ಎಂಎಚ್‌ಆರ್‌ಡಿ ಎಡವಟ್ಟಿನಿಂದ ಕೇಂದ್ರಕ್ಕೆ ಮುಜುಗರ

7
ಪಿಯು ಹಂತದಲ್ಲಿ ಶಿಕ್ಷಣ ಮೊಟಕುಗೊಳಿಸಿದ ಮಕ್ಕಳ ಬಗ್ಗೆ ತಪ್ಪು ಮಾಹಿತಿ

ಎಂಎಚ್‌ಆರ್‌ಡಿ ಎಡವಟ್ಟಿನಿಂದ ಕೇಂದ್ರಕ್ಕೆ ಮುಜುಗರ

Published:
Updated:
Prajavani

ನವದೆಹಲಿ: ದೇಶದಲ್ಲಿ ಶಾಲಾ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿರುವ ಮಕ್ಕಳ ಸಂಖ್ಯೆ ಬಗ್ಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವೇ (ಎಚ್‌ಆರ್‌ಡಿ) ತಪ್ಪು ಮಾಹಿತಿ ನೀಡುವ ಮೂಲಕ ಕೇಂದ್ರ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿದೆ.

ರಾಯಚೂರು ಸಂಸದ ಬಿ.ವಿ.ನಾಯಕ ಅವರು ಸೋಮವಾರ ಸಂಸತ್‌ನಲ್ಲಿ ಕೇಳಿದ್ದ ಪ್ರಶ್ನೆಗೆ ಎಚ್‌ಆರ್‌ಡಿ ಸಚಿವ ಪ್ರಕಾಶ ಜಾವಡೇಕರ್‌ ಉತ್ತರ ನೀಡಿದ್ದರು.

‘ದೇಶದಲ್ಲಿ ಪದವಿಪೂರ್ವ ಹಂತದಲ್ಲಿ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟ ಮಕ್ಕಳ ಸಂಖ್ಯೆ 2014–15ನೇ ಸಾಲಿನಲ್ಲಿ ಶೇ 4.33ರಷ್ಟಿದ್ದರೆ, 2016–17ನೇ ಸಾಲಿನಲ್ಲಿ ಈ ಪ್ರಮಾಣ ಶೇ 13.09ರಷ್ಟಾಗಿತ್ತು. ಅಂದರೆ, ಮೂರು ವರ್ಷದ ಅವಧಿಯಲ್ಲಿ ಶಾಲೆ ಬಿಟ್ಟ ಮಕ್ಕಳ ಸಂಖ್ಯೆಯಲ್ಲಿ ಶೇ 202ರಷ್ಟು ಹೆಚ್ಚಳವಾಗಿದೆ’ ಎಂದು ಸಚಿವ ಜಾವಡೇಕರ್‌ ಉತ್ತರಿಸಿದ್ದರು.

‘ಕರ್ನಾಟಕದಲ್ಲಿ 2016–17ನೇ ಶೈಕ್ಷಣಿಕ ವರ್ಷದಲ್ಲಿ ಪದವಿಪೂರ್ವ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟ ವಿದ್ಯಾರ್ಥಿಗಳ ಸಂಖ್ಯೆ ಶೇ 99.93ರಷ್ಟಿತ್ತು. ಈ ಪೈಕಿ ಬಾಲಕಿಯರ ಸಂಖ್ಯೆಯೇ ಅಧಿಕವಾಗಿತ್ತು (ಶೇ 99.80)’ ಎಂದೂ ಉತ್ತರ ನೀಡಿದ್ದರು.

ಸಂಸತ್‌ನಲ್ಲಿ ನೀಡಿದ್ದ ಅಂಕಿ–ಅಂಶ ಆಧರಿಸಿ ‘ಪ್ರಜಾವಾಣಿ’ ಬುಧವಾರ ವರದಿಯನ್ನೂ ಪ್ರಕಟಿಸಿತ್ತು. ಆದರೆ, ಸಂಸತ್‌ಗೆ ಎಚ್‌ಆರ್‌ಡಿ ಒದಗಿಸಿದ್ದ ಮಾಹಿತಿಯೇ ತಪ್ಪು ಎಂಬುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ ಎಚ್‌ಆರ್‌ಡಿ ಅಧಿಕಾರಿಗಳನ್ನು ಸಂಪರ್ಕಿಸಿತು. ‘ಸಂಸತ್‌ನಲ್ಲಿ ಮಾಹಿತಿ ಒದಗಿಸುವ ಸಂಬಂಧ ಉತ್ತರ ಸಿದ್ಧಪಡಿಸುವ ಸಂದರ್ಭದಲ್ಲಿ ತಾಂತ್ರಿಕ ದೋಷದಿಂದ ಈ ತಪ್ಪುಗಳು ಕಾಣಿಸಿಕೊಂಡಿವೆ’ ಎಂದು ಅಧಿಕಾರಿಗಳು ಹೇಳಿದರು. ‘ಕರ್ನಾಟಕದಲ್ಲಿ ಪ್ರೌಢ ಮತ್ತು ಪದವಿಪೂರ್ವ ಹಂತದಲ್ಲಿ ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟ ವಿದ್ಯಾರ್ಥಿಗಳ ಮಾಹಿತಿ ನಮ್ಮಲ್ಲಿ ಇಲ್ಲ’ ಎಂದೂ ಅಧಿಕಾರಿಗಳು ಹೇಳಿದರು.

‘ಕರ್ನಾಟಕ ಸರ್ಕಾರ ಭಾಗಶಃ ಮಾಹಿತಿ ನೀಡಿತ್ತು. ಅದನ್ನೇ ವಾರ್ಷಿಕ ಅಂಕಿ–ಅಂಶ ಎಂದು ಪರಿಗಣಿಸಿದ್ದ ಅಧಿಕಾರಿಗಳು ವರದಿಯನ್ನು ಸಿದ್ಧಪಡಿಸಿದ್ದಾರೆ. ಸಂಪೂರ್ಣ ಮಾಹಿತಿ ಪಡೆದು, ಸಂಸದರಿಗೆ ಪೂರಕ ಉತ್ತರ ನೀಡಲು ವರದಿ ಸಿದ್ಧಪಡಿಸುವಂತೆ ಸೂಚಿಸಲಾಗಿದೆ’ ಎಂದು ಎಚ್‌ಆರ್‌ಡಿ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !