ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದಿಂದ ತಾರತಮ್ಯ ನೀತಿ: ಜರ್ಮನಿಯ ಕಾರ್ಯಕ್ರಮದಲ್ಲಿ ರಾಹುಲ್‌ ಟೀಕೆ

Last Updated 23 ಆಗಸ್ಟ್ 2018, 19:06 IST
ಅಕ್ಷರ ಗಾತ್ರ

ನವದೆಹಲಿ: ಅಭಿವೃದ್ಧಿ ಪ್ರಕ್ರಿಯೆಯಿಂದ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಹೊರಗಿಡುವುದು ಬಂಡಾಯ ಚಟುವಟಿಕೆಗಳಿಗೆ ಕಾರಣವಾಗುತ್ತದೆ. ಇದಕ್ಕೆ ಇಸ್ಲಾಮಿಕ್‌ ಸ್ಟೇಟ್‌ ಉಗ್ರಗಾಮಿ ಸಂಘಟನೆ ಉದಾಹರಣೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.

ಕೇಂದ್ರದ ಬಿಜೆಪಿ ಸರ್ಕಾರವು ದಲಿತರು, ಬುಡಕಟ್ಟು ಜನರು ಮತ್ತು ಅಲ್ಪಸಂಖ್ಯಾತರನ್ನು ಅಭಿವೃದ್ಧಿ ಪ್ರಕ್ರಿಯೆಯಿಂದ ಹೊರಗೆ ಇರಿಸಿದೆ. ಇದು ಅತ್ಯಂತ ಅಪಾಯಕಾರಿ ಎಂದು ಅವರು ಅಭಿ‍ಪ್ರಾಯಪಟ್ಟಿದ್ದಾರೆ.

ಜರ್ಮನಿಯ ಹ್ಯಾಂಬರ್ಗ್‌ನ ಬೆಸೀರಿಯನ್‌ ಸಮ್ಮರ್‌ ಸ್ಕೂಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜನರಿಗೆ ನೀವು ದೃಷ್ಟಿಕೋನವನ್ನು ಕೊಡದೇ ಇದ್ದರೆ ಬೇರೆ ಯಾರಾದರೂ ಕೊಡುತ್ತಾರೆ. ಹೀಗೆ ದೊರೆಯುವ ದೃಷ್ಟಿಕೋನ ಅಪಾಯಕಾರಿ ಆಗಬಹುದು’ ಎಂದು ಅವರು ಹೇಳಿದರು.

ಬಡಜನರಿಗೆ ಸಮಾನವಾದ ಅವಕಾಶಗಳನ್ನು ನೀಡಲಾಗಿಲ್ಲ. ನಿರುದ್ಯೋಗದಿಂದ ಉಂಟಾಗಿರುವ ಆಕ್ರೋಶವೇ ಗುಂಪು ಹಲ್ಲೆಗಳು ಮತ್ತು ಹತ್ಯೆಗಳಿಗೆ ಕಾರಣವಾಗುತ್ತಿದೆ. ನೋಟು ರದ್ದತಿ ಮತ್ತು ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಅಸಮರ್ಪಕ ಅನುಷ್ಠಾನದಿಂದಾಗಿ ಸಣ್ಣ ವ್ಯಾಪಾರಗಳು ನೆಲಕಚ್ಚಿದವು ಎಂದು ರಾಹುಲ್‌ ಹೇಳಿದ್ದಾರೆ.

ಜಗತ್ತಿನಾದ್ಯಂತ ನಡೆಯುತ್ತಿರುವ ಪರಿವರ್ತನೆಯ ಪ್ರಕ್ರಿಯೆಯಲ್ಲಿ ಸಾಮಾನ್ಯ ಜನರಿಗೆ ಕೆಲವು ರೀತಿಯ ರಕ್ಷಣೆಗಳು ಬೇಕು. ಆದರೆ, ಬಿಜೆಪಿ ಸರ್ಕಾರವು ಇಂತಹ ರಕ್ಷಣೆಗಳನ್ನು ಕಸಿದುಕೊಂಡಿದೆ. ಅಷ್ಟೇ ಅಲ್ಲದೆ, ನೋಟು ರದ್ದತಿ ಮತ್ತು ಜಿಎಸ್‌ಟಿ ಜಾರಿಯು ಅಸಂಘಟಿತ ಕ್ಷೇತ್ರದ ಅರ್ಥ ವ್ಯವಸ್ಥೆಗೆ ದೊಡ್ಡ ಪೆಟ್ಟು ಕೊಟ್ಟಿದೆ ಎಂದು ಅವರು ಆರೋಪಿಸಿದ್ದಾರೆ.

ಐಎಸ್‌ ಹುಟ್ಟಿದ್ದು ಹೇಗೆ?:‘ಅಮೆರಿಕವು 2003ರಲ್ಲಿ ಇರಾಕ್‌ನ ಮೇಲೆ ದಾಳಿ ನಡೆಸಿತು. ಅವರು ಒಂದು ಕಾನೂನು ತಂದು ಕೆಲವು ಬುಡಕಟ್ಟುಗಳ ಜನರಿಗೆ ಸರ್ಕಾರ ಮತ್ತು ಸೇನೆಯಲ್ಲಿ ಕೆಲಸ ದೊರೆಯದಂತೆ ಮಾಡಿದರು. ಇದು ನಿರಪಾಯಕಾರಿ ಕ್ರಮ ಎಂಬಂತೆ ಆ ಸಂದರ್ಭದಲ್ಲಿ ಕಂಡಿತು. ಆದರೆ, ಬಳಿಕ ಹಲವು ಜನರು ಬಂಡಾಯ ಚಟುವಟಿಕೆಗಳಲ್ಲಿ ತೊಡಗಲು ಇದು ಕಾರಣವಾಯಿತು. ಅವರೆಲ್ಲರೂ ಅಮೆರಿಕದ ವಿರುದ್ಧ ಹೋರಾಡಿದರು. ಇದರಿಂದಾಗಿ ಭಾರಿ ಸಾವು ನೋವು ಉಂಟಾಯಿತು.

‘ಇದು ಅಲ್ಲಿಗೇ ನಿಲ್ಲಲಿಲ್ಲ. ಎಲ್ಲೆಲ್ಲಿ ಅವಕಾಶಗಳಿದ್ದವೋ ಅಲ್ಲಿಗೆಲ್ಲ ಈ ಬಂಡಾಯ ಚಟುವಟಿಕೆ ವಿಸ್ತರಿಸಿತು. ಇರಾಕ್‌, ಸಿರಿಯಾಗಳಿಗೂ ಹರಡಿತು. ಈ ಬಂಡಾಯ ಚಟುವಟಿಕೆಗಳೇ ಸಂಯೋಜನೆಗೊಂಡು ಐಎಸ್‌ ಎಂಬ ಉಗ್ರಗಾಮಿ ಸಂಘಟನೆ ಸೃಷ್ಟಿಯಾಯಿತು’ ಎಂದು ರಾಹುಲ್‌ ಪ್ರತಿಪಾದಿಸಿದ್ದಾರೆ.

ಅಪ್ಪುಗೆಯ ಕಾರಣ:ಪ್ರಧಾನಿ ನರೇಂದ್ರ ಮೋದಿ ಅವರನ್ನು ಲೋಕಸಭೆಯಲ್ಲಿ ತಾವು ಅಪ್ಪಿಕೊಂಡ ಪ್ರಕರಣವನ್ನೂ ರಾಹುಲ್‌ ಪ್ರಸ್ತಾಪಿಸಿದರು. ಅವಿಶ್ವಾಸ ಗೊತ್ತುವಳಿಯ ಚರ್ಚೆಯ ಸಂದರ್ಭದಲ್ಲಿ ಜುಲೈಯಲ್ಲಿ ಮೋದಿ ಅವರನ್ನು ರಾಹುಲ್‌ ಅಪ್ಪಿಕೊಂಡಿದ್ದರು. ಆದರೆ, ತಮ್ಮ ಪಕ್ಷದ ಕೆಲವರಿಗೆ ಕೂಡ ಈ ಅಪ್ಪುಗೆ ಇಷ್ಟವಾಗಲಿಲ್ಲ ಎಂದು ಅವರು ಹೇಳಿದರು.

ಮೋದಿ ಅವರು ‘ದ್ವೇಷಪೂರಿತ ಹೇಳಿಕೆ’ಗಳನ್ನು ನೀಡುತ್ತಿದ್ದಾರೆ. ಆದರೆ, ತಾವು ಅವರಿಗೆ ಮಮತೆ ತೋರಿದ್ದಾಗಿ ರಾಹುಲ್‌ ಹೇಳಿದರು. ದ್ವೇಷಕ್ಕೆ ದ್ವೇಷದ ಮೂಲಕವೇ ಉತ್ತರ ನೀಡುವುದು ಮೂರ್ಖತನ. ದ್ವೇಷಕ್ಕೆ ದ್ವೇಷದ ಮೂಲಕವೇ ಪ್ರತಿಕ್ರಿಯೆ ನೀಡುವುದರಿಂದ ಯಾವ ಸಮಸ್ಯೆಯೂ ಪರಿಹಾರವಾಗದು ಎಂದು ರಾಹುಲ್‌ ವಿವರಿಸಿದರು.

ಭಾರತವು ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬುದನ್ನು ತಾವು ಒಪ್ಪುವುದಿಲ್ಲ. ಆದರೆ, ದೇಶದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ. ಭಾರತ ಬದಲಾಗುವ ಅಗತ್ಯ ಇದೆ. ಗಂಡಸರು ಮಹಿಳೆಯರನ್ನು ಸಮಾನವಾಗಿ ಮತ್ತು ಗೌರವದಿಂದ ಕಾಣಬೇಕು. ಆದರೆ, ಹೀಗೆ ಆಗುತ್ತಿಲ್ಲ ಎಂಬ ಬಗ್ಗೆ ತಮಗೆ ವಿಷಾದವಿದೆ ಎಂದು ಅವರು ಹೇಳಿದರು.

ಭಾರತದ ವಿದೇಶಾಂಗ ನೀತಿಯ ಬಗ್ಗೆಯೂ ಅವರು ಮಾತನಾಡಿದ್ದಾರೆ. ಜಗತ್ತಿನಲ್ಲಿ ವಿವಿಧ ದೃಷ್ಟಿಕೋನಗಳು ಇವೆ. ಅಮೆರಿಕ, ಚೀನಾ ಮತ್ತು ಭಾರತ ಭಿನ್ನ ದೃಷ್ಟಿಕೋನಗಳನ್ನು ಹೊಂದಿವೆ. ಅಮೆರಿಕ ಮತ್ತು ಚೀನಾದ ನಡುವೆ ಸಮತೋಲನ ಸಾಧಿಸುವ ಕೆಲಸವನ್ನು ಯುರೋಪ್‌ ಮಾಡುತ್ತಿದೆ. ಭಾರತವೂ ಇದೇ ಕೆಲಸವನ್ನು ಮಾಡಬೇಕು ಎಂದು ಅವರು ಹೇಳಿದ್ದಾರೆ.

ಉಗ್ರರ ಸಮರ್ಥನೆ: ಬಿಜೆಪಿ ಎದುರೇಟು

ಜರ್ಮನಿಯಲ್ಲಿ ಆಡಿದ ಮಾತುಗಳ ಮೂಲಕ ರಾಹುಲ್‌ ಗಾಂಧಿ ಅವರು ಭಾರತದ ವರ್ಚಸ್ಸನ್ನು ಕುಗ್ಗಿಸಿದ್ದಾರೆ. ಕೇಂದ್ರ ಸರ್ಕಾರವನ್ನು ಟೀಕಿಸುವ ಭರದಲ್ಲಿ ಅವರು ಭಯೋತ್ಪಾದನೆಯನ್ನು ಸಮರ್ಥಿಸಿಕೊಂಡಿದ್ದಾರೆ ಮತ್ತು ಸುಳ್ಳು ಹೇಳಿದ್ದಾರೆ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ ಹೇಳಿದ್ದಾರೆ.

ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ದೇಶದ ಸಂಸ್ಕೃತಿಯೇ ಕಾರಣ ಎಂದು ರಾಹುಲ್‌ ಆಪಾದಿಸಿದ್ದಾರೆ. ಅವರು ಕ್ಷಮೆಯಾಚಿಸಬೇಕು. ರಾಹುಲ್‌ ಅವರು ರಾಹುಲ್‌ ತರಹವೇ ವರ್ತಿಸಿದ್ದಾರೆ. ಅವರಿಂದ ಇದಕ್ಕಿಂತ ಪ್ರಬುದ್ಧತೆಯನ್ನು ನಿರೀಕ್ಷಿಸುವುದು ವ್ಯರ್ಥ ಪ್ರಯತ್ನ. ಭಯೋತ್ಪಾದನೆಯನ್ನು ಮತ್ತು ಐಎಸ್‌ ಅನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ಇದಕ್ಕಿಂತ ಭಯ ಮತ್ತು ಚಿಂತೆಯ ವಿಷಯ ಬೇರೆ ಇಲ್ಲ ಎಂದು ಸಂಬಿತ್‌ ಹೇಳಿದ್ದಾರೆ.

*‘ಶ್ರೀಮಂತರಿಗೆ ದೊರೆಯುವ ಸೌಲಭ್ಯಗಳು ಬಡವರು, ಅಲ್ಪಸಂಖ್ಯಾತರಿಗೆ ದೊರೆಯಬಾರದು ಎಂದು ಕೇಂದ್ರ ಸರ್ಕಾರ ಭಾವಿಸಿದೆ. ಕೆಲವು ವರ್ಗಗಳ ಜನರಿಗೆ ಬೆಂಬಲವಾಗಿ ಸೃಷ್ಟಿಸಲಾಗಿದ್ದ ವ್ಯವಸ್ಥೆಗಳನ್ನೂ ಸರ್ಕಾರ ಧ್ವಂಸ ಮಾಡಿದೆ.

–ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

*ಭಾರತವನ್ನು ಕೆಟ್ಟದಾಗಿ ಚಿತ್ರಿಸುವ ಯಾವುದೇ ಅವಕಾಶವನ್ನು ರಾಹುಲ್‌ ಬಿಟ್ಟುಕೊಡುವುದಿಲ್ಲ. ಅವರ ಭಾಷಣ ಸುಳ್ಳುಗಳಿಂದಲೇ ತುಂಬಿತ್ತು. ಭಾರತವನ್ನು ಅವಮಾನಿಸುವುದೇ ಅವರ ಉದ್ದೇಶ

–ಸಂಬಿತ್‌ ಪಾತ್ರಾ ಬಿಜೆಪಿ ವಕ್ತಾರ

*ವಿದೇಶಗಳಿಗೆ ಹೋದಾಗ ರಾಷ್ಟ್ರದ ಆಂತರಿಕ ವಿಚಾರ ಚರ್ಚಿಸಬಾರದು. ಪ್ರಧಾನಿ ಈ ನಿಯಮ ಮೊದಲು ಮುರಿದರು. ಬೇರೆಯವರು ಅವರನ್ನು ಅನುಸರಿಸಬೇಕಾಗಿಲ್ಲ.

–ಯಶವಂತ ಸಿನ್ಹಾ, ಬಿಜೆಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT