ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿಗೆ ‘ರಾಣಿ ರಶ್ಮೋನಿ’ ಕಣ್ಗಾವಲು

ಕರಾವಳಿ ಕಾವಲು ಪಡೆಗೆ ಬಲ ತುಂಬಿದ ರಾಣಿ ಅಬ್ಬಕ್ಕ ಸರಣಿಯ 5ನೇ ನೌಕೆ
Last Updated 19 ಜೂನ್ 2018, 2:39 IST
ಅಕ್ಷರ ಗಾತ್ರ

ಹೈದರಾಬಾದ್‌: ಭಾರತೀಯ ಕರಾವಳಿ ಮೇಲೆ ನಿರಂತರ ಕಣ್ಗಾವಲು ಇಡುವ ಉದ್ದೇಶದಿಂದ ನಿರ್ಮಿಸಲಾದ ರಾಣಿ ಅಬ್ಬಕ್ಕ ಸರಣಿಯ ಐದನೇ ನೌಕೆ ರಾಣಿ ರಶ್ಮೋನಿಯನ್ನು ಸೋಮವಾರ ವಿಶಾಖಪಟ್ಟಣದಲ್ಲಿ ಸೇವೆಗೆ ನಿಯೋಜಿಸಲಾಯಿತು.

ಕೋಲ್ಕತ್ತದ ರಾಣಿ ರಶ್ಮೋನಿ ಹೆಸರಿನ ಈ ನೌಕೆಯನ್ನು ಭಾರತೀಯ ಕರಾವಳಿ ರಕ್ಷಣಾ ಪಡೆಯ (ಐಸಿಜಿ) ಹೆಚ್ಚುವರಿ ಮಹಾನಿರ್ದೇಶಕ ವಿ.ಎಸ್‌.ಆರ್‌.ಮೂರ್ತಿ ಕರಾವಳಿ ಕಾವಲು ಪಡೆಗೆ ಸೇರ್ಪಡೆ ಮಾಡಿದರು.

ಎಂಜಿನ್‌: ಎಂಟಿಯು 4,000 ಸರಣಿಯ ಮೂರು ಡೀಸೆಲ್‌ ಎಂಜಿನ್‌ಗಳನ್ನು ಹೊಂದಿದೆ

ಸಾಮರ್ಥ್ಯ: ಪ್ರತಿ ಎಂಜಿನ್‌ 2,720 ಕೆ.ವಿ ಸಾಮರ್ಥ್ಯ ಹೊಂದಿದೆ (ವಾಟರ್‌ ಜೆಟ್‌ ಪ್ರೊಪಲ್ಷನ್‌)

ಗರಿಷ್ಠ ವೇಗ: 34 ನಾಟಿಕಲ್‌ ಮೈಲು (ಗಂಟೆಗೆ 63 ಕಿ.ಮೀ)

ಸಿಬ್ಬಂದಿ: 4 ಅಧಿಕಾರಿಗಳು ಮತ್ತು 34 ಸಿಬ್ಬಂದಿ

ನೌಕೆ ಮುಂದಾಳತ್ವ: ಕಮಾಂಡೆಂಟ್ ನವದೀಪ್‌ ಸಫಾಯ

ಮತ್ತೆ ಐದು ನೌಕೆ
ಕರಾವಳಿ ರಕ್ಷಣಾ ಪಡೆ ಮುಂದಿನ ಎರಡು ವರ್ಷಗಳಲ್ಲಿ ಇನ್ನೂ ಐದು ನೌಕೆಗಳನ್ನು ಹೊಂದಲಿದೆ. ಆಂಧ್ರಪ್ರದೇಶದ ಕರಾವಳಿ ತೀರದ ವಿಶಾಖಪಟ್ಟಣ, ಕಾಕಿನಾಡ ಮತ್ತು ಕೃಷ್ಣಪಟ್ಟಣದಲ್ಲಿ ಇವು ಕಣ್ಗಾವಲಿಡಲಿವೆ.

ಆಕಾಶದಲ್ಲಿ ಕಣ್ಗಾವಲು ಹೆಚ್ಚಿಸಲು ಕರಾವಳಿ ರಕ್ಷಣಾ ಪಡೆ ಯೋಜಿಸಿದ್ದು, ವಿಶಾಖಪಟ್ಟಣದಲ್ಲಿ ‘ಏರ್ ಎನ್‌ಕ್ಲೇವ್‌ ಸ್ಥಾಪಿಸಲು ಯೋಜಿಸಿದೆ. ಅಲ್ಲದೆ, ಭಾರತೀಯ ನೌಕಾಪಡೆಯ ಸಹಾಯದಿಂದ ಕಾಕಿನಾಡದಲ್ಲಿ ಸಹ ಜೆಟ್ಟಿಯನ್ನು (ಬಂದರು) ಕಟ್ಟಲಾಗುತ್ತದೆ ಎಂದು ವಿ.ಎಸ್‌.ಆರ್‌.ಮೂರ್ತಿ ತಿಳಿಸಿದರು.

ಆಂಧ್ರ ಪ್ರದೇಶದ ಕರಾವಳಿ ಕಣ್ಗಾವಲು ಸಂಪರ್ಕ ಜಾಲ ಹಂತ –2 ರ ಅಡಿಯಲ್ಲಿ ಅಂತರ ಮುಕ್ತ ವಿದ್ಯುನ್ಮಾನ ಕಣ್ಗಾವಲು ಖಾತ್ರಿಗೆ ಸುಮಾರು 60ಕ್ಕೂ ಹೆಚ್ಚು ರೇಡಾರ್‌ ಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದರು.

ಯಾವುದಕ್ಕೆ ಬಳಕೆ 
ಸಾಗರದಲ್ಲಿ ಬಹುಮುಖ ಕಾರ್ಯಾಚರಣೆಗಳಿಗೆ ಈ ನೌಕೆಯನ್ನು ಬಳಸಲಾಗುತ್ತದೆ. ಕರಾವಳಿ ತೀರದ ಮೇಲೆ ನಿರಂತರ ಕಣ್ಗಾವಲಿಡಲು ಇದರಿಂದ ನೆರವಾಗಲಿದೆ. ಕಳ್ಳಸಾಗಣೆ ತಡೆ ಮತ್ತು ನುಸುಳುಕೋರರ ಪತ್ತೆ, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ ಎಂದು ಎಡಿಜಿ ವಿ.ಎಸ್‌.ಆರ್‌.ಮೂರ್ತಿ ತಿಳಿಸಿದರು.

ಈ ನೌಕೆಗಳು ರಾಷ್ಟ್ರದ ವಿಶಾಲ ವ್ಯಾಪ್ತಿಯ ಸಾಗರದ ಹಿತಾಸಕ್ತಿಗಳನ್ನು ರಕ್ಷಿಸಲಿವೆ. ಅದರಲ್ಲೂ ವಿಶೇಷವಾಗಿ 26/11 ಮುಂಬೈ ದಾಳಿಯ ನಂತರ ಕರಾವಳಿ ಕಾವಲಿಗೆ ಕೈಗೊಂಡಿರುವ ರಕ್ಷಣಾ ಕ್ರಮಗಳಲ್ಲಿ ಈ ನೌಕೆಗಳು ಪ್ರಮುಖ ಪಾತ್ರ ವಹಿಸಲಿವೆ. ಕರಾವಳಿ ರಕ್ಷಣಾ ಪಡೆಗೆ ಹೆಚ್ಚಿನ ಬಲ ತುಂಬಿವೆ ಎಂದರು.

ಇದು ಭಾರಿ ಸವಾಲಿನ ಯೋಜನೆಯಾಗಿತ್ತು. ಭಾರ ಹೊರುವ ಮತ್ತು ವೇಗದ ಸಾಮರ್ಥ್ಯವನ್ನು ನೌಕೆಗೆ ತುಂಬುವಲ್ಲಿ ಎದುರಾಗಿದ್ದ ಸವಾಲುಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ
 – ವಿ.ಎಸ್‌.ಆರ್‌.ಮೂರ್ತಿ, ಭಾರತೀಯ ಕರಾವಳಿ ರಕ್ಷಣಾ ಪಡೆಯ (ಐಸಿಜಿ) ಹೆಚ್ಚುವರಿ ಮಹಾನಿರ್ದೇಶಕ

* ಮಾರ್ಚ್ 16ರಂದು ರಾಣಿ ರಶ್ಮೋನಿಯ ಮೊದಲ ಪರೀಕ್ಷೆ; ಮೇ 16ರಂದು ಇತರ ಪರೀಕ್ಷೆಗಳು
* 2009ರಲ್ಲಿ ರಾಣಿ ಅಬ್ಬಕ್ಕ ನೌಕೆ ನಿರ್ಮಾಣ ಆರಂಭ. 2012ರಲ್ಲಿ ಸೇವೆಗೆ ನಿಯೋಜನೆ
* 2013ರಲ್ಲಿ ರಾಣಿ ಆವಂತಿ ಬಾಯಿ ನೌಕೆ ಸೇವೆಗೆ ನಿಯೋಜನೆ
* ರಾಣಿ ದುರ್ಗಾವತಿ ಮತ್ತು ರಾಣಿ ಗೈಡಿನ್ಲಿಯು ನೌಕೆಗಳು ಕ್ರಮವಾಗಿ 2015 ಮತ್ತು 2016ರಲ್ಲಿ ಸೇವೆಗೆ ನಿಯೋಜನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT