ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛತ್ತೀಸಗಡ ವಿಧಾನಸಭೆ ಚುನಾವಣೆ: ಶೇ 70ರಷ್ಟು ಮತದಾನ

Last Updated 12 ನವೆಂಬರ್ 2018, 13:08 IST
ಅಕ್ಷರ ಗಾತ್ರ

ರಾಯಪುರ (ಛತ್ತೀಸಗಡ):ಛತ್ತೀಸಗಡದ 90 ವಿಧಾನಸಭಾ ಕ್ಷೇತ್ರಗಳಲ್ಲಿ 18 ಕ್ಷೇತ್ರಗಳಿಗೆ ಸೋಮವಾರ ನಡೆದ ಮೊದಲ ಹಂತದ ಮತದಾನ ಪ್ರಕ್ರಿಯೆಯಲ್ಲಿ ಶೇ 70ರಷ್ಟು ಮತದಾನವಾಗಿದೆ.

ಕೊಂಡಗಾಂವ್‌ನಲ್ಲಿ ಶೇ 61.47, ಕೇಶ್ಕಾಲ್‌ ಶೇ 63.51, ಕಾಂಕೇರ್ ಶೇ 62, ಬಸ್ತಾರ್ ಶೇ 58, ದಾಂತೇವಾಡ ಶೇ 49, ಕೈರಾಗರ್ ಶೇ 60.5, ದಂಗ್ರಾಗರ್‌ ಶೇ 64 ಮತ್ತು ಖುಜ್ಜಿಯಲ್ಲಿ ಶೇ 65.5ರಷ್ಟು ಮತದಾನವಾಗಿದೆ.2014ರ ಡಿಸೆಂಬರ್‌ನಲ್ಲಿ ಶರಣಾಗತಿಯಾಗಿದ್ದ ನಕ್ಸಲ್‌ ದಂಪತಿ ಈ ಬಾರಿ ನಾರಾಯಣಪುರದಲ್ಲಿ ತಮ್ಮ ಮತ ಚಲಾಯಿದರು.

ಮಧ್ಯಾಹ್ನ 3 ಗಂಟೆವರೆಗೆ10 ಕ್ಷೇತ್ರಗಳಲ್ಲಿಶೇ 47.18ರಷ್ಟು ಮತ ಚಲಾವಣೆಯಾಗಿತ್ತು.ನಕ್ಸಲರ ದಾಳಿ ಭೀತಿ ಇರುವುದರಿಂದ ಮತ್ತು ಭಾನುವಾರವೂ ನಕ್ಸಲರು ದಾಳಿ ನಡೆಸಿರುವುದರಿಂದ ಮತದಾನ ನಡೆಯುತ್ತಿರುವ ಪ್ರದೇಶದಲ್ಲಿ ಬಿಗಿಭದ್ರತೆ ಕೈಗೊಳ್ಳಲಾಗಿತ್ತು.

ಬಿಜಾಪುರದ ಮಜ್ಜಿಗುದಾ ಗ್ರಾಮದಲ್ಲಿ ನಕ್ಸಲರು ಗುಂಡಿನ ದಾಳಿ ನಡೆಸಿದ್ದು, ಈ ಗುಂಡಿನ ಚಕಮಕಿಯಲ್ಲಿ ನಾಲ್ವರು ನಕ್ಸಲರು ಮೃತಪಟ್ಟಿದ್ದಾರೆ.ಸಿಆರ್‌ಪಿಎಫ್‌ನ ಇಬ್ಬರುಯೋಧರು ತೀವ್ರವಾಗಿ ಗಾಯಗೊಂಡಿದ್ದಾರೆ.

ನಕ್ಸಲರ ಪ್ರಭಾವ ಹೆಚ್ಚಿರುವ ಭೀಜಿ ಮತ್ತು ಗೋರ್ಖಾದಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಉತ್ತಮ ಮತದಾನವಾಗಿದೆ. ಬೆಳಿಗ್ಗೆ 10 ಗಂಟೆಗೆ ಕಳೆದ ಬಾರಿ ಒಂದೂ ಮತ ಚಲಾವಣೆಯಾಗದ ಭೀಜಿ ಮತಗಟ್ಟೆ 1ರಲ್ಲಿ ಈ ಬಾರಿ 72 ಮತಗಳು ಚಲಾವಣೆಯಾಗಿವೆ.

ಕೊಂಟಾದಲ್ಲಿ 3 ಸುಧಾರಿತ ಬಾಂಬ್‌ ಪತ್ತೆ

ಕೊಂಟಾದಲ್ಲಿ ಮತಗಟ್ಟೆ ಸಮೀಪವೇ ಮೂರು ಸುಧಾರಿತ ಬಾಂಬ್‌ ಪತ್ತೆಯಾಗಿದ್ದು, ಸಿಆರ್‌ಪಿಎಫ್‌ನ ಬಾಂಬ್‌ ನಿಕ್ಕ್ರಿಯ ದಳದವರು ಅದನ್ನು ನಿಷ್ಕ್ರಿಯಗೊಳಿಸಿದರು. ಪಾಂಡೆಪಾರಾದ ಬಿಜಾಪುರ– ಭೈರಂಗಡ– ಕೇಶಕುತುಲ್ ಮಾರ್ಗದಲ್ಲಿ ಒಂದು ಕೆ.ಜಿ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಶಂಕಿತ ನಕ್ಸಲ್‌ ಒಬ್ಬರನ್ನು ಬಂಧಿಸಲಾಗಿದೆ.ನಕ್ಸಲ್‌ ಪ್ರಭಾವ ಹೆಚ್ಚಿರುವ ಕಿಸ್ತಾರಾಮ್, ಪಾಲೆಮ್ ಮತ್ತು ಬಿಜ್ಜಿಯಲ್ಲಿ ಬೆಳಿಗ್ಗೆ 10ಗಂಟೆವರೆಗೆ ಶಾಂತಿಯುತ ಮತದಾನವಾಗಿದೆ.

ಕೈಕೊಟ್ಟ ಇವಿಎಂ

ಕಾಂಕೇರ್‌ ಮತ್ತು ಬಿಜಾಪುರ ಜಿಲ್ಲೆಗಳ ಮತಗಟ್ಟೆಯೊಂದರಲ್ಲಿ ಇವಿಎಂನಲ್ಲಿ ದೋಷ ಕಂಡುಬಂದಿದ್ದು, ಬೆಳಿಗ್ಗೆ 10ರವರೆಗೂ ಮತದಾನ ನಡೆದಿರಲಿಲ್ಲ. ಬೆಳಿಗ್ಗೆಯೇ ಮತಗಟ್ಟೆಗೆ ಬಂದಿದ್ದ ಜನರು, ಸರತಿ ಸಾಲಿನಲ್ಲಿ ನಿಂತು ತಾಸುಗಟ್ಟೆಲೇ ಕಾಯಬೇಕಾಯಿತು.

ಚುನಾವಣೆ ಅಧಿಸೂಚನೆ ಹೊರಬಿದ್ದ ನಂತರದ 15 ದಿನಗಳಲ್ಲಿ ನಕ್ಸಲರು ಆರು ಬಾರಿ ಸುಧಾರಿತ ಬಾಂಬ್‌ಗಳನ್ನು ಸ್ಫೋಟಿಸಿದ್ದಾರೆ. ಈ ದಾಳಿಗಳಲ್ಲಿ ನಾಗರಿಕರು, ಭದ್ರತಾ ಸಿಬ್ಬಂದಿ ಮತ್ತು ದೂರದರ್ಶನದ ಕ್ಯಾಮೆರಾಮನ್ ಸೇರಿ 13 ಜನರು ಮೃತಪಟ್ಟಿದ್ದಾರೆ.

ರಾಜನಂದಗಾಂವ್‌ನಲ್ಲಿ ಮುಖ್ಯಮಂತ್ರಿ ರಮಣ್‌ ಸಿಂಗ್ ಅವರಿಗೆಕಾಂಗ್ರೆಸ್‌ ಪ್ರಬಲ ಸ್ಪರ್ಧೆ ಒಡ್ಡಲು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಸೋದರನ ಮಗಳು ಕರುಣಾ ಶುಕ್ಲಾ ಅವರನ್ನುಕಣಕ್ಕಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT