ಶನಿವಾರ, ಜೂಲೈ 4, 2020
28 °C

ಮತ್ತೆ ಚೀನಾ ಕ್ಯಾತೆ: ಗಡಿಯಲ್ಲಿ ಯೋಧರ ಜಮಾವಣೆ

ರಾಯಿಟರ್ಸ್/ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ/ಶ್ರೀನಗರ: ಲಡಾಖ್‌ನಲ್ಲಿ ಮೂಲಸೌಕರ್ಯ ನಿರ್ಮಾಣದ ಭಾರತದ ಪ್ರಯತ್ನಕ್ಕೆ ಚೀನಾ ಎತ್ತಿರುವ ಆಕ್ಷೇಪ ಎರಡೂ ದೇಶಗಳ ನಡುವೆ ಮತ್ತೊಂದು ಮುಖಾಮುಖಿಯ ಅಪಾಯವನ್ನು ತೆರೆದಿಟ್ಟಿದೆ. 

ಚೀನಾ ಜತೆಗಿನ ಸುಮಾರು 3,500 ಕಿ.ಮೀ. ಉದ್ದದ ಗಡಿ ಪ್ರದೇಶದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಭಾರತ ಮಂಗಳವಾರ ಸ್ಪಷ್ಟವಾಗಿ ಹೇಳಿದೆ. ಪೂರ್ವ ಲಡಾಖ್‌ನ ಪ್ರದೇಶಗಳಲ್ಲಿ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಯೋಜನೆಗಳನ್ನು ಭಾರತ ನಿಲ್ಲಿಸಲೇಬೇಕು ಎಂದು ಚೀನಾ ನಿರಂತರವಾಗಿ ಒತ್ತಡ ಹೇರುತ್ತಿದೆ. 

ನೈಜ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಕೈಗೆತ್ತಿಕೊಂಡಿರುವ ಮಹತ್ವದ ಯೋಜನೆಗಳ ಬಗ್ಗೆ ಮರುವಿಮರ್ಶೆಯ ಅಗತ್ಯವೇ ಇಲ್ಲ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಸೇನಾ ಮುಖ್ಯಸ್ಥರಿಗೆ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಭಾರತ–ಚೀನಾ ನಡುವೆ ಸುಮಾರು 20 ದಿನಗಳಿಂದ ಗಡಿಯ ಕೆಲವು ಪ್ರದೇಶಗಳಲ್ಲಿ ಸೈನಿಕರ ಮುಖಾಮುಖಿ ನಡೆಯುತ್ತಿದೆ. ಲಡಾಖ್‌ ಮಾತ್ರವಲ್ಲದೆ, ಉತ್ತರ ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳಲ್ಲಿಯೂ ಸಂಘರ್ಷ ಏರ್ಪಟ್ಟಿದೆ. ಆದರೆ, ಚೀನಾದ ಆಕ್ರಮಣಕಾರಿ ನಿಲುವಿಗೆ ಮಣಿಯುವುದಿಲ್ಲ ಎಂಬ ಸಂದೇಶ ವನ್ನು ಆ ದೇಶಕ್ಕೆ ರವಾನಿಸುವುದು ಭಾರತದ ಉದ್ದೇಶ ಎಂದು ಮೂಲಗಳು ಹೇಳಿವೆ. 

ಲಡಾಖ್‌ನ ಗಾಲ್ವನ್‌ ಕಣಿವೆಯ ಮೂಲಕ ಎಲ್‌ಎಸಿ ಹಾದು ಹೋಗುತ್ತದೆ. ಎಲ್‌ಎಸಿಯ ಎರಡೂ ಭಾಗಗಳಲ್ಲಿ ಆಯಾ ದೇಶಗಳ ಸೈನಿಕರು ಬೀಡು ಬಿಟ್ಟಿದ್ದಾರೆ. ಚೀನಾದ ಭಾಗದಲ್ಲಿ 80ರಿಂದ 100 ಶಿಬಿರಗಳು ಮತ್ತು ಭಾರತದ ಭಾಗದಲ್ಲಿ ಸುಮಾರು 60 ಶಿಬಿರಗಳು ತಲೆ ಎತ್ತಿವೆ. 

ಎರಡೂ ಭಾಗಗಳಲ್ಲಿ ಸಿದ್ಧತೆಗಳು ಭರ ದಿಂದ ನಡೆಯುತ್ತಿವೆ. ಸಾಧನಗಳನ್ನು ಹೊತ್ತ ಚೀನಾ ಟ್ರಕ್‌ಗಳ ಓಡಾಟ ತೀವ್ರಗೊಂಡಿದೆ. ಹಾಗಾಗಿ, ಸಂಘರ್ಷ ಆರಂಭಗೊಂಡರೆ ಅದು ಸುದೀರ್ಘ ಅವಧಿಗೆ ಮುಂದುವರಿಯಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. 

ಗಾಲ್ವನ್‌ ಕಣಿವೆ ಪ್ರದೇಶದಲ್ಲಿ ಹೆಚ್ಚಿನ ಮೂಲ ಸೌಕರ್ಯಗಳು ಇರಲಿಲ್ಲ. ಇಲ್ಲಿ, ಎಲ್‌ಎಸಿಯ ಉದ್ದಕ್ಕೂ 66 ಪ್ರಮುಖ ರಸ್ತೆಗಳನ್ನು ನಿರ್ಮಿಸಲು ಭಾರತ ಉದ್ದೇಶಿಸಿದೆ. 2022ರ ಹೊತ್ತಿಗೆ ಇವುಗಳನ್ನು ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ. ಕಳೆದ ವರ್ಷ ಉದ್ಘಾಟಿಸಲಾದ ದೌಲತ್‌ ಬೇಗ್‌ ಓಲ್ಡಿ ವಾಯುನೆಲೆಯನ್ನು ಸಂಪರ್ಕಿಸುವ ಒಂದು ರಸ್ತೆಯ ಕಾಮಗಾರಿಯೂ ನಡೆಯುತ್ತಿದೆ.

ಪ್ಯಾಂಗಾಂಗ್‌ ಸರೋವರ ಮತ್ತು ಗಾಲ್ವನ್‌ ಕಣಿವೆ ಎರಡೂ ದೇಶಗಳ ನಡುವೆ ಆಗಾಗ ಸಂಘರ್ಷಕ್ಕೆ ಕಾರಣವಾಗುವ ಪ್ರದೇಶಗಳು. ಈ ಪ್ರದೇಶಗಳಲ್ಲಿ ಚೀನಾದ 5,000 ಸೈನಿಕರು ಠಿಕಾಣಿ ಹೂಡಿದ್ದಾರೆ ಎನ್ನಲಾಗಿದೆ. ಇಲ್ಲಿ ತಾತ್ಕಾಲಿಕ ಮೂಲಸೌಕರ್ಯ ನಿರ್ಮಾಣದಲ್ಲಿಯೂ ಚೀನಾ ತೊಡಗಿಕೊಂಡಿದೆ. 

‘ಈ ಪ್ರದೇಶಗಳಲ್ಲಿ ಭಾರತದ ಯೋಧರ ಸಂಖ್ಯೆಯು ಪ್ರತಿಸ್ಪರ್ಧಿಗಳಿಗಿಂತ ಬಹಳ ಹೆಚ್ಚು. ಹಾಗಾಗಿ, ಇಲ್ಲಿ ಆತಂಕ ಇಲ್ಲ’ ಎಂದು ಭಾರತೀಯ ಸೇನೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಆದರೆ, ಗಾಲ್ವನ್‌ ಕಣಿವೆಯಲ್ಲಿ ಬರುವ ದರ್ಬುಕ್‌–ಶಯೊಕ್‌–ದೌಲತ್‌ ಬೇಗ್‌ ಓಲ್ಡಿ ರಸ್ತೆಯ ಉದ್ದಕ್ಕೂ ಇರುವ ಹಲವು ಮಹತ್ವದ ಸ್ಥಳಗಳಲ್ಲಿ ಚೀನಾದ ಸೈನಿಕರು ನೆಲೆಯೂರಿದ್ದಾರೆ ಎನ್ನಲಾಗಿದೆ.

‘ಇದು ಗಂಭೀರ ವಿಚಾರ. ಸಾಮಾನ್ಯವಾಗಿ ನಡೆಯುತ್ತಿದ್ದ ಅತಿಕ್ರಮಣದಂತೆ ಇದು ಕಾಣಿಸುತ್ತಿಲ್ಲ’ ಎಂದು ಸೇನೆಯ ಉತ್ತರ ಕಮಾಂಡ್‌ನಲ್ಲಿ ಕೆಲಸ ಮಾಡಿದ್ದ ಲೆ. ಜ. (ನಿವೃತ್ತ) ಡಿ.ಎಸ್‌. ಹೂಡಾ ಹೇಳಿದ್ದಾರೆ.

ದೋಕಲಾ ನೆನಪು

ಭಾರತ–ಭೂತಾನ್‌–ಚೀನಾ ಗಡಿಗಳು ಸಂಧಿಸುವ ದೋಕಲಾದಲ್ಲಿ 2017ರಲ್ಲಿ ಭಾರತ–ಚೀನಾ ಸೇನೆಯ ಮುಖಾಮುಖಿ ಉಂಟಾಗಿತ್ತು. ಈ ಪ್ರದೇಶದಲ್ಲಿ ಚೀನಾ ರಸ್ತೆ ನಿರ್ಮಿಸಲು ಮುಂದಾಗಿತ್ತು. ಭೂತಾನ್‌ ಇದನ್ನು ವಿರೋಧಿಸಿತ್ತು. ಭೂತಾನ್‌ ಪರವಾಗಿ ಭಾರತದ ಸೈನಿಕರು ಚೀನಾವನ್ನು ಎದುರಿಸಿದ್ದರು. ಈ ಸಂಘರ್ಷ 72 ದಿನ ಮುಂದುವರಿದಿತ್ತು. ಇತ್ತೀಚಿನ ವರ್ಷಗಳಲ್ಲಿ, ಭಾರತ–ಚೀನಾ ನಡುವಣ ಅತ್ಯಂತ ದೀರ್ಘವಾದ ಮುಖಾಮುಖಿ ಅದಾಗಿತ್ತು.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌, ರಕ್ಷಣಾ ಪಡೆಗಳ ಮುಖ್ಯಸ್ಥ ಜ. ಬಿಪಿನ್‌ ರಾವತ್‌, ಲಡಾಕ್‌ ಲೆಫ್ಟಿನೆಂಟ್‌ ಗವರ್ನರ್‌ ಆರ್‌.ಕೆ. ಮಾಥುರ್‌ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಸಭೆ ನಡೆಸಿದ್ದಾರೆ. ಭೂಸೇನೆ ಮುಖ್ಯಸ್ಥ ಜ. ಎಂ.ಎಂ.ನರವಣೆ, ವಾಯುಪ‍ಡೆ ಮುಖ್ಯಸ್ಥ ಆರ್‌.ಕೆ. ಸಿಂಗ್‌ ಭದೌರಿಯಾ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಕರಮ್‌ವೀರ್‌ ಸಿಂಗ್‌ ಅವರೂ ಸಭೆಯಲ್ಲಿ ಇದ್ದರು.

ಇದಕ್ಕೂ ಮೊದಲು ರಾವತ್‌ ಮತ್ತು ಮೂರೂ ಪಡೆಗಳ ಮುಖ್ಯಸ್ಥರು ರಕ್ಷಣಾ ಸಚಿವರನ್ನು ಭೇಟಿಯಾಗಿ, ರಕ್ಷಣಾ ಪಡೆಗಳ ಸನ್ನದ್ಧ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದರು.

ಫಲ ಕೊಡದ ಪ್ರಯತ್ನ

ಎರಡೂ ದೇಶಗಳ ರಾಜತಾಂತ್ರಿಕರು ಸಂಪರ್ಕದಲ್ಲಿದ್ದಾರೆ. ಆದರೆ, ಸಂಘರ್ಷ ಶಮನದ ದಿಸೆಯಲ್ಲಿ ಈವರೆಗೆ ಯಾವುದೇ ಪ್ರಗತಿ ಉಂಟಾಗಿಲ್ಲ. ಚೀನಾ ಪ್ರಧಾನಿ ಲಿ ಕೆಕಿಯಾಂಗ್‌ ಅಥವಾ ಸ್ಟೇಟ್‌ ಕೌನ್ಸಿಲರ್‌ ವಾಂಗ್‌ ಯಿ ಮತ್ತು ಡೊಭಾಲ್‌ ನಡುವೆ ದೂರವಾಣಿ ಮಾತುಕತೆ ಏರ್ಪಡಿಸಲು ಪ್ರಯತ್ನ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ. ಡೊಭಾಲ್‌ ಮತ್ತು ವಾಂಗ್‌ ಅವರನ್ನು ವಿಶೇಷ ಪ್ರತಿನಿಧಿಗಳಾಗಿ ಭಾರತ ಮತ್ತು ಚೀನಾ ನಿಯೋಜಿಸಿವೆ.

ಯುದ್ಧ ಸನ್ನದ್ಧರಾಗಿ: ಜಿನ್‌ಪಿಂಗ್‌

ಯುದ್ಧ ಸನ್ನದ್ಧತೆಯನ್ನು ಗರಿಷ್ಠಗೊಳಿಸುವಂತೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು ಸೇನೆಗೆ ಮಂಗಳವಾರ ಕರೆ ಕೊಟ್ಟಿದ್ದಾರೆ. ಅತ್ಯಂತ ಕೆಟ್ಟ ಸನ್ನಿವೇಶದ
ಲ್ಲಿಯೂ ದೇಶದ ಸಾರ್ವಭೌಮತೆಯನ್ನು ರಕ್ಷಿಸಲು ಸಿದ್ಧವಿರಬೇಕು ಎಂದು ಅವರು ಕರೆಕೊಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು