ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನನ್ನು ಯಾಕೆ ಬಂಧಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರವಿಲ್ಲ: ಚಿದಂಬರಂ

Last Updated 9 ಸೆಪ್ಟೆಂಬರ್ 2019, 10:08 IST
ಅಕ್ಷರ ಗಾತ್ರ

ನವದೆಹಲಿ:ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಇತರರನ್ನುಯಾಕೆ ಬಂಧಿಸಿಲ್ಲ? ನನ್ನನ್ನು ಮಾತ್ರ ಯಾಕೆ ಬಂಧಿಸಿದ್ದಾರೆ ಎಂಬ ಪ್ರಶ್ನೆಗೆಉತ್ತರವಿಲ್ಲಎಂದು ಮಾಜಿ ಸಚಿವ ಪಿ. ಚಿದಂಬರಂ ಪರ ಅವರ ಕುಟುಂಬ ಟ್ವೀಟಿಸಿದೆ.

ಐಎನ್‌ಎಕ್ಸ್‌ ಮೀಡಿಯ ಹಗರಣದ ಆರೋಪಿಯಾಗಿರುವ ಚಿದಂಬರಂಈಗ ತಿಹಾರ್ ಜೈಲು ಸೇರಿದ್ದಾರೆ. ಚಿದಂಬರಂ ಪರವಾಗಿ ಅವರ ಕುಟುಂಬ ಟ್ವೀಟಿಸಿದ್ದು ಅದು ಹೀಗಿದೆ- ಈ ಪ್ರಕರಣದಲ್ಲಿ ಹಲವಾರು ಮಂದಿ ಅಧಿಕಾರಿಗಳು ಶಾಮೀಲಾಗಿದ್ದರೂ ನಿಮ್ಮನ್ನು ಮಾತ್ರ ಯಾಕೆ ಬಂಧಿಸಿದ್ದಾರೆ? ಕೊನೆಗೆ ಸಹಿ ಹಾಕಿದ ಕಾರಣದಿಂದಲೇ? ಎಂದು ಜನರು ಕೇಳುತ್ತಿದ್ದಾರೆ. ಈ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ.
ಯಾವೊಬ್ಬ ಅಧಿಕಾರಿಯೂ ತಪ್ಪೆಸಗಿಲ್ಲ, ಅವರು ಬಂಧಿತರಾಗಬೇಕೆಂದು ನಾನು ಬಯಸುವುದಿಲ್ಲ.

ಏನಿದು ಪ್ರಕರಣ?
2007ರಲ್ಲಿ ಚಿದಂಬರಂ ಅವರು ಕೇಂದ್ರ ಹಣಕಾಸು ಸಚಿವರಾಗಿದ್ದಾಗ ಐಎನ್‌ಎಕ್ಸ್ ಮೀಡಿಯಾಗೆ ₹305 ಕೋಟಿ ವಿದೇಶಿ ಹೂಡಿಕೆಗೆ ಎಫ್‌ಐಪಿಬಿ ಅನುಮತಿ ಸಿಕ್ಕಿತ್ತು. ಅನುಮತಿ ನೀಡಿಕೆಯಲ್ಲಿ ಅವ್ಯವಹಾರ ಆಗಿದೆ ಎಂದು ಸಿಬಿಐ ಮೇ 15, 2017ರಲ್ಲಿ ಎಫ್‌ಐಆರ್ ದಾಖಲಿಸಿತ್ತು. ಈ ಎಫ್‌ಐಆರ್ ಆಧರಿಸಿ, ಜಾರಿ ನಿರ್ದೇಶನಾಲಯವು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಚಿದಂಬರಂ ವಿರುದ್ಧ ಪ್ರಕರಣ ದಾಖಲಿಸಿತು. ಈ ಕುರಿತ ಎರಡು ಪ್ರಕರಣಗಳಲ್ಲಿ ಕಾರ್ತಿ ಹೆಸರನ್ನೂ ಸೇರಿಸಿತ್ತು.

ಆದಾಯ ತೆರಿಗೆ ಇಲಾಖೆ ಐಎನ್‌ಎಕ್ಸ್ ಮೀಡಿಯಾ ಪ್ರಕರಣದ ತನಿಖೆ ಆರಂಭಿಸಿದಾಗ, ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯು ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಐಎನ್‌ಎಕ್ಸ್ ಮೀಡಿಯಾ ಸಂಸ್ಥೆಗೆ ಸೂಚಿಸಿತು. ಆ ವೇಳೆಗಾಗಲೇ ಐಎನ್‌ಎಸ್ ಮೀಡಿಯಾ ಸಂಸ್ಥೆಯು ಕಾರ್ತಿ ಜೊತೆ ಸಂಪರ್ಕದಲ್ಲಿತ್ತು. ಚಿದಂಬರಂ ನೇತೃತ್ವದ ಹಣಕಾಸು ಸಚಿವಾಲಯದ ಅಡಿ ಕೆಲಸ ಮಾಡುವ ಎಫ್‌ಐಪಿಬಿ ಅಧಿಕಾರಿಗಳ ಜತೆ ಪ್ರಕರಣವನ್ನು ‘ಸೌಹಾರ್ದಯುತವಾಗಿ’ ಬಗೆಹರಿಸುವ ಹೊಣೆಯನ್ನು ಸಂಸ್ಥೆಯು ಕಾರ್ತಿಗೆ ವಹಿಸಿತ್ತು. ತಂದೆ ಚಿದಂಬರಂ ಅವರು ಕೇಂದ್ರ ಹಣಕಾಸು ಸಚಿವರಾಗಿದ್ದ ಸಂದರ್ಭವನ್ನು ಕಾರ್ತಿ ತಮ್ಮ ಲಾಭಕ್ಕಾಗಿ ಬಳಸಿಕೊಂಡಿದ್ದರು ಎಂಬುದು ಸಿಬಿಐ ಆರೋಪ.

ಹೂಡಿಕೆ ಉತ್ತೇಜನ ಮಂಡಳಿಯು ತನಿಖೆ ನಡೆಸುವ ಬದಲಾಗಿ, ಮೀಡಿಯಾ ಸಂಸ್ಥೆ ಪರವಾಗಿ ಕೆಲಸ ಮಾಡಿತು ಎನ್ನುವುದು ಸಿಬಿಐ ಆರೋಪ. ವಿದೇಶಿ ಬಂಡವಾಳ ಸ್ವೀಕಾರ ಅನುಮತಿಗಾಗಿ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಮಾಧ್ಯಮ ಸಂಸ್ಥೆಗೆ ಮಂಡಳಿ ಸೂಚಿಸಿತು. ಆದರೆ ಸಂಸ್ಥೆಯು ಅದಾಗಲೇ ವಿದೇಶಿ ಬಂಡವಾಳ ಸ್ವೀಕರಿಸಿ ಆಗಿತ್ತು ಎಂಬುದು ಇಲ್ಲಿ ಗಮನಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT