ಬುಧವಾರ, ಜನವರಿ 22, 2020
18 °C
ಪೌರತ್ವ (ತಿದ್ದುಪಡಿ) ಕಾಯ್ದೆ: ಪಶ್ಚಿಮ ಬಂಗಾಳದಲ್ಲಿ ಆರದ ಕಿಚ್ಚು

ಆಕ್ರೋಶಕ್ಕೆ ರೈಲು, ಬಸ್‌ಗಳು ಭಸ್ಮ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಶನಿವಾರವೂ ಮುಂದುವರಿದಿದೆ. ಪ್ರತಿಭಟನೆ ಮತ್ತು ಹಿಂಸಾಚಾರವು ರಾಜ್ಯದ ಹೌರಾ ಮತ್ತು ಮುರ್ಶಿದಾಬಾದ್‌ ಜಿಲ್ಲೆಗಳಲ್ಲಿ ತೀವ್ರ ಸ್ವರೂಪ ಪಡೆದಿದೆ. ರಾಜ್ಯದ ಹಲವೆಡೆ ರೈಲು ಮತ್ತು ಬಸ್‌ಗಳಿಗೆ ಬೆಂಕಿ ಹಚ್ಚಲಾಗಿದೆ.

ಶನಿವಾರ ಬೆಳಿಗ್ಗೆಯೇ ಮುರ್ಶಿದಾಬಾದ್‌ ಜಿಲ್ಲೆಯ ಸಂಕ್ರೇಲ್‌ ರೈಲು ನಿಲ್ದಾಣಕ್ಕೆ ಬೆಂಕಿ ಹಚ್ಚಿದ್ದಾರೆ. ರೈಲು ನಿಲ್ದಾಣ ಭಾಗಶಃ ಸುಟ್ಟುಹೋಗಿವೆ. ಪ್ರತಿಭಟನಕಾರರು ರೈಲು ನಿಲ್ದಾಣದಲ್ಲಿದ್ದ ಫಲಕಗಳು, ಕಾಂಕ್ರೀಟ್ ಬೆಂಚುಗಳನ್ನು ಧ್ವಂಸ ಮಾಡಿದ್ದಾರೆ. ಇದನ್ನು ತಡೆಯಲು ಬಂದ ರೈಲ್ವೆ ಪೊಲೀಸರ ಮೇಲೆ ಹಲ್ಲೆ ನಡೆಸಲಾಗಿದೆ. ಇದರ ಬೆನ್ನಲ್ಲೇ ಜಿಲ್ಲೆಯ ಹಲವೆಡೆ ರೈಲು ತಡೆ ನಡೆಸಲಾಗಿದೆ. ಹೀಗಾಗಿ ಬೆಳಿಗ್ಗೆ 11ರಿಂದ ಮಧ್ಯಾಹ್ನ ನಾಲ್ಕರವರೆಗೆ ರೈಲು ಸಂಚಾರ ಸ್ಥಗಿತವಾಗಿತ್ತು.

ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆಯೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ‘ಜನರು ಶಾಂತಿಯುತ ಪ್ರತಿಭಟನೆ ನಡೆಸಬೇಕು’ ಎಂದು ಕರೆಕೊಟ್ಟರು. ಆದರೆ, ಮಧ್ಯಾಹ್ನದ ನಂತರ ಹೌರಾ ಜಿಲ್ಲೆಯಲ್ಲಿ ಪ್ರತಿಭಟನೆ ಮತ್ತಷ್ಟು ತೀವ್ರವಾಯಿತು. ಮುಂಬೈ–ಕೋಲ್ಕತ್ತ ಹೆದ್ದಾರಿ ಮತ್ತು ಮುಂಬೈ–ದೆಹಲಿ ಹೆದ್ದಾರಿ ಮಧ್ಯೆ ಸಂಪರ್ಕ ಕಲ್ಪಿಸುವ ಕೋನಾ ಎಕ್ಸ್‌ಪ್ರೆಸ್‌ ಹೆದ್ದಾರಿಗೆ ಇಳಿದ ಪ್ರತಿಭಟನಕಾರರು, ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆದರು. ಇದರಿಂದ ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು.

ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಮುಂದಾದರು. ಆಗ ಕಲ್ಲು ತೂರಾಟ ನಡೆಯಿತು. ಪೊಲೀಸರು ಶ್ರುವಾಯು ಷೆಲ್‌ ಸಿಡಿಸಿದರು. ಇದರಿಂದ ರೊಚ್ಚಿಗೆದ್ದ ಪ್ರತಿಭಟನಕಾರರು ಹೆದ್ದಾರಿಯಲ್ಲಿ ನಿಂತಿದ್ದ ಬಸ್‌ಗಳಿಗೆ ಬೆಂಕಿ ಹಚ್ಚಿದರು. 15ಕ್ಕೂ ಹೆಚ್ಚು ಬಸ್‌ಗಳು ಸುಟ್ಟುಕರಕಲಾದವು.

ನಂತರ ಜಿಲ್ಲಾ ಕೇಂದ್ರವನ್ನು ತಲುಪಿದ ಪ್ರತಿಭಟನಕಾರರು, ಹಲವು ಅಂಗಡಿಗಳಿಗೆ ಬೆಂಕಿ ಹಚ್ಚಿದರು. ಜಿಲ್ಲೆಯ ಬಹುತೇಕ ಎಲ್ಲಾ ಪ್ರಮುಖ ರಸ್ತೆಗಳಲ್ಲೂ ಟೈರ್‌ ಸುಟ್ಟು, ಸಂಚಾರಕ್ಕೆ ತಡೆ ಒಡ್ಡಲಾಗಿದೆ. ಅಘೋಷಿತ ಬಂದ್ ವಾತಾವರಣವಿದೆ.

ಮುರ್ಶಿದಾಬಾದ್‌ ಜಿಲ್ಲೆಯ ಲಾಲ್‌ಗೋಲಾ ರೈಲು ನಿಲ್ದಾಣದಲ್ಲಿ ನಿಲ್ಲಿಸಿದ್ದ ಐದು ರೈಲುಗಳಿಗೆ ಪ್ರತಿಭಟನಕಾರರು ಶನಿವಾರ ಸಂಜೆ ಬೆಂಕಿ ಹಚ್ಚಿದ್ದಾರೆ.

‘ಸಂವಿಧಾನ ಪಾಲಿಸಿ’

‘ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳಿಂದ ನೋವಾಗಿದೆ. ಸಂವಿಧಾನಕ್ಕೆ ನಿಷ್ಠವಾಗಿರುತ್ತೇನೆ ಎಂದು ಸ್ವೀಕರಿಸಿದ ಪ್ರಮಾಣ ವಚನಕ್ಕೆ ಮುಖ್ಯಮಂತ್ರಿ ಬದ್ಧವಾಗಿರಬೇಕು’ ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನಕರ್ ಟ್ವೀಟ್ ಮಾಡಿದ್ದಾರೆ.

‘ಕಿಡಿಗೇಡಿಗಳಿಗೆ ಶಿಕ್ಷೆ’

‘ರಸ್ತೆ ಮತ್ತು ರೈಲು ಮಾರ್ಗಗಳನ್ನು ತಡೆಯಬೇಡಿ. ಜನರಿಗೆ ತೊಂದರೆ ಕೊಡುವುದನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ. ಬಸ್ಸಿಗೆ ಬೆಂಕಿ ಹಚ್ಚುತ್ತಿರುವವರು, ಕಲ್ಲು ತೂರುವವರು ಕಠಿಣ ಕ್ರಮ ಎದುರಿಸಬೇಕಾಗುತ್ತದೆ’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಕೆ ನೀಡಿದ್ದಾರೆ.

‘ರಾಜ್ಯದಲ್ಲೇ ಮೊದಲು’

‘ದೇಶದಲ್ಲಿ, ಪಶ್ಚಿಮ ಬಂಗಾಳದಲ್ಲೇ ಮೊದಲು ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತರಲಾಗುತ್ತದೆ. ಯಾರು ವಿರೋಧ ಮಾಡಿದರೂ ಕಾಯ್ದೆ ಜಾರಿಯಾಗುವುದನ್ನು ತಡೆಯಲು ಸಾಧ್ಯವಿಲ್ಲ’ ಎಂದು ರಾಜ್ಯದ ಬಿಜೆಪಿ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು