ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗುವಳಿ ಪತ್ರಕ್ಕೆ ಆಗ್ರಹಿಸಿ ಸಚಿವರ ನಿವಾಸದೆದುರು ಧರಣಿ

Last Updated 20 ಫೆಬ್ರುವರಿ 2018, 9:22 IST
ಅಕ್ಷರ ಗಾತ್ರ

ಚಿತ್ರದುರ್ಗ: ಬಗರ್‌ಹುಕುಂ ಹಾಗೂ ಅರಣ್ಯ ಭೂಮಿ ಸಾಗುವಳಿ ಚೀಟಿ, ಹಕ್ಕುಪತ್ರಗಳನ್ನು ನೀಡುವಂತೆ ಆಗ್ರಹಿಸಿ ಕರ್ನಾಟಕ ಭೂಹಕ್ಕುದಾರರ ವೇದಿಕೆಯಿಂದ ನೂರಾರು ಬಡ ಕುಟುಂಬಗಳ ಸದಸ್ಯರು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವ ಎಚ್.ಆಂಜನೇಯ ಅವರ ನಿವಾಸದ ಎದುರು ಸೋಮವಾರ ಧರಣಿ ನಡೆಸಿದರು.

ಕರ್ನಾಟಕ ರಾಜ್ಯ ಬಂಜಾರ ಜನಜಾಗೃತಿ ಅಭಿಯಾನ ವೇದಿಕೆ ಪ್ರಧಾನ ಕಾರ್ಯದರ್ಶಿ ನಿಂಗನಾಯ್ಕ ಮಾತನಾಡಿ, ‘ನೂರಾರು ಬಡ ಕುಟುಂಬಗಳು ಬಗರ್‌ಹುಕುಂ ಮತ್ತು ಅರಣ್ಯಭೂಮಿಯನ್ನು ಸಾಗುವಳಿ ಮಾಡಿಕೊಂಡು ಬರುತ್ತಿವೆ. ಕಾಂಗ್ರೆಸ್ ಸರ್ಕಾರ ಐದು ವರ್ಷಗಳ ಅಧಿಕಾರವಧಿ ಪೂರೈಸಿದರೂ, ಈತನಕ ಒಂದು ತುಂಡು ಭೂಮಿಯ ಹಕ್ಕು ಪತ್ರ ನೀಡಿಲ್ಲ’ ಎಂದು ದೂರಿದರು.

ಕರ್ನಾಟಕ ಭೂಹಕ್ಕುದಾರರ ವೇದಿಕೆಯ ಜಿಲ್ಲಾ ಸಂಚಾಲಕ ಕೆ.ಬಿ.ರೂಪನಾಯ್ಕ ಮಾತನಾಡಿ, ‘ಹನ್ನೆರಡು ಜಿಲ್ಲೆಗಳಲ್ಲಿ ಭೂಮಿ ಹಕ್ಕಿಗಾಗಿ ಏಕಕಾಲದಲ್ಲಿ ಹೋರಾಟ ನಡೆಯುತ್ತಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಎಲ್ಲರಿಗೂ ಭೂಮಿಯ ಹಕ್ಕನ್ನು ನೀಡಬೇಕು’ ಎಂದು ಒತ್ತಾಯಿಸಿದರು. ಪತ್ರಕರ್ತ ನರೇನಹಳ್ಳಿ ಅರುಣ್‌ಕುಮಾರ್ ಮಾತನಾಡಿದರು.

ಇದೇ ವೇಳೆ ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ಬಂದ ತಹಶೀಲ್ದಾರ್ ಮಲ್ಲಿಕಾರ್ಜುನ್ ಮಾತನಾಡಿ, ‘23 ರಂದು ಎಷ್ಟು ಸಾಧ್ಯವೋ ಅಷ್ಟು ಹಕ್ಕುಪತ್ರಗಳನ್ನು ಸಾಗುವಳಿದಾರರಿಗೆ ನೀಡಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನಾಕಾರರು ಧರಣಿಯನ್ನು ಕೈಬಿಟ್ಟರು. ಕರ್ನಾಟಕ ಭೂಹಕ್ಕುದಾರರ ವೇದಿಕೆಯ ಓಬಳೇಶ್, ರಾಜಪ್ಪ, ಮಂಜಪ್ಪ, ಕೆಂಚಪ್ಪ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಹಿರಿಯೂರು: ಭೂ ಹಕ್ಕುದಾರರ ವೇದಿಕೆ ನೇತೃತ್ವದಲ್ಲಿ ಸೋಮವಾರ ಭೂ ಹಕ್ಕಿಗೆ ಆಗ್ರಹಿಸಿ ತಾಲ್ಲೂಕು ಕಚೇರಿಯಿಂದ ಶಾಸಕ ಡಿ. ಸುಧಾಕರ್ ಮನೆಗೆ ಮುತ್ತಿಗೆ ಹಾಕಲು ಹೊರಟ 50 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಶಾಲಾ ವಾಹನವೊಂದರಲ್ಲಿ ತಾಲ್ಲೂಕಿನ ಅಬ್ಬಿನಹೊಳೆ ಠಾಣೆಗೆ ಕರೆದೊಯ್ದರು.

ತಾಲ್ಲೂಕಿನಲ್ಲಿ ಸುಮಾರು 12 ಸಾವಿರಕ್ಕೂ ಹೆಚ್ಚು ಕುಟುಂಬಗಳು ದಶಕಗಳಿಂದ ಅರಣ್ಯಭೂಮಿ, ಬಗರ್ ಹುಕುಂ ಭೂಮಿಯನ್ನು ಉಳುಮೆ ಮಾಡುತ್ತ ಬಂದಿದ್ದು ಭೂಮಿಯ ಹಕ್ಕಿಗಾಗಿ ನಿರಂತರ ಹೋರಾಟ ನಡೆಸಿದ್ದರೂ ಆಶ್ವಾಸನೆ ಬಿಟ್ಟರೆ ಬೇರೆ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ತಾಲ್ಲೂಕು ಕಚೇರಿ ಆವರಣದಿಂದ ಪ್ರಧಾನ ರಸ್ತೆ ಮೂಲಕ ನೃಪತುಂಗ ಬಡಾವಣೆಯಲ್ಲಿರುವ ಶಾಸಕರ ಮನೆಗೆ ಮುತ್ತಿಗೆ ಹಾಕಲು ಹೊರಟ ಪ್ರತಿಭಟನಾಕಾರರನ್ನು ಸಿಪಿಐ ಗುರುರಾಜ್, ಪಿಎಸ್ಐಗಳಾದ ಶಿವಕುಮಾರ್ ಹಾಗೂ ವೆಂಕಟೇಶ್ ಅವರು ತಾಲ್ಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಕೊಡಿ ಎಂದು ಮನ ಒಲಿಸುವ ಯತ್ನಮಾಡಿದರು. ಪ್ರತಿಭಟನಕಾರರು ಒಪ್ಪದ ಕಾರಣ 50 ಕ್ಕೂ ಹೆಚ್ಚು ಪ್ರತಿಭಟನಕಾರರನ್ನು ವಶಕ್ಕೆ ಪಡೆದು ಅಬ್ಬಿನಹೊಳೆ ಠಾಣೆಗೆ ಕರೆದೊಯ್ದರು. ಕಸವನಹಳ್ಳಿ ರಮೇಶ್, ದೊಡ್ಡಗಟ್ಟ ಕುಮಾರ್, ಕಾತ್ರಿಕೇನಹಳ್ಳಿ ಮಂಜುನಾಥ್, ಥಳಕು ತಿಪ್ಪೇಸ್ವಾಮಿ, ಜಯಣ್ಣ, ಬಾಬು ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT