ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಎಸ್‌ಇ: ಬಾಲಕಿಯರದೇ ಮೇಲುಗೈ

12ನೇ ತರಗತಿ ಫಲಿತಾಂಶ: ಗಾಜಿಯಾಬಾದ್‌ನ ಹನ್ಸಿಕಾ, ಮುಜಫ್ಫರ್‌ನಗರದ ಕರಿಷ್ಮಾ ಪ್ರಥಮ
Last Updated 2 ಮೇ 2019, 20:29 IST
ಅಕ್ಷರ ಗಾತ್ರ

ನವದೆಹಲಿ:ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯ (ಸಿಬಿಎಸ್‌ಇ) 12ನೇ ತರಗತಿ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ತೃತೀಯ ಲಿಂಗಿ ವಿದ್ಯಾರ್ಥಿಗಳು ಕೂಡ ಶೇಕಡ 83.3ರಷ್ಟು ತೇರ್ಗಡೆ ಪ್ರಮಾಣದೊಂದಿಗೆ ಗಮನ ಸೆಳೆದಿದ್ದಾರೆ.

ಬಾಲಕರಿಗಿಂತ ಶೇಕಡ 9ರಷ್ಟು ಹೆಚ್ಚು ಬಾಲಕಿಯರು ತೇರ್ಗಡೆಯಾಗಿದ್ದಾರೆ.ತಿರುವನಂತಪುರ ವಲಯದಲ್ಲಿ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣ ಇಲ್ಲಿ ಹೆಚ್ಚಿದೆ. ನಂತರದ ಸ್ಥಾನಗಳಲ್ಲಿ ಚೆನ್ನೈ ಮತ್ತು ದೆಹಲಿ ವಲಯಗಳಿವೆ ಎಂದು ಸಿಬಿಎಸ್‌ಇ ಹೇಳಿದೆ.

‘ಸಾಮಾಜಿಕ ಜಾಲತಾಣ ತ್ಯಜಿಸಿದ್ದೇ ಯಶಸ್ಸಿಗೆ ಕಾರಣ’
‘ನನಗೆ ಸ್ವಲ್ಪ ವಿಶ್ರಾಂತಿ ಬೇಕು ಎನಿಸಿದಾಗ ಸಂಗೀತ ಕೇಳುತ್ತಿದ್ದೆ. ಸಾಮಾಜಿಕ ಜಾಲತಾಣಗಳಿಂದ ಏಕಾಗ್ರತೆಗೆ ಭಂಗವಾಗುತ್ತದೆ. ಪರೀಕ್ಷೆ ಮುಗಿಯುವವರೆಗೆ ನಾನು ಇವುಗಳಿಂದ ದೂರವಿದ್ದದ್ದು ಯಶಸ್ಸಿಗೆ ಕಾರಣ’ ಎನ್ನುತ್ತಾರೆ 500ಕ್ಕೆ 499 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದಿರುವ ಗಾಜಿಯಾಬಾದ್‌ನ ಹನ್ಸಿಕಾ ಶುಕ್ಲಾ.

ಇತಿಹಾಸ, ರಾಜ್ಯಶಾಸ್ತ್ರ, ಮನೋವಿಜ್ಞಾನ ಮತ್ತು ಹಿಂದೂಸ್ತಾನಿ ಸಂಗೀತ ವಿಷಯದಲ್ಲಿ 100ಕ್ಕೆ 100 ಅಂಕ ಗಳಿಸಿರುವ ಹನ್ಸಿಕಾ, ಇಂಗ್ಲಿಷ್‌ನಲ್ಲಿ 99 ಅಂಕ ಪಡೆದಿದ್ದಾಳೆ.

‘ಈಗಿನ ಫಲಿತಾಂಶದಿಂದ ನನಗೆ ಆಶ್ಚರ್ಯ ಮತ್ತು ಸಂತೋಷ ಎರಡೂ ಆಗುತ್ತಿದೆ. ಆದರೆ, ಇನ್ನೊಂದು ಚೂರು ಜಾಗ್ರತೆ ವಹಿಸಿದ್ದರೆ, ಇಂಗ್ಲಿಷ್‌ನಲ್ಲಿಯೂ 100 ಅಂಕ ಬರುತ್ತಿದ್ದವು. ಆ ಬಗ್ಗೆ ಬೇಸರವಿದೆ’ ಎಂದು ಹೇಳುತ್ತಾಳೆ ಹನ್ಸಿಕಾ.

‘ನಾನು ಯಾವುದೇ ಟ್ಯೂಷನ್‌ಗೆ ಹೋಗಿರಲಿಲ್ಲ. ಆದರೆ, ಟೈಂ ಟೇಬಲ್‌ ಹಾಕಿಕೊಂಡು ಅದನ್ನು ಶಿಸ್ತಿನಿಂದ ಅನುಸರಿಸಿದೆ. ವಿಷಯದ ಬಗೆಗಿನ ಗೊಂದಲಗಳನ್ನು ಶಾಲೆಯಲ್ಲಿ ತಕ್ಷಣಕ್ಕೆ ಪರಿಹರಿಸಿಕೊಳ್ಳುತ್ತಿದ್ದೆ’ ಎಂದು ಹೇಳಿದರು.

ಹನ್ಸಿಕಾ ತಾಯಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದರೆ, ಅವರ ತಂದೆ ರಾಜ್ಯಸಭೆಯಲ್ಲಿ ಕಾರ್ಯದರ್ಶಿಯಾಗಿದ್ದಾರೆ.

ಕರಿಷ್ಮಾಗೂ ಪ್ರಥಮ ಸ್ಥಾನ:ಮುಜಾಫ್ಫರ್‌ನಗರದ ಕರಿಷ್ಮಾ ಅರೋರಾ, 499 ಅಂಕಗಳೊಂದಿಗೆ ಪ್ರಥಮ ಸ್ಥಾನವನ್ನು ಹಂಚಿಕೊಂಡಿದ್ದಾರೆ. ‘ಸತತ ಓದಿನಿಂದ ನಿರಾಳವಾಗಲು ಸಂಗೀತಕ್ಕಿಂತ, ನೃತ್ಯದ ಮೊರೆ ಹೋಗುತ್ತಿದ್ದೆ’ ಎಂದು ಕರಿಷ್ಮಾ ಹೇಳುತ್ತಾರೆ.

ರಿಷಿಕೇಶ್‌ನ ಗೌರಾಂಗಿ ಚಾವ್ಲಾ, ರಾಯ್‌ಬರೇಲಿಯ ಐಶ್ವರ್ಯಾ ಮತ್ತು ಜಿಂದ್‌ನ ಭವ್ಯಾ 498 ಅಂಕಗಳನ್ನು ಗಳಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ದೆಹಲಿಯ ನೀರಜ್‌ ಜಿಂದಾಲ್‌ ಮತ್ತು ಮೇಹಕ್‌ತಲ್ವಾರ್‌ ಸೇರಿದಂತೆ 18 ವಿದ್ಯಾರ್ಥಿಗಳು ತೃತೀಯ
ಸ್ಥಾನದಲ್ಲಿದ್ದಾರೆ.

ಕೇಜ್ರಿವಾಲ್‌ ಪುತ್ರನಿಗೆ ಶೇ 96.4 , ಸ್ಮೃತಿ ಮಗನಿಗೆ ಶೇ 91
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಪುತ್ರ ಪುಲಕಿತ್‌ ಕೇಜ್ರಿವಾಲ್‌ ಶೇ 96.4ರಷ್ಟು ಅಂಕ ಗಳಿಸಿದ್ದಾರೆ.

ನೋಯ್ಡಾದ ಖಾಸಗಿ ಶಾಲೆಯಲ್ಲಿ ಪುಲಕಿತ್‌ ಓದುತ್ತಿದ್ದಾನೆ.

ಕೇಂದ್ರ ಸಚಿವೆ ಸ್ಮೃತಿ ಇರಾನಿ ಪುತ್ರ ಜೋಹರ್‌ ಶೇ 91ರಷ್ಟು ಅಂಕ ಗಳಿಸಿದ್ದಾನೆ. ಉತ್ತಮ ಕ್ರೀಡಾಪಟುವಾಗಿ ಜೋಹರ್‌ ಗುರುತಿಸಿಕೊಂಡಿದ್ದಾನೆ.

*
ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಅಭಿನಂದನೆ. ಅನುತ್ತೀರ್ಣರಾದವರು ಧೃತಿಗೆಡಬೇಕಾಗಿಲ್ಲ. ಪೂರಕ ಪರೀಕ್ಷೆ ಚೆನ್ನಾಗಿ ಬರೆದು ಉತ್ತೀರ್ಣರಾಗಲು ಅವಕಾಶವಿದೆ.
-ಪ್ರಕಾಶ ಜಾವಡೇಕರ್, ಕೇಂದ್ರ ಮಾನವಸಂಪನ್ಮೂಲ ಅಭಿವೃದ್ಧಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT