ಲಾಲುಗೆ ಬೀದಿನಾಯಿ, ಸೊಳ್ಳೆ ಕಾಟ

7
ಜೈಲು ಆಸ್ಪತ್ರೆಯ ವಾರ್ಡ್‌ ಬದಲಾಯಿಸಲು ಮನವಿ

ಲಾಲುಗೆ ಬೀದಿನಾಯಿ, ಸೊಳ್ಳೆ ಕಾಟ

Published:
Updated:

ನವದೆಹಲಿ: ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್‌ ಅವರು ಜೈಲು ಆಸ್ಪತ್ರೆಯಲ್ಲಿ ತಾವು ಈಗ ಇರುವ ವಾರ್ಡಿನಿಂದ ಬೇರೆ ವಾರ್ಡಿಗೆ ಸ್ಥಳಾಂತರಿಸಬೇಕು ಎಂದು ಮನವಿ ಮಾಡಿದ್ದಾರೆ.

ಸೊಳ್ಳೆಗಳ ಕಾಟ, ಬೀದಿನಾಯಿಗಳ ಬೊಗಳುವಿಕೆಯಿಂದ ತೊಂದರೆಯಾಗುತ್ತಿದೆ ಎಂದು ವಾರ್ಡ್‌ ಬದಲಾವಣೆಗೆ ಅವರು ಕಾರಣ ಕೊಟ್ಟಿದ್ದಾರೆ. ಈ ಬಗ್ಗೆ ಆಸ್ಪತ್ರೆ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಆರೋಗ್ಯ ಸಮಸ್ಯೆಯ ಕಾರಣ ಪೆರೋಲ್‌ ಪಡೆದು ಹೊರಗಿದ್ದ ಅವರು ಪೆರೋಲ್‌ ಅವಧಿ ಮುಗಿದ ಕಾರಣ ಆಗಸ್ಟ್‌ 31ಕ್ಕೆ ಜೈಲಿಗೆ ಮರಳಿದ್ದಾರೆ. 

‘ಲಾಲು ಪ್ರಸಾದ್‌ ಅವರು ವಾರ್ಡ್‌ ಬದಲಾಯಿಸುವಂತೆ ಮನವಿ ಮಾಡಿದ್ದಾರೆ. ಅವರ ಮನವಿಯನ್ನು ಜೈಲಿನ ಹಿರಿಯ ಅಧಿಕಾರಿಗಳಿಗೆ ಕಳುಹಿಸಲಾಗಿದೆ. ವಾರ್ಡ್‌ ಸಮೀಪವಿರುವ ನಾಯಿಗಳನ್ನು ಸ್ಥಳಾಂತರಿಸಲು ಮಹಾನಗರ ಪಾಲಿಕೆಗೆ ಪತ್ರ ಬರೆಯಲಾಗಿದೆ’ ಎಂದು ಆಸ್ಪತ್ರೆಯ ನಿರ್ದೇಶಕರು ಹೇಳಿದ್ದಾರೆ.

‘ಲಾಲು ಅವರು ಚಿಕಿತ್ಸೆ ಪಡೆಯುತ್ತಿರುವ ವಾರ್ಡ್‌ ಸ್ವಚ್ಛ ಇಲ್ಲ. ಸೊಳ್ಳೆಗಳ ಕಾಟ ವಿಪರೀತವಿದೆ. ಬೀದಿ ನಾಯಿಗಳ ಬೊಗಳುವಿಕೆಯಿಂದ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಪಕ್ಕದಲ್ಲಿರುವ 100 ಹಾಸಿಗೆಗಳ ವಾರ್ಡ್‌ಗೆ ಸ್ಥಳಾಂತರಿಸುವಂತೆ ಮನವಿ ಮಾಡಲಾಗಿದೆ. ಈ ವಾರ್ಡ್‌ನ ಶುಲ್ಕ ಸಹ ಪಾವತಿಸಲಾಗುವುದು’ ಎಂದು ಆರ್‌ಜೆಡಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಲಾಲು ಅವರ ಆಪ್ತ ಭೋಲಾ ಯಾದವ್‌ ತಿಳಿಸಿದ್ದಾರೆ.

ಮೇವು ಹಗರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಲಾಲು ಅವರನ್ನು ಕಳೆದ ಡಿಸೆಂಬರ್‌ನಲ್ಲಿ ಜೈಲಿಗೆ ಕಳುಹಿಸಲಾಗಿತ್ತು. ನಂತರ ಅವರು ಚಿಕಿತ್ಸೆಗಾಗಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದಾಖಲಾಗಿದ್ದರು. 

‘ಈಗ ನಿಮಗೆ ಸೊಳ್ಳೆಗಳು ಹಾಗೂ ನಾಯಿಗಳಿಂದ ಹೆದರಿಕೆ ಆಗುತ್ತಿದೆ. ಆದರೆ ನೀವು ಅಧಿಕಾರದಲ್ಲಿದ್ದಾಗ ಬಿಹಾರದ ಜನರು ಭಾರಿ ಭೀತಿಗೆ ಒಳಗಾಗಿದ್ದರು’ ಎಂದು ಜೆಡಿಯು ವಕ್ತಾರ ಹಾಗೂ ವಿಧಾನ ಪರಿಷತ್‌ ಸದಸ್ಯ ನೀರಜ್‌ ಕುಮಾರ್‌ ಟ್ವೀಟ್‌ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !