ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

45ಸಾವಿರ ಚದರ ಕಿ.ಮೀ. ಭೂಪ್ರದೇಶ ಚೀನಾ ವಶದಲ್ಲಿದೆ: ಪವಾರ್‌

ಪ್ರಧಾನಿ ಕುರಿತ ರಾಹುಲ್‌ ಟೀಕೆಗೆ ಪ್ರತಿಕ್ರಿಯೆ ನೀಡಿದ ಮಾಜಿ ರಕ್ಷಣಾ ಸಚಿವ
Last Updated 27 ಜೂನ್ 2020, 10:52 IST
ಅಕ್ಷರ ಗಾತ್ರ

ಸಾತಾರ: ‘1962ರ ಭಾರತ–ಚೀನಾ ಯುದ್ಧದ ನಂತರ ನಮ್ಮ 45 ಸಾವಿರ ಚದರ ಕಿ.ಮೀ. ಭೂಪ್ರದೇಶವನ್ನು ಚೀನಾ ಕಬಳಿಸಿಕೊಂಡಿದೆ ಎಂಬುದನ್ನು ಯಾರೂ ಮರೆಯಬಾರದು. ರಾಷ್ಟ್ರೀಯ ಸುರಕ್ಷತೆಗೆ ಸಂಬಂಧಿಸಿದ ವಿಚಾರಗಳಲ್ಲಿ ರಾಜಕೀಯ ಮಾಡಬಾರದು’ ಎಂದು ಎನ್‌ಸಿಪಿ ಮುಖಂಡ ಶರದ್‌ ಪವಾರ್‌ ಶನಿವಾರ ಹೇಳಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಭೂಪ್ರದೇಶವನ್ನು ಚೀನಾಕ್ಕೆ ಬಿಟ್ಟುಕೊಟ್ಟಿದ್ದಾರೆ’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ನೀಡಿರುವ ಹೇಳಿಕೆಯನ್ನು ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.

‘ಗಡಿ ಸಂರಕ್ಷಣೆ ಮಾಡುತ್ತಿದ್ದ ಸೈನಿಕರು ಬಹಳ ಎಚ್ಚರದಿಂದ ಕೆಲಸ ಮಾಡಿದ್ದಾರೆ. ಆದ್ದರಿಂದ, ಗಾಲ್ವನ್‌ ಸಂಘರ್ಷದ ಘಟನೆಯನ್ನು ರಕ್ಷಣಾ ಸಚಿವರ ವೈಫಲ್ಯ ಎಂದು ಟೀಕಿಸುವುದು ಸರಿಯಲ್ಲ. ಚೀನಾದ ಪ್ರಚೋದನೆಯಿಂದಾಗಿ ಅಲ್ಲಿ ಸಂಘರ್ಷ ನಡೆದಿದೆ. ಇಡೀ ಪ್ರಕರಣ ಅತ್ಯಂತ ಸೂಕ್ಷ್ಮವಾದುದು ಎಂದು ಮಾಜಿ ರಕ್ಷಣಾ ಸಚಿವಾರೂ ಆಗಿರುವ ಪವಾರ್‌ ಹೇಳಿದ್ದಾರೆ.

‘ನಮ್ಮ ಭೂಪ್ರದೇಶವನ್ನು ಪ್ರವೇಶಿಸಲು ಅವರು (ಚೀನಾ ಸೈನಿಕರು) ಪ್ರಯತ್ನಿಸಿದರು. ನಮ್ಮ ಸೈನಿಕರು ಗಡಿ ಕಾಯುತ್ತಿದ್ದರೂ, ಅವರು ಯಾವ ಸಮಯದಲ್ಲಾದರೂ ಬರಬಹುದು. ಇದನ್ನು ದೆಹಲಿಯಲ್ಲಿ ಕುಳಿತಿರುವ ರಕ್ಷಣಾ ಸಚಿವರ ವೈಫಲ್ಯ ಎಂದು ಟೀಕಿಸಲಾಗದು. ಸಂಘರ್ಷ ಸಂಭವಿಸಿದೆ ಎಂದರೆ ನೀವು ಎಚ್ಚರದಿಂದ ಇದ್ದೀರಿ ಎಂದೇ ಅರ್ಥ. ಆದ್ದರಿಂದ ಇಂಥ ಆಪಾದನೆ ಮಾಡುವುದು ಸರಿ ಎಂದು ನನಗೆ ಅನಿಸುವುದಿಲ್ಲ’ ಎಂದರು.

ರಾಹುಲ್‌ ಅವರ ಟೀಕೆಗೆ ಪ್ರತಿಕ್ರಿಯೆ ನೀಡುತ್ತಾ, ‘1962ರ ಯುದ್ಧದ ನಂತರ ಕಬಳಿಸಿಕೊಂಡಿದ್ದ 45 ಸಾವಿರ ಚದರ ಕಿ.ಮೀ. ಭೂಪ್ರದೇಶವು ಇನ್ನೂ ಚೀನೀಯರ ಸ್ವಾಧೀನದಲ್ಲೇ ಇದೆ. ಆ ನಂತರವೂ ಇನ್ನಷ್ಟು ಭೂಪ್ರದೇಶವನ್ನು ಕಬಳಿಸಿಕೊಂಡಿದ್ದಾರೆಯೇ ಎಂಬುದು ನನಗೆ ತಿಳಿದಿಲ್ಲ. ನಮ್ಮ ಇಷ್ಟೊಂದು ದೊಡ್ಡ ಭೂಪ್ರದೇಶವನ್ನು ಕಬಳಿಸಿಕೊಂಡಿದ್ದನ್ನು ಕಡೆಗಣಿಸಲು ಸಾಧ್ಯವಿಲ್ಲ. ಇದು ರಾಷ್ಟ್ರೀಯ ಭದ್ರತೆಯ ವಿಚಾರ. ಇದರಲ್ಲಿ ರಾಜಕೀಯ ಮಾಡಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT