ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

21 ದಿನಗಳಲ್ಲಿ ಮಕ್ಕಳ ಸಹಾಯವಾಣಿಗೆ ಬಂದ ಕರೆಗಳ ಸಂಖ್ಯೆ 4.6 ಲಕ್ಷ

Last Updated 17 ಏಪ್ರಿಲ್ 2020, 13:35 IST
ಅಕ್ಷರ ಗಾತ್ರ

ನವದೆಹಲಿ: ಮಕ್ಕಳ ಸಹಾಯಕ್ಕಾಗಿ ಸರ್ಕಾರ ಆರಂಭಿಸಿದ ಮಕ್ಕಳ ಸಹಾಯವಾಣಿ ಚೈಲ್ಡ್‌ಲೈನ್1098ಕ್ಕೆ ಕಳೆದ 21 ದಿನಗಳಲ್ಲಿ 4.6 ಲಕ್ಷ ಕರೆಗಳು ಬಂದಿವೆ.ಅತೀ ಹೆಚ್ಚು ಕರೆಗಳು ಬಂದಿರುವುದು ಮಾರ್ಚ್ 20ರಿಂದ ಏಪ್ರಿಲ್ 10ರ ನಡುವಿನ ಅವಧಿಯಲ್ಲಿ . 24X 7 ಕಾರ್ಯನಿರ್ವಹಿಸುವ ಈ ಸಹಾಯವಾಣಿ 571 ಜಿಲ್ಲೆಗಳಲ್ಲಿ ಮಕ್ಕಳ ಸಹಾಯ ಕೋರಿಕೆಗೆ ಸ್ಪಂದಿಸುತ್ತದೆ.

ಭಾರತದ ಉತ್ತರಭಾಗದ ರಾಜ್ಯಗಳಿಂದ ಶೇ, 30ರಷ್ಟು, ಪಶ್ಚಿಮ ಭಾಗದಿಂದ ಶೇ. 29, ದಕ್ಷಿಣ ಭಾಗದಿಂದ 21 ಮತ್ತು ಪೂರ್ವಭಾಗದಿಂದ ಶೇ,20 ಕರೆಗಳು ಬಂದಿವೆ ಎಂದು ಮಕ್ಕಳ ಸಹಾಯವಾಣಿ ಹೇಳಿಕೆ ನೀಡಿದೆ.

ಮಾಹಿತಿಗಾಗಿ, ಮಧ್ಯಪ್ರವೇಶಕ್ಕಾಗಿ, ತಮಾಷೆಗಾಗಿ ಮತ್ತು ಸುಮ್ಮನೆ ಡಯಲ್ ಮಾಡಿ ನೋಡಿದ ಕರೆಗಳು ಎಲ್ಲ ಸೇರಿ ಇಷ್ಟೊಂದು ಕರೆಗಳು ಬಂದಿವೆ. ಕೋವಿಡ್-19 ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ಜಿಲ್ಲಾ ಮಟ್ಟದಲ್ಲಿ ನೀಡುವ ಪರಿಹಾರ ಕ್ರಮಗಳ ಬಗ್ಗೆಯೂ ಈ ಸಹಾಯವಾಣಿ ಮಾಹಿತಿ ನೀಡುತ್ತಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.

ಈ ಕಾಲಾವಧಿಯಲ್ಲಿ ಮಕ್ಕಳಿಗೆ ಸಹಾಯ ಮಾಡುವ ಕಾರ್ಯಕರ್ತರು 9,385 ಪ್ರಕರಣಗಳಲ್ಲಿ ಮಧ್ಯಪ್ರವೇಶ ಮಾಡಿದ್ದಾರೆ.ಆ ಪೈಕಿ ಶೇ.30ರಷ್ಟು ಪ್ರಕರಣಗಳು ಜಾಗತಿಕ ಪಿಡುಗು ಪರಿಸ್ಥಿತಿಗೆ ಸಂಬಂಧಿಸಿದ್ದಾಗಿದೆ. ಕೊರೊನಾ ವೈರಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಶೇ.91ರಷ್ಟು ಮಂದಿ ಆಹಾರಕ್ಕಾಗಿ ಮನವಿ ಮಾಡಿದ್ದಾರೆ. ಶೇ. 6ರಷ್ಟು ಮಂದಿ ವೈದ್ಯಕೀಯ ಸಹಾಯಕ್ಕಾಗಿ ಕರೆ ಮಾಡಿದರೆ ಇನ್ನುಳಿದವರು ವಾಹನ ವ್ಯವಸ್ಥೆಗಾಗಿ ಕರೆ ಮಾಡಿದವರಾಗಿದ್ದಾರೆ.

9,385 ಪ್ರಕರಣಗಳಲ್ಲಿ ಕೆಲವು ಪ್ರಧಾನ ವಿಭಾಗಗಳನ್ನು ಹೆಸರಿಸುವುದಾದರೆ ಮಕ್ಕಳ ರಕ್ಷಣೆಗಾಗಿ ತುರ್ತು ಸಹಾಯ(ದೌರ್ಜನ್ಯದಿಂದ ರಕ್ಷಣೆ) ಮಾಡಿದ್ದು ಶೇ. 20ರಷ್ಟು ಇದೆ.ಇದರಲ್ಲಿ ಬಾಲ್ಯ ವಿವಾಹ, ದೈಹಿಕ ಹಿಂಸೆ, ಮಾನಸಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯ, ಅಪಹರಣ, ಕಳ್ಳಸಾಗಾಣಿಕೆ, ನಿರ್ಲಕ್ಷ್ಯ, ಬಾಲಕಾರ್ಮಿಕರು ಮೊದಲಾದ ಪ್ರಕರಣಗಳು ಸೇರಿವೆ.

ಶೇ.9ರಷ್ಟು ಕರೆಗಳು ಆರೋಗ್ಯಕ್ಕೆ ಸಂಬಂಧಿಸಿದ್ದಾಗಿದೆ. ಮಕ್ಕಳ ನಾಪತ್ತೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಕರೆಗಳು ಶೇ.5ರಷ್ಟಿವೆ.
ಆದಾಗ್ಯೂ, ಕಷ್ಟದಲ್ಲಿ ಸಿಲುಕಿಕೊಂಡಾಗ ಕರೆ ಮಾಡಲು ಹೆಚ್ಚಿನ ಮಕ್ಕಳಿಗೆ ಸಾಧ್ಯವಾಗುವುದಿಲ್ಲ. ಅವರಲ್ಲಿ ಮೊಬೈಲ್ ಫೋನ್ ಆಗಲೀ, ಅವರ ಗೆಳೆಯರಲ್ಲಾಗಲೀ ಫೋನ್ ಇರುವುದಿಲ್ಲ.ಅದಕ್ಕಾಗಿ ಶಿಕ್ಷಕರು ಅಥವಾ ಹಿರಿಯರನ್ನೇ ಆಶ್ರಯಿಸಬೇಕಾಗುತ್ತದೆ. ದೌರ್ಜನ್ಯ ಪ್ರಕರಣಗಳು ವರದಿಯಾದರೆ ಮಕ್ಕಳು ಸುರಕ್ಷಿತರಾಗಿದ್ದಾರೆ ಎಂದು ಖಾತರಿಯಾಗುವವರೆಗೆ ಪ್ರಕರಣದ ಬಗ್ಗೆ ನಿಗಾವಹಿಸಲಾಗುವುದು.

ವಲಸೆ ಕಾರ್ಮಿಕರ, ಅಲ್ಪ ಸಂಖ್ಯಾತರ, ಬುಡಕಟ್ಟು ಜನಾಂಗ, ಕೊಳಚೆಗುಂಡಿ ಸ್ವಚ್ಛ ಮಾಡುವ ಮತ್ತು ಬೀದಿ ಮಕ್ಕಳ ಸಹಾಯಕ್ಕೆ ಸಹಾಯವಾಣಿ ಹೆಚ್ಚಿನ ಮುತುವರ್ಜಿ ವಹಿಸುತ್ತದೆ. ಇವರಿಗೆ ಸಹಾಯ ನೀಡಲು ಇತರ ದಾನಿಗಳಿಗೆ ಅಥವಾ ಜಿಲ್ಲಾಡಳಿತದ ಗಮನಕ್ಕೆ ತರುತ್ತದೆ.

ಜಿಲ್ಲಾಡಳಿತದೊಂದಿಗೆ ಸೇರಿ ಕಾರ್ಯವೆಸಗುವುದ ಜತೆಗೆ ಆರೋಗ್ಯ ಇಲಾಖೆ ಜತೆ ಸೇರಿ ಕೋವಿಡ್-19 ಬಗ್ಗೆ ಜಾಗೃತಿಯನ್ನು ಮೂಡಿಸುತ್ತದೆ. ಜನರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್‌ ನೀಡುತ್ತದೆ.ಕಾರ್ಮಿಕ ಇಲಾಖೆ ಜತೆ ಸೇರಿ ಪಂಚಾಯತ್ ಮಟ್ಟದಲ್ಲಿ ಈ ಕಾರ್ಯವನ್ನು ಮಾಡುತ್ತದೆ.ಆದಾಗ್ಯೂ, ಕೆಲವು ಸಮುದಾಯಗಳು ಸ್ವತಃ ಕ್ವಾರಂಟೈನ್ ಆಗಿದ್ದು, ಅವರ ಗ್ರಾಮಗಳಿಗೆ ಹೊರಗಿನವರ ಪ್ರವೇಶ ನಿಷೇಧಿಸಿವೆ, ಹಾಗಾಗಿ ಅಂಥಾ ಸಮುದಾಯಗಳಲ್ಲಿ ಮಕ್ಕಳ ರಕ್ಷಣೆ ಕಷ್ಟವಾಗುತ್ತದೆ.

ಕಾಪಾಡಿದ ಮಗುವನ್ನು ಸಂರಕ್ಷಿಸುವುದೂ ಕಷ್ಟದ ಕೆಲಸ. ಕೆಲವು ಜಿಲ್ಲೆಗಳಲ್ಲಿ ಮಕ್ಕಳಿಗಾಗಿ ಚೈಲ್ಡ್ ಕೇರ್ ಸಂಸ್ಥೆಗಳಿವೆ. ರೈಲು ಮತ್ತು ಇನ್ನಿತರ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಪುನರ್ವಸತಿ ಸೌಕರ್ಯ ಒದಗಿಸುವುದು ಕಷ್ಟವಾಗುತ್ತಿದೆ ಎಂದು ಸಹಾಯವಾಣಿಯ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT