ಫಲಿತಾಂಶಕ್ಕೂ ಮುನ್ನ ಪಕ್ಷಾಂತರ ಭೀತಿ

ಭಾನುವಾರ, ಮೇ 26, 2019
32 °C
ವಿಧಾನಸಭೆ, ಲೋಕಸಭೆ ಅಭ್ಯರ್ಥಿಗಳ ಜತೆ ಸಭೆ ನಡೆಸಿದ ಚಂದ್ರಬಾಬು ನಾಯ್ಡು

ಫಲಿತಾಂಶಕ್ಕೂ ಮುನ್ನ ಪಕ್ಷಾಂತರ ಭೀತಿ

Published:
Updated:
Prajavani

ಅಮರಾವತಿ: ವೈಎಸ್‌ಆರ್‌ ಕಾಂಗ್ರೆಸ್‌ ಮತ್ತು ಬಿಜೆಪಿ ಮುಖಂಡರು ತೆಲುಗುದೇಶಂ ಪಕ್ಷದ (ಟಿಡಿಪಿ) ಅಭ್ಯರ್ಥಿಗಳನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಆರಂಭಿಸಿದ್ದಾರೆ ಎಂಬ ಸುದ್ದಿ ದಟ್ಟವಾಗಿರುವ ಕಾರಣಕ್ಕೆ ಆಂಧ್ರ ಪ್ರದೇಶದ ಮುಖ್ಯಮಂತ್ರಿ, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರು ಸೋಮವಾರ ತಮ್ಮ ಪಕ್ಷದ ಎಲ್ಲ ಅಭ್ಯರ್ಥಿಗಳನ್ನು ಮನೆಗೆ ಆಹ್ವಾನಿಸಿ ಮಾತುಕತೆ ನಡೆಸಿದ್ದಾರೆ.

ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ 175 ಅಭ್ಯರ್ಥಿಗಳು ಮತ್ತು ಲೋಕಸಭಾ ಚುನಾವಣೆಯ ಕಣದಲ್ಲಿರುವ 25 ಅಭ್ಯರ್ಥಿಗಳನ್ನು ತಮ್ಮ ಅಧಿಕೃತ ನಿವಾಸಕ್ಕೆ ಆಹ್ವಾನಿಸಿದ್ದ ನಾಯ್ಡು, ಪ್ರತಿ ಅಭ್ಯರ್ಥಿಯ ಜೊತೆಗೂ ಮಾತುಕತೆ ನಡೆಸಿ, ಅವರ ಗೆಲುವಿನ ಸಾಧ್ಯತೆಗಳ ಬಗ್ಗೆ ಮತ್ತು ಸೋಲುವ ಭೀತಿ ಇದ್ದರೆ ಅದಕ್ಕೆ ಕಾರಣ ಏನೆಂಬುದರ ಬಗ್ಗೆ ಚರ್ಚಿಸಿದ್ದಾರೆ.

ಟಿಡಿಪಿ ನಡೆಸಿದ್ದ ಆಂತರಿಕ ಸಮೀಕ್ಷೆಯ ಪ್ರಕಾರ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 130 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲಬಹುದೆಂಬ ನಿರೀಕ್ಷೆ ಇದೆ. ಹೀಗಿರುವಾಗ ಸರ್ಕಾರ ರಚಿಸುವ ಸಾಧ್ಯತೆಯ ಬಗ್ಗೆ ಭಯಪಡುವ ಅಗತ್ಯ ಬರುವುದಿಲ್ಲ. ಆದರೆ, ಚುನಾವಣೆ ನಡೆದ ದಿನಾಂಕ (ಏ. 11) ಹಾಗೂ ಮತ ಎಣಿಕೆಯ ದಿನಾಂಕಗಳ (ಮೇ 23) ನಡುವೆ ದೀರ್ಘ ಅಂತರ ಇರುವುದರಿಂದ, ನಾಯ್ಡು ಅವರು ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯಲು ಬಿಜೆಪಿ– ವೈಎಸ್ಆರ್‌ಸಿ ಪಕ್ಷಗಳು ಸರ್ವ ಪ್ರಯತ್ನಗಳನ್ನು ಮಾಡಬಹುದೆಂಬ ಅನುಮಾನ ಟಿಡಿಪಿ ನಾಯಕರಿಗೆ ಎದುರಾಗಿದೆ.

ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ನಾಯ್ಡು ಅಧಿಕಾರಕ್ಕೆ ಬಂದರೆ ಸ್ಥಿತಿ ಏನಾಗಬಹುದು ಎಂಬುದು ಈಗ ಟಿಡಿಪಿ ಮುಖಂಡರನ್ನು ಕಾಡುವ ಪ್ರಶ್ನೆಯಾಗಿದೆ. ಇಂಥ ಸ್ಥಿತಿ ಬಂದರೆ ನಾಯ್ಡು, ಮೋದಿ ವಿರುದ್ಧ ತೊಡೆತಟ್ಟುವುದು ಖಚಿತ. ಈ ಸಂದರ್ಭವನ್ನು ಬಳಸಿಕೊಂಡು, ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ ರಾವ್‌ ಅವರು ಆಟ ಆರಂಭಿಸಬಹುದು. ‘ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ, ಟಿಡಿಪಿಯ ದುರ್ಬಲ ಶಾಸಕರು ಮತ್ತು ತೆಲಂಗಾಣದಲ್ಲಿ ಭಾರಿ ಆಸ್ತಿ ಹೊಂದಿರುವ ಕೆಲವು ಶ್ರೀಮಂತ ಶಾಸಕರ ಮೇಲೆ ಒತ್ತಡ ಹೇರಿ,  ಅವರನ್ನು ಬ್ಲ್ಯಾಕ್‌ಮೇಲ್‌ ಮಾಡಿ ಅವರ ನಿಷ್ಠೆಯನ್ನು ವೈಎಸ್‌ಆರ್‌ ಕಾಂಗ್ರೆಸ್‌ನ ಜಗನ್‌ ಮೋಹನ್‌ ರೆಡ್ಡಿ ಕಡೆಗೆ ವಾಲುವಂತೆ ಮಾಡುವ ಯೋಜನೆಯೊಂದನ್ನು ಟಿಎಸ್‌ಆರ್‌ ಮುಖ್ಯಸ್ಥ ಚಂದ್ರಶೇಖರ ರಾವ್‌ ರೂಪಿಸಿದ್ದಾರೆ’ ಎಂದು ಹೇಳಲಾಗುತ್ತಿದೆ.

‘ರಾಜ್ಯದಲ್ಲಿ ಟಿಡಿಪಿ ಅಧಿಕಾರ ಹಿಡಿಯುತ್ತದೆ, ಕೇಂದ್ರದಲ್ಲಿ ಮೋದಿ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ’ ಎಂಬ ವಿಶ್ವಾಸವನ್ನು ತನ್ನ ಪಕ್ಷದ ಅಭ್ಯರ್ಥಿಗಳಲ್ಲಿ ಮೂಡಿಸುವ ಪ್ರಯತ್ನವನ್ನು ನಾಯ್ಡು ಅವರು ಸೋಮವಾರ ಮಾಡಿದ್ದಾರೆ. ‘ಕೇಂದ್ರದಲ್ಲಿ ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೂ ಎಲ್ಲರಿಗೂ ಸ್ವೀಕೃತವಾಗುವಂಥ ಹೊಸ ವ್ಯಕ್ತಿಯೊಬ್ಬರು ಸರ್ಕಾರವನ್ನು ಮುನ್ನಡೆಸುತ್ತಾರೆ’ ಎಂಬ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.

‘ಚುನಾವಣೆಗೂ ಮುನ್ನ ಭಾರಿ ಸದ್ದು ಮಾಡಿದ್ದ ವೈಎಸ್‌ಆರ್‌ಸಿ ನಾಯಕರು ಈಗ ಮೌನ ವಹಿಸಿದ್ದಾರೆ. ರಾಜ್ಯದ ಮಹಿಳೆಯರು ಮತ್ತು ಹಿರಿಯರು ದೊಡ್ಡ ಪ್ರಮಾಣದಲ್ಲಿ ಟಿಡಿಪಿಯನ್ನು ಬೆಂಬಲಿಸಿದ್ದಾರೆ ಎಂಬುದು ಅವರಿಗೆ ಮನವರಿಕೆಯಾಗಿದೆ’ ಎಂದಿರುವ ನಾಯ್ಡು, ಕೊನೆಯ ಮತದ ಎಣಿಕೆ ಮುಗಿಯುವವರೆಗೂ ಅತ್ಯಂತ ಎಚ್ಚರದಿಂದಿರುವಂತೆ ಅಭ್ಯರ್ಥಿಗಳಿಗೆ ಸೂಚನೆ ನೀಡಿದರು.

‘ನಾಯ್ಡು ಅವರಿಗೆ ಸೋಲಿನ ಭೀತಿ ಕಾಡಲು ಆರಂಭವಾಗಿದೆ. ಚುನಾವಣಾ ಆಯೋಗದ ಮೇಲೆ ಅವರು ಮಾಡುತ್ತಿರುವ ಆರೋಪಗಳೇ ಇದಕ್ಕೆ ಸಾಕ್ಷಿ’ ಎಂದು ವೈಎಸ್‌ಆರ್‌ ಕಾಂಗ್ರೆಸ್‌ ಹೇಳುತ್ತಿದೆ.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 4

  Frustrated
 • 3

  Angry

Comments:

0 comments

Write the first review for this !