ಗುರುವಾರ , ನವೆಂಬರ್ 14, 2019
22 °C
2018-19ನೇ ಸಾಲಿನ ಆರ್ಥಿಕ ಸಾಧನೆ ವರದಿ ಸಂಸತ್‌ನಲ್ಲಿ ಮಂಡನೆ

ಪ್ರಗತಿ ಕನಸಿಗೆ ಸಮೀಕ್ಷೆ ಬಲ

Published:
Updated:

ನವದೆಹಲಿ: ಶುಕ್ರವಾರ ಮಂಡನೆಯಾಗಲಿರುವ 2019-20ನೇ ಹಣಕಾಸು ವರ್ಷದ ಕೇಂದ್ರ ಬಜೆಟ್‌ನ ಮುನ್ನಾದಿನ ಸಂಸತ್‌ನಲ್ಲಿ ಮಂಡಿಸಲಾದ ಆರ್ಥಿಕ ಸಮೀಕ್ಷೆಯು, ಕುಂಠಿತಗೊಂಡಿರುವ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ದಿಟ್ಟ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಬಲವಾಗಿ ಪ್ರತಿಪಾದಿಸಿದೆ.

ಹಿಂದಿನ ಹಣಕಾಸು ವರ್ಷದ (2018–19) ಸಾಧನೆ ಪರಾಮರ್ಶಿಸಿರುವ ಸಮೀಕ್ಷೆಯು, ಸರ್ಕಾರದ ಮುಂದೆ ಇರುವ ಸವಾಲುಗಳನ್ನು ಪಟ್ಟಿ ಮಾಡಿ, ಅವುಗಳನ್ನು ಮೆಟ್ಟಿನಿಲ್ಲಲು ಕೈಗೊಳ್ಳಬೇಕಾದ ಕ್ರಮಗಳನ್ನು ಶಿಫಾರಸು ಮಾಡಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ  ದೇಶಿ ಆರ್ಥಿಕತೆಯು ಹಿಂದಿನ 5 ವರ್ಷಗಳ ಮಂದಗತಿಯಿಂದ ಪುಟಿದೇಳಲಿದೆ ಎಂಬ  ಆಶಾಭಾವವನ್ನೂ ವ್ಯಕ್ತಪಡಿಸಿದೆ.

ಭೂ ಸ್ವಾಧೀನ, ಕಾರ್ಮಿಕರು, ಬ್ಯಾಂಕಿಂಗ್‌ ಮತ್ತು ಬಂಡವಾಳ ಮಾರುಕಟ್ಟೆಯ ದಿಟ್ಟ ಸುಧಾರಣಾ ಕ್ರಮಗಳ ಮೂಲಕ ಕುಂಟುತ್ತಿರುವ ಆರ್ಥಿಕತೆಯಲ್ಲಿನ ಕುಗ್ಗಿರುವ ಹೂಡಿಕೆಗೆ ಚೇತರಿಕೆ ನೀಡುವುದು, ವೆಚ್ಚ ಹೆಚ್ಚಿಸುವುದು ಸಮೀಕ್ಷೆಯ ಕಾರ್ಯಸೂಚಿಯಾಗಿದೆ.

ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್‌ ಅವರು ಸಿದ್ಧಪಡಿಸಿರುವ ಆರ್ಥಿಕ ಸಮೀಕ್ಷಾ ವರದಿಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದರು.

ವೃದ್ಧಿ ದರ: 2018–19ರಲ್ಲಿ ವೃದ್ಧಿ ದರವು ಶೇ 6.8ರಷ್ಟಿತ್ತು. ಇದು 2017–18ರಲ್ಲಿನ ಶೇ 7.2ಕ್ಕಿಂತ ಕಡಿಮೆ ಮಟ್ಟದಲ್ಲಿತ್ತು. ಈ ವರ್ಷ ಆರ್ಥಿಕ ವೃದ್ಧಿ ದರ ಶೇ 7ರಷ್ಟಾಗಲಿದೆ ಎಂದು ಅಂದಾಜಿಸಲಾಗಿದೆ.

ಗರಿಷ್ಠ ಮಟ್ಟದ ವೃದ್ಧಿ ದರವನ್ನು (ಶೇ 8ರಷ್ಟು) ಕಾಯ್ದುಕೊಂಡರೆ ಮಾತ್ರ 2024–25ರ ವೇಳೆಗೆ ಅರ್ಥವ್ಯವಸ್ಥೆಯ ಗಾತ್ರವು ದುಪ್ಪಟ್ಟಾಗಿ ₹ 356 ಲಕ್ಷ ಕೋಟಿಗಳಿಗೆ ತಲುಪಲಿದೆ. ಉಳಿತಾಯ, ಹೂಡಿಕೆ ಮತ್ತು ರಫ್ತು ಹೆಚ್ಚಳಗೊಂಡರೆ ಮಾತ್ರ ಇದು ಸಾಧ್ಯವಾಗಲಿದೆ. ರಾಜಕೀಯ ಸ್ಥಿರತೆಯು ಆರ್ಥಿಕತೆಯಲ್ಲಿ ಉತ್ಸಾಹ ಮೂಡಿಸಲಿದೆ.

ಚಾಲಕ ಶಕ್ತಿ: ಬಂಡವಾಳ ಹೂಡಿಕೆ ಅದರಲ್ಲೂ ವಿಶೇಷವಾಗಿ ಖಾಸಗಿ ವಲಯದ ಹೂಡಿಕೆಯು ಬೇಡಿಕೆಗೆ ಉತ್ತೇಜನ ನೀಡುವ, ಆರ್ಥಿಕತೆಯ ಸಾಮರ್ಥ್ಯ ಏರಿಸುವ, ಕಾರ್ಮಿಕರ ಉತ್ಪಾದಕತೆ ಹೆಚ್ಚಿಸುವ, ಉದ್ಯೋಗ ಸೃಷ್ಟಿಸುವ ಚಾಲಕ ಶಕ್ತಿಯಾಗಿ ಕೆಲಸ ಮಾಡಲಿದೆ.

ಈ ಸಾಲಿನಲ್ಲಿ ಕಚ್ಚಾ ತೈಲ ಬೆಲೆ ಅಗ್ಗವಾಗಲಿರುವುದರಿಂದ ಸರಕು ಮತ್ತು ಸೇವೆಗಳ ಬಳಕೆ ಹೆಚ್ಚಲಿದೆ. ಆದರೆ, ಕೃಷಿ ವಲಯದಲ್ಲಿನ ಚೇತರಿಕೆ, ಕೃಷಿ ಉತ್ಪನ್ನಗಳ ಬೆಲೆ ಪರಿಸ್ಥಿತಿ ಮತ್ತು ಮುಂಗಾರು ಮುನ್ನಡೆಯು ಗ್ರಾಮೀಣ ಬೇಡಿಕೆ ಪ್ರಮಾಣ ನಿರ್ಧರಿಸಲಿವೆ.

ಕುಂಠಿತ ಆರ್ಥಿಕತೆಯು ತೆರಿಗೆ ಸಂಗ್ರಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೆಚ್ಚುತ್ತಿರುವ ಸರ್ಕಾರದ ವೆಚ್ಚವು ವಿತ್ತೀಯ ಕೊರತೆ ಹೆಚ್ಚಿಸುತ್ತಿದೆ.

ವಿತ್ತೀಯ ಕೊರತೆಗೆ ಕಡಿವಾಣ: ಕೇಂದ್ರ ಸರ್ಕಾರವು ವಿತ್ತೀಯ ಕೊರತೆಗೆ ಕಡಿವಾಣ ಹಾಕಿ ವರಮಾನ ಹೆಚ್ಚಿಸುವುದಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡಲಾಗಿದೆ.

ಒಂದು ವೇಳೆ ಸರ್ಕಾರ ವಿತ್ತೀಯ ಕೊರತೆಗೆ ನಿಯಂತ್ರಣ ಹಾಕಲು ಮುಂದಾಗದಿದ್ದರೆ ಸರ್ಕಾರ ಮುಕ್ತ ಮಾರುಕಟ್ಟೆಯಿಂದ ದೊಡ್ಡ ಪ್ರಮಾಣದಲ್ಲಿ ಸಾಲ ಸಂಗ್ರಹಿಸಬೇಕಾಗುತ್ತದೆ. ಇದರಿಂದ ಖಾಸಗಿ ವಲಯದ ಹೂಡಿಕೆ ಗಣನೀಯವಾಗಿ ಕುಸಿಯಲಿದೆ. ಸರ್ಕಾರಿ ವಲ
ಯದ ವೆಚ್ಚ ಏರುಗತಿಯಲ್ಲಿ ಇದ್ದರೆ ಅದು ಖಾಸಗಿ ವಲಯದ ಹೂಡಿಕೆಯನ್ನು ತಗ್ಗಿಸಲಿದೆ ಎಂದು ಎಚ್ಚರಿಸಿದೆ. 

ಸರ್ಕಾರದ ವೆಚ್ಚ ಮತ್ತು ವರಮಾನ ನಡುವಣ ಅಂತರವಾದ ವಿತ್ತೀಯ ಕೊರತೆ ಭರಿಸಲು ಸರ್ಕಾರ ಟ್ರೆಷರಿ ಬಾಂಡ್‌ ಮತ್ತು ಸರ್ಕಾರಿ ಸಾಲಪತ್ರಗಳ ಮಾರಾಟದಿಂದ ಮಾರುಕಟ್ಟೆಯಿಂದ ಸಾಲ ಎತ್ತಲಿದೆ.

ಕಡಿಮೆ ಮಟ್ಟದ ಸಂಬಳ ಮತ್ತು ವೇತನ ಅಸಮಾನತೆಯು ಎಲ್ಲರನ್ನೂ ಒಳಗೊಳ್ಳುವ ಆರ್ಥಿಕತೆಗೆ ಪ್ರಮುಖ ಅಡ್ಡಿಯಾಗಿರಲಿವೆ. ಈ ಪರಿಸ್ಥಿತಿ ದೂರ ಮಾಡಲು ಕಾನೂನು ಸುಧಾರಣೆ, ನೀತಿ ನಿಯಮಗಳಲ್ಲಿ ಸ್ಥಿರತೆ, ದಕ್ಷ ಕಾರ್ಮಿಕ ಮಾರುಕಟ್ಟೆ ಮತ್ತು ತಂತ್ರಜ್ಞಾನದ ಸದ್ಬಳಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದೂ ಸಮೀಕ್ಷೆ ಸಲಹೆ ನೀಡಿದೆ.

ನಿವೃತ್ತಿ ವಯಸ್ಸು ಹೆಚ್ಚಲಿ

ಭಾರತೀಯರ ಜೀವಿತಾವಧಿ ಹೆಚ್ಚುತ್ತಿರುವುದರಿಂದ ಸ್ತ್ರೀ– ಪುರುಷರ ನಿವೃತ್ತಿ ವಯಸ್ಸನ್ನು ಇತರ ದೇಶಗಳಲ್ಲಿ ಇರುವಂತೆ ನಮ್ಮಲ್ಲೂ ಹೆಚ್ಚಿಸಬೇಕು ಎಂದು ಕೆ. ವಿ. ಸುಬ್ರಮಣಿಯನ್‌ ನೇತೃತ್ವದಲ್ಲಿನ ತಂಡವು ಸಿದ್ಧಪಡಿಸಿರುವ ಸಮೀಕ್ಷೆ ಅಭಿಪ್ರಾಯಪಟ್ಟಿದೆ.

ಪ್ರಾಥಮಿಕ ಶಾಲೆಗಳ ವಿಲೀನ

5ರಿಂದ 14 ವಯಸ್ಸಿನ ಮಕ್ಕಳ ಜನಸಂಖ್ಯೆಯು ಕಡಿಮೆ ಆಗುತ್ತಿರುವುದರಿಂದ ಪ್ರಾಥಮಿಕ ಶಾಲೆಗಳನ್ನು ವಿಲೀನಗೊಳಿಸುವುದು ಆರ್ಥಿಕವಾಗಿ ಹೆಚ್ಚು ಲಾಭಕರ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಪ್ರಾಥಮಿಕ ಶಿಕ್ಷಣಕ್ಕೆ ಮಾಡುವ ವೆಚ್ಚ ಕಡಿಮೆ ಮಾಡಬೇಕು ಎಂದೇನೂ ಇದರ ಅರ್ಥವಲ್ಲ ಎಂದು ಸ್ಪಷ್ಟಪಡಿಸಿದೆ.

ಇಂದು ಬಜೆಟ್‌

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ತಮ್ಮ ಚೊಚ್ಚಲ ಬಜೆಟ್ ಮಂಡಿಸಲಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎರಡನೇ ಅವಧಿಗೆ ಆಯ್ಕೆಯಾದ ಬಳಿಕ ಮಂಡನೆಯಾಗುತ್ತಿರುವ ಮೊದಲ ಬಜೆಟ್ ಇದು. ರೈಲ್ವೆ ಬಜೆಟ್ಟನ್ನೂ ಒಳಗೊಂಡ ಹಣಕಾಸು ಬಜೆಟ್‌ ಬೆಳಗ್ಗೆ 11 ಗಂಟೆಗೆ ಲೋಕಸಭೆಯಲ್ಲಿ ಮಂಡನೆಯಾಗಲಿದೆ.

ತೆರಿಗೆ ಪಾವತಿಸುವವರಿಗೆ ಗೌರವ

ನಿಯಮಿತವಾಗಿ ತೆರಿಗೆ ಪಾವತಿಸುವ ವ್ಯಕ್ತಿಗಳನ್ನು ಗೌರವಿಸಿದರೆ ತೆರಿಗೆ ವ್ಯವಸ್ಥೆಯನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಆರ್ಥಿಕ ಸಮೀಕ್ಷೆ ಸಲಹೆ ನೀಡಿದೆ. ಪ್ರತೀ ಜಿಲ್ಲೆಯಲ್ಲಿ ತಲಾ 10 ಮಂದಿ ತೆರಿಗೆ ಪಾವತಿದಾರರನ್ನು ಗುರುತಿಸಿ, ಅವರಿಗೆ ವಿಮಾನ ನಿಲ್ದಾಣ, ವಲಸೆ ಕೇಂದ್ರ ಮೊದಲಾದ ಕಡೆ ಗಣ್ಯರ ಸವಲತ್ತು ಕಲ್ಪಿಸುವುದು, ರಸ್ತೆ, ಕಟ್ಟಡಗಳಿಗೆ ತೆರಿಗೆದಾರರ ಹೆಸರಿಡುವಂತಹ ಕಾರ್ಯಕ್ರಮಗಳನ್ನು ಕೇಂದ್ರ ಹಮ್ಮಿಕೊಳ್ಳುವ ಸಾಧ್ಯತೆಯಿದೆ. 

***

ಕಚ್ಚಾ ತೈಲ ಬೆಲೆ ಅಗ್ಗವಾಗುವ ನಿರೀಕ್ಷೆ ಇರುವುದರಿಂದ ಹಣದುಬ್ಬರಕ್ಕೆ ಕಡಿವಾಣ ಬೀಳಲಿದೆ. ಜನರ ಉಳಿತಾಯವೂ ಹೆಚ್ಚಲಿದೆ.

– ನಿರ್ಮಲಾ ಸೀತಾರಾಮನ್‌, ಕೇಂದ್ರ ಹಣಕಾಸು ಸಚಿವೆ

ವಿತ್ತೀಯ ಕೊರತೆಗೆ ಮಿತಿ ಹಾಕಲು ಬದ್ಧತೆ ತೋರುವುದು ಹೆಚ್ಚು ಮಹತ್ವದ್ದಾಗಿದೆ. ಇಲ್ಲದಿದ್ದರೆ ಖಾಸಗಿ ಹೂಡಿಕೆ ಇನ್ನಷ್ಟು ಕುಸಿಯಲಿದೆ.

– ಕೆ. ವಿ. ಸುಬ್ರಮಣಿಯನ್‌, ಮುಖ್ಯ ಆರ್ಥಿಕ ಸಲಹೆಗಾರ

‘₹35 ಲಕ್ಷ ಕೋಟಿ ಮೌಲ್ಯದ ಆರ್ಥಿಕತೆಯನ್ನು ಸಾಧಿಸುವ ಮಾರ್ಗಗಳನ್ನು 2019ರ ಆರ್ಥಿಕ ಸಮೀಕ್ಷೆ ಕಟ್ಟಿಕೊಟ್ಟಿದೆ. ಮುಂದಿನ ಐದು ವರ್ಷಗಳಲ್ಲಿ ಇದನ್ನು ಸಾಧ್ಯವಾಗಿಸಬೇಕಾದರೆ, ಅಭಿವೃದ್ಧಿ ದರವನ್ನು ಶೇ 8ಕ್ಕೆ ಏರಿಸುವ ಅಗತ್ಯವಿದೆ

–ನರೇಂದ್ರ ಮೋದಿ, ಪ್ರಧಾನಿ

ಪ್ರತಿಕ್ರಿಯಿಸಿ (+)