ಶುಕ್ರವಾರ, ಜುಲೈ 1, 2022
25 °C

'ಚಂದ್ರಯಾನ–2’: ಚಂದ್ರನಲ್ಲಿ ಇಳಿಯಲು ಇನ್ನು ಒಂದು ಹೆಜ್ಜೆ ಬಾಕಿ

ರಶೀದ್ ಕಪ್ಪನ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಚಂದ್ರಯಾನ–2’ರ ವಿಕ್ರಂ ಲ್ಯಾಂಡರ್‌ ನೌಕೆಯನ್ನು ಚಂದ್ರನತ್ತ ಮತ್ತಷ್ಟು ಕೆಳಗೆ ಇಳಿಸುವ ಕಾರ್ಯಾಚರಣೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಬುಧವಾರ ಮುಂಜಾನೆ 3.42ಕ್ಕೆ ನಡೆಸಿದೆ.

ಮಂಗಳವಾರ ಬೆಳಿಗ್ಗೆ 8.50ರಲ್ಲಿ ನಾಲ್ಕು ಸೆಕೆಂಡ್‌ಗಳ ಈ ಕಾರ್ಯಾಚರಣೆ ನಡೆಸಲಾಗಿದ್ದು, ಬುಧವಾರ ನಿಗದಿತ ಸಮಯಕ್ಕೆ ಕಾರ್ಯಾಚರಣೆ ನಡೆದಿದೆ.

 

ಇದಕ್ಕಾಗಿ ಇಸ್ರೊ ವಿಕ್ರಂ ಲ್ಯಾಂಡರ್‌ನ್ನು ಬಳಸಿದೆ. ಈ ಕಾರ್ಯಾಚರಣೆ 9 ಸೆಕೆಂಡ್‌ಗಳ ಕಾಲ ನಡೆದಿದ್ದು ನಿಗದಿತ ಕಕ್ಷೆಯಲ್ಲಿ ನೌಕೆಯನ್ನು ಇಳಿಸಲಾಗಿದೆ.  

ಇದನ್ನೂ ಓದಿಚಂದ್ರಯಾನ–2: ನೌಕೆ ಇಳಿಯುವ ಕೊನೆಯ 15 ನಿಮಿಷ ರೋಚಕ

ಪ್ರಸ್ತುತ ಲ್ಯಾಂಡರ್  35 km X 101 km ಕಕ್ಷೆಯಲ್ಲಿದೆ. ಚಂದ್ರಯಾನ- 2 ಆರ್ಬಿಟರ್ 96 km x 125 km ಕಕ್ಷೆಯಲ್ಲಿ ತಿರುಗಲಿದ್ದು ಆರ್ಬಿಟರ್ ಮತ್ತು ಲ್ಯಾಂಡರ್  ಸರಿಯಾದ ಕಾರ್ಯಕ್ಷಮತೆ ಹೊಂದಿದೆ ಎಂದು ಇಸ್ರೊ ಹೇಳಿದೆ. 

ಬುಧವಾರ ನಡೆಸಿರುವ ಕಾರ್ಯಾಚರಣೆ ಯಶಸ್ವಿಯಾಗಿರುವುದರಿಂದ ಸೆಪ್ಟೆಂಬರ್ 7ರಂದು ರಾತ್ರಿ  ವಿಕ್ರಂ ಲ್ಯಾಂಡರ್  ಚಂದ್ರನ  ಮೇಲ್ಮೈ ಸ್ಪರ್ಶಿಸಲಿದೆ. ಸೆಪ್ಟೆಂಬರ್ 7, ಶನಿವಾರ ಮಧ್ಯರಾತ್ರಿ  1 ಮತ್ತು 2 ಗಂಟೆಯ ನಡುವೆ ಇದು ಚಂದ್ರನಲ್ಲಿ ಇಳಿಯಲಿದೆ. ರಾತ್ರಿ 1.30 ಮತ್ತು 2.30ರ ಮಧ್ಯೆ  ಚಂದ್ರಯಾನ ನೌಕೆ -2 ನೌಕೆ ಚಂದ್ರನ ಮೇಲ್ಮೈ ಸ್ಪರ್ಶಿಸಲಿದೆ.

‘ವಿಕ್ರಂ’ ಲ್ಯಾಂಡರ್ ಚಂದ್ರನ ಮೇಲೆ ಇಳಿದ ನಂತರ ಮೂರು ನಾಲ್ಕು ಗಂಟೆಯೊಳಗೆ ‘ಪ್ರಜ್ಞಾನ್’ ರೋವರ್ ಅದರಿಂದ  ಬೇರ್ಪಡಲಿದೆ.  ಪ್ರಜ್ಞಾನ್ ರೋವರ್ ಚಂದ್ರನ ಮಣ್ಣಿನ ಬಗ್ಗೆ14 ದಿನಗಳ ಕಾಲ ಸಂಶೋಧನೆ ನಡೆಸಲಿದೆ.

ನೀರಿಗಾಗಿ ಸಂಶೋಧನೆ ನಡೆಸುವುದು ಇಲ್ಲಿ ಅತಿ ಸಂದಿಗ್ದ ಕಾರ್ಯ.  2008ರಲ್ಲಿ ನಡೆಸಿದ ಚಂದ್ರಯಾನ- 1ರಲ್ಲಿ ಚಂದ್ರನಲ್ಲಿ ನೀರಿನಂಶವಿರುವುದು ಪತ್ತೆಯಾಗಿತ್ತು. ಚಂದ್ರನ ಮೇಲ್ಮೈನಲ್ಲಿರುವ ರಾಸಾಯನಿಕ ಮತ್ತು ಇತರ ವಸ್ತುಗಳ ಬಗ್ಗೆ ರೋವರ್ ಸಂಶೋಧನೆ ನಡೆಸುವ ಮೂಲಕ ಸೌರ ಮಂಡಲದ ಮೂಲವನ್ನು ಮತ್ತಷ್ಟು ತಿಳಿಯಲು ಸಹಾಯ ಮಾಡಲಿದೆ.

ಜಟಿಲ ಕಾರ್ಯಾಚರಣೆ
 ಸೆಪ್ಟೆಂಬರ್ 7ರಂದು ಚಂದ್ರನ ಮೇಲೆ ಚಂದ್ರಯಾನ–2 ನೌಕೆ ಇಳಿಯುವ ಕೊನೆಯ 15 ನಿಮಿಷಗಳು ರೋಚಕವಾಗಿರಲಿವೆ  ಎಂದು ಇಸ್ರೊ ಅಧ್ಯಕ್ಷ ಡಾ.ಕೆ. ಶಿವನ್ ಹೇಳಿದ್ದರು. ಅದೇ ವೇಳೆ ಬಾಹ್ಯಾಕಾಶ ಸಂಸ್ಥೆಯ ಇತಿಹಾಸದಲ್ಲಿ ಇದೊಂದು ಜಟಿಲ ಕಾರ್ಯಾಚರಣೆ ಎಂದು ಇಸ್ರೊದ ಮಾಜಿ ಅಧ್ಯಕ್ಷ ಜಿ. ಮಾಧವನ್ ನಾಯರ್ ಅಭಿಪ್ರಾಯಪಟ್ಟಿದ್ದಾರೆ.  ದಶಕದ ಹಿಂದೆ ನಾಯರ್  ಚಂದ್ರಯಾನ -1ರ ನೇತೃತ್ವ ವಹಿಸಿದ್ದರು.

ಲ್ಯಾಂಡರ್  ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸಲು ಸೂಕ್ತವಾದ ಸ್ಥಳ ಯಾವುದು ಎಂಬುದನ್ನು ಆರ್ಬಿಟರ್‌ನಲ್ಲಿರುವ ಕ್ಯಾಮೆರಾ ಮ್ಯಾಪ್ ಮಾಡುತ್ತದೆ.  ಎಲ್ಲಿ ಇಳಿಯಬೇಕು ಎಂಬುದನ್ನು ನಿರ್ಧರಿಸಿದ ನಂತರ ಲ್ಯಾಂಡರ್  ಸ್ವತಂತ್ರ ನಿರ್ಧಾರ ಕೈಗೊಳ್ಳುವ ರೀತಿಯಲ್ಲಿರಲಿದೆ.

ಇದನ್ನೂ ಓದಿ: ಚಂದ್ರನ ಮತ್ತಷ್ಟು ಸನಿಹಕ್ಕೆ ‘ಚಂದ್ರಯಾನ–2’: ಆರ್ಬಿಟರ್‌ನಿಂದ ಬೇರ್ಪಟ್ಟ ಲ್ಯಾಂಡರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು