ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮನ್ವಿತಾ ‘ಸಮಾವರ್ತನ್‌’

Last Updated 14 ಜೂನ್ 2018, 13:32 IST
ಅಕ್ಷರ ಗಾತ್ರ

ಗಾಯನವೇ ಆಗಲಿ, ನೃತ್ಯವೇ ಇರಲಿ ವೇದಿಕೆಯ ಮೇಲೆ ಹೊಸತೇನಾದರೂ ಮಾಡಬೇಕೆನ್ನುವ ತುಡಿತವನ್ನಿಟ್ಟುಕೊಂಡವರು ಸಮನ್ವಿತಾ ಶರ್ಮಾ. ಈ ಬಾರಿ ಅವರು ಮತ್ತೊಂದು ಪ್ರಯೋಗಕ್ಕೆ ಸಿದ್ಧವಾಗಿದ್ದಾರೆ. ಕಥಕ್‌ನ ಶಾಸ್ತ್ರೀಯ ನೃತ್ಯದ ಸಾಂಪ್ರದಾಯಿಕ ಸಂಭ್ರಮಾಚರಣೆ ‘ಸಮಾವರ್ತನ್‌’ ಪ್ರದರ್ಶನಕ್ಕೆ ಅವರೀಗ ಸಜ್ಜಾಗಿದ್ದಾರೆ. ಹಾಡು–ವಿವರಣೆ–ನೃತ್ಯದ ಸಂಯೋಜನೆಗೆ ಹೊಸತೊಂದು ಮೆರುಗು ನೀಡಿ ತಮ್ಮದೇ ಶೈಲಿಯಲ್ಲಿ ಪ್ರಸ್ತುತಪಡಿಸಲಿದ್ದಾರೆ.

ವಂದನಾ, ತಾಲ್, ಠುಮರಿ, ಭಜನ್, ತರಾನಾ ಮುಂತಾದ ಕಥಕ್ ಪ್ರದರ್ಶನದ ವಿಶಿಷ್ಟವಾದ ಕೆಲವು ಸಾಂಪ್ರದಾಯಿಕ ಶೈಲಿಗಳನ್ನು ಒಳಗೊಂಡಿರುವ ಈ ಪ್ರದರ್ಶನದ ವಿಶೇಷತೆ ಅಡಗಿರುವುದು ಕಥಾಕಾರ್‌ ಪದ್ಧತಿಯಲ್ಲಿ. ತಾವೇ ಹಾಡಿ, ವಿವರಣೆಯನ್ನೂ ತಾವೇ ನೀಡಿ ಕಲಾರಸಿಕರನ್ನು ಕಥಕ್‌ನ ಮಜಲುಗಳಲ್ಲಿ ಬಂಧಿಯಾಗಿಸಲಿದ್ದಾರೆ ಸಮನ್ವಿತಾ. ಸಂಗೀತ ನಿರ್ದೇಶಕ ಪ್ರವೀಣ್ ಡಿ ರಾವ್ ತಂಡ ಸಂಗೀತ ಸಾಥ್‌ ನೀಡಲಿದೆ.

ಮಾತು ಕಲಿಯುವ ಮುನ್ನವೇ ಸಂಗೀತದ ಇಂಪಿಗೆ ತಲೆದೂಗಿದವರು. ಅಮ್ಮ ರೋಹಿಣಿ ಪ್ರಭುನಂದನ್‌ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪ್ರಾವೀಣ್ಯ ಪಡೆದವರು. ‘ಆರಂಭಿಕ ಸಂಗೀತ ಪಾಠಕ್ಕೆ ಅಮ್ಮನೇ ಗುರು. ಏಳು ವರ್ಷವಾದಾಗ ಎಂ.ಎಸ್‌. ಶೀಲಾ ಅವರ ಬಳಿ ಅಭ್ಯಾಸ ಆರಂಭವಾಯ್ತು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಕ್ಕೆ ಪಂಡಿತ ವಿಶ್ವನಾಥ ನಾಕೋಡ್‌ ಗುರುವಾದರು. ಮೊದಲ ಅವಕಾಶ ಹೆಕ್ಕಿ ಕೊಟ್ಟವರು ಸಿ.ಅಶ್ವತ್ಥ್‌. ಕಳೆದ ಹತ್ತು ವರ್ಷಗಳಿಂದ ನಾದಂ ಸಂಸ್ಥೆಯ ಗುರುಗಳಾದ ನಂದಿನಿ ಕೆ ಮೆಹ್ತಾ ಮತ್ತು ಮುರಳಿ ಮೋಹನ್ ಅವರಲ್ಲಿ ಕಥಕ್‌ ಅಭ್ಯಾಸ ಸಾಗಿದೆ’ ಎಂದು ನೆನಪಿಸಿಕೊಳ್ಳುತ್ತಾರೆ ಸಮನ್ವಿತಾ.

ಕೆಲ ದಿನ ಎಂಜಿನಿಯರ್‌ ಆಗಿ ಕೆಲಸ ಮಾಡಿರುವ ಅವರು, ‘ರೆಕ್ಕೆ ಇದ್ದರೆ ಸಾಕೆ...’ ಹಾಡಿನ ಮೂಲಕ ಹಿನ್ನೆಲೆ ಸಂಗೀತಕ್ಕೆ ಪದಾರ್ಪಣೆ ಮಾಡಿದರು. ನಂತರ ‘ಸ್ಟಾರ್‌ ಸಿಂಗರ್‌’ ಕಾರ್ಯಕ್ರಮದ ಮೂಲಕ ಮನೆ–ಮನೆಯ ಮಾತಾದವರು. ಭರತನಾಟ್ಯ ಹಾಗೂ ಕಥಕ್‌ ನೃತ್ಯದಲ್ಲೂ ಪರಿಣಿತೆ. ‘ಪರಿ’, ‘ಅದ್ವೈತ’, ‘ಮತ್ತೆ ಬನ್ನಿ ಪ್ರೀತ್ಸೋಣ’ ‘ಜೆಸ್ಸಿ’, ‘ನೀರ್‌ ದೋಸೆ’, ‘ಸ್ಮೈಲ್‌ ಪ್ಲೀಸ್‌’ ಸೇರಿದಂತೆ ಇಲ್ಲಿಯವರೆಗೆ ಸುಮಾರು 33ಕ್ಕೂ ಅಧಿಕ ಚಿತ್ರಗೀತೆಗಳಿಗೆ ದನಿ ನೀಡಿದ್ದಾರೆ.

ಏಕವ್ಯಕ್ತಿ ಪ್ರದರ್ಶನ
ಭಾನುವಾರ (ಜೂ. 17) ಸಂಜೆ 5.30.
ಎಡಿಎ ರಂಗಮಂದಿರ.
ಅತಿಥಿಗಳು: ಸುನಿಲ್‌ ಕೊಠಾರಿ, ವಿಶ್ವನಾಥ್ ನಾಕೋಡ್, ವೀಣಾ ಮೂರ್ತಿ ವಿಜಯ್‌
ಪ್ರಸ್ತುತಿ: ನಾದಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT