ಸೋಮವಾರ, ಸೆಪ್ಟೆಂಬರ್ 28, 2020
25 °C

ಸಿಬಿಎಸ್ಇ: ಜು.15ರೊಳಗೆ 10, 12ನೇ ತರಗತಿ ಫಲಿತಾಂಶ ಪ್ರಕಟ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೇಂದ್ರ ಪ್ರೌಢಶಿಕ್ಷಣ ಮಂಡಳಿಯು (ಸಿಬಿಎಸ್‌ಇ) 10 ಮತ್ತು 12ನೇ ತರಗತಿಯ ಪರೀಕ್ಷೆ ರದ್ದುಪಡಿಸಲಾದ ವಿಷಯಗಳಿಗೆ ಅಂಕ ನೀಡಲು ಅನುಸರಿಸಲಿರುವ ಮಾನದಂಡಗಳನ್ನು ಪ್ರಕಟಿಸಿರುವ ಮಂಡಳಿಯು ಜುಲೈ 2ನೇ ವಾರದೊಳಗೆ ಫಲಿತಾಂಶ ಪ್ರಕಟಿಸುವುದಾಗಿ ಹೇಳಿದೆ. ಇದಕ್ಕೆ ಸುಪ್ರೀಂ ಕೋರ್ಟ್‌ ಅನುಮೋದನೆ ನೀಡಿದೆ.

ರದ್ದುಪಡಿಸಿರುವ ವಿಷಯಗಳ ಪರೀಕ್ಷೆಗೆ ಸಂಬಂಧಿಸಿ ಅಧಿಸೂಚನೆ ಹೊರಡಿಸಬೇಕು ಎಂದು ನ್ಯಾಯಮೂರ್ತಿಗಳಾದ ಎ.ಎಂ.ಖಾನ್‌ವಿಲ್ಕರ್‌ ಮತ್ತು ಸಂಜೀವ್‌ ಖನ್ನಾ ಅವರಿದ್ದ ನ್ಯಾಯಪೀಠವು ಅನುಮತಿ ನೀಡಿತು. 

ಕೇಂದ್ರ ಸರ್ಕಾರ ಮತ್ತು ಸಿಬಿಎಸ್‌ಇ ಪರವಾಗಿ ವಿಷಯ ತಿಳಿಸಿದ ಸಾಲಿಸಿಟರ್ ಜನರಲ್‌ ತುಷಾರ್ ಮೆಹ್ತಾ ಅವರು, ‘ಅಧಿಸೂಚನೆ ಹೊರಡಿಸಲಾಗುವುದು. ಮಂಡಳಿಯ ವೆಬ್‌ಸೈಟ್‌ನಲ್ಲೂ ಈ ವಿವರಗಳನ್ನು ಪ್ರಕಟಿಸಲಾಗುವುದು’ ಎಂದರು.

‘ಬಹುತೇಕ ಜುಲೈ ಎರಡನೇ ವಾರದ ವೇಳೆಗೆ ಫಲಿತಾಂಶಗಳನ್ನು ಪ್ರಕಟಿಸಲಾಗುವುದು’ ಎಂದು ಸಿಬಿಎಸ್‌ಇ ಮತ್ತು ಐಸಿಎಸ್‌ಇ ಎರಡೂ ಮಂಡಳಿಗಳ ವಕೀಲರು ಇದೇ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದರು.

ಐಸಿಎಸ್‌ಇ ಪರ ಹಾಜರಿದ್ದ ವಕೀಲರು, ‘ಸಿಬಿಎಸ್‌ಇ ಅನುಸರಿಸುವ ಕ್ರಮವನ್ನೇ ಬಹುತೇಕ ಐಸಿಎಸ್ಇ ಅನುಸರಿಸಲಿದೆ. ಆದರೆ, ಸರಾಸರಿ ಸೂತ್ರ ಭಿನ್ನವಾಗಿರಲಿದೆ. 10ನೇ ತರಗತಿಗೆ ಮರು ಪರೀಕ್ಷೆ ನಡೆಸುವ ಸಾಧ್ಯತೆಗಳನ್ನು ಪರಿಶೀಲಿಸಲಾಗುವುದು. ಈ ಬಗ್ಗೆ ವಾರದಲ್ಲಿ ಅಧಿಸೂಚನೆ ಹೊರಡಿಸಲಾಗುವುದು’ ಎಂದು ತಿಳಿಸಿದರು.

ಕೋವಿಡ್ ಹಿನ್ನೆಲೆಯಲ್ಲಿ ಜುಲೈ 1 ರಿಂದ 15ರವರೆಗೆ ನಡೆಸಲು ಉದ್ದೇಶಿಸಲಾಗಿದ್ದ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ ಎಂದು ಗುರುವಾರವಷ್ಟೇ ಸಿಬಿಎಸ್‌ಇ ಮತ್ತು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿಯನ್ನು ನೀಡಿತ್ತು.

ಸಿಬಿಎಸ್‌ಇ ಮಾನದಂಡಗಳೇನು?

* 10 ಮತ್ತು 12ನೇ ತರಗತಿಗಳ ಪರೀಕ್ಷೆಯಲ್ಲಿ ಎಲ್ಲ ವಿಷಯಗಳಿಗೆ ಹಾಜರಾಗಿರುವ ವಿದ್ಯಾರ್ಥಿಗಳ ಫಲಿತಾಂಶವನ್ನು ಅವರ ಸಾಧನೆ ಆಧರಿಸಿ ಪ್ರಕಟಿಸಲಾಗುವುದು.

* 3ಕ್ಕಿಂತಲೂ ಹೆಚ್ಚು ವಿಷಯಗಳಿಗೆ ಹಾಜರಾಗಿದ್ದಲ್ಲಿ ಅತ್ಯುತ್ತಮ ಅಂಕ ಪಡೆದಿರುವ ಮೂರು ವಿಷಯಗಳ ಸರಾಸರಿ ಅಂಕವನ್ನು, ಪರೀಕ್ಷೆ ರದ್ದಾಗಿರುವ ವಿಷಯಗಳಿಗೂ ನಿಗದಿ ಪಡಿಸಲಾಗುವುದು.

* ಮೂರು ವಿಷಯಗಳ ಪರೀಕ್ಷೆಗಷ್ಟೇ ಹಾಜರಾಗಿದ್ದಲ್ಲಿ ಅತ್ಯುತ್ತಮ ಅಂಕ ಪಡೆದಿರುವ ಎರಡು ವಿಷಯಗಳ ಸರಾಸರಿ ಅಂಕವನ್ನು, ಪರೀಕ್ಷೆ ರದ್ದಾಗಿರುವ ವಿಷಯಗಳಿಗೆ ನಿಗದಿಪಡಿಸಲಾಗುತ್ತದೆ.

* ಕೆಲವೇ ವಿದ್ಯಾರ್ಥಿಗಳು ಮುಖ್ಯವಾಗಿ ದೆಹಲಿಯಲ್ಲಿ ಒಂದು ಅಥವಾ ಎರಡು ವಿಷಯಗಳ ಪರೀಕ್ಷೆಗಳಿಗೆ ಹಾಜರಾಗಿದ್ದಾರೆ. ಇವರ ಫಲಿತಾಂಶವನ್ನು ಹಾಜರಾದ ವಿಷಯಗಳಲ್ಲಿ ಅವರ ಸಾಧನೆ, ಆಂತರಿಕ ಮೌಲ್ಯಮಾಪನ, ಪ್ರಾಯೋಗಿಕ ಯೋಜನೆಗಳ ಅಂಕಗಳನ್ನು ಆಧರಿಸಿ ನಿಗದಿಪಡಿಸಲಾಗುವುದು. ಇಂಥ ವಿದ್ಯಾರ್ಥಿಗಳಿಗೆ ತಮ್ಮ ಸಾಧನೆ ಉತ್ತಮಪಡಿಸಿಕೊಳ್ಳಲು ಸಿಬಿಎಸ್‌ಇ ನಡೆಸಲಿರುವ ಪರ್ಯಾಯ ಪರೀಕ್ಷೆಗೆ ಹಾಜರಾಗುವ ಅವಕಾಶ ಸಿಗಲಿದೆ.

* ಈ ಎಲ್ಲ ವಿದ್ಯಾರ್ಥಿಗಳ ಫಲಿತಾಂಶವನ್ನು ಒಟ್ಟಿಗೇ ಪ್ರಕಟಿಸಲಾಗುತ್ತದೆ. 12ನೇ ತರಗತಿ ವಿದ್ಯಾರ್ಥಿಗಳಿಗಷ್ಟೇ ನಂತರ ಮರು ಪರೀಕ್ಷೆಗೆ ಹಾಜರಾಗುವ ಅಥವಾ ಹಿಂದಿನ ಪರೀಕ್ಷೆಗಳ ಸಾಧನೆಗಳನ್ನು ಆಧರಿಸಿ ಫಲಿತಾಂಶವನ್ನು ಪಡೆಯುವ ಆಯ್ಕೆಯನ್ನು ನೀಡಲಾಗುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು