ಬಡ್ತಿ ಮೀಸಲು, ಕೇಂದ್ರ ದುಂಬಾಲು

7
ಮಾನದಂಡಗಳನ್ನು ರದ್ದುಪಡಿಸಲು ಸುಪ್ರೀಂ ಕೋರ್ಟ್‌ಗೆ ಕೋರಿಕೆ

ಬಡ್ತಿ ಮೀಸಲು, ಕೇಂದ್ರ ದುಂಬಾಲು

Published:
Updated:

ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಸಿ/ಎಸ್‌ಟಿ) ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿಯಲ್ಲಿ ಮೀಸಲಾತಿ ನೀಡಲು 2006ರಲ್ಲಿ ರೂಪಿಸಿದ ಮಾನದಂಡಗಳನ್ನು ರದ್ದುಪಡಿಸುವಂತೆ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟನ್ನು ಕೇಳಿಕೊಂಡಿದೆ. 

ಈ ಸಮುದಾಯಗಳು ಹಿಂದುಳಿದಿವೆ ಎಂಬುದು ನಿಜ. ಆದರೆ ಪ್ರಾತಿನಿಧ್ಯದ ಕೊರತೆ ಇದೆ ಎಂಬುದನ್ನು ಸಾಬೀತು ಮಾಡಲು ಬೇಕಾದ ದತ್ತಾಂಶ ಸಂಗ್ರಹಿಸುವುದು ಅಸಾಧ್ಯ ಎಂದು ಸರ್ಕಾರದ ಪರವಾಗಿ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ವಾದಿಸಿದರು. 

ಪ್ರಾತಿನಿಧ್ಯದ ಕೊರತೆ ಮತ್ತು ಒಟ್ಟು ಹಿಂದುಳಿದಿರುವಿಕೆಯ ದತ್ತಾಂಶಗಳ ಆಧಾರದಲ್ಲಿ ಬಡ್ತಿ ಮೀಸಲಾತಿ ನೀಡಬೇಕು ಎಂದು 2006ರ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಹೇಳಿತ್ತು. ಆದರೆ ಈ ನಿಯಮವನ್ನು ಕೈಬಿಡುವಂತೆ ಕೇಂದ್ರ ಒತ್ತಾಯಿಸಿದೆ. 

ಖಾಲಿ ಹುದ್ದೆಗಳು ಪ್ರತಿ ದಿನವೂ ಬದಲಾಗುತ್ತಲೇ ಹೋಗುತ್ತವೆ. ಹಾಗಿರುವಾಗ ಪ್ರಾತಿನಿಧ್ಯದ ಕೊರತೆಯನ್ನು ನಿರ್ಧರಿಸುವುದು ಹೇಗೆ? 2006ರ ತೀರ್ಪಿನ ಮಾನದಂಡಗಳನ್ನು ಅನುಸರಿಸಲೇಬೇಕು ಎಂದು ಸುಪ್ರೀಂ ಕೋರ್ಟ್‌ ಪಟ್ಟು ಹಿಡಿದರೆ ದಲಿತ ಸಮುದಾಯವು ವರ್ಷದಿಂದ ವರ್ಷಕ್ಕೆ ಬಡ್ತಿಯನ್ನು ಕಳೆದುಕೊಳ್ಳುತ್ತಲೇ ಹೋಗಲಿದೆ ಎಂದು ವೇಣುಗೋಪಾಲ್‌ ಹೇಳಿದರು. 

ಸಾವಿರಕ್ಕೂ ಹೆಚ್ಚು ವರ್ಷಗಳಿಂದ ಶೋಷಣೆಗೆ ಒಳಗಾಗಿರುವ ದಲಿತ ಸಮುದಾಯಕ್ಕೆ ಬಡ್ತಿಯಲ್ಲಿ ಮೀಸಲಾತಿ ನೀಡಲೇಬೇಕು. ಬಡ್ತಿಯಲ್ಲಿ ಕನಿಷ್ಠ ಶೇ 22.5ರಷ್ಟು ಮೀಸಲು ಇರಬೇಕು. ಹಾಗಿದ್ದರೂ ಮೀಸಲು ಪ್ರಮಾಣ ಶೇ 50ರಷ್ಟನ್ನು ಮೀರುವುದಿಲ್ಲ ಎಂದು ವೇಣುಗೋಪಾಲ್‌ ಪ್ರತಿಪಾದಿಸಿದರು. 

ದಲಿತರ ಮನಗೆಲ್ಲಲು ಕ್ರಮ?

ದಲಿತ ಸಮುದಾಯವು ಬಿಜೆಪಿ ನೇತೃತ್ವದ ಎನ್‌ಡಿಎ ಕಾರ್ಯವೈಖರಿಯಿಂದ ಅಸಮಾಧಾನಗೊಂಡಿದೆ ಎಂಬ ಭಾವನೆ ರಾಜಕೀಯ ವಲಯದಲ್ಲಿ ಇದೆ. ಕೆಲವು ಪ್ರಮುಖ ರಾಜ್ಯಗಳು ಮತ್ತು ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ದಲಿತ ಸಮುದಾಯವನ್ನು ಒಲಿಸಿಕೊಳ್ಳಲು ಬಿಜೆಪಿ ಮುಂದಾಗಿದೆ ಎನ್ನಲಾಗಿದೆ. 

ಅದರ ಭಾಗವಾಗಿಯೇ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯನ್ನು ದುರ್ಬಲಗೊಳಿಸಿದೆ ಎನ್ನಲಾದ ಸುಪ್ರೀಂ ಕೋರ್ಟ್‌ ತೀರ್ಪನ್ನು ರದ್ದುಪಡಿಸುವ ಮಸೂದೆಯನ್ನು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿಯೇ ಅಂಗೀಕರಿಸಲು ಸರ್ಕಾರ ನಿರ್ಧರಿಸಿದೆ. ಈಗ, ಬಡ್ತಿ ಮೀಸಲಾತಿಯ ಪರವಾಗಿ ಸರ್ಕಾರ ದೃಢವಾಗಿ ನಿಂತಿದೆ.

ಸರ್ಕಾರವು ದಲಿತರ ವಿರುದ್ಧ ಇದೆ ಎಂಬ ಭಾವನೆ ಬದಲಾಗಲಿದೆ ಎಂದು ಬಿಜೆಪಿ ಮಿತ್ರ ಪಕ್ಷ ಎಲ್‌ಜೆಪಿ ಮುಖ್ಯಸ್ಥ ಮತ್ತು ಕೇಂದ್ರ ಸಚಿವ ರಾಮ್‌ ವಿಲಾಸ್‌ ಪಾಸ್ವಾನ್‌ ಇತ್ತೀಚೆಗೆ ಹೇಳಿದ್ದರು. 

2006ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಯುತ್ತಿದೆ.

ಬೆಂಗಳೂರಿನ ಎಂ. ನಾಗರಾಜ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ನಡೆಸಿತ್ತು. ಈಗ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಏಳು ನ್ಯಾಯಮೂರ್ತಿಗಳ ವಿಸ್ತೃತ ಪೀಠಕ್ಕೆ ವಹಿಸಬೇಕೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ವಿಸ್ತೃತ ಪೀಠವೇ ವಿಚಾರಣೆ ನಡೆಸಬೇಕು ಎಂದು ಕೇಂದ್ರ ಸರ್ಕಾರ ವಾದಿಸಿದೆ

ದೌರ್ಜನ್ಯ ತಡೆ ಮಸೂದೆ ಮಂಡನೆ

ಎಸ್‌ಸಿ/ಎಸ್‌ಟಿ ಕಾಯ್ದೆಯ ಕೆಲವು ಅಂಶಗಳನ್ನು ಬದಲಾಯಿಸಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ರದ್ದುಪಡಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಶುಕ್ರವಾರ ಮಂಡಿಸಲಾಗಿದೆ. 

ಕಾಯ್ದೆಯ ಮೂಲ ಅಂಶಗಳನ್ನು ಉಳಿಸಿಕೊಳ್ಳದೇ ಇದ್ದರೆ ಇದೇ 9ರಂದು ‘ಭಾರತ ಬಂದ್‌’ ಮಾಡಲಾಗುವುದು ಎಂದು ದಲಿತ ಸಂಘಟನೆಗಳು ಹೇಳಿದ್ದವು. ಅದಕ್ಕೆ ಮೊದಲೇ ಮಸೂದೆಯನ್ನು ಮಂಡಿಸಲಾಗಿದೆ. 

ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆ ಅಡಿ ದೂರು ದಾಖಲಾದ ಆರೋಪಿಗೆ ನಿರೀಕ್ಷಣಾ ಜಾಮೀನು ಅವಕಾಶ ಇರುವುದಿಲ್ಲ ಎಂಬುದು ಕಾಯ್ದೆಯಲ್ಲಿ ಇರುವ ಪ್ರಮುಖ ಪ‍್ರಸ್ತಾವವಾಗಿದೆ. ಹಾಗೆಯೇ ಪ್ರಕರಣ ದಾಖಲಿಸಿಕೊಳ್ಳುವ ಮೊದಲು ಪೂರ್ವಭಾವಿ ತನಿಖೆ ಮಾಡಬೇಕು ಮತ್ತು ಬಂಧನಕ್ಕೆ ಮೊದಲು ಸಂಬಂಧಪಟ್ಟ ಪ್ರಾಧಿಕಾರದ ಅನುಮತಿ ಪಡೆಯಬೇಕು ಎಂದು ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಹೇಳಲಾಗಿತ್ತು. ಇದನ್ನು ರದ್ದುಪಡಿಸುವ ಪ್ರಸ್ತಾವ ಮಸೂದೆಯಲ್ಲಿ ಇದೆ. 

ವಿಸ್ತೃತ ಪೀಠಕ್ಕೆ?

‌2006ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಯುತ್ತಿದೆ

ಬೆಂಗಳೂರಿನ ಎಂ. ನಾಗರಾಜ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ನಡೆಸಿತ್ತು

ಈಗ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಏಳು ನ್ಯಾಯಮೂರ್ತಿಗಳ ವಿಸ್ತೃತ ಪೀಠಕ್ಕೆ ವಹಿಸಬೇಕೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ

ವಿಸ್ತೃತ ಪೀಠವೇ ವಿಚಾರಣೆ ನಡೆಸಬೇಕು ಎಂದು ಕೇಂದ್ರ ಸರ್ಕಾರ ವಾದಿಸಿದೆ

***
ಪರಿಶಿಷ್ಟ ಜಾತಿ ಮತ್ತು ಪಂಗಡದ ಉದ್ಯೋಗಿಗಳು ಮೇಲ್ಜಾತಿಯ ಉದ್ಯೋಗಿಗಳ ಜತೆ ಸ್ಪರ್ಧಿಸುವಂತಹ ವಾತಾವರಣ ಸೃಷ್ಟಿ ಇಂದಿಗೂ ಸಾಧ್ಯವಾಗಿಲ್ಲ

– ಕೆ.ಕೆ. ವೇಣುಗೋಪಾಲ್‌, ಅಟಾರ್ನಿ ಜನರಲ್‌

ತ್ವರಿತ ಜ್ಯೇಷ್ಠತೆ ನೀಡಿಕೆಯನ್ನು ಬಡ್ತಿ ಎನ್ನಲಾಗುತ್ತದೆ. ಪ್ರಮಾಣಾತ್ಮಕ ದತ್ತಾಂಶವಿಲ್ಲದೆ ರಾಜ್ಯ ಸರ್ಕಾರಗಳು ಬಡ್ತಿಯಲ್ಲಿ ಮೀಸಲಾತಿ ಹೇಗೆ ನೀಡಿವೆ

– ಸುಪ್ರೀಂ ಕೋರ್ಟ್‌

ಯಥಾಸ್ಥಿತಿ ಕಾಪಾಡಲು ಆದೇಶ

ಬೆಂಗಳೂರು: ಬಡ್ತಿಯಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಸರ್ಕಾರ ಮುಂದಿನ ಸೂಚನೆ ನೀಡುವವರೆಗೆ ಮುಂಬಡ್ತಿ ಅಥವಾ ಹಿಂಬಡ್ತಿ ಪ್ರಕ್ರಿಯೆ ನಡೆಸದೇ ಯಥಾಸ್ಥಿತಿ ಕಾಪಾಡಲು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್ ಅವರು ಸುತ್ತೋಲೆ ಹೊರಡಿಸಿದ್ದಾರೆ.

ಸುಪ್ರೀಂಕೋರ್ಟ್‌ ಮುಂದಿನ ನಿರ್ದೇಶನ ನೀಡುವವರೆಗೆ ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿದೆ. ಅದನ್ನು ಎಲ್ಲ ಇಲಾಖೆಗಳೂ ಪಾಲಿಸಬೇಕಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 15

  Happy
 • 0

  Amused
 • 2

  Sad
 • 0

  Frustrated
 • 3

  Angry

Comments:

0 comments

Write the first review for this !