ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಆಡಳಿತದಲ್ಲಿ ವಿದೇಶಾಂಗ ನೀತಿ ಸಂಪೂರ್ಣ ವಿಫಲ: ರಾಹುಲ್, ಸೋನಿಯಾ ತರಾಟೆ

ಗಡಿ ವಿಷಯ ನಿರ್ವಹಣೆ: ಕೇಂದ್ರ ಸರ್ಕಾರದ ಕಾರ್ಯವೈಖರಿಗೆ ಕಾಂಗ್ರೆಸ್‌ ಅಸಮಾಧಾನ
Last Updated 23 ಜೂನ್ 2020, 19:45 IST
ಅಕ್ಷರ ಗಾತ್ರ

ನವದೆಹಲಿ: ‘ಪ್ರಧಾನಿ ಮೋದಿ ನೇತೃತ್ವದ ಆಡಳಿತದಲ್ಲಿ ಭಾರತದ ವಿದೇಶಾಂಗ ನೀತಿಯು ಸಂಪೂರ್ಣ ವಿಫಲವಾಗಿದೆ ಎಂಬುದನ್ನು ಚೀನಾದ ನಡೆಯು ತೋರಿಸಿದೆ’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಟೀಕಿಸಿದ್ದಾರೆ.

ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದು, ‘ಭಾರತದ ಒಂದಿಂಚೂ ಭೂಮಿಯನ್ನು ಆಕ್ರಮಿಸಿಲ್ಲ ಎಂಬ ಬೀಜಿಂಗ್‌ ಹೇಳಿಕೆ ಸಮರ್ಥಿಸಿರುವ ಪ್ರಧಾನಿ ದೇಶದ ಘನತೆಗೆ ಚ್ಯುತಿ ತಂದಿದ್ದಾರೆ. ಸೇನೆಗೂ ದ್ರೋಹ ಬಗೆದಿದ್ದಾರೆ’ ಎಂದಿದ್ದಾರೆ.

ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು, ‘ರಾಜತಾಂತ್ರಿಕತೆಗೆ ಸಂಬಂಧಿಸಿ ಸ್ಥಾಪಿತ ವ್ಯವಸ್ಥೆಗೆ ಮೋದಿ ದಕ್ಕೆ ತಂದಿದ್ದಾರೆ. ನೆರೆಯ ದೇಶಗಳ ಜೊತೆಗೆ ಒಂದು ಕಾಲದಲ್ಲಿ ಇದ್ದ ಬಾಂಧವ್ಯ ಈಗ ಕುಸಿದುಬಿದ್ದಿದೆ. ಸಾಂಪ್ರದಾಯಿಕವಾಗಿ ಜೊತೆಗಿದ್ದ ದೇಶಗಳ ಜೊತೆಗಿನ ಬಾಂಧವ್ಯವನ್ನು ಈಗ ಪರೀಕ್ಷೆಗೊಡ್ಡಲಾಗಿದೆ’ ಎಂದು ಹರಿಹಾಯ್ದರು.

ಸೋನಿಯಾ ಟೀಕೆ

ಚೀನಾ ಜೊತೆಗಿನ ಗಡಿ ಸಂಘರ್ಷವನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಟೀಕಿಸಿದರು.

‘ಸರ್ಕಾರದ ತಪ್ಪು ನೀತಿಗಳಿಂದ ಈ ಸ್ಥಿತಿ ನಿರ್ಮಾಣವಾಗಿದೆ.ಈಗಲಾದರೂ ದೃಢ ನಿರ್ಧಾರ ತೆಗೆದುಕೊಂಡು ಆದ್ಯತೆ ಮೇಲೆ ಸಂಘರ್ಷ ತಪ್ಪಿಸಬೇಕು. ಇಲ್ಲದಿದ್ದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ ಎಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಎಚ್ಚರಿಸಿದರು.

ನಡ್ಡಾಗೆ ಚಿದಂಬರಂ ತಿರುಗೇಟು

‘2015ರಿಂದ ಚೀನಾ ಭಾರತದ ಮೇಲೆ 2,264 ಬಾರಿ ಆಕ್ರಮಣ ನಡೆಸಿದೆ. ಬಿಜೆಪಿ ರಾಷ್ಟ್ರಿಯ ಅಧ್ಯಕ್ಷ ಜೆ.ಪಿ ನಡ್ಡಾ ಈ ಬಗ್ಗೆ ಪ್ರಧಾನಿಯನ್ನು ಪ್ರಶ್ನಿಸಲಿ’ ಎಂದು ಹಿರಿಯ ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ತಿರುಗೇಟು ನೀಡಿದ್ದಾರೆ.

ಈ ಹಿಂದೆ 2010 ಮತ್ತು 2013ರಲ್ಲಿ ಚೀನಾ ಭಾರತದ ಮೇಲೆ 600 ಬಾರಿ ದಾಳಿ ನಡೆಸಿದಾಗ ಯುಪಿಎ ಸರ್ಕಾರ ಏನು ಮಾಡಿತ್ತು ಎಂದು ಜೆ.ಪಿ ನಡ್ಡಾ ಅವರು ಸರಣಿ ಟ್ವೀಟ್‌ ಮೂಲಕ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್ ಅವರನ್ನು ಪ್ರಶ್ನಿಸಿದ್ದರು.

‘ಸೇನೆ ನೈತಿಕ ಸ್ಥೈರ್ಯ ಕುಗ್ಗಿಸುತ್ತಿದ್ದಾರೆ’

ಗಡಿ ಬಿಕ್ಕಟ್ಟು ಕುರಿತು ರಾಹುಲ್ ಗಾಂಧಿ ಅವರು ದೇಶವನ್ನು ವಿಭಜಿಸುವ ಮತ್ತು ಸಶಸ್ತ್ರ ಪಡೆಗಳ ಸ್ಥೈರ್ಯಗುಂದಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಆರೋಪಿಸಿದ್ದಾರೆ.

‘ರಾಹುಲ್ ಅವರ ಈ ನಡೆಯು ಚೀನಾದ ಕಮ್ಯುನಿಸ್ಟ್ ಪಕ್ಷ ಹಾಗೂ ಕಾಂಗ್ರೆಸ್ ಪಕ್ಷದ ನಡುವಿನ ಒಡಂಬಡಿಕೆಯ ಪರಿಣಾಮವೇ’ ಎಂದು ಅವರು ಪ್ರಶ್ನಿಸಿದ್ದಾರೆ.‘ಮೊದಲು ಚೀನಾದ ಕಮ್ಯುನಿಸ್ಟ್ ಪಕ್ಷದ ಜೊತೆ ಕಾಂಗ್ರೆಸ್‌ ಒಪ್ಪಂದಕ್ಕೆ ಸಹಿ ಹಾಕಿತು. ದೋಕಲಾ ವಿಷಯದಲ್ಲಿ ರಾಹುಲ್ ಅವರು ರಹಸ್ಯವಾಗಿ ಚೀನಾ ರಾಯಭಾರ ಕಚೇರಿಗೆ ಭೇಟಿ ನೀಡಿದ್ದರು. ಅವರ ಈಗಿನ ಹೇಳಿಕೆಗಳು ಉಭಯ ಪಕ್ಷಗಳ ನಡುವಿನ ಒಪ್ಪಂದದ ಫಲವೇ ಇರಬೇಕು’ ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT