

ಅಧಿಕಾರಿಗಳಿಗೆ ಪ್ರಧಾನಿ ಬುಲಾವ್‌: ಸಿಬಿಐನ ಇಬ್ಬರು ಉನ್ನತ ಅಧಿಕಾರಿಗಳ ನಡುವೆ ನಡೆದಿರುವ ಶೀತಲ ಸಮರ ಶಮನಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯೆ ಪ್ರವೇಶಿಸಿದ್ದಾರೆ.

ಅಲೋಕ್‌ ವರ್ಮಾ ಮತ್ತುಅಸ್ತಾನಾ ಇಬ್ಬರಿಗೂ ಪ್ರಧಾನಿ ಕಚೇರಿಯಿಂದ ಬುಲಾವ್‌ ಹೋಗಿದೆ. ವರ್ಮಾ ಅವರು ಪ್ರಧಾನಿಯನ್ನು ಭಾನುವಾರ ಭೇಟಿಯಾಗಿ ವಿವರಣೆ ನೀಡಿದ್ದಾರೆ.

ಅಸ್ತಾನಾ ವಿರುದ್ಧ ಪ್ರಕರಣ ದಾಖಲಿಸುವ ಮುನ್ನ ಸಿಬಿಐ, ಪ್ರಧಾನಿ ಕಚೇರಿಯ ಅನುಮತಿ ಪಡೆದಿರಲಿಲ್ಲ ಎಂದು ಹೇಳಲಾಗಿದೆ. ಪ್ರಮುಖಪ್ರಕರಣಗಳಲ್ಲಿ ಸಿಬಿಐ ಪ್ರಧಾನಿ ಕಚೇರಿ ಅನುಮತಿ ಪಡೆಯಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT