ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿಗಾಗಿ ಕೇರಳ–ಬೆಂಗಾಲ್‌ ಸೆಣಸು

Last Updated 31 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಕೋಲ್ಕತ್ತ: ಹಾಲಿ ಚಾಂಪಿಯನ್ ಬೆಂಗಾಲ್ ತಂಡ ಸಂತೋಷ್ ಟ್ರೋಫಿ ಫುಟ್‌ಬಾಲ್ ಪಂದ್ಯದಲ್ಲಿ ಭಾನುವಾರ ಕೇರಳ ತಂಡದ ಎದುರು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದೆ.

ಸಾಲ್ಟ್‌ಲೇಕ್‌ ಕ್ರೀಡಾಂಗಣದಲ್ಲಿ ನಡೆಯುವ ಫೈನಲ್‌ ಪಂದ್ಯದಲ್ಲಿ ಎರಡು ಪ್ರಬಲ ತಂಡಗಳು ಮುಖಾಮುಖಿಯಾಗಲಿವೆ. ಬೆಂಗಾಲ್‌ 32 ಬಾರಿ ಸಂತೋಷ್ ಟ್ರೋಫಿ ಗೆದ್ದ ದಾಖಲೆ ಹೊಂದಿದೆ. ಸೆಮಿಫೈನಲ್‌ನಲ್ಲಿ ಈ ತಂಡ ಕರ್ನಾಟಕದ ಎದುರು ಜಯಿಸಿ ಫೈನಲ್ ತಲುಪಿದೆ. ಅನುಭವಿ ಆಟಗಾರರಾದ ಜಿತೆನ್‌ ಹಾಗೂ ತೀರ್ಥಂಕರ್ ಸರ್ಕಾರ್ ಗೋಲು ಗಳಿಸಿ ಜಯದ ರೂವಾರಿಗಳಾಗಿದ್ದರು.

ಕೇರಳ ತಂಡ ಸೆಮಿಫೈನಲ್‌ನಲ್ಲಿ 1–0 ಗೋಲಿನಿಂದ ಮಿಜೋರಾಂ ಎದುರು ಗೆದ್ದಿದೆ. ‘ಎ’ ಗುಂಪಿನ ಪಂದ್ಯದಲ್ಲಿ ಕೇರಳ ಹಾಗೂ ಬೆಂಗಾಲ್ ತಂಡಗಳು ಈಗಾಗಲೇ ಮುಖಾಮುಖಿಯಾಗಿವೆ. ಮೋಹನ್ ಬಾಗನ್‌ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಕೇರಳ 1–0 ಗೋಲಿನಿಂದ ಗೆದ್ದಿತ್ತು.

‘ಲೀಗ್ ಹಂತದ ಪಂದ್ಯದಲ್ಲಿ ನಾವು ಸೋತಿರಬಹುದು. ಆದರೆ ಫೈನಲ್‌ನಲ್ಲಿ ತಕ್ಕ ಪೈಪೋಟಿ ನೀಡಲಿದ್ದೇವೆ. ತಂಡದ ಆಟಗಾರರಲ್ಲಿ ಗೆಲ್ಲುವ ವಿಶ್ವಾಸವಿದೆ’ ಎಂದು ಬೆಂಗಾಲ್ ತಂಡದ ಕೋಚ್‌ ರಂಜನ್ ಚೌಧರಿ ಹೇಳಿದ್ದಾರೆ.

‘ಕೇರಳ ಉತ್ತಮ ತಂಡ. ಪ್ರತಿಭಾನ್ವಿತ ಆಟಗಾರರನ್ನು ಹೊಂದಿದೆ. ಆದರೆ ಉತ್ತಮವಾಗಿ ಆಡಿದ ತಂಡಕ್ಕೆ ಪ್ರಶಸ್ತಿ ಸಿಗಲಿದೆ’ ಎಂದು  ಹೇಳಿದ್ದಾರೆ.

ತವರಿನಲ್ಲಿ ಆಡುತ್ತಿರುವ ಬೆಂಗಾಲ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ. ರಕ್ಷಣಾ ವಿಭಾಗದಲ್ಲಿ ಈ ತಂಡ ಪ್ರಬಲವಾಗಿದೆ. ಬೆಂಗಾಲ್ ತಂಡದ ಬಹುತೇಕ ಆಟಗಾರರು ಮೊದಲ ಬಾರಿಗೆ ಈ ಟೂರ್ನಿಯಲ್ಲಿ ಆಡುತ್ತಿದ್ದಾರೆ.

ಕೇರಳ ತಂಡ 2005ರ ಬಳಿಕ ಪ್ರಶಸ್ತಿ ಗೆದ್ದಿಲ್ಲ. ‘ನಮ್ಮ ತಂಡದ ಬೆಳವಣಿಗೆ ನೋಡಿ ಖುಷಿಯಾಗುತ್ತಿದೆ. ಈ ಟೂರ್ನಿಯಲ್ಲಿ ಪಂದ್ಯದಿಂದ ಪಂದ್ಯಕ್ಕೆ ಬಹಳಷ್ಟು ಸುಧಾರಣೆ ಕಂಡುಕೊಂಡು ಆಡಿದೆ. ಬೆಂಗಾಲ್ ತಂಡ ಕೂಡ ಉತ್ತಮವಾಗಿದೆ. ಆದರೆ ನಮ್ಮ ತಂಡದ ಆಟಗಾರರಿಗೆ ಪ್ರಶಸ್ತಿ ಗೆಲ್ಲುವ ಎಲ್ಲಾ ಅರ್ಹತೆ ಇದೆ’ ಎಂದು ಕೇರಳ ತಂಡದ ಕೋಚ್‌ ಸತೀವನ್ ಬಾಲನ್ ಹೇಳಿದ್ದಾರೆ.

‘ಈ ಟೂರ್ನಿಯ ಆರಂಭದಲ್ಲಿ ನಾವು ಪ್ರಶಸ್ತಿ ಗೆಲ್ಲುವ ಮೆಚ್ಚಿನ ತಂಡ ಎಂದು ಕರೆಸಿಕೊಂಡಿರಲಿಲ್ಲ. ಆದರೆ ಈಗ ನಾವು ಆ ಸ್ಥಾನದಲ್ಲಿ ನಿಂತಿದ್ದೇವೆ ಎಂದರೆ ಖುಷಿಯಾಗುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT