ಸಾಮಾಜಿಕ ಜಾಲತಾಣಕ್ಕೆ ಕಣ್ಗಾವಲು ಪ್ರಸ್ತಾವ ಕೈಬಿಟ್ಟ ಕೇಂದ್ರ

7

ಸಾಮಾಜಿಕ ಜಾಲತಾಣಕ್ಕೆ ಕಣ್ಗಾವಲು ಪ್ರಸ್ತಾವ ಕೈಬಿಟ್ಟ ಕೇಂದ್ರ

Published:
Updated:

ನವದೆಹಲಿ: ಸಾಮಾಜಿಕ ಜಾಲತಾಣ ನಿಗಾ ಕೇಂದ್ರ ಸ್ಥಾಪನೆಯ ಪ್ರಸ್ತಾವ ಇದ್ದ ಅಧಿಸೂಚನೆಯನ್ನು ರದ್ದುಪಡಿಸಲಾಗಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಹೇಳಿದೆ. ಅಂತರ್ಜಾಲದಲ್ಲಿ ಜನರ ಚಟುವಟಿಕೆಯನ್ನು ನಿಯಂತ್ರಿಸುವುದಕ್ಕೆ ನಿಗಾ ಕೇಂದ್ರ ಸ್ಥಾಪಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. 

ಟಿಎಂಸಿ ಶಾಸಕಿ ಮೆಹುವಾ ಮೊಯಿತ್ರಾ ಅವರು ಸಾಮಾಜಿಕ ಜಾಲ ತಾಣ ನಿಗಾ ಕೇಂದ್ರ ಸ್ಥಾಪನೆಯ ಪ್ರಸ್ತಾವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಪ್ರಸ್ತಾವವನ್ನು ಕೈಬಿಡಲಾಗಿದೆ ಎಂದು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಅವರು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಹೇಳಿದರು. ಹಾಗಾಗಿ, ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠವು ಅರ್ಜಿಯನ್ನು ವಜಾ ಮಾಡಿತು. 

ಸಾಮಾಜಿಕ ಜಾಲ ತಾಣ ನೀತಿಯನ್ನು ಸಂಪೂರ್ಣವಾಗಿ ಪರಿಷ್ಕರಿಸಲಾಗುವುದು ಎಂದೂ ವೇಣುಗೋಪಾಲ್‌ ತಿಳಿಸಿದರು. 

ಜನರ ವಾಟ್ಸ್‌ ಆ್ಯಪ್‌ ಸಂದೇಶಗಳ ಮೇಲೆ ನಿಗಾ ಇರಿಸುವುದು ಸಾಮಾಜಿಕ ಜಾಲತಾಣ ನಿಗಾ ಕೇಂದ್ರ ಸ್ಥಾಪನೆಯ ಉದ್ದೇಶವೇ ಎಂದು ಜುಲೈ 13ರಂದು ನಡೆದ ವಿಚಾರಣೆಯ ವೇಳೆ ಪೀಠ ಪ್ರಶ್ನಿಸಿತ್ತು. ಅದು ಹೌದಾದರೆ, ‘ಕಣ್ಗಾವಲು ದೇಶ’ ಸೃಷ್ಟಿಯಾಗುತ್ತದೆ ಎಂಬ ಆತಂಕ ವ್ಯಕ್ತಪಡಿಸಿತ್ತು. 

ಈ ಕೇಂದ್ರ ಸ್ಥಾಪನೆಗೆ ಬೇಕಾದ ಸಾಫ್ಟ್‌ವೇರ್‌ಗಳನ್ನು ಪೂರೈಸುವುದಕ್ಕಾಗಿ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಬ್ರಾಡ್‌ಕಾಸ್ಟಿಂಗ್‌ ಎಂಜಿನಿಯರಿಂಗ್‌ ಕನ್ಸಲ್‌ಟೆಂಟ್ಸ್‌ ಇಂಡಿಯಾ ಲಿ (ಬಿಇಸಿಐಎಲ್‌) ಮೇಯಲ್ಲಿ ಟೆಂಡರ್‌ ಆಹ್ವಾನಿಸಿತ್ತು. 

ವಿವಿಧ ವಿಷಯಗಳ ಬಗ್ಗೆ ಸಂಚಲನ ಸೃಷ್ಟಿಸುವ ವ್ಯಕ್ತಿಗಳ ಸಮಗ್ರ ಮಾಹಿತಿ ಸಂಗ್ರಹಿಸಲು ಅಗತ್ಯವಾದ ತಂತ್ರಜ್ಞಾನವನ್ನು ಒದಗಿಸಬೇಕು. ಸಾಮಾಜಿಕ ಜಾಲತಾಣ ಮಾತ್ರವಲ್ಲದೆ, ಇ–ಮೇಲ್‌ ಸಂದೇಶಗಳಲ್ಲಿರುವ ವಿಷಯಗಳನ್ನು ಕೂಡ ಗ್ರಹಿಸಲು ಈ ತಂತ್ರಜ್ಞಾನಕ್ಕೆ ಸಾಧ್ಯವಾಗಬೇಕು ಎಂದು ಟೆಂಡರ್‌ ಪ್ರಕಟಣೆಯಲ್ಲಿ ಹೇಳಲಾಗಿತ್ತು ಎಂದು ಮೊಯಿತ್ರಾ ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು.

ತಮ್ಮಂತಹ ವ್ಯಕ್ತಿಗಳ ಸಾಮಾಜಿಕ ಜಾಲ ತಾಣ ಚಟುವಟಿಕೆಗಳನ್ನು ತಿಳಿದುಕೊಳ್ಳುವುದಕ್ಕಾಗಿಯೇ ನಿಗಾ ಕೇಂದ್ರ ಸ್ಥಾಪನೆಗೆ ಸರ್ಕಾರವು ಮುಂದಾಗಿದೆ. ಇಂತಹ ಕೇಂದ್ರ ಸ್ಥಾಪನೆಯು ಕಾನೂನುಬಾಹಿರವಾಗಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಮಾತ್ರವಲ್ಲದೆ, ಖಾಸಗಿತನದ ಹಕ್ಕುಗಳನ್ನು ಕೂಡ ಉಲ್ಲಂಘಿಸುತ್ತದೆ ಎಂದು ಮೊಯಿತ್ರಾ ವಾದಿಸಿದ್ದರು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !