ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛತ್ತೀಸಗಡ ಚುನಾವಣೆ: ಇಟ್ಟಿಗೆ ಗೋಡೆ ನಿರ್ಮಿಸಿ ಇವಿಎಂ ಭದ್ರಗೊಳಿಸಿದ ಜಿಲ್ಲಾಡಳಿತ

Last Updated 24 ನವೆಂಬರ್ 2018, 2:04 IST
ಅಕ್ಷರ ಗಾತ್ರ

ಬೆಮೆತಾರ:ವಿದ್ಯುನ್ಮಾನ ಮತ ಯಂತ್ರ(ಇವಿಎಂ)ಗಳ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಸಾಕಷ್ಟು ಚರ್ಚೆಗಳು ನಡೆದಿವೆ. ಜತೆಗೆ, ಚುನಾವಣೆ ಬಳಿಕ ಇವಿಎಂಗಳನ್ನು ಇರಿಸಿ ಸಾಕಷ್ಟು ಭದ್ರೆತೆಯನ್ನೂ ಮಾಡಲಾಗುತ್ತದೆ. ಪೊಲೀಸ್‌, ಅರೆ ಸೇನಾಪಡೆ ಹೀಗೆ ಹಗಲು–ರಾತ್ರಿ ಭದ್ರತೆಯನ್ನು ನಿಯೋಜಿಸುವುದರ ಜತೆಗೆ, ಆಧುನಿಕ ತಂತ್ರಜ್ಞಾನವನ್ನು ಬಳಸಿ ಸಿ.ಸಿ ಟಿ.ವಿಗಳನ್ನೂ ಅಳವಡಿಸಲಾಗುತ್ತಿದೆ.

ಅದೇಕೋ ಈ ಎಲ್ಲಾ ಭದ್ರತೆಗಳ ಬಗ್ಗೆ ಛತ್ತೀಸಗಡದ ಬೆಮೆತಾರ ಜಿಲ್ಲಾ ಚುನಾವಣಾ ಅಧಿಕಾರಿಗೆ ವಿಶ್ವಾಸವಿದ್ದಂತೆ ಕಾಣಿಸಿಲ್ಲ. ಅದಕ್ಕಾಗಿ ಅವರು ವಿಧಾನಸಭೆ ಚುನಾವಣೆ ಬಳಿಕ ಇವಿಎಂಗಳನ್ನು ಇರಿಸಿದ್ದ ‘ಸ್ಟ್ರಾಂಗ್‌ ರೂಂ’ನ ಬಾಗಿಲ ಮುಂದೆ ಇಟ್ಟಿಗೆಯಿಂದ ಗೋಡೆಯನ್ನು ನಿರ್ಮಿಸಿ ಸೀಲ್‌ ಮಾಡಿದ್ದಾರೆ!

ಪಂಚರಾಜ್ಯ ಚುನಾವಣೆಗಳಲ್ಲಿ ಹೆಚ್ಚು ನಕ್ಸಲ್‌ಪೀಡಿತ ಪ್ರದೇಶಗಳನ್ನು ಒಳಗೊಂಡ ರಾಜ್ಯ ಛತ್ತೀಸಗಡ. ಚುನಾವಣೆ ಪೂರ್ವದಲ್ಲಿ ಇಲ್ಲಿ ನಕ್ಸಲರು ದಾಳಿಗಳನ್ನೂ ನಡೆಸಿದ್ದಾರೆ. ಈ ಎಲ್ಲದರಿಂದ ರಕ್ಷಣೆ ಪಡೆಯಲು, ಅಭ್ಯರ್ಥಿಗಳ ಭವಿಷ್ಯ ದಾಖಲಾಗಿರುವ ಇವಿಎಂಗಳನ್ನು ಭದ್ರಗೊಳಿಸಲು ಜಿಲ್ಲಾಧಿಕಾರಿಯೂ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಮಹದೇವ್‌ ಕಾವೆರ್‌ ಇಂತಹದ್ದೊಂದು ಆದೇಶ ಮಾಡಿ, ಗೋಡೆಯನ್ನೂ ನಿರ್ಮಿಸಿದ್ದಾರೆ.

ಜಿಲ್ಲೆಯಲ್ಲಿ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಇವಿಎಂಗಳನ್ನು ಇರಿಸಿ ಬಾಗಿಲಿಗೆ ಬೀಗ ಹಾಕಿದ ಬಳಿಕ, ಬಾಗಿಲ ಮುಂದೆ ಇಟ್ಟಿಗಳಿಂದ ಗೋಡೆಯನ್ನು ನಿರ್ಮಿಸಲಾಗಿದೆ.

‘ಇವಿಎಂಗಳನ್ನು ಸುರಕ್ಷಿತವಾಗಿ ಇರಿಸಿಕೊಳ್ಳಲು ನಾವು ಗೋಡೆಯನ್ನು ನಿರ್ಮಿಸಿದ್ದೇವೆ. ಇದಕ್ಕೂ ಮೊದಲು ಗೇಟ್‌ಗೆ ಬೀಗವನ್ನು ಹಾಕಿದ್ದೇವೆ, ಆದರೂ ಅದರ ಮುಂದೆ ಹೆಚ್ಚುವರಿ ಭದ್ರತೆ ದೃಷ್ಟಿ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಗೋಡೆಯನ್ನು ಕಟ್ಟಿದ್ದೇವೆ. ಇವಿಎಂಗಳ ಭದ್ರತೆ ಅತ್ಯಂತ ಮಹತ್ವದ್ದಾಗಿದೆ. ಭದ್ರತೆಗೆ 120 ಕೇಂದ್ರ ಮೀಸಲು ಪಡೆಯ ಸಿಬ್ಬಂದಿಯ ಜತೆಗೆ, ಸಿ.ಸಿ ಟಿವಿಗಳನ್ನೂ ಅಳವಡಿಸಿ ಕಣ್ಗಾವಲು ಇರಿಸಲಾಗಿದೆ. ನಿಯಮಾನುಸಾರ ಗೋಡೆಯನ್ನೂ ನಿರ್ಮಿಸಿದ್ದೇವೆ’ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಮಹದೇವ್‌ ಕಾವೆರ್‌ ಈ ಅಸಾಮಾನ್ಯ ಭದ್ರತೆ ಕುರಿತು ಹೇಳಿದ್ದಾರೆ.

ಈ ಬಗೆಯ ಯೋಚನೆ ಏಕೆ ಬಂತು ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ‘ಕಳೆದ ಚುನಾವಣೆಯಲ್ಲಿ ಇವಿಎಂ ಇರಿಸಿದ್ದ ಕೊಠಡಿ ಬಾಗಲ ಮುಂದೆ ಅರ್ಧಮಟ್ಟಕ್ಕೆ ಗೋಡೆ ನಿರ್ಮಿಸಿದ್ದರ ಬಗ್ಗೆ ಟೀಕೆಗಳು ಆಕ್ಷೇಪಗಳು ವ್ಯಕ್ತವಾಗಿದ್ದವು. ಈ ಟೀಕೆಗಳಿಂದ ದೂರವಾಗಲು, ಪೂರ್ಣ ಗೋಡೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

ಛತ್ತೀಸಗಡಲ್ಲಿ ಮೊದಲ ಹಂತದ ಚುನಾವಣೆಯಲ್ಲಿ ನಕ್ಸಲ್‌ಪೀಡಿತ ಜಿಲ್ಲೆಗಳು ಸೇರಿದಂತೆ 18 ಕ್ಷೇತ್ರಗಳಿಗೆ ನ.12ರಂದು ಚುನಾವಣೆ ನಡೆದಿತ್ತು. ಉಳಿದಂತೆ 72 ಸ್ಥಾನಗಳಿಗೆ ನ.20ರಂದು ಚುನಾವಣೆ ನಡೆದಿದೆ. ಡಿ.11ರಂದು ಮತ ಎಣಿಕೆ ನಡೆಯಲಿದೆ. ಒಟ್ಟು 1,291 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT