ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಯಲ್ಲಿ ಕಂದಕ ನಿರ್ಮಿಸಿದ ಚೀನಾ

ವಾಸ್ತವ ಗಡಿ ರೇಖೆ, ಪಾಂಗಾಂಗ್ ಸರೋವರದ ಬಳಿ ಕಾಮಗಾರಿ l ಉಪಗ್ರಹ ಚಿತ್ರಗಳಲ್ಲಿ ದೃಢ
Last Updated 21 ಜೂನ್ 2020, 19:31 IST
ಅಕ್ಷರ ಗಾತ್ರ

ನವದೆಹಲಿ: ಚೀನಾ ಜತೆ ವಾಸ್ತವ ಗಡಿ ರೇಖೆ (ಎಲ್‌ಎಸಿ) ಹಂಚಿಕೊಂಡಿರುವ ಭಾರತದ ಪಾಂಗಾಂಗ್ ಸರೋವರದ ದಂಡೆಯಲ್ಲಿ ಚೀನಾ ಈ ಮೊದಲು ನಿರ್ಮಿಸಿದ್ದ ಬಂಕರ್‌ನ ಸಮೀಪದಲ್ಲೇ ಹೊಸ ಕಂದಕಗಳನ್ನು ನಿರ್ಮಿಸಿದೆ. ಭಾರತ–ಚೀನಾ ಗಡಿ ಸಂಘರ್ಷ ಕುರಿತು ಎರಡೂ ದೇಶಗಳ ಸೇನೆಯ ಹಿರಿಯ ಅಧಿಕಾರಿಗಳು ಕೆಲವೇ ದಿನಗಳಲ್ಲಿ ಮತ್ತೊಮ್ಮೆ ಸಭೆ ನಡೆಸಲಿದ್ದಾರೆ. ಆದರೆ, ಇದಕ್ಕೂ ಮುನ್ನವೇ ಚೀನಾ ಪಾಂಗಾಂಗ್‌ನಲ್ಲಿ ನಿರ್ಮಾಣ ಕಾರ್ಯ ಕೈಗೊಂಡಿದೆ.

ಈ ಬೆಳವಣಿಗೆಯನ್ನು ವಿರೋಧ ಪಕ್ಷಗಳು ಟೀಕಿಸಿವೆ.

ಪಾಂಗಾಂಗ್ ಸರೋವರದ ‘ಫಿಂಗರ್ 4’ ಪ್ರದೇಶಕ್ಕೆ ಬಂದಿರುವ ಚೀನಾ ಸೇನೆಯು, ಅಲ್ಲಿಂದ ವಾಪಸ್ ಹೋಗಲು ನಿರಾಕರಿಸುತ್ತಿದೆ. ಮೇ ತಿಂಗಳಲ್ಲಿ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಎರಡೂ ಸೇನೆಗಳ ಸೈನಿಕರು ಮುಖಾಮುಖಿ ಆಗಿದ್ದರು. ಅಲ್ಲಿಂದ ಸೇನೆಯನ್ನು ತೆರವು ಮಾಡಲು ಒಮ್ಮತಕ್ಕೆ ಬರಲಾಗಿತ್ತು. ಆದರೆ ‘ಫಿಂಗರ್ 4’ ಪ್ರದೇಶದಲ್ಲಿ ಚೀನಾ ಈಗ ಕಂದಕಗಳನ್ನು ನಿರ್ಮಿಸಿದೆ. ಈ ಪ್ರದೇಶದಲ್ಲಿ ಭಾರತೀಯ ಸೈನಿಕರು ಈ ಮೊದಲು ಗಸ್ತು ತಿರುಗುತ್ತಿದ್ದರು. ಈಗ ಚೀನಾ ಸೈನಿಕರು ಕಂದಕ ನಿರ್ಮಿಸಿರುವ ಕಾರಣ, ಭಾರತೀಯ ಸೈನಿಕರು ಆ ಪ್ರದೇಶಕ್ಕೆ ಹೋಗಲು ಸಾಧ್ಯವಿಲ್ಲ ಎಂದು ಮೂಲಗಳು ಮಾಹಿತಿ ನೀಡಿವೆ.

ಮೇ 5ರ ಮುಖಾಮುಖಿಯ ನಂತರ ಚೀನಾ ಸೇನೆಯು, ಈ ಪ್ರದೇಶದಲ್ಲಿ ಇನ್ನೂ ಹಲವು ನಿರ್ಮಾಣ ಕಾಮಗಾರಿಗಳನ್ನು ಕೈಗೊಂಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜನೆ ಮಾಡಿದೆ.

ಸರೆಂಡರ್ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು, ‘ಸರೆಂಡರ್ ಮೋದಿ’ ಎಂದು ಕರೆದಿದ್ದಾರೆ. ‘ಭಾರತವು ಚೀನಾವನ್ನು ಓಲೈಸುತ್ತಿದೆ’ ಎಂದು ಜಪಾನ್‌ಟೈಮ್ಸ್‌ ವಿಶ್ಲೇಷಣೆ ಪ್ರಕಟಿಸಿದೆ. ಈ ವಿಶ್ಲೇಷಣೆಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ರಾಹುಲ್, ಮೋದಿ ಅವರನ್ನು ಹೀಗೆ ಟೀಕಿಸಿದ್ದಾರೆ.

‘ಸಂಘರ್ಷ ನಮ್ಮ ನೆಲದಲ್ಲಿ ನಡೆದದ್ದು ಎಂದು ಚೀನಾ ಹೇಳಿತ್ತು. ನಮ್ಮ ಪ್ರಧಾನಿ ಮೋದಿ ಅವರೂ ಇದೇ ಅರ್ಥ ಬರುವ ಮಾತು ಹೇಳಿದ್ದಾರೆ. ಚೀನಾ ಸರ್ಕಾರ ಏನು ಹೇಳುತ್ತಿದೆಯೋ, ಅದೇ ಮಾತನ್ನು ನಮ್ಮ ಪ್ರಧಾನಿಯೂ ಹೇಳುತ್ತಿದ್ದಾರೆ. ಹಾಗಿದ್ದರೆ ಸಂಘರ್ಷ ನಡೆದದ್ದು ಏಕೆ’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಕಪಿಲ್ ಸಿಬಲ್ ಪ್ರಶ್ನಿಸಿದ್ದಾರೆ.

‘ಎರಡೂ ದೇಶಗಳ ಸೇನೆಗಳು ಸೈನಿಕರನ್ನು ವಾಪಸ್ ಕರೆಸಿಕೊಳ್ಳಲಿವೆ ಎಂದು ಸೇನಾ ಮುಖ್ಯಸ್ಥರು ಜೂನ್ 17ರಂದು ಹೇಳಿದ್ದರು. ಯಾರೂ ನಮ್ಮ ನೆಲವನ್ನು ಅತಿಕ್ರಮಿಸಿಕೊಳ್ಳದೇ ಇದ್ದರೆ, ಸೈನಿಕರನ್ನು ವಾಪಸ್ ಕರೆಸಿಕೊಳ್ಳುವ ಪ್ರಮೇಯವೇಇರುವುದಿಲ್ಲ. ಸೇನಾ ಮುಖ್ಯಸ್ಥರ ಹೇಳಿಕೆಯನ್ನು ಪ್ರಧಾನಿ ನಿರಾಕರಿಸುತ್ತಿರುವುದು ಏಕೆ’ ಎಂದು ಸಿಬಲ್ ಪ್ರಶ್ನಿಸಿದ್ದಾರೆ.

ಗಾಲ್ವನ್‌ನಲ್ಲೂ ಕಂದಕ

ಗಾಲ್ವನ್ ಕಣಿವೆ ಪ್ರದೇಶದಲ್ಲೂ ಚೀನಾವು ನದಿಯ ಪಾತ್ರವನ್ನು ಬದಲಿಸುವ ಉದ್ದೇಶದಿಂದ ಕಂದಕ ತೋಡಿತ್ತು ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಪ್ಲಾನೆಟ್ ಲ್ಯಾಬ್ಸ್ ಬಿಡುಗಡೆ ಮಾಡಿದ್ದ ಉಪಗ್ರಹ ಚಿತ್ರಗಳಲ್ಲಿ, ಬೃಹತ್ ಯಂತ್ರಗಳು ನದಿಯ ಪಾತ್ರದಲ್ಲಿ ಮರಳನ್ನು ತೆಗೆಯುತ್ತಿರುವುದು ದಾಖಲಾಗಿತ್ತು. ಈ ಯಂತ್ರಗಳು ಭಾರತೀಯ ಸೇನೆಯದ್ದೇ ಅಥವಾ ಚೀನಾ ಸೇನೆಯದ್ದೇ ಎಂಬುದರ ಮಾಹಿತಿ ಬಹಿರಂಗವಾಗಿಲ್ಲ.

***

ನಮ್ಮ ನೆಲವನ್ನು ಯಾರೂ ಅತಿಕ್ರಮಿಸಿಲ್ಲ ಎಂದು ಪ್ರಧಾನಿ ಹೇಳಿದ್ದರು. ಆದರೆ ಪಾಂಗಾಂಗ್ ಬಳಿ ಭಾರತದ ನೆಲವನ್ನು ಚೀನಾ ವಶಪಡಿಸಿರುವುದನ್ನು ಉಪಗ್ರಹ ಚಿತ್ರ ತೋರಿಸುತ್ತಿದೆ

-ರಾಹುಲ್ ಗಾಂಧಿ

***

ನಮ್ಮ ನೆಲಕ್ಕೆ ಯಾರೂ ನುಗ್ಗಿಲ್ಲ ಎಂದು ಪ್ರಧಾನಿ ಹೇಳಿದ್ದರು. ಹಾಗಿದ್ದರೆ ಅಲ್ಲಿ ಸಂಘರ್ಷ ನಡೆದದ್ದು ಏಕೆ? ಸೈನಿಕರು ಹುತಾತ್ಮರಾದದ್ದು ಏಕೆ? ಹೆಣಗಳ ಮೇಲೆ ರಾಜಕಾರಣ ಮಾಡಬಾರದು

-ಸೀತಾರಾಂ ಯೆಚೂರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT