ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡು: ಕಸ್ಟಡಿ ಸಾವಿಗೆ ತಿರುವು

ಅಂಗಡಿ ಬಳಿಯ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿ ಲಭ್ಯ * ಎಫ್‌ಐಆರ್‌ಗೂ, ದೃಶ್ಯಾವಳಿಗೂ ವ್ಯತ್ಯಾಸ
Last Updated 29 ಜೂನ್ 2020, 16:05 IST
ಅಕ್ಷರ ಗಾತ್ರ

ಚೆನ್ನೈ: ತೂತ್ತುಕುಡಿ ಜಿಲ್ಲೆಯ ಶಾಂತನ್‌ಕುಲನ್‌ನಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ತಂದೆ–ಮಗ ಮೃತಪಟ್ಟಿರುವ ಪ್ರಕರಣಕ್ಕೆ ತಿರುವು ದೊರೆತಿದೆ. ಮೃತರನ್ನು ಪೊಲೀಸರು ಬಂಧಿಸಿದ್ದ ಸ್ಥಳದ ಸಮೀಪದ ಅಂಗಡಿಯಲ್ಲಿನ ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿಗಳು ಲಭ್ಯವಾಗಿದೆ. ಪೊಲೀಸರು ಎಫ್‌ಐಆರ್‌ನಲ್ಲಿ ದಾಖಲಿಸಿರುವ ವಿವರಗಳಿಗೂ, ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿಗಳಿಗೂ ವ್ಯತ್ಯಾಸವಿದೆ. ಪೊಲೀಸರು ಎಫ್‌ಐಆರ್‌ನಲ್ಲಿ ದಾಖಲಿಸಿರುವುದು ಸುಳ್ಳು ಮಾಹಿತಿ ಎಂಬುದು ಪತ್ತೆಯಾಗಿದೆ.

ಮೃತ ಪಿ.ಜಯರಾಜ್ ಮತ್ತು ಅವರ ಮಗ ಇಮಾನ್ಯಯೆಲ್ ಬೆನ್ನಿಕ್ಸ್‌ ಅವರ ಮೊಬೈಲ್ ಅಂಗಡಿ ಸಮೀಪ ಇರುವ ‘ಕಿಂಗ್ಸ್‌ ಎಲೆಕ್ಟ್ರಾನಿಕ್ಸ್’ ಎಂಬ ಅಂಗಡಿಯ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಜೂನ್ 19ರಂದು ನಡೆದ ಎಲ್ಲಾ ಘಟನೆಗಳು ದಾಖಲಾಗಿವೆ.

ಜೂನ್ 19ರ ರಾತ್ರಿ 10 ಗಂಟೆಯಲ್ಲಿ ಶಾಂತನ್‌ಕುಲನ್ ಪೊಲೀಸ್ ಠಾಣೆಯಲ್ಲಿ ಮುಖ್ಯ ಕಾನ್‌ಸ್ಟೆಬಲ್ ಎಸ್‌.ಮುರುಗನ್ ಮತ್ತು ಕಾನ್‌ಸ್ಟೆಬಲ್ ಮುತುರಾಜ್ ನೀಡಿದ ದೂರಿನ ಆಧಾರದ ಮೇಲೆ ಠಾಣೆಯ ಸಬ್‌ಇನ್‌ಸ್ಪೆಕ್ಟರ್‌ ಪಿ.ರಘುಗಣೇಶ್ ಎಫ್‌ಐಆರ್ ದಾಖಲಿಸಿದ್ದಾರೆ.ಅವರನ್ನು ಜೂನ್ 19ರಂದೇ ಬಂಧಿಸಲಾಗಿತ್ತು. 21ರಂದು ಕೋವಿಲ್‌ಪಟ್ಟಿ ಜೈಲಿನಲ್ಲಿ ಇರಿಸಲಾಗಿತ್ತು. ಪೊಲೀಸ್ ಬಂಧನದ ವೇಳೆ ಆಗಿದ್ದ ಗಾಯಗಳ ಕಾರಣ 22ರಂದು ಬೆನ್ನಿಕ್ಸ್, 23ರಂದು ಜಯರಾಜ್ ಮೃತಪಟ್ಟಿದ್ದರು.

ಎಫ್‌ಐಆರ್‌ನಲ್ಲಿ ಏನಿದೆ?

‘ಕೋವಿಡ್‌ ಲಾಕ್‌ಡೌನ್ ಇದ್ದರೂ, ರಾತ್ರಿ ಅಂಗಡಿ ತೆರದಿದ್ದರು.ಅಂಗಡಿ ಎದುರು ಜನದಟ್ಟಣೆ ಇತ್ತು. ಅಲ್ಲಿಂದ ತೆರಳುವಂತೆ ಅವರಿಗೆ ಪೊಲೀಸರು ಸೂಚಿಸಿದರು. ಜಯರಾಜ್ ಮತ್ತು ಬೆನ್ನಿಕ್ಸ್ ಅವರನ್ನು ಹೊರತುಪಡಿಸಿ, ಉಳಿದವರೆಲ್ಲರೂ ಅಲ್ಲಿಂದ ತೆರಳಿದರು. ಆದರೆ ಜಯರಾಜ್ ಮತ್ತು ಬೆನ್ನಿಕ್ಸ್ ರಸ್ತೆಗೆ ಬಂದು, ‘ನಿಮ್ಮ ಕೆಲಸವನ್ನು ನೋಡಿಕೊಳ್ಳಿ’ ಎಂದು ಪೊಲೀಸರಿಗೆ ಬೈದರು. ಅಲ್ಲದೆ ರಸ್ತೆಯ ಮೇಲೆ ಬಿದ್ದು ಹೊರಳಾಡಿದರು. ಆಗ ಅವರಿಗೆ ಗಾಯಗಳಾದವು’ ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.

ದೃಶ್ಯಾವಳಿಯಲ್ಲಿ ಇರುವುದೇನು?

ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಯು, ಎಫ್‌ಐಆರ್ ವಿವರಗಳಿಗೆ ವ್ಯತಿರಿಕ್ತವಾಗಿದೆ.

ಜೂನ್ 19ರ ರಾತ್ರಿ 9.45ರ ಸಮಯದಲ್ಲಿ ಜಯರಾಜ್ ಅವರು ತಮ್ಮ ಮಗ ಬೆನ್ನಿಕ್ಸ್‌ನ ಮೊಬೈಲ್ ಅಂಗಡಿ ಎದುರು ನಿಂತಿದ್ದರು. ಬಿಳಿ ಅಂಗಿ ಮತ್ತು ಪಂಚೆ ತೊಟ್ಟಿದ್ದ ಅವರು, ಫೋನ್‌ನಲ್ಲಿ ಮಾತನಾಡುತ್ತಿದ್ದರು. ಆಗ ಅಲ್ಲಿಗೆ ಪೊಲೀಸ್ ಗಸ್ತು ವಾಹನವೊಂದು ಅಲ್ಲಿಗೆ ಬರುತ್ತದೆ. ಅಂಗಡಿಯಿಂದ ಸ್ವಲ್ಪ ದೂರದಲ್ಲಿ ನಿಲ್ಲುತ್ತದೆ. ಅದರಿಂದ ಇಬ್ಬರು ಪೊಲೀಸ್ ಸಿಬ್ಬಂದಿ ಇಳಿದುಬಂದು, ಜಯರಾಜ್ ಜತೆಗೆ ಮಾತನಾಡುತ್ತಾರೆ. ನಂತರ ಅಲ್ಲಿಂದ ತಮ್ಮ ವಾಹನದತ್ತ ತೆರಳುತ್ತಾರೆ.

ಸ್ವಲ್ಪ ಸಮಯದ ನಂತರ ಪೊಲೀಸರು ಜಯರಾಜ್ ಅವರಿಗೆ ಸನ್ನೆಮಾಡಿ, ತಮ್ಮ ವಾಹನದತ್ತ ಕರೆಯುತ್ತಾರೆ. ಜಯರಾಜ್ ತಕ್ಷಣವೇ ಪೊಲೀಸ್ ವಾಹನದತ್ತ ಹೋಗುತ್ತಾರೆ. ಆಗ ಬೆನ್ನಿಕ್ಸ್ ಅಂಗಡಿಯಿಂದ ಹೊರಬರುತ್ತಾರೆ. ಅಷ್ಟರಲ್ಲೇ ಪೊಲೀಸರು ಜಯರಾಜ್ ಅವರನ್ನು ತಮ್ಮ ವಾಹನದಲ್ಲಿ ಕೂರಿಸಕೊಂಡು ಹೋಗುತ್ತಾರೆ.ಬೆನ್ನಿಕ್ಸ್ ಅಂಗಡಿಯತ್ತ ವಾಪಸ್ ಆಗುತ್ತಾರೆ. ಆನಂತರ ಇನ್ನೊಬ್ಬರ ಜತೆ ಬೈಕ್ ಏರಿ ಹೋಗುತ್ತಾರೆ.

ವ್ಯತ್ಯಾಸಗಳು

* ಅಂಗಡಿ ಮುಂದೆ ಜನದಟ್ಟಣೆ ಇತ್ತು ಎಂದು ಎಫ್‌ಐಆರ್‌ನಲ್ಲಿದೆ. ಅಂಗಡಿ ಮುಂದೆ ಜನದಟ್ಟಣೆ ಇರಲಿಲ್ಲ ಎಂಬುದು ದೃಶ್ಯಾವಳಿಯಲ್ಲಿ ಇದೆ

* ಜಯರಾಜ್ ಮತ್ತು ಬೆನ್ನಿಕ್ಸ್ ವಾಗ್ವಾದ ನಡೆಸಿದರು, ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಎಫ್‌ಐಆರ್‌ನಲ್ಲಿದೆ. ಅಂಗಡಿಯ ಮುಂದೆ ಯಾವುದೇ ವಾಗ್ವಾದ ನಡೆದಿಲ್ಲ ಎಂಬುದನ್ನು ದೃಶ್ಯಾವಳಿಗಳು ಸಾಬೀತುಮಾಡಿವೆ

* ಜಯರಾಜ್ ಮತ್ತು ಬೆನ್ನಿಕ್ಸ್ ರಸ್ತೆಯಲ್ಲಿ ಬಿದ್ದು ಹೊರಳಾಡಿದರು ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ. ಆದರೆ ಜಯರಾಜ್ ಅವರು ಪೊಲೀಸರು ಕರೆದ ತಕ್ಷಣ, ಪೊಲೀಸರ ವಾಹನ ಹತ್ತಿದ್ದು ಮತ್ತು ಬೆನ್ನಿಕ್ಸ್ ದ್ವಿಚಕ್ರ ವಾಹನದಲ್ಲಿ ಪೊಲೀಸ್ ವಾಹನವನ್ನು ಹಿಂಬಾಲಿಸಿದ್ದು ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿಯಲ್ಲಿ ದಾಖಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT