ಶನಿವಾರ, ಡಿಸೆಂಬರ್ 14, 2019
24 °C
ಚಂದಾದಾರರ ರಕ್ಷಣೆ, ಕ್ಷೇತ್ರದ ಪ್ರಗತಿಯ ಉದ್ದೇಶ: ಲೋಕಸಭೆ ಅನುಮೋದನೆ

ಚಿಟ್‌ ಫಂಡ್‌: ಮಸೂದೆಗೆ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಚಿಟ್‌ ಫಂಡ್‌ (ತಿದ್ದುಪಡಿ) ಮಸೂದೆ 2019ಕ್ಕೆ ಲೋಕಸಭೆ ಬುಧವಾರ ಅನುಮೋದನೆ ನೀಡಿದೆ. ಚಿಟ್‌ ಫಂಡ್‌ ಚಂದಾದಾರರಿಗೆ ರಕ್ಷಣೆ, ವ್ಯವಹಾರದಲ್ಲಿ ಪಾರದರ್ಶಕತೆ ಮತ್ತು ನಿಯಂತ್ರಣ ಕ್ರಮಗಳ ಜಾರಿ ಈ ಮಸೂದೆಯ ಉದ್ದೇಶ. 

ಚಿಟ್‌ ಫಂಡ್‌ ಕ್ಷೇತ್ರದ ವ್ಯವಸ್ಥಿತ ಪ್ರಗತಿಗಾಗಿ ನಿಯಮಗಳಲ್ಲಿ ಬದಲಾವಣೆ ತರಲು ಸರ್ಕಾರ ಉದ್ದೇಶಿಸಿದೆ. ಇತ್ತೀಚಿನ ವರ್ಷಗಳಲ್ಲಿ ಚಿಟ್‌ ಫಂಡ್‌ ಕ್ಷೇತ್ರವು ಪಡೆದುಕೊಂಡಿರುವ ಕುಖ್ಯಾತಿಯನ್ನು ಹೋಗಲಾಡಿಸುವ ಉದ್ದೇಶವೂ ಇದೆ ಎಂದು ಹಣಕಾಸು ಮತ್ತು ಕಾರ್ಪೊರೇಟ್‌ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್‌ ಠಾಕೂರ್‌ ಮಸೂದೆ ಮಂಡಿಸಿ ಹೇಳಿದರು. 

ಚಿಟ್‌ ಫಂಡ್‌ ಎಂಬುದು ಠೇವಣಿ ಸಂಗ್ರಹದ ಯೋಜನೆ ಅಲ್ಲ, ಅದು ಚಂದಾ ಆಧರಿತವಾಗಿರುವ ವ್ಯವಸ್ಥೆ. ಇದು ಕಾನೂನುಬದ್ಧ ಎಂದು ಅವರು ತಿಳಿಸಿದ್ದಾರೆ. ಚಿಟ್‌ ಫಂಡ್‌ ಕಾಯ್ದೆ 1982ಕ್ಕೆ ತಿದ್ದುಪಡಿ ತರುವುದು ಈ ಮಸೂದೆಯ ಉದ್ದೇಶ. ಮಸೂದೆಯು ರಾಜ್ಯಸಭೆಯ ಅಂಗೀಕಾರ ಪಡೆಯಬೇಕಿದೆ. 

2018ರಲ್ಲಿಯೂ ಚಿಟ್‌ ಫಂಡ್‌ ನಿಯಂತ್ರಣ ಮಸೂದೆಯನ್ನು ಸರ್ಕಾರ ಮಂಡಿಸಿತ್ತು. ಆದರೆ, ಲೋಕಸಭೆಯ ಅವಧಿ ಮುಗಿದ ಕಾರಣ ಇದು ಅಸಿಂಧುವಾಗಿತ್ತು. ಮಸೂದೆಯನ್ನು ಸಂಸದೀಯ ಸಮಿತಿಯ ಪರಿಶೀಲನೆಗೂ ಒಪ್ಪಿಸಲಾಗಿತ್ತು. ಚಂದಾದಾರರಿಗೆ ವಿಮೆಯ ರಕ್ಷಣೆ ಒದಗಿಸಬೇಕು ಎಂದು ಸಮಿತಿಯು ಸಲಹೆ ಮಾಡಿತ್ತು. 

ಆದರೆ, ಚಂದಾದಾರಿಗೆ ವಿಮೆಯ ರಕ್ಷಣೆಯ ವಿಚಾರವನ್ನು ಕಡ್ಡಾಯ ಮಾಡಲಾಗಿಲ್ಲ. ಚಂದಾದಾರು ಬೇಕಿದ್ದರೆ ವಿಮೆ ಮಾಡಿಕೊಳ್ಳಬಹುದು ಎಂದು ಠಾಕೂರ್‌ ಹೇಳಿದ್ದಾರೆ. 

ಬಡವರಿಗೆ ವಂಚನೆ: ಸಾಮಾನ್ಯವಾಗಿ, ಬ್ಯಾಂಕಿಂಗ್‌ ಸೇವೆ ಲಭ್ಯ ಇಲ್ಲದ ಬಡ ಜನರೇ ಚಿಟ್‌ ಫಂಡ್‌ಗೆ ಚಂದಾದಾರರಾಗುತ್ತಾರೆ. ಆದರೆ, ಚಿಟ್‌ ಫಂಡ್‌ ಏಜೆಂಟರಿಂದ ಇವರು ಮೋಸ ಹೋಗುವುದೇ ಹೆಚ್ಚು. ಬ್ಯಾಂಕ್‌ಗಳಲ್ಲಿ ದೊರೆಯುವ ಬಡ್ಡಿಗಿಂತ ಹೆಚ್ಚು ಪ್ರತಿಫಲ ದೊರೆಯುತ್ತದೆ ಎಂಬ ಆಮಿಷ ಒಡ್ಡಿ ಜನರನ್ನು ಆಕರ್ಷಿಸಲಾಗುತ್ತದೆ. ಆದರೆ, ಹಣ ಸಂಗ್ರಹವಾದ ಬಳಿಕ ಈ ಏಜೆಂಟರು ಪರಾರಿಯಾದ ಹಲವು ನಿದರ್ಶನಗಳು ಇವೆ. 

ಇತ್ತೀಚಿನ ವರ್ಷಗಳಲ್ಲಿ, ಶಾರದಾ ಗ್ರೂಪ್‌ ಮತ್ತು ರೋಸ್ ವ್ಯಾಲಿ ಎಂಬ ಚಿಟ್‌ ಫಂಡ್‌ ಸಂಸ್ಥೆಗಳು ಜನರಿಗೆ ಮೋಸ ಮಾಡಿವೆ. ಚಿಟ್‌ ಫಂಡ್‌ ಹಗರಣಗಳಿಗೆ ಸಂಬಂಧಿಸಿ ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ (ಆರ್‌ಬಿಐ) 2016ರ ಬಳಿಕ 5,200 ದೂರುಗಳು ಬಂದಿವೆ. ಆದರೆ, ಚಿಟ್‌ ಫಂಡ್‌ಗಳ ಮೇಲೆ ಆರ್‌ಬಿಐಗೆ ಯಾವುದೇ ನಿಯಂತ್ರಣ ಇಲ್ಲ. 

ಕಮಿಷನ್‌ ಮಿತಿ ಏರಿಕೆ

* ಒಬ್ಬ ವ್ಯಕ್ತಿ ಅಥವಾ ನಾಲ್ವರಿಗಿಂತ ಕಡಿಮೆ ಪಾಲುದಾರರು ನಡೆಸುವ ಚಿಟ್‌ ಫಂಡ್‌ನ ಗರಿಷ್ಠ ಸಂಗ್ರಹ ಮಿತಿ ₹1 ಲಕ್ಷದಿಂದ ₹3 ಲಕ್ಷಕ್ಕೆ ಏರಿಕೆ.

* ನಾಲ್ಕಕ್ಕಿಂತ ಹೆಚ್ಚು ಪಾಲುದಾರರು ನಡೆಸುವ ಚಿಟ್‌ ಫಂಡ್‌ನ ಗರಿಷ್ಠ ಮಿತಿ ₹6 ಲಕ್ಷದಿಂದ ₹18 ಲಕ್ಷಕ್ಕೆ ಏರಿಕೆ.

* ಫಂಡ್‌ ನಿರ್ವಹಿಸುವ ವ್ಯಕ್ತಿಯ ಗರಿಷ್ಠ ಕಮಿಷನ್‌ ಮಿತಿ ಶೇ 5ರಿಂದ ಶೇ 7ಕ್ಕೆ ಏರಿಕೆ.

* ಚಿಟ್‌ ಫಂಡ್‌ ಡ್ರಾ ಪ್ರಕ್ರಿಯೆಯಲ್ಲಿ ಚಂದಾದಾರರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಭಾಗವಹಿಸಲು ಅವಕಾಶ.

* ದೇಶದಲ್ಲಿ 30 ಸಾವಿರಕ್ಕೂ ಹೆಚ್ಚು ನೋಂದಾಯಿತ ಚಿಟ್‌ ಫಂಡ್‌ಗಳಿವೆ.

ಪ್ರತಿಕ್ರಿಯಿಸಿ (+)