ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದನವನದ ಮೇಲೆ ಇಹಾನಾ ಕಣ್ಣು

Last Updated 6 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬಾಲಿವುಡ್‌ನಲ್ಲಿ ಈಗ ನನ್ನದು ಅದೃಷ್ಟ ಪರೀಕ್ಷೆಯ ಕಾಲ. ಸವಾಲಿನ ಪಾತ್ರಗಳೆಂದರೆ ನನಗೆ ಇಷ್ಟ. ಅವಕಾಶ ಲಭಿಸಿದರೆ ಕನ್ನಡ ಚಿತ್ರಗಳಲ್ಲಿಯೂ ಅಭಿನಯಿಸಲು ನಾನು ಸಿದ್ಧ’.

– ಹೀಗೆಂದು ಒಂದೇ ಉಸಿರಿಗೆ ಹೇಳಿ ಮುಗಿಸಿದರು ಪಂಜಾಬಿ ನಟಿ ಹಾಗೂ ರೂಪದರ್ಶಿ ಇಹಾನಾ ಧಿಲ್ಲೋನ್. ಅವರು ನಾಯಕಿಯಾಗಿ ನಟಿಸಿರುವ ಹಿಂದಿ ಚಿತ್ರ ‘ಹೇಟ್‌ ಸ್ಟೋರಿ 4’ ಈ ವಾರ ತೆರೆ (ಮಾರ್ಚ್‌ 9ರಂದು) ಕಾಣುತ್ತಿದೆ. ಬಾಲಿವುಡ್‌ನಲ್ಲಿ ಭದ್ರನೆಲೆಯೂರಲು ಈ ಚಿತ್ರ ನೆರವಾಗಲಿದೆ ಎನ್ನುವುದು ಅವರ ವಿಶ್ವಾಸದ ನುಡಿ.

ಈ ಚಿತ್ರದಲ್ಲಿ ಅವರು ಕಾಣಿಸಿಕೊಂಡಿರುವ ರೊಮ್ಯಾಂಟಿಕ್‌ ದೃಶ್ಯಗಳು ಈಗಾಗಲೇ ಬಾಲಿವುಡ್ ಅಂಗಳದಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿವೆ. ಹಸಿಬಿಸಿ ದೃಶ್ಯಗಳು ಚಿತ್ರಕ್ಕೆ ಪೂರಕ ಎಂಬುದು ಅವರ ಸಮರ್ಥನೆ.

‘ಇದಕ್ಕೆ ಕುಟುಂಬದ ಸದಸ್ಯರು ವಿರೋಧಿಸಲಿಲ್ಲವೇ?’ ಎಂದು ಕೇಳಿದರೆ, ‘ನಾನು ಯಾವುದೇ ಚಿತ್ರಗಳಲ್ಲಿ ಅಭಿನಯಿಸುವ ಮೊದಲು ಅಪ್ಪನೊಂದಿಗೆ ಚರ್ಚಿಸುತ್ತೇನೆ. ಹಿಂದಿಯಲ್ಲಿ ಅವಕಾಶ ಬಂದಾಗಲೂ ನಾನು ಮೊದಲು ತಂದೆಯೊಂದಿಗೆ ಚರ್ಚಿಸಿದೆ. ಅವರು ಒಪ್ಪಿಗೆ ಸೂಚಿಸಿದ ಬಳಿಕವೇ ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ’ ಎಂದು ಸ್ಪಷ್ಟನೆ ನೀಡುತ್ತಾರೆ.

‘ಚಿತ್ರದ ಒಂದು ಹಾಡಿಗಾಗಿ ಪ್ರಚೋದಕ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಅಗತ್ಯವಿತ್ತು. ನಟಿಯಾಗಿ ನನ್ನ ಕರ್ತವ್ಯ ನಿಭಾಯಿಸಿದ್ದೇನೆ ಅಷ್ಟೇ’ ಎನ್ನುವುದು ಇಹಾನಾ ಅವರ ಜಾಣ್ಮೆಯ ಉತ್ತರ.

ಇಹಾನಾ ಪಂಜಾಬಿ ಮಧ್ಯಮವರ್ಗದ ಕುಟುಂಬದಿಂದ ಬಂದವರು. ಅಪ್ಪ ರಾಜಕಾರಣಿ. ತಾಯಿ ಗೃಹಿಣಿ. ಅವರ ಕುಟುಂಬದಲ್ಲಿ ಯಾರೊಬ್ಬರಿಗೂ ಸಿನಿಮಾದ ನಂಟಿಲ್ಲವಂತೆ. ಮೊಹಾಲಿಯ ಚಂಡೀಗಡ ವಿಶ್ವವಿದ್ಯಾಲಯದಲ್ಲಿ ಪ್ರವಾಸೋದ್ಯಮ ಮತ್ತು ಹೋಟೆಲ್‌ ಮ್ಯಾನೇಜ್‌ಮೆಂಟ್‌ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಅವರು ಮಾಡೆಲಿಂಗ್‌ ವೃತ್ತಿ ಆರಂಭಿಸಿದ್ದು ನ್ಯೂಯಾರ್ಕ್‌ನಲ್ಲಿ. ಹಲವಾರು ಬ್ರಾಂಡ್‌ಗಳಿಗೆ ರೂಪದರ್ಶಿಯಾಗಿದ್ದಾರೆ.

ಇಹಾನಾ ಸಿನಿ ಪಯಣ ಆರಂಭಿಸಿದ್ದು ಪಂಜಾಬಿ ಚಿತ್ರರಂಗದ ಮೂಲಕ. ಅವರು ನಟಿಸಿದ ಮೊದಲ ಚಿತ್ರ ‘ಡ್ಯಾಡಿ ಕೂಲ್‌ ಮುಂಡೆ ಫೂಲ್’. ಬಳಿಕ ನಾಲ್ಕು ಚಿತ್ರಗಳಲ್ಲಿ ನಟಿಸಿದ ಅವರಿಗೆ ಬಾಲಿವುಡ್‌ನಲ್ಲಿ ನಟಿಸಲು ಅವಕಾಶ ಲಭಿಸಿತು. ಸಿನಿಮಾಗಳಲ್ಲಿ ನಟಿಸುವ ಜೊತೆಯಲ್ಲಿಯೇ ಮಾಡೆಲಿಂಗ್‌ ವೃತ್ತಿಯಲ್ಲಿಯೂ ಅವರು ಮುಂದುವರಿದರು.

ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಲು ಅವರಿಗೆ ಇಷ್ಟವಂತೆ. ಅದರಲ್ಲೂ ಕನ್ನಡದಲ್ಲಿ ಶಿವರಾಜ್‌ಕುಮಾರ್‌ ಅವರೊಂದಿಗೆ ನಟಿಸಲು ಆಸೆ ಇದೆಯಂತೆ. ಈಗ ಅವರ ಆಸೆ ಈಡೇರುವ ಕಾಲವೂ ಕೂಡಿಬಂದಿದೆ. ‘ಶಿವರಾಜ್‌ಕುಮಾರ್‌ ಅವರೊಂದಿಗೆ ನಟಿಸಲು ಅವಕಾಶ ಬಂದಿದೆ. ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಶೀಘ್ರವೇ, ಕನ್ನಡದಲ್ಲಿ ನನ್ನ ಮೊದಲ ಯೋಜನೆ ಕುರಿತು ಮಾಹಿತಿ ಹಂಚಿಕೊಳ್ಳುತ್ತೇನೆ’ ಎಂದ ಅವರ ಮೊಗದಲ್ಲಿ ಖುಷಿ ಇತ್ತು.

ಜೊತೆಗೆ, ಕನ್ನಡದಲ್ಲಿ ಹೊಸಬರ ಚಿತ್ರವೊಂದರಲ್ಲಿ ನಟಿಸಲು ಅವರಿಗೆ ಅವಕಾಶ ಬಂದಿದೆಯಂತೆ. ‘ಈ ಚಿತ್ರದ ಬಗ್ಗೆ ಈಗಾಗಲೇ ಮಾತುಕತೆ ನಡೆಯುತ್ತಿದೆ. ಅದು ಅಂತಿಮ ರೂಪಕ್ಕೆ ಬಂದಾಗ ನಾನೇ ಬಹಿರಂಗಪಡಿಸುತ್ತೇನೆ’ ಎಂದ ಅವರು, ಹೊಸ ಚಿತ್ರದ ಹೆಸರನ್ನು ಬಹಿರಂಗ‍ಪಡಿಸಲಿಲ್ಲ.

ನಟಿ ಮಾಧುರಿ ದೀಕ್ಷಿತ್‌ ಅಂದರೆ ಅವರಿಗೆ ಪಂಚಪ್ರಾಣ. ‘ಬಾಲ್ಯದಿಂದಲೂ ಅವರ ನಟನೆ ನೋಡಿಕೊಂಡು ಬೆಳೆದಿದ್ದೇನೆ. ಚಿತ್ರರಂಗ ಪ್ರವೇಶಿಸಲು ಅವರೇ ನನಗೆ ಸ್ಫೂರ್ತಿ’ ಎಂದು ಮುಗ್ಧವಾಗಿ ಹೇಳುತ್ತಾರೆ.

‘ಕಲಾವಿದರು ಎಲ್ಲ ರೀತಿಯ ಪಾತ್ರಗಳನ್ನು ಮಾಡಬೇಕು. ಯಾವುದೇ ಪಾತ್ರಗಳಿಗೆ ಜೋತು ಬೀಳಬಾರದು. ನನಗೆ ಪದ್ಮಾವತಿ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮಾಡಿದ ‍ಪಾತ್ರ ಇಷ್ಟವಾಯಿತು. ಅವಕಾಶ ಸಿಕ್ಕರೆ ನಾನು ಐತಿಹಾಸಿಕ ಪಾತ್ರಗಳಲ್ಲಿಯೂ ನಟಿಸಲು ಸಿದ್ಧ’ ಎನ್ನುತ್ತಾರೆ ಇಹಾನಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT