ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಚೇಲರ ದಿಲ್ಲಿಯ ನಡುವೆ ಕುಬೇರರ ಸ್ವರ್ಗ

Last Updated 3 ಮಾರ್ಚ್ 2018, 9:39 IST
ಅಕ್ಷರ ಗಾತ್ರ

ಒಂದು ಭಾರತದಲ್ಲಿ ಹಲವು ಭಾರತಗಳು ಅಡಗಿ ಪರಸ್ಪರ ಅಂತರ್ವಿರೋಧ ಮತ್ತು ತೀವ್ರ ಅಸಮಾನತೆಯಲ್ಲಿ ಏಕಕಾಲಕ್ಕೆ ಸಮೀಪ ಚಲಿಸುತ್ತಲೂ ದೂರ ಸರಿಯುತ್ತಲೂ ತುಳಿಯುತ್ತಲೂ ತುಳಿಸಿಕೊಳ್ಳುತ್ತಲೂ ಬದುಕಿವೆ. ಈ ಅಂತರ್ವಿರೋಧ ಮತ್ತು ಅಸಮಾನತೆಯ ಅಂತರ ಆಕ್ರೋಶವಾಗಿ ಸಿಡಿಯದಂತೆ ಅದುಮಿಟ್ಟಿರುವ ಮುಖ್ಯ ಅಂಶಗಳು ಜಾತಿ ವ್ಯವಸ್ಥೆ ಮತ್ತು ಕರ್ಮ ಸಿದ್ಧಾಂತ. ಹಲವು ಭಾರತಗಳು ಸ್ಥೂಲವಾಗಿ ಮತ್ತು ಅಂತಿಮವಾಗಿ ಮೇಲ್ನೋಟಕ್ಕೆ ಪ್ರಕಟಗೊಳ್ಳುವುದು ಎರಡು ಭಾರತಗಳಾಗಿ. ಒಂದು ಉಳ್ಳವರ ಸಿರಿವಂತ ಭಾರತವಾದರೆ, ಮತ್ತೊಂದು ಇಲ್ಲದವರ ಬಡ ಭಾರತ.

ದೆಹಲಿ ದೇಶದ ರಾಜಧಾನಿಯೇ ಇರಬಹುದು. ಆದರೆ, ಶೇಷ ಭಾರತದ ಪ್ರತಿಬಿಂಬ. ದೇಶದ ಅತ್ಯಂತ ಸಿರಿವಂತ ರಾಜ್ಯವಿದು ಎಂದು ಕಾಲಕಾಲಕ್ಕೆ ಸಮೀಕ್ಷೆಗಳು ಸಾರುತ್ತ ಬಂದಿವೆ. ಆರ್ಥಿಕ ಉದಾರೀಕರಣ ಭಾರತದ ಎಲ್ಲೆಡೆಯಂತೆ ದೆಹಲಿಯಲ್ಲೂ ಶ್ರೀಮಂತರ ತಿಜೋರಿಗಳಿಗೆ ಹೆಚ್ಚು ಹೆಚ್ಚು ಸಂಪತ್ತು ಹರಿಸಿದೆ. ಬಡವರು ಮತ್ತು ಬಲ್ಲಿದರ ನಡುವಿನ ಕಂದಕವನ್ನು ಇನ್ನಷ್ಟು ಆಳವೂ ಅಗಲವೂ ಆಗಿಸಿದೆ.

ಬೆಳಕಿನ ಭವ್ಯ ದೆಹಲಿಯನ್ನು ಕಣ್ಣ ತುಂಬಿಸಿಕೊಂಡು ಮರಳುವ ಪ್ರವಾಸಿಗರಿಗೆ ರಾಜಧಾನಿಯ ಕಲ್ಲು ಹೃದಯ, ಕತ್ತಲ ಕ್ರೌರ್ಯ ಕಾಣುವುದೇ ಇಲ್ಲ. ಇಲ್ಲಿ ಸಿರಿತನ, ಬಡತನಗಳ ನಡುವೆ ನೆಲ– ಮುಗಿಲುಗಳಷ್ಟೇ ಅಂತರವಿದ್ದರೂ ಐಸಿರಿ ಆಡಂಬರದ ಅಟ್ಟಹಾಸಕ್ಕೆ ಅರಳುವ ಕಣ್ಣುಗಳು, ಹಸಿವು ಸಂಕಟಗಳ ಲೋಕಕ್ಕೆ ತೆರೆಯುವುದು ಸುಲಭ ಅಲ್ಲ.

2011ರ ಜನಗಣತಿ ಪ್ರಕಾರ ದೆಹಲಿಯ ಜನಸಂಖ್ಯೆ 1.67,87,941. ಈ ಪೈಕಿ 39 ಲಕ್ಷ ಮಂದಿ ಕೊಳೆಗೇರಿಗಳಲ್ಲಿ ವಾಸಿಸುತ್ತಾರೆ. ಸರ್ಕಾರೇತರ ಅಂಕಿ– ಅಂಶಗಳ ಪ್ರಕಾರ ಈ ಸಂಖ್ಯೆ 80 ಲಕ್ಷ. 695 ಕೊಳೆಗೇರಿಗಳು, 1,797 ಅಕ್ರಮ ಕಾಲೊನಿಗಳು, 362 ನಗರ ಗ್ರಾಮಗಳಲ್ಲಿ ಮೂಲಭೂತ ನಾಗರಿಕ ಸೌಲಭ್ಯಗಳಿಲ್ಲದೆ ಬದುಕುತ್ತಾರೆ. ತಲೆ ಮೇಲೆ ಸೂರಿಲ್ಲದ ಬಡವರು ರಾತ್ರಿಯೊಂದಕ್ಕೆ 30 ರೂಪಾಯಿ ಬಾಡಿಗೆ ತೆತ್ತು ಕಂಬಳಿ ಪಡೆದು ಪಾರ್ಕಿಂಗ್ ತಾಣಗಳಲ್ಲಿ ಮಲಗುತ್ತಾರೆ. ಯೋಜನಾ ಆಯೋಗದ ಪ್ರಕಾರ ಇವರ‍್ಯಾರು ಬಡವರಲ್ಲ. ಇಲ್ಲಿನ ಶೇ 60ರಷ್ಟು ದೆಹಲಿ ನಿವಾಸಿಗಳ ಮಾಸಿಕ ಆದಾಯ 13,500 ರೂಪಾಯಿಗಿಂತಲೂ ಕಡಿಮೆ.

ದಿಲ್ಲಿಯ ದುಡಿಯುವ ವರ್ಗಗಳ ಪೈಕಿ ಶೇ 82ರಷ್ಟು ಮಂದಿ ಅಸಂಘಟಿತ ವಲಯಗಳ ಉದ್ಯೋಗಿಗಳು. ಅವರ ಆರ್ಥಿಕ ಸ್ಥಿತಿಗತಿ ಹೀನಾಯ. ಉದ್ಯೋಗ ರಕ್ಷಣೆಯಾಗಲೀ, ರಜೆಯ ಸೌಲಭ್ಯವಾಗಲೀ ಅವರ ಪಾಲಿಗೆ ಕನ್ನಡಿಯ ಗಂಟು. ಸಣ್ಣಪುಟ್ಟ ಹಣಕಾಸು ಚಟುವಟಿಕೆ ನಡೆಸಿಕೊಂಡಿರುವ ದಿಲ್ಲಿಯ ಮುಂಗಟ್ಟುಗಳ ಸಂಖ್ಯೆ ಒಂಬತ್ತು ಲಕ್ಷ. 2013ರ ಆರ್ಥಿಕ ಸಮೀಕ್ಷೆಯ ಪ್ರಕಾರ ಈ ಮುಂಗಟ್ಟುಗಳಲ್ಲಿ ಕೆಲಸ ಮಾಡಿಕೊಂಡಿರುವವರು 29 ಲಕ್ಷ ಮಂದಿ. ದಿನನಿತ್ಯ ಬದುಕಿ ಉಳಿಯಲು ಹೋರಾಟವನ್ನೇ ಮಾಡಬೇಕಿರುವ ಈ ಜನವರ್ಗ ಕೊಂಪೆ ಕೂಪಗಳಲ್ಲಿ ನೀರು, ವಿದ್ಯುಚ್ಛಕ್ತಿಗಾಗಿ ಬಡಿದಾಡುತ್ತಿದ್ದಾರೆ. ಅಧಿಕಾರಸ್ಥರು, ಪೊಲೀಸರು ಇವರನ್ನು ಕಿತ್ತು ತಿನ್ನುತ್ತಾರೆ.

ಉಗ್ರ ಚಳಿ, ಬಿಸಿಲು ವರ್ಷ ವರ್ಷ ನೂರಾರು ಜೀವಗಳ ಬಲಿ ಪಡೆಯುವ ಬಗ್ಗೆ ಪತ್ರಿಕೆಗಳಲ್ಲಿ ಓದಿ ಮರೆಯುವುದು ಸಾಧಾರಣ ಸಂಗತಿ. ಜನವರಿಯಲ್ಲಿ ಎಲುಬು ಕೊರೆದು ಗದಗುಟ್ಟಿಸುತ್ತದೆ ದೆಹಲಿ ಚಳಿ. ಬೆಚ್ಚನೆಯ ಮನೆ, ವೆಚ್ಚಕ್ಕೆ ಹೊನ್ನು, ಹೊಟ್ಟೆ ಬಿರಿಯೆ ತಿಂಡಿ ತೀರ್ಥ ಇದ್ದವರಿಗೆ ಮೋಜು ಮಜೆ. ತಲೆ ಮೇಲೊಂದು ಸೂರು ಬಿಡಿ, ಹಾಸಲು ಹೊದೆಯಲು ಉಡಲು ಉಣ್ಣಲು ಕೂಡ ಇಲ್ಲದ ದಟ್ಟ ದರಿದ್ರರ ಪಾಲಿಗೆ ನೋವು ಸಾವಿನ ಸಜೆ. ಕಳೆದ ತಿಂಗಳು ಕೆಲವೇ ದಿನಗಳು ಬೀಸಿದ ಶೀತ ಮಾರುತ 44 ಬಡ ಜೀವಗಳ ಬಲಿ ತೆಗೆದುಕೊಂಡಿತು. ಹಿಂದಿನ ವರ್ಷ ಈ ಸಂಖ್ಯೆ 164 ದಾಟಿತ್ತು. ಈ ಪೈಕಿ 150 ಕಳೇಬರಗಳ ಗುರುತು ಪತ್ತೆಯೇ ಆಗಲಿಲ್ಲ.

ಮುಂದಿನ ಚಳಿಗಾಲ ಹೊಸ ಸಾವುಗಳು... ಹೊಸ ಆರೋಪಗಳು. ಕೊನೆಯಿಲ್ಲದ ಸರಣಿಯಿದು. ದೇಶದ ರಾಜಧಾನಿಯಲ್ಲಿ ಬೀದಿಬದಿ ಬದುಕಿರುವವರು ಎರಡೂವರೆ ಲಕ್ಷ ಮಂದಿ ಎಂದು ಸುಪ್ರೀಂ ಕೋರ್ಟ್ ನಿರ್ದೇಶಿತ ಸಮೀಕ್ಷೆ ಹೇಳುತ್ತದೆ.

ಜನತಂತ್ರದ ಪರಮಪವಿತ್ರ ದೇಗುಲವೆಂದು ಪ್ರಧಾನಿ ಮಂಡಿಯೂರಿದ ಪಾರ್ಲಿಮೆಂಟ್ ಕಟ್ಟಡದಿಂದ ಗುರುದ್ವಾರ ಬಂಗಲಾಸಾಹೇಬ್ ಬಹಳ ದೂರವೇನಿಲ್ಲ. ಜಮುನಾ ನದಿ ದಾಟಿ ಪೂರ್ವ ದೆಹಲಿ ತಲುಪಲು ಕಟ್ಟಿರುವ ಪ್ರಸಿದ್ಧ ಐಟಿಒ ಸೇತುವೆ, ಅದರ ನೆರೆಹೊರೆಯ ಹಲವು ಫ್ಲೈಓವರ್‌ಗಳು, ಹಗಲು ಹೊಳೆಯುವ ಕನಾಟ್ ಪ್ಲೇಸ್ ಮತ್ತು ಅದರ ಸಂದಿಗೊಂದಿಗಳ ಕತ್ತಲ ಕೂಪಗಳು ಕೂಡ ಸಂಸತ್ ಭವನದ ನೆರೆಹೊರೆಯಲ್ಲೇ ಇವೆ. ಗದಗುಟ್ಟಿಸುವ ಚಳಿ, ಮೈಸುಡುವ ಮೆದುಳಿಗೆ ಬೆಂಕಿ ಇಕ್ಕುವ ಬೇಸಿಗೆ ಧಗೆಯ ರಾತ್ರಿಗಳಲ್ಲಿ ರಸ್ತೆ ಬದಿಗಳಲ್ಲಿ, ರೋಡ್ ಡಿವೈಡರ್‌ಗಳ ಮೇಲೆ, ಭಾರೀ ಹೆಬ್ಬಾವುಗಳಂತೆ ಮೈ ಚಾಚಿದ ಫ್ಲೈ ಓವರ್‌ಗಳ ಕೆಳಗೆ ಹಸಿದು ಬಸವಳಿದು ನಿದ್ದೆಯನ್ನು ಅರಸುವ ಮನುಷ್ಯ ಜೀವಿಗಳು ಸಾವಿರ ಸಾವಿರ. ಚಳಿಯ ಕೊರೆತದ ಬಾಧೆ ತಾಳಲಾರದೆ ಬೀದಿನಾಯಿಗಳಿಗೂ ಚಿಂದಿ ಹೊದಿಸಿ ಬದಿಗೆ ಮಲಗಿಸಿಕೊಳ್ಳುವ ನಿಕೃಷ್ಟ ಬದುಕುಗಳಿವು.

ಎಷ್ಟೇ ಕಾಡಿದರೂ ದೆಹಲಿ ಚಳಿ- ಧಗೆಗೆ ಸ್ವತಂತ್ರವಾಗಿ ತಾನೇ ಕೊಲ್ಲುವ ಶಕ್ತಿ ಇಲ್ಲ. ಹಸಿವು ಬೇನೆಗಳಿಂದ ಸೊರಗಿದ ದೇಹಗಳು ಶೀತ ಮಾರುತಗಳು- ಉಷ್ಣೋಗ್ರತೆಯ ಹೊಡೆತ ಸಹಿಸದೆ ಶರಣಾಗಿಬಿಡುತ್ತವೆ. ಇಂತಹ ನೂರಾರು ಅನಾಥ ಕಳೇಬರಗಳ ಅಂತ್ಯ ಸಂಸ್ಕಾರದ ಜವಾಬ್ದಾರಿಯನ್ನು ಸರ್ಕಾರ ಬಲು ದಕ್ಷತೆಯಿಂದ ನಿರ್ವಹಿಸಿಬಿಡುತ್ತದೆ!

ಹಾಲುಗಲ್ಲದ ಅಮಾಯಕ ಮಕ್ಕಳು ಚಳಿಯಲ್ಲಿ ನಡುಗುತ್ತ ಚಿಂದಿ ಆಯ್ದು ಹೊಟ್ಟೆ ಹೊರೆಯುವ ದಾರುಣ ದೃಶ್ಯಗಳು ಇಲ್ಲಿ ಹೇರಳ. ಹಸಿವನ್ನು ಕೊಲ್ಲಲು, ಮೈ ಮರಗಟ್ಟಿಸಿಕೊಂಡು ಚಳಿಯನ್ನು ದೂರವಿಡಲು ಈ ಮಕ್ಕಳು ಅಗ್ಗದ ಮಾದಕ ದ್ರವ್ಯಗಳನ್ನು ತಿನ್ನುವುದು ಮಾನವೀಯತೆಯ ಘೋರ ಹತ್ಯೆಗೆ ದೊರೆಯುವ ಹಸಿ ಹಸಿ ಸಾಕ್ಷ್ಯ.

ಯೂನಿಸೆಫ್ ವರದಿ ಪ್ರಕಾರ ಮನೆಯಿಲ್ಲದೆ ಬೀದಿಗೆ ಬಿದ್ದ ಮಕ್ಕಳ ಸಂಖ್ಯೆ ಒಂದು ಲಕ್ಷ. ಈ ಪೈಕಿ ಮೂರನೆಯ ಒಂದರಷ್ಟು ಮಕ್ಕಳ ವಯಸ್ಸು 6ರಿಂದ 10 ವರ್ಷ.

ತಲೆ ಮೇಲೆ ಅಭಯ ಹಸ್ತವಿಟ್ಟು ರಕ್ಷಿಸಬೇಕಾದ ಪೊಲೀಸರ ಪಾಲಿಗೆ ಈ ಮಕ್ಕಳು ಹಿಂಸಿಸಿ ಪಳಗಿಸಬೇಕಾದ ಪುಟ್ಟ ಪಾತಕಿಗಳು!

ಉಳ್ಳವರ ‘ಅಭಿವೃದ್ಧಿ’ಗಾಗಿ ತಮ್ಮ ಬಡಗೂಡುಗಳನ್ನು ಕೈಯಾರೆ ಒಡೆಯಬೇಕು. ಇಲ್ಲವೇ ಬುಲ್ಡೋಜರುಗಳ ಅಡಿ ಹುಡಿಯಾಗಲು ಬಿಡಬೇಕು. ನಗರದ ಅಂದ ಚೆಂದಕ್ಕೆ ಕಣ್ಣು ಕಿಸುರೆನಿಸುವ ಗರೀಬರ ಬಸ್ತಿಗಳ ಖಾಲಿ ಮಾಡಿಸಲು ಪೊಲೀಸರೇ ಮುಂದೆ ನಿಂತು ಬೆಂಕಿ ಇಟ್ಟದ್ದುಂಟು. ಕಾಲ್ತುಳಿತದಲ್ಲಿ ಚಿಕ್ಕಮಕ್ಕಳು ಸತ್ತದ್ದುಂಟು. ‘ಮನೆ’ ಕಳೆದುಕೊಂಡ ಆಘಾತ ತಾಳದೆ ಆತ್ಮಹತ್ಯೆ ಮಾಡಿಕೊಂಡವರು ಉಂಟು. ಎದೆಬಡಿದುಕೊಂಡು ದುಃಖಿಸಲು, ಕಣ್ಣೀರು ಸುರಿಸಲು ಸಮಯವಿರದು. ಕಬ್ಬಿಣದ ಸರಳುಗಳು, ಇಟ್ಟಿಗೆಗಳು, ಕಿಟಕಿ, ಬಾಗಿಲುಗಳು ಹೀಗೆ ಅಳಿದುಳಿದದ್ದನ್ನು ಬಾಚಿಕೊಂಡು ಬಹುದೂರದ ನಿರ್ಜನ ಬೆಂಗಾಡುಗಳಿಗೆ ತೊಲಗಬೇಕು. ಕೆಡವಿದ ಬದುಕುಗಳನ್ನು ಅಲ್ಲಿ ಮರಳಿ ದೂಳಿನಿಂದೆದ್ದು ಕಟ್ಟಿಕೊಳ್ಳಬೇಕು. ದುಡಿಮೆ ದೊರೆಯದಿದ್ದರೆ ಬೆಂಗಾಡು ತೊರೆದು ಹಳ್ಳಿಗಾಡಿಗೇ ಮರಳಬೇಕು. ಎಪ್ಪತ್ತರ ದಶಕಗಳಲ್ಲಿ ಬಡಜನರಿಗೆಂದು ನಗರದ ಹೊರವಲಯದಲ್ಲಿ ವಿಶಾಲ ಎನ್ನಬಹುದಾದ ಮರುವಸತಿ ನೀಡಿದ್ದುಂಟು. ಈ ‘ಔದಾರ್ಯ’ ಆನಂತರ ಮುಂದುವರಿಯಲಿಲ್ಲ.

ಯಮುನಾ ನದಿ ತೀರದಿಂದ ಹತ್ತಾರು ಸಾವಿರ ನಿರ್ಗತಿಕ ಕುಟುಂಬಗಳನ್ನು ಕ್ರೂರವಾಗಿ ಒಕ್ಕಲೆಬ್ಬಿಸಿದ ನಂತರ ಅದೇ ಜಾಗೆಯ 60 ಎಕರೆಗಳಲ್ಲಿ ಮೇಲೆದ್ದದ್ದು ಭವ್ಯ ಅಕ್ಷರಧಾಮ ಸ್ವಾಮಿನಾರಾಯಣ ಮಂದಿರ ಮತ್ತು 157 ಎಕರೆಯಲ್ಲಿ ರೂಪು ತಳೆದದ್ದು ಕಾಮನ್ವೆಲ್ತ್ ಕ್ರೀಡಾ ಗ್ರಾಮ, ಸಿರಿವಂತರು ಖರೀದಿಸಿದ ಹಲವು ಕೋಟಿ ರೂಪಾಯಿ ಬೆಲೆಯ ನೂರಾರು ಫ್ಲ್ಯಾಟುಗಳು, ಫ್ಲೈ ಓವರುಗಳು, ಮೆಟ್ರೋ ರೈಲು ಮಾರ್ಗ ಇತ್ಯಾದಿಗಳು. ಸುತ್ತಮುತ್ತಲಿನ ಸಾಧಾರಣ ಮನೆಮಠ ಆಪಾರ್ಟ್‌ಮೆಂಟುಗಳ ಬೆಲೆ ಕೂಡ ಕೋಟಿ ರೂಪಾಯಿ ದಾಟಿದೆ. ಆದರೆ ಇಲ್ಲಿದ್ದ ಕುಟುಂಬಗಳು ಎಲ್ಲಿ ಮಾಯವಾದವೆಂದು ಯಾರಿಗೂ ಗೊತ್ತಿಲ್ಲ. ನ್ಯಾಯಾಲಯಗಳೂ ಇವರ ನೆರವಿಗೆ ಬರಲಿಲ್ಲ.

ಆದರೆ, ಸೈನಿಕ್ ಫಾರ್ಮ್ ಸೇರಿದಂತೆ ದಕ್ಷಿಣ ದೆಹಲಿಯ ಹಲವೆಡೆ ರಾಜಕಾರಣಿಗಳು, ಹಿರಿಯ ಅಧಿಕಾರಿಗಳು, ಉದ್ಯಮಿಗಳು, ಇತರೆ ಪ್ರತಿಷ್ಠಿತ ಕುಳಗಳು ಕಟ್ಟಿಕೊಂಡಿರುವ 37ಕ್ಕೂ ಹೆಚ್ಚು ಮೇಲ್ವರ್ಗದ ವಸತಿ ಬಡಾವಣೆಗಳನ್ನು ಅಕ್ರಮ ಎಂದು ಸರ್ಕಾರವೇ ಸಾರಿದ್ದರೂ ಅವುಗಳನ್ನು ಕೆಡವುವ ಧೈರ್ಯ ಯಾರಿಗೂ ಇಲ್ಲ. ಝುಗ್ಗಿ ಜೋಪಡಿಗಳಿಗೆ ಅನ್ವಯ ಆಗುವ ಕಾನೂನು ಮಹಲುಗಳ ಕೂದಲನ್ನೂ ಕೊಂಕಿಸಲಾರವು.

ಸುಡುಬೇಸಿಗೆ ಮತ್ತು ಕೊರೆವ ಚಳಿಯಲ್ಲಿ ಸೈಕಲ್ ರಿಕ್ಷಾ ತುಳಿದು ಹೊಟ್ಟೆ ಹೊರೆಯುವ ಬಡಪಾಯಿಗಳು ಸುಮಾರು ಹತ್ತು ಲಕ್ಷ ಮಂದಿ. ಬೀದಿ ಬೀದಿ ತಿರುಗಿ ತರಕಾರಿ, ಹಣ್ಣು, ಸರಕು ಸಾಮಗ್ರಿ ಮಾರುವವರು ಇನ್ನೂ ಹತ್ತು ಲಕ್ಷ. ಇವರು ಎದುರಿಸುವ ಕಿರುಕುಳ, ಅವಹೇಳನಕ್ಕೆ ಎಲ್ಲೆಯೇ ಇಲ್ಲ. ಇವರಿಂದ ವರ್ಷವೊಂದಕ್ಕೆ ವಸೂಲು ಮಾಡಲಾಗುವ ಲಂಚದ ಹಣ ಹತ್ತಿರ ಹತ್ತಿರ ₹ 1,300 ಕೋಟಿ ಎಂದು ‘ಮಾನುಷಿ’ ಸಂಸ್ಥೆ ಅಂದಾಜು ಮಾಡಿದೆ.

ಹಸಿವು ಅವಮಾನದ ಅನಾಥ ದೆಹಲಿಯ ನೆರೆಹೊರೆಯ ವಾಸ್ತವಗಳಿಗೆ ಕುರುಡಾಗಿ ಬದುಕುತ್ತದೆ ವಿಲಾಸಿ ದೆಹಲಿ. ಲಕ್ಷಾಂತರ ನಿರ್ಗತಿಕರು ಕೊಳೆಗೇರಿಗಳ ನರಕ ಕೂಪಗಳಲ್ಲಿ, ರಸ್ತೆಬದಿಯಲ್ಲಿ ಫ್ಲೈಓವರುಗಳಡಿ ಆತಂಕದಿಂದ ಮೈಚಾಚುವ ಇದೇ ಮಹಾನಗರದ ಪಂಚತಾರಾ ಹೋಟೆಲಿನಲ್ಲಿ ಮಲಗಲು ರಾತ್ರಿಯೊಂದಕ್ಕೆ ಐದೂವರೆ ಲಕ್ಷ ರೂಪಾಯಿ (ತೆರಿಗೆ ಪ್ರತ್ಯೇಕ) ತೆರುವವರಿದ್ದಾರೆ.

ಮಹಾರಾಜರು ಮರೆಯಾಗಿದ್ದರೂ ಪಂಚತಾರಾ ಹೋಟೆಲ್‌ಗಳಲ್ಲಿ ಮಹಾರಾಜಾ ಸ್ವೇಟ್‌ಗಳು ಈಗಲೂ ಮೆರೆಯುತ್ತಿವೆ. ರಾಯಭಾರಿ ಕಚೇರಿಗಳ ತಾಣ ಚಾಣಕ್ಯಪುರಿಯ ಹೋಟೆಲ್ ಲೀಲಾ ಪ್ಯಾಲೇಸ್‌ನ ಈ ಸ್ವೇಟ್‌ನಲ್ಲಿ ಎರಡು ಕೋಣೆಗಳು, ಒಂದು ಜಿಮ್, ಜೀವಕ್ಕೆ ಹಾಯೆನಿಸುವ ಅಂಗಮರ್ದನಸಹಿತ ಹಬೆ ಸ್ನಾನಗಳು, ಮೀಸಲು ಬಾಣಸಿಗನ ಜೊತೆಗೆ ಪ್ರತ್ಯೇಕ ಅಡುಗೆ ಕೋಣೆ. ಓಡಾಟಕ್ಕೆ ರೋಲ್ಸ್ ರಾಯ್ಸ್ ಕಾರು, ಅಧ್ಯಯನದ ಕೋಣೆ, ಬುಲೆಟ್ ಪ್ರೂಫ್ ಗಾಜಿನ ಕಿಟಕಿಗಳು. ಮತ್ತೊಂದು ಪಂಚತಾರಾ ಹೋಟೆಲ್ ಮೌರ್ಯ ಐಟಿಸಿಯಲ್ಲಿ ರಾತ್ರಿಯೊಂದಕ್ಕೆ ಐದು ಲಕ್ಷ ರೂಪಾಯಿ ಬಾಡಿಗೆಯ ಕೋಣೆ ಲಭ್ಯ.

ಪ್ರಾಡಾ, ಗುಚ್ಚಿಯಂತಹ ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳ ಸಿದ್ಧಉಡುಪು ಧರಿಸಿದ ಯುವಜನ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಲ್ಯಾಂಬೋರ್ಘಿನಿ, ಜಾಗ್ವಾರ್, ಪೋರ್ಷ್ ಕಾರುಗಳಿಂದ ಇಳಿದು ಪಂಚತಾರಾ ಮಧುಶಾಲೆಗಳು- ಮಾದಕ ದ್ರವ್ಯಗಳ ಅಡ್ಡೆಗಳ ಮತ್ತಿನ ಇರುಳುಗಳಲ್ಲಿ ಬೆಳತನಕ ಮುಳುಗೇಳುತ್ತಾರೆ. ತಾಸು ಹೊತ್ತಿನಲ್ಲೇ ಅವರ ಬಿಲ್‌ಗಳು ಐದಂಕಿಯ ಮೊತ್ತ ಸಮೀಪಿಸುವುದು ಇಲ್ಲವೇ ದಾಟುವುದು ಸರ್ವೇಸಾಮಾನ್ಯ.

ಒಂದೇ ರಾತ್ರಿಗೆ ಮೂರರಿಂದ ಐದು ಕೋಟಿ ರೂಪಾಯಿ ವೆಚ್ಚದ ಔತಣಕೂಟಗಳನ್ನು ತಿಂಗಳಿಗೊಂದರಂತೆ ಏರ್ಪಡಿಸುವ ಹಣವಂತರಿದ್ದಾರೆ. ಹುಟ್ಟುಹಬ್ಬಗಳಲ್ಲಿ ಮೂರು ಲಕ್ಷ ರೂಪಾಯಿ ವೆಚ್ಚದ ಕೇಕ್ ಕತ್ತರಿಸಲಾಗುತ್ತದೆ. ಮುದ್ದಿನ ಮಕ್ಕಳಿಗೆ ಎರಡು ಕೋಟಿ ರೂಪಾಯಿ ಬೆಲೆಯ ಆ್ಯಷ್ಟನ್ ಮಾರ್ಟನ್ ಕಾರ್‌‌ಗಳು ಹುಟ್ಟುಹಬ್ಬದ ಉಡುಗೊರೆಯಾಗಿ ದೊರೆಯುತ್ತವೆ. ಆರು ಕೋಟಿ ರೂಪಾಯಿ ಸಂಭಾವನೆ ತೆತ್ತು ಅಂತರರಾಷ್ಟ್ರೀಯ ಖ್ಯಾತಿಯ ಪಾಪ್ ಗಾಯಕರನ್ನು ಕರೆಸಲಾಗುತ್ತದೆ. ಆಹ್ವಾನಿಸಲಾಗುವ ಅತಿಥಿಗಳಿಗೆ ತಲಾ ಹತ್ತು ಲಕ್ಷ ರೂಪಾಯಿ ವೆಚ್ಚದ ಲೆಕ್ಕದಲ್ಲಿ ಈ ಕೂಟಗಳ ಏರ್ಪಾಡು ನಡೆಯುತ್ತದೆ ಎನ್ನುತ್ತಾರೆ ವಿಲಾಸೀ ಪ್ರವಾಸ ಕಂಪನಿಯೊಂದರ ಕಾರ್ಯ ನಿರ್ವಾಹಕ ನಿರ್ದೇಶಕರು.

ಪಂಚತಾರಾ ಹೋಟೆಲ್‌ಗಳಲ್ಲಿ 2.8 ಲಕ್ಷ ರೂಪಾಯಿಗೆ ಒಂದು ಗುಟುಕಿನ ಅಪರೂಪದ ಕೋನ್ಯಾಕ್, ಬಾಟಲಿಗೆ 35 ಲಕ್ಷ ರೂಪಾಯಿ ಬೆಲೆಯ ಅತ್ಯಂತ ದುಬಾರಿ ಶಾಂಪೇನ್ ಸೇವಿಸುವ ಸಿರಿವಂತರು ಬೀದಿ ಬದುಕಿನ ಸಂಕಟಗಳಿಗೆ ಕುರುಡರು. ದೆಹಲಿಯ ಸಿರಿವಂತ ವಲಯದ ಮದುವೆ ಮಾರುಕಟ್ಟೆಯಲ್ಲಂತೂ ನಗದು ಹಣದ ಗುಡ್ಡಗಳೇ ಕರಗಿ ಹೋಗುತ್ತವೆ. ಇಂತಹ ಮೊತ್ತ ವರ್ಷಕ್ಕೆ 15 ಸಾವಿರ ಕೋಟಿ ರೂಪಾಯಿಗಳು! ಹೊರವಲಯದ ಫಾರ್ಮ್ ಹೌಸ್‌ಗಳಲ್ಲಿ ಜರುಗುವ ಈ ಮದುವೆಗಳಲ್ಲಿ 40-50 ಕೋಟಿ ಬೆಲೆಯ ಹೆಲಿಕಾಪ್ಟರ್‌ಗಳು ಉಡುಗೊರೆಗಳಾಗಿ ಸಾಲುಗಟ್ಟುತ್ತವೆ. ಸೈನಿಕ್ ಫಾರ್ಮ್ಸ್ ನ ಬಂಗಲೆಗಳಲ್ಲಿ ನಡೆಯುವ ಇಸ್ಪೀಟಾಟದಲ್ಲಿ ಹಣದ ಪಣ ಕೋಟಿ ರೂಪಾಯಿಯ ಮೊತ್ತಗಳದು.

ಬೆಳಕಿನ ಕೆಳಗೆ ಕತ್ತಲೆ ಎನ್ನುತ್ತಾರೆ. ಆದರೆ ಇಲ್ಲಿನ ಕತ್ತಲೆಯ ಹಸಿವು ದೊಡ್ಡದು. ಎಂದಾದರೊಂದು ದಿನ ಅದು ಬೆಳಕನ್ನೇ ನುಂಗೀತು. ಪ್ರವಾಸಿಗರನ್ನು ಬಿಡಿ, ಖುದ್ದು ದೆಹಲಿ ವಾಸಿಗಳೇ ಈ ಬೆಳಕಿನ ಭ್ರಮೆಯಲ್ಲಿ ಕುರುಡರು. ಬೀದಿ ಬೀದಿಗಳ, ಝುಗ್ಗಿ ಜೋಪಡಿಗಳ ಕೊಳೆಗೇರಿಗಳ ಆಳ ಗರ್ಭದ ಒಳಗುದಿ, ಹಸಿವು ಅಸಹಾಯಕತೆಯ ಬೆಂಕಿ ರೆಟ್ಟೆಗಳಿಗೆ ಇಳಿದ ದಿನ ಏನಾದೀತು ಎಂಬುದನ್ನು ಕಲ್ಪಿಸಿಕೊಳ್ಳುವುದೂ ಕಷ್ಟ.

**

ಶ್ರೀಮಂತರ ಸ್ವರ್ಗ ದ್ವೀ‍ಪ

ದೇಶದ ಅತಿ ಹೆಚ್ಚಿನ ಸಂಖ್ಯೆಯ ಮಾಲ್‌ಗಳಿಗೆ ಮತ್ತು ಅತ್ಯಂತ ದುಬಾರಿ ‘ಪೆಂಟ್ ಹೌಸ್‌’ಗೆ ದೆಹಲಿಯೇ ತವರು. ನೂರಕ್ಕೂ ಹೆಚ್ಚು ಮಾಲ್‌ಗಳು ದೆಹಲಿಯಲ್ಲಿ ವಿಲಾಸವನ್ನು ಹರವಿಕೊಂಡಿವೆ. ಅರವತ್ತು ಅಂತಸ್ತುಗಳ ವಿಲಾಸೀ ಅಪಾರ್ಟ್‌ಮೆಂಟ್‌ ಸಮುಚ್ಚಯದ ತುದಿಯ ಈ ಅತಿವಿಲಾಸೀ ಅಪಾರ್ಟ್‌ಮೆಂಟ್‌ನ ಬೆಲೆ 100 ಕೋಟಿ ರೂಪಾಯಿ. ದೆಹಲಿ ಹೊರವಲಯದ ಅರಾವಳಿ ಶ್ರೇಣಿಗೆ ಮುಖ ಮಾಡಿದ ಈ ಅಪಾರ್ಟ್‌ಮೆಂಟ್‌ ಅಳತೆ ಸಾವಿರ ಚದರಗಜಗಳಿಗಿಂತ ತುಸುವೇ ಕಡಿಮೆ. ಈ ಮನೆಯ ತಾರಸಿ ಮೇಲೆ ಹೆಲಿಕಾಪ್ಟರ್ ಇಳಿಯಲೊಂದು ಹೆಲಿಪ್ಯಾಡ್.

ಇಟಲಿಯ ವಿಶ್ವಪ್ರಸಿದ್ಧ ವಿಲಾಸೀ ಸರಕುಗಳನ್ನು ತಯಾರಿಸುವ ಕಂಪನಿ ವರ್ಸಾಚೆಯ ಫಿಟ್ಟಿಂಗ್‌ಗಳನ್ನೇ ಈ ಪೆಂಟ್‌ಹೌಸ್‌ನ ಒಳಾವರಣದಲ್ಲಿ ಬಳಸಲಾಗಿದೆ. ಕೃತಕ ಮೆದುಳಿನ ಸ್ವಯಂಚಾಲಿತ ವ್ಯವಸ್ಥೆ ಹೊಂದಿರುವ ಈ ವಿಲಾಸಿ ಮಹಲನ್ನು ಯಾರು ಬೇಕೆಂದರೆ ಅವರು ಖರೀದಿಸುವಂತಿಲ್ಲ. ಆರಿಸಿದ ಆಹ್ವಾನಿತರಿಗೆ ಮಾತ್ರ ಅವಕಾಶ. ದುಬೈನಲ್ಲಿ ವಿಶ್ವದಲ್ಲೇ ಅತಿ ಎತ್ತರದ ಬುರ್ಜ್ ಖಲೀಫಾ ಗೋಪುರ ಸಮುಚ್ಚಯಗಳನ್ನು ನಿರ್ಮಿಸಿದ ಅರಬ್ ಟೆಕ್ ಕಂಪನಿಯೇ ದೆಹಲಿಯ ಈ ಸಮುಚ್ಚಯವನ್ನು ಕಟ್ಟುತ್ತಿದೆ. ವ್ಯಾಪಾರ- ಉದ್ದಿಮೆಗಳ ವಲಯದ ಖ್ಯಾತನಾಮರು ಮತ್ತು ಅನಿವಾಸಿ ಭಾರತೀಯರು ಈ ಸಮುಚ್ಚಯದ ಬಹುತೇಕ ಅಪಾರ್ಟ್‌ಮೆಂಟ್‌ಗಳನ್ನು ಈಗಾಗಲೇ ಖರೀದಿಸಿದ್ದಾರೆ.

ಇಲ್ಲಿಯ ದಾರಿದ್ರ್ಯ ಸಮುದ್ರದ ನಡುವೆ ಅತಿಶ್ರೀಮಂತರು ತಮ್ಮದೇ ಸ್ವರ್ಗದ್ವೀಪವೊಂದನ್ನು ಕಟ್ಟಿಕೊಂಡಿದ್ದಾರೆ. ಸುತ್ತ ಎತ್ತರೆತ್ತರದ ಗೋಡೆಗಳು. ಹೊರಗಿನವರನ್ನು ತಡೆಯಲು ಸರ್ಪಕಾವಲು. ಬ್ರಿಟಿಷರು ನಿರ್ಮಿಸಿದ ಲುಟ್ಯನ್ಸ್ ಡೆಲ್ಲಿಯ ಈ ತುಣುಕಿನ ಹೆಸರು ಗಾಲ್ಫ್ ಲಿಂಕ್ಸ್.

43 ಚದರ ಕಿ.ಮೀ. ವ್ಯಾಪ್ತಿಯಲ್ಲಿ ರಾಷ್ಟ್ರಪತಿ ಭವನ- ಪಾರ್ಲಿಮೆಂಟ್ ಭವನದ ಸುತ್ತಮುತ್ತ ಮೈತಳೆದ ಲುಟ್ಯನ್ಸ್ ಡೆಲ್ಲಿ ವಲಯದಲ್ಲಿ ಸಾವಿರ ಬಂಗಲೆಗಳಿವೆ. ಇವುಗಳ ಪೈಕಿ 70 ಮಾತ್ರ ಖಾಸಗಿಯವರಿಗೆ. ಉಳಿದೆಲ್ಲವೂ ಪ್ರಧಾನಮಂತ್ರಿ, ಮಂತ್ರಿಗಳು, ಮಾಜಿ ಪ್ರಧಾನಿ, ಮಾಜಿ ರಾಷ್ಟ್ರಪತಿ, ಸುಪ್ರೀಂ ಕೋರ್ಟ್- ಹೈಕೋರ್ಟ್ ನ್ಯಾಯಮೂರ್ತಿಗಳು, ಸೇನಾ ಮುಖ್ಯಸ್ಥರು, ಸೇನಾಧಿಕಾರಿಗಳು, ಹಿರಿಯ ಸಂಸದರು, ರಾಜಕೀಯ ಪಕ್ಷಗಳ ಮುಖ್ಯಸ್ಥರಿಗೆ ಮೀಸಲು. ಎಪ್ಪತ್ತರ ಪೈಕಿ ದೇಶದ ಕಾರ್ಪೊರೇಟ್ ಜಗತ್ತಿನ ಖ್ಯಾತ ಕುಳಗಳಲ್ಲಿ, ಬಿರ್ಲಾ, ದಾಲ್ಮಿಯಾ, ಮೋದಿ, ರೂಯಿಯಾ, ಮಿತ್ತಲ್, ಅಂಬಾನಿ, ಬರ್ಮನ್, ಜಿಂದಲ್, ಯಾರಿದ್ದಾರೆ ಎಂದಲ್ಲ, ಯಾರಿಲ್ಲ ಎಂದು ಕೇಳಬೇಕು ಅಷ್ಟೇ.

ನೋಟು ರದ್ದು ಕ್ರಮದ ನಂತರ ಲಾಭ ಬಾಚಿದ ಪೇ ಟಿಎಂ ಕಂಪನಿಯ ವಿಜಯಶೇಖರ ಶರ್ಮ ಇತ್ತೀಚೆಗೆ ಇಲ್ಲಿ 82 ಕೋಟಿ ರೂಪಾಯಿ ತೆತ್ತು ಬಂಗಲೆ ಖರೀದಿಸಿದರು. ಪ್ರಸಿದ್ಧ ರಿಯಲ್ ಎಸ್ಟೇಟ್ ಕಂಪನಿಯೊಂದರ ಅಧ್ಯಕ್ಷರ ಮಗಳು ಪೃಥ್ವೀರಾಜ್ ಮಾರ್ಗದಲ್ಲಿ ಖರೀದಿಸಿದ ಬಂಗಲೆಯ ಬೆಲೆ 435 ಕೋಟಿ ರೂಪಾಯಿ. ಸುದ್ದಿ ಮತ್ತು ಮನರಂಜನೆ ಟಿ.ವಿ. ವಾಹಿನಿಗಳನ್ನು ನಡೆಸುತ್ತಿರುವ ದೊಡ್ಡ ಕುಳ 304 ಕೋಟಿ ರೂಪಾಯಿ ತೆತ್ತು ಇಲ್ಲಿ ಬಂಗಲೆ ಖರೀದಿಸಿದರೆ, ಡಾಬರ್ ಒಡೆಯರೊಬ್ಬರು 160 ಕೋಟಿ ರೂಪಾಯಿ ತೆತ್ತು ಇಲ್ಲಿನ ಬಂಗಲೆಯ ಮಾಲೀಕರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT