ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿಗಳಿಗೆ ಮೂಲ ಸೌಲಭ್ಯ

ಮುಚ್ಚು ಹರಾಜುಕಟ್ಟೆ ಉದ್ಘಾಟಿಸಿ ಶಾಸಕ ಡಿ.ಎನ್‌.ಜೀವರಾಜ್ ಸಲಹೆ
Last Updated 14 ಮಾರ್ಚ್ 2018, 8:30 IST
ಅಕ್ಷರ ಗಾತ್ರ

ಬಾಳೆಹೊನ್ನೂರು: ಕೃಷಿ ಉತ್ಪನ್ನ ಮಾರುಕಟ್ಟೆಗಳಿಗೆ ಮೂಲ ಸೌಲಭ್ಯ ಕಲ್ಪಿಸಿದರೆ ಹೆಚ್ಚಿನ ವಹಿವಾಟು ಮಾಡಲು ಸಾಧ್ಯ ಎಂದು ಶಾಸಕ ಡಿ.ಎನ್.ಜೀವರಾಜ್ ಸಲಹೆ ನೀಡಿದರು.

ಕೊಪ್ಪದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಜಯಪುರ, ಮುತ್ತಿನಕೊಪ್ಪ ಹಾಗೂ ಬಿ.ಕಣಬೂರಿನಲ್ಲಿ ನಿರ್ಮಿಸಿದ್ದ ಮುಚ್ಚು ಹರಾಜುಕಟ್ಟೆ ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಕ್ಷೇತ್ರದ ಕಮ್ಮರಡಿ ಹೊರತುಪಡಿಸಿ ಬೇರೆ ಕಡೆಗಳಲ್ಲಿ ಸಂತೆ ಹರಾಜುಕಟ್ಟೆ ವಿಫಲಗೊಂಡಿದ್ದು, ಬಿ.ಕಣಬೂರಿನ ಸಂತೆ ಹರಾಜುಕಟ್ಟೆಗೆ ತೆರಳಲು ಮೆಟ್ಟಿಲು ಹಾಗೂ ರಸ್ತೆ ನಿರ್ಮಿಸಬೇಕಿದೆ. ಸಂತೆ ಮಾರುಕಟ್ಟೆ ಸ್ಥಳದಲ್ಲೇ ವ್ಯಾಪಾರ ವಹಿವಾಟು ನಡೆಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹೆಚ್ಚಿನ ಪ್ರಚಾರ ನೀಡಬೇಕು’ ಎಂದರು.

‘ಕಾಡಿನ ಅಂಚಿನಲ್ಲಿ ಹಾಗೂ ಜನವಸತಿ ಪ್ರದೇಶದಲ್ಲಿ ಟ್ರಂಚ್ ನಿರ್ಮಾಣಕ್ಕೆ ಅರಣ್ಯ ಇಲಾಖೆ ಹೆಚ್ಚಿನ ಉತ್ಸಾಹ ತೋರುತ್ತಿದ್ದು, ಬೆಂಕಿ ನಂದಿಸುವ ವಿಚಾರದಲ್ಲಿ ಆಸಕ್ತಿ ತೋರಿಸುತ್ತಿಲ್ಲ. ಕೊಪ್ಪ ಸಮೀಪದ ಕಾಡಿನಲ್ಲಿ ಬೆಂಕಿ ಕಂಡುಬಂದಿದ್ದು ಅರಣ್ಯ ಇಲಾಖೆ ಅದನ್ನು ನಂದಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದ್ದು, ಜನಸಾಮಾನ್ಯರು ನನಗೆ ಕರೆ ಮಾಡಿ ಸುದ್ದಿ ತಿಳಿಸುತ್ತಿದ್ದಾರೆ. ನಾನು ಹೋಗಿ ಅಲ್ಲಿ ನಿಂತು ಬೆಂಕಿ ನಂದಿಸಬೇಕೇ’ ಎಂದು ಪ್ರಶ್ನಿಸಿದರು.

ಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯ ಜಿ.ದಿವಾಕರ್ ಮಾತನಾಡಿ, ‘ ಮ್ಯಾಮ್ಕೊಸ್ ಉತ್ತಮ ವ್ಯವಹಾರ ನಡೆಸುತ್ತಿದ್ದು, ಎಪಿಎಂಸಿಗೆ ಹೆಚ್ಚಿನ ಆದಾಯ ಬರುತ್ತಿದೆ. ಈ ನಿಮಿತ್ತ 3 ಕಡೆ ಮುಚ್ಚು ಹರಾಜುಕಟ್ಟೆಗಳನ್ನು ನಿರ್ಮಿಸಲಾಗಿದೆ. ಕೆಲವು ರೈತರು ಅಡಿಕೆ ಖರೀದಿ ಕೇಂದ್ರಗಳನ್ನು ತೆರೆಯಲು ಕೋರಿ ಎಪಿಎಂಸಿಗೆ ಅರ್ಜಿ ಸಲ್ಲಿಸಿದ್ದು, ಎರಡು ಎಕರೆ ಜಾಗ ನೀಡಿದಲ್ಲಿ ನರಸಿಂಹರಾಜಪುರ, ಕೊಪ್ಪ, ಬಾಳೆಹೊನ್ನೂರಿನಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಸುಜಾತಕೃಷ್ಣಪ್ಪ, ಚಂದ್ರಮ್ಮ, ತಾಲ್ಲೂಕು ಪಂಚಾಯಿತಿ ಸದಸ್ಯ ಟಿ.ಎಂ.ನಾಗೇಶ್, ಕೊಪ್ಪದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಕೆ.ಪಿ.ಚಂದ್ರೇಗೌಡ, ಬಿ.ಕಣಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಜುಹೇಬ್‌, ಸದಸ್ಯರಾದ ಜಾನ್ ಸುನೀಲ್ ವಿಲ್ಪ್ರೇಡ್ ಡಿಸೋಜ, ಜಯಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ, ಉಪಾಧ್ಯಕ್ಷೆ ಕೆ.ಎಂ.ಪೂರ್ಣಿಮಾ, ಸದಸ್ಯ ಎ.ಆರ್.ಮಹೇಶ್  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT