ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಿ ಬೇಕಿದ್ದರೂ ಪಡಿತರ ಪಡೆಯುವ ಅವಕಾಶ

ಒಂದು ದೇಶ, ಒಂದೇ ಪಡಿತರ ಚೀಟಿ ಯೋಜನೆ ಜಾರಿಗೆ ಕೇಂದ್ರ ಚಿಂತನೆ
Last Updated 28 ಜೂನ್ 2019, 18:45 IST
ಅಕ್ಷರ ಗಾತ್ರ

ನವದೆಹಲಿ: ವಲಸಿಗರಿಗೂ ಆಹಾರದ ಭದ್ರತೆಯನ್ನು ಕಲ್ಪಿಸುವ, ಪಡಿತರಚೀಟಿದಾರರು ದೇಶದಾದ್ಯಂತ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರವನ್ನು ಪಡೆಯಲು ಅನುವಾಗುವಂತೆ ಏಕರೂಪದ ಪಡಿತರ ಚೀಟಿಯನ್ನು ವಿತರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

‘ಒಂದು ರಾಷ್ಟ್ರ, ಒಂದೇ ಪಡಿತರ ಚೀಟಿ’ ಕಾರ್ಯಕ್ರಮ ಮೊದಲಿಗೆ ಆಂಧ್ರಪ್ರದೇಶ, ತೆಲಂಗಾಣದಲ್ಲಿ ಜಾರಿಗೆ ಬರುವ ನಿರೀಕ್ಷೆಯಿದೆ. ಉದ್ಯೋಗಾವಕಾಶ ಅರಸಿ ಬೇರೆಡೆಗೆ ವಲಸೆ ಹೋಗುವ ಕಾರ್ಮಿಕ ವರ್ಗಕ್ಕೆ ಈ ಕ್ರಮದಿಂದ ಹೆಚ್ಚಿನ ಲಾಭವಾಗಲಿದೆ’ ಎಂದು ಕೇಂದ್ರ ಆಹಾರ ಸಚಿವ ರಾಮ್‌ವಿಲಾಸ್‌ ಪಾಸ್ವಾನ್‌ ಅಭಿಪ್ರಾಯಪಟ್ಟರು.

ವಿವಿಧ ರಾಜ್ಯಗಳ ಆಹಾರ ಇಲಾಖೆಯ ಕಾರ್ಯದರ್ಶಿಗಳ ಜೊತೆಗೆ ಗುರುವಾರ ಅವರು ಈ ನಿಟ್ಟಿನಲ್ಲಿ ಸಭೆ ನಡೆಸಿದರು. ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ಫಲಾನುಭವಿಗಳು ದೇಶದಾದ್ಶಂತ ತಾವು ಬಯಸಿದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರಧಾನ್ಯ ಖರೀದಿಸಬಹುದಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಸದ್ಯ, ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಬಹುದಾದ ಸಮಗ್ರ ವ್ಯವಸ್ಥೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿದೆ. ಇಂಥ ಕ್ರಮಗಳು ಫಲಾನುಭವಿಗಳಿಗೆ ಆಯ್ಕೆ ಸ್ವಾತಂತ್ರ್ಯ ನೀಡಲಿವೆ. ನಿರ್ದಿಷ್ಟವಾಗಿ ಒಬ್ಬ ನ್ಯಾಯಬೆಲೆ ಅಂಗಡಿ ಮಾಲೀಕನ ಮೇಲೆ ಅವಲಂಬಿತವಾಗುವ ಅಗತ್ಯವಿಲ್ಲ’ ಎಂದು ಹೇಳಿದರು.

‘ಪಡಿತರ ಧಾನ್ಯಗಳ ದಾಸ್ತಾನಿನ ಪರಿಣಾಮಕಾರಿ ನಿರ್ವಹಣೆಗೆ ಅನುವಾಗುವಂತೆ ರಾಜ್ಯ ಸರ್ಕಾರಗಳು ತಮ್ಮ ಗೋದಾಮುಗಳನ್ನು, ಭಾರತೀಯ ಆಹಾರ ನಿಗಮ (ಎಫ್‌ಸಿಐ) ಮತ್ತು ಕೇಂದ್ರ ಗೋದಾಮು ನಿಗಮದ ಗೋದಾಮುಗಳ ಜೊತೆಗೆ ಸಂಯೋಜನೆಗೊಳಿಸಬೇಕು. ಸ್ವೀಕರಿಸಲಾಗುವ ಧಾನ್ಯಗಳ ಪ್ರಮಾಣ, ವಿವರ, ದಾಸ್ತಾನು ಅವಧಿ ಕುರಿತು ಮಾಹಿತಿಗಳುಎಫ್‌ಸಿಐ ಮತ್ತು ರಾಜ್ಯಗಳ ನಡುವೆ ವಿನಿಮಯವಾಗಬೇಕು’ ಎಂದು ಪಾಸ್ವಾನ್‌ ರಾಜ್ಯಗಳಿಗೆ ಸಲಹೆ ಮಾಡಿದರು.

ಹೀಗೆ ಸಂಯೋಜನೆಗೊಳಿಸುವ ಪ್ರಕ್ರಿಯೆಯನ್ನುಆರು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸಚಿವರು ಸಲಹೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT